ಅಕ್ಕಿಯಲ್ಲಿ ಹಲವು ವಿಧಗಳುಂಟು ಇವುಗಳಲ್ಲಿ ಕೆಂಪು ಅಕ್ಕಿಯು ಆರೋಗ್ಯದ ದೃಷ್ಟಿಯಿಂದ ಅತಿ ಶ್ರೇಷ್ಠ, ಒನಕೆ ಅಥವಾ ಏತದಿಂದ ಕುಟ್ಟಿದ ಅಕ್ಕಿಯಲ್ಲಿ ಪೌಷ್ಟಿಕಾಂಶಗಳು ಅಧಿಕ. ಹೆಚ್ಚು ಪಾಲಿಷ್ ಮಾಡಿದ ಅಕ್ಕಿ ಪೌಷ್ಠಿಕಾಂಶಗಳನ್ನು ಕಳೆದುಕೊಳ್ಳುವುದರಿಂದ ಬಳಕೆಗೆ ಯೋಗ್ಯವಲ್ಲ. ಪಾಲಿಷ್ ಮಾಡಿದ ಅಕ್ಕಿಯನ್ನು ಸತತವಾಗಿ ಬಳಸುವುದರಿಂದ ಅಜೀರ್ಣ, ನರಗಳ ದೌರ್ಬಲ್ಯ, ಬೆರಿಬೆರಿ, ಮಧುಮೇಹ ಇತ್ಯಾದಿ ರೋಗಗಳು ತಲೆದೋರುತ್ತವೆ.
ಕಚ್ಚಾ ಅಕ್ಕಿಗಿಂತ ಕುಸುಬಲು ಅಕ್ಕಿಯು ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿರುವುದು, ಈ ಅಕ್ಕಿಯಿಂದ ತಯಾರಿಸಿದ ಇಡ್ಡಿ ಅತ್ಯುತ್ತಮ ಆಹಾರ. ತೀವ್ರ ಸ್ವರೂಪದ ಜ್ವರದಿಂದ ನರಳುತ್ತಿರುವ ರೋಗಿಗಳಿಗೂ ಈ ಆಹಾರವನ್ನು ಕೊಡಬಹುದು.
ಅಕ್ಕಿಯನ್ನು ಹದವಾಗಿ ಹುರಿದು, ನೀರಿನಲ್ಲಿ ಬೇಯಿಸಿ, ಗಂಜಿ ಬಸಿದು ತಯಾರಿಸಿದ ಅನ್ನವು ರೋಗಿಗಳಿಗೆ ಉಪಯುಕ್ತವಾದ ಆಹಾರ. ಇದು ಸುಲಭವಾಗಿ ಜೀರ್ಣಿಸುವುದು. ಜ್ವರ ಬಂದ ರೋಗಿಗೆ ಜ್ವರ ಬಂದ ಒಂದೆರಡು ದಿನಗಳ ನಂತರ ಹುರಿದ ಅಕ್ಕಿ ಗಂಜಿ ಅಥವಾ ಭತ್ತದ ಅರಳಿನ ಗಂಜಿ ಕೊಡುವುದು ಉತ್ತಮ
ಹೊಸ ಅಕ್ಕಿಯ ಅನ್ನ ಊಟ ಮಾಡುವುದರಿಂದ ಅಜೀರ್ಣಕ್ಕೆ ಎಡೆಯುಂಟಾಗುತ್ತದೆ. ಆರು ತಿಂಗಳ ಕಾಲವಾದರೂ ಅಕ್ಕಿಯನ್ನು ಶೇಖರಿಸಿಟ್ಟು ನಂತರ ಬಳಸುವುದು ಆರೋಗ್ಯಕರ.
ಅಕ್ಕಿಯನ್ನು ಹದವಾಗಿ ಬೇಯಿಸಿ ಗಂಜಿ ಬಸಿಯದೆ ಅನ್ನ ತಯಾರಿಸಬೇಕು, (ಗಂಜಿ ಬಸಿದಲ್ಲಿ ಜೀವಸತ್ವ ನಾಶವಾಗುವುದು). ಈ ಅನ್ನವು ಸತ್ವಪೂರ್ಣವಾಗಿರುವುದು, ಇದನ್ನು ಹಾಲು ಅಥವಾ ಮಜ್ಜಿಗೆಯೊಂದಿಗೆ ಚೆನ್ನಾಗಿ ಅಗಿದು ತಿನ್ನಬೇಕು, ಇನ್ನುಳಿದ ರೀತಿಗಳಲ್ಲಿ ಅನ್ನವನ್ನು ಸೇವಿಸುವುದರಿಂದ ಜಠರ ರೋಗಗಳು ಸಂಭವಿಸುವ ಸಾಧ್ಯತೆ ಇದೆ.
ಸ್ವಲ್ಪ ಹೆಚ್ಚು ನೀರಿಟ್ಟು ಗಂಜಿ ಬಸಿಯದೆ ಅನ್ನ ತಯಾರಿಸಿ ಈ ಅನ್ನಕ್ಕಿ ಒಳ್ಳೆಯ ಮೊಸರು ಬೆರಸಿ, ಕೊತ್ತುಂಬರಿ ಸೊಪ್ಪು, ಹಸಿ ಶುಂಠಿ ಮತ್ತು ಈರುಳ್ಳಿ ಸಣ್ಣಗೆ ಹಚ್ಚಿ ಅನ್ನಕ್ಕೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಕಾಳಿನ ತರಿ ಬೆರಸಿ, ಹಸಿಮೆಣಸಿನ ಕಾಯಿ ಮತ್ತು ಸಾಸಿವೆ ತುಪ್ಪದ ಒಗ್ಗರಣೆ ಮಾಡಿ ಅನ್ಸಕ್ಕೆ ಸೇದಿಸಿ ನಿಂಬೆಹಣ್ಣಿನ ರಸ ಹಿಂಡಿ, ಇಡೀ ಮಿಶ್ರಣವನ್ನು ಚಿನ್ನಾಗಿ ಕಲಸಿ ಬಡಿಸಿರಿ, ಇದು ಪ್ರಯಾಣ ಕಾಲದಲ್ಲಿ ಬಳಸಬಹುದಾದ ಅತ್ಯುತ್ತಮ ಪುಷ್ಕಿದಾಯಕ ಆಹಾರ.
ಕೆಂಪನೆಯ ಅಕ್ಕಿ ಎರಡು ಹಿಡಿಯಷ್ಟು ಹಾಕಿ ರಾತ್ರಿ ಅನ್ನ ಮಾಡಿಡಿ, ಮರುದಿನ ಬೆಳಿಗ್ಗೆ ಅನ್ನವನ್ನು ಗಟ್ಟಿಯಾದ ಕೆನೆ ಮೊಸರಿನಲ್ಲಿ ಕಲಸಿ ಊಟ ಮಾಡಿ, ಮೂರು ದಿನಗಳ ಕಾಲ ಬರಿಹೊಟ್ಟೆಯಲ್ಲಿ ಈ ಆಹಾರ ಸೇವಿಸಿದರೆ ಸೂರ್ಯೋದಯದೊಂದಿಗೆ ಪ್ರಾಪ್ತವಾಗುವ ಅರೆ ತಲೆನೋವು ಬಿಟ್ಟು ಹೋಗುವುದು.
ಪಾಚಕಾಂಗಗಳಿಗೆ ಸಂಬಂಧಿಸಿದ ರೋಗಗಳಿಂದ ನರಳುವವರಿಗೆ ಒಂದು ಬಟ್ಟಲು ಅನ್ನದ ಗಂಜಿಯನ್ನು ಅಷ್ಟೇ ಪ್ರಮಾಣ ಮಜ್ಜಿಗೆಯೊಂದಿಗೆ ಬೆರಸಿ, ಈ ಮಿಶ್ರಣದಲ್ಲಿ ಚೆನ್ನಾಗಿ ಕಳಿತ ಒಂದು ಬಾಳೆಹಣ್ಣನ್ನು ಕಿವುಚಿ ದಿನಕ್ಕೆ ಎರಡಾವರ್ತಿ ಕೊಡುವುದರಿಂದ ಉತ್ತಮ ಗುಣ ಕಂಡುಬರುವುದು.