ಗೆಡ್ಡೆ ಗೆಣಸಿನ ಅದ್ಭುತ ಲೋಕ ನೋಡ ಬನ್ನಿ. ಗೆಡ್ಡೆ ಗೆಣಸು ಮೇಳ 6 ಮತ್ತು 7ನೇ ಫೆಬ್ರವರಿ, ಶನಿವಾರ/ ಭಾನುವಾರ, ನಂಜರಾಜ ಬಹದ್ದೂರ್ ಛತ್ರ , ಮೈಸೂರು. ಬೆಳಿಗ್ಗೆ 10.30 ರಿಂದ ಸಂಜೆ 8 ರವರೆಗೆ. ಗೆಡ್ಡೆ ಗೆಣಸು ಭೂತಾಯಿ ಮಡಿಲಿನ ಅದ್ಬುತ ಸೃಷ್ಟಿ. ಋಷಿ ಮುನಿಗಳು ಮತ್ತು ಆದಿವಾಸಿಗಳು ಗೆಡ್ಡೆ ಗೆಣಸು ತಿಂದು ರೋಗವಿಲ್ಲದೆ ಆರೋಗ್ಯವಂತರಾಗಿ ಜೀವಿಸುತ್ತಿದ್ದರು ಎಂಬುದನ್ನು ಕೇಳಿದ್ದೇವೆ.
ಗೆಡ್ಡೆ ಗೆಣಸು ಮಣ್ಣಿನ ಕಸುವನ್ನು ಪಡೆದ ಪುಷ್ಟಿದಾಯಕ ಹಾಗೂ ಶಕ್ತಿದಾಯಕ ಆಹಾರ, ಬರಗಾಲದ ಹಾಗೂ ಆಪತ್ಕಾಲದ ಬಂಧುಗಳು ಎಂದರೆ ತಪ್ಪಲ್ಲ. ಆಯುರ್ವೇದ ಮತ್ತು ಜನಪದ ವೈದ್ಯದಲ್ಲಿ ಗೆಡ್ಡೆ ಗೆಣಸನ್ನು ಔಷಧಿಯಾಗಿ ಬಳಸಲಾಗುತ್ತದೆ. ಕೆಲವು ಪ್ರಭೇದದ ಗೆಣಸುಗಳನ್ನು ಕಾಡಿನಿಂದ ತಂದರೆ, ಕೆಲವನ್ನು ಮನೆ ಹಿತ್ತಲುಗಳಲ್ಲಿ ಬೆಳೆಯುತ್ತಾರೆ.
ಮೈಸೂರಿನ ಗೆಡ್ಡೆ ಗೆಣಸು ಮೇಳದಲ್ಲಿ ನೀವು ನೋಡದ , ಪೌಷ್ಟಿಕಾಂಶಗಳಿಂದ ಸಮೃದ್ದವಾದ ,ಅಪರೂಪದ ಗೆಡ್ಡೆ ಗೆಣಸುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ. ಬಳ್ಳಿಯಾಗಿ ಹಬ್ಬಿ ಬೆಳೆದು ಸಾಕಷ್ಟು ಆಲೂಗೆಡ್ಡೆ ತರದ ಕಾಯಿಗಳನ್ನು ಕೊಡುವ ‘ ಬಳ್ಳಿ ಬಟಾಟೆ’ಯ ಬೇರಲ್ಲೂ ಗೆಡ್ಡೆಗಳಿರುತ್ತವೆ. ಮೊಳಕಾಲು ನೋವಿಗೆ ಪರಿಹಾರವಾದ ಬಳ್ಳಿ ಆಲೂವನ್ನು ಆನೇಕಲ್ ರೈತರು ಬೀಜಕ್ಕೆ ಮಾರಲು ತರಲಿದ್ದಾರೆ.
ಅಸ್ಸಾಂನ ಗೆಳೆಯರು ಅಪರೂಪದ ‘ಕಪ್ಪು ಹರಿಷಿಣವನ್ನು ‘ ಕಳಿಸಿದ್ದಾರೆ. ಔಷಧೀಯ ಗುಣಗಳಿಂದ ಸಮೃದ್ಧವಾದ ಕಪ್ಪು ಹರಿಷಿಣ ಮಾರಾಟಕ್ಕೆ ಬರಲಿದೆ. ಕೇರಳದ ರಾಷ್ಟ್ರೀಯ ಪುರಸ್ಕಾರ ಪುರಸ್ಕೃತ ವಯನಾಡಿನ ಶಾಜಿ 120 ಬಗೆಯ ಗೆಡ್ಡೆ ಗೆಣಸನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತರಲಿದ್ದಾರೆ.
ಹುಣಸೂರು, ಪಿರಿಯಾಪಟ್ಟಣ ಮತ್ತು ಹೆಗ್ಗಡದೇವನ ಕೋಟೆಯ ಜೇನು ಕುರುಬ ಮತ್ತು ಬೆಟ್ಟ ಕುರುಬ ಯುವಕರು ಬಗೆಬಗೆಯ ಕಾಡು ಗೆಡ್ಡೆ ಗೆಣಸಿನ ರಾಶಿಯನ್ನೇ ಹೊತ್ತು ತರಲಿದ್ದಾರೆ. ಪಿರಿಯಾಪಟ್ಟಣದ ಸುಪ್ರೀತ್ ತೋಟದಲ್ಲಿ 50 ಕ್ಕೂ ಹೆಚ್ಚು ಬಗೆಯ ಗೆಡ್ಡೆ ಗೆಣಸಿನ ತಳಿಗಳಿವೆ. ಸುವರ್ಣ ಗೆಡ್ಡೆ ಮತ್ತು ಕೆಸುವಿನ ವೈವಿಧ್ಯಕ್ಕೆ ಇವರ ತೋಟ ಹೆಸರುವಾಸಿ. ಸುಪ್ರೀತ್ ಕೆಸು, ಸುವರ್ಣ ಗೆಡ್ಡೆ, ಶುಂಠಿ ಮತ್ತು ಹರಿಷಿಣದ ತಳಿಗಳ ಮಾರಾಟಕ್ಕೆ ತರುತ್ತಿದ್ದಾರೆ.
80 ಕೆಜಿ ಉತ್ತರಿ ಗೆಣಸು ಬೆಳೆದು ದಾಖಲೆ ಮಾಡಿದ ಹುಣಸೂರಿನ ತಮ್ಮಯ್ಯನವರು, ಈ ಬಾರಿಯೂ ದೊಡ್ಡ ಗೆಣಸುಗಳ ಜೊತೆ ಬರುತ್ತಿದ್ದಾರೆ. ಪರ್ಪಲ್ ಯಾಮ್ ಅಪರೂಪದ ಬಳ್ಳಿ ಗೆಣಸು. ಅದರ ಗಾಢ ನೇರಳೆ ಬಣ್ಣ ಮನಸೆಳೆಯುತ್ತದೆ. ಇದರ ಐಸ್ ಕ್ರೀಂ ಫಿಲಿಫೈನ್ಸನಲ್ಲಿ ಬಹು ಜನಪ್ರಿಯ. ಸೀಮಿತ ಪ್ರಮಾಣದಲ್ಲಿ ಇದರ ಬೀಜದ ಗೆಡ್ಡೆ ಸಿಗುತ್ತದೆ.
ಶಿರಸಿಯ ಮನೋರಮಾ ಗೆಡ್ಡೆ ಗೆಣಸಿನ ಮೌಲ್ಯವರ್ಧಿತ ಪದಾರ್ಥಗಳ ಜೊತೆ ಬರಲಿದ್ದಾರೆ. ಇವರು ಮಾಡುವ ಕ್ಯಾರೆಟ್ ಬರ್ಫಿಯ ರುಚಿ ಹೇಳಲಾಗದು. ಪುತ್ತೂರಿನ ಯುವಕರ ಗುಂಪು ಗೆಡ್ಡೆ ಗೆಣಸಿನ ಐಸ್ ಕ್ರೀಂ, ಬಗೆಬಗೆಯ ಅಡುಗೆ ರುಚಿ ತೋರಿಸಲು ಬರುತ್ತಿದ್ದಾರೆ. ಬಿಳಿಗಿರಿ ರಂಗನ ಬೆಟ್ಟದ ಜಡೇಗೌಡರ ತಂಡ ಸುಟ್ಟ ಕಾಡು ಗೆಣಸಿಗೆ, ಮಲೆ ಜೇನುಹಾಕಿ ತಿನ್ನಲು ಕೊಡುತ್ತಿದ್ದಾರೆ. ಕೃಷಿಕಲಾ ತಂಡದವರು ಕೂವೆ ಗೆಡ್ಡೆ ಹಾಲುಬಾಯಿ, ಟ್ಯಾನಿಯಾ ಗೆಡ್ಡೆಯ ಚಿಪ್ಸ, ಪರ್ಪಲ್ ಯಾಮ್ ಪಲ್ಯದ ರುಚಿ ತೋರಿಸಲಿದ್ದಾರೆ.
ಜೊಯಿಡಾದ ಕುಣಬಿ ಸಮುದಾಯದ ಬಿಳಿ ಗೆಣಸು , ದೊಡ್ಡ ಕೆಸು, ಕೋನ್ ಗೆಡ್ಡೆ ಮಾರಾಟಕ್ಕೆ ಬರಲಿವೆ. ಭಾನುವಾರ ( 7ನೇ ಫೆಬ್ರವರಿ) ಅಡುಗೆ ಸ್ಪರ್ಧೆ ಇದೆ. ಗೆಡ್ಡೆ ಗೆಣಸಿನ ಅಡುಗೆಗಳ ರುಚಿ ನೋಡುವ ಅವಕಾಶ. ಕಬಿನಿ ಕಾಡಿನ ಪೀಪಲ್ ಟ್ರೀ ತಂಡ, ಚನ್ನರಾಜುವರವರ ನೇತೃತ್ವದಲ್ಲಿ ಹಲವು ಬಗೆಯ ಕಾಡು ಗೆಣಸಿನ ಬೀಜದ ಗೆಡ್ಡೆಗಳ ಮಾರಾಟಕ್ಕೆ ತರಲಿದ್ದಾರೆ.
ಬಳ್ಳಿ ಆಲೂಗೆಡ್ಡೆ, ಮುಳ್ಳು ಗೆಣಸು, ಹೆಡಿಗೆ ಗೆಣಸು, ಉತ್ತರಿ ಗೆಡ್ಡೆ, ಕಪ್ಪು ಮತ್ತು ಹಸಿರು ಹರಿಷಿಣ, ಕೂವೆಯ ಬೀಜದ ಗೆಡ್ಡೆಗಳು, ಕಪ್ಪು ಕ್ಯಾರೆಟ್ ಬೀಜ ಮಾರಾಟಕ್ಕೆ ಸಿಗಲಿದೆ. ಈ ಅವಕಾಶ ಬಿಟ್ಟರೆ ಸಿಗದು. ಪರಿಚಿತರಿಗೆ/ ಬಂಧು ಬಾಂಧವರಿಗೆ ಮೇಳಕ್ಕೆ ಬರಲು ಹೇಳಿ.