ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ, ಮೈಸೂರು ಅರಮನೆಗಳ ನಗರ ಎಂದು ಕರೆಯಲ್ಪಡುತ್ತದೆ. ಮೈಸೂರು ಅರಮನೆ ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಇದು ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿದ್ದಿತು. ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ೧೮೯೭ ರಲ್ಲಿ ನಿರ್ಮಾಣ ೧೯೧೨ ರಲ್ಲಿ ಮುಗಿಯಿತು. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ಈಗಿರುವ ಮೈಸೂರು ಅರಮನೆಯ ಜಾಗದಲ್ಲಿ ಮರದಿಂದ ನಿರ್ಮಾಣ ಮಾಡಿದ ಅರಮನೆ ಇತ್ತು. ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಈಗಿರುವ ಅರಮನೆ ಕಟ್ಟಲು ಶುರು ಮಾಡುತ್ತಾರೆ.
1799ರಲ್ಲಿ ಟಿಪ್ಪು ನಿಧನರಾದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತಗೊಳ್ಳುತ್ತಾರೆ. ಆಗಿನ್ನೂ 6 ವರ್ಷದ ಬಾಲಕನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ 1897ರಲ್ಲಿ ಹಳೆಯ ಮರದ ಅರಮನೆಯಲ್ಲಿ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಂಕಿ ಬಿದ್ದು, ಇಡೀ ಅರಮನೆ ಸುಟ್ಟು ಹೋಯಿತು. ನಂತರ ಅರಮನೆ ವಾಸಿಗಳು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತಗೊಳ್ಳುತ್ತಾರೆ.
ಮೈಸೂರು ಸಂಸ್ಥಾನ ೧೩೯೯ ರಿಂದ ೧೯೪೭ ರಲ್ಲ ಭಾರತದ ಸ್ವಾತಂತ್ರ್ಯದ ವರೆಗೂ ಒಡೆಯರ್ ವಂಶದ ಅರಸರಿಂದ ಆಳಲ್ಪಟ್ಟಿತು (ಮಧ್ಯದಲ್ಲಿ ಸ್ವಲ್ಪ ಕಾಲ ಹೈದರ್ ಅಲಿ ಮತ್ತುಟೀಪು ಸುಲ್ತಾನರ ಆಡಳಿತವನ್ನು ಬಿಟ್ಟು). ಒಡೆಯರ್ ಅರಸರು ೧೪ ನೆಯ ಶತಮಾನದಲ್ಲಿಯೇ ಇಲ್ಲಿ ಒಂದು ಅರಮನೆಯನ್ನು ಕಟ್ಟಿಸಿದ್ದರು. ಈ ಅರಮನೆ ೧೬೩೮ ರಲ್ಲಿ ಸಿಡಿಲು ಹೊಡೆದು ಭಾಗಶಃ ಹಾಳಾಯಿತು. ಆಗ ಇದನ್ನು ರಿಪೇರಿ ಮಾಡಿ ವಿಸ್ತರಿಸಲಾಗಿತ್ತು.
ಆದರೆ ೧೮ ನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ ೧೭೯೩ ರಲ್ಲಿ ಟೀಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಲಾಯಿತು. ೧೮ಂ೩ ರಲ್ಲಿ ಇನ್ನೊಂದು ಅರಮನೆಯನ್ನು ಅದರ ಸ್ಥಳದಲ್ಲಿ ಕಟ್ಟಿಸಲಾಯಿತು. ಈ ಅರಮನೆ ಸಹ ೧೮೯೭ ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಯಿತು.
ಆಗ ಮೈಸೂರು ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಇನ್ನೊಂದು ಅರಮನೆಯನ್ನು ಕಟ್ಟಲು ಬ್ರಿಟಿಷ್ ಇಂಜಿನಿಯರ್ ಹೆನ್ರಿ ಇರ್ವಿನ್ ಅವರನ್ನು ನೇಮಿಸಿದರು. ವಿವಿಧ ರೀತಿಯ ವಾಸ್ತುಕಲೆಗಳನ್ನು ಸೇರಿಸಿ ಅರಮನೆಯನ್ನು ಕಟ್ಟಲು ಅವರಿಗೆ ತಿಳಿಸಲಾಯಿತು. ಅರಮನೆ ೧೯೧೨ ರಲ್ಲಿ ಸಂಪೂರ್ಣವಾಯಿತು.