ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ನಡೆಯುವ ಅಷ್ಟದಳ ಪಾದ ಪದ್ಮಾರಾಧನ ಸೇವೆಯ ಹಿಂದಿನ ಕಥೆ ಕೇಳಿದರೆ ನಿಮ್ಮ ಕಣ್ಣಂಚಿನಲ್ಲಿ ನೀರು ಬರುವುದು. ಈ ಅದ್ಭುತ ಕಥೆ ಒಮ್ಮೆ ಓದಿ ನೋಡಿ.

0
4374

ತಿರುಮಲ ತಿರುಪತಿ ದೇವಸ್ಥಾನದ ಅಷ್ಟದಳ ಸ್ವರ್ಣಪದ್ಮ ಪೂಜಾ ಅರ್ಜಿತ ಸೇವಾ ಕಥೆ. 1984 ತಿರುಮಲ ತಿರುಪತಿ ದೇವಸ್ಥಾನದ ಸ್ವರಣೋತ್ಸವದ ವರ್ಷ. ಆ ವರ್ಷ ದೇವಸ್ಥಾನದ ಇತಿಹಾಸದಲ್ಲಿಯೇ ಅಜರಾಮರವಾಗಿ ಉಳಿಯುವ ಯಾವದಾದರು ಹೊಸ ವಿಧಾನವನ್ನು ಪ್ರಾರಂಭಿಸಲು ಆಲೋಚನೆ ಮಾಡತೊಡಗಿತು.

ಅಂದಿನ ದಕ್ಷ ಅಧಿಕಾರಿ, ಪ್ರಾಮಾಣಿಕ ಅಧಿಕಾರಿಯೆಂದೇ ಖ್ಯಾತರಾದ ಪಿವಿಆರ್ ಪ್ರಸಾದ್ ದೇವಸ್ಥಾನದ ಬೋರ್ಡ್ EO ಆಗಿದ್ದರು. ಪ್ರಸಾದ್ ದೇವಸ್ಥಾನದ ಚರಿತ್ರೆಯಲ್ಲಿಯೇ ಹೇಳಿಕೊಳ್ಳುವಂತಹ ಹೊಸ ವಿನೂತನ ಪ್ರಯೋಗವಾಗಬೇಕೆಂದು ಬಯಸಿದ್ದರು. ಎಲ್ಲರ ಬಯಕೆಯೂ, ಆಲೋಚನೆಯೂ ಅದೇ ಆಗಿತ್ತು. ಸಾಕಷ್ಟು ಮೀಟಿಂಗ್ ಗಳೂ, ಚರ್ಚೆಗಳು ಆದವು. ಆದರೂ ಒಂದು ಸರಿಯಾದ ನಿರ್ಣಯ ತಗೆದುಕೊಳ್ಳಲು, ಸಹಮತ ಪಡೆದುಕೊಳ್ಳಲು, ಆಲೋಚನೆಯನ್ನು ಆಚರಣೆಯಲ್ಲಿಡಲು ಏಕೋ ವಿಳಂಬವಾಗುತ್ತಾ ಬಂತು.

ಸಮಯ ಹತ್ತಿರವಾಗುತ್ತಿದ್ದರೂ ಪಿವಿಆರ್ ಪ್ರಸಾದ್ ರಂಥ IAS ಆಫೀಸರ್ ಗೂ ಏನು ಮಾಡಬೇಕೋ, ಹೇಗೆ ಮಾಡಬೇಕೋ, ಹೊಳೆಯದ ಸ್ಥಿತಿ. ತಲೆ ಮೇಲೆ ಕೈ ಇಟ್ಟುಕೊಂಡು ಆಲೋಚನೆ ಮಾಡತೊಡಗಿದರು. ಬೋರ್ಡ ಸದಸ್ಯರಿಂದ ಏನೇನೋ ಸಲಹೆಗಳು, ಒಂದೂ ಪ್ರಸಾದ್ ಅವರಿಗೆ ಇಷ್ಟವಾಗ್ತಾಯಿಲ್ಲ. ಚರ್ಚೆ ತುಂಬಾ ಗಂಭೀರವಾಗಿ ನಡೆದಿತ್ತು. ಸ್ವರಣೋತ್ಸವ ವರ್ಷಕ್ಕೆ ಆ ವೆಂಕಟರಮಣ ಸ್ವಾಮಿಗೆ ಏನು ಮಾಡಿದರೆ ಸ್ವಾಮಿ ಮತ್ತು ಭಕ್ತರು ತೃಪ್ತಿಗೊಳ್ಳುತ್ತಾರೆ ಎಂಬ ವಿಷಯದಲ್ಲಿ ಮಾತ್ರ ಯಾರೂ ಒಮ್ಮತದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗ್ತಾಯಿಲ್ಲ.

ಪ್ರಸಾದ್ ಅವರಂತೂ ತುಂಬಾ ಚಿಂತಿತರಾಗಿದ್ದರು. ಯಾರು ಏನೇ ಹೇಳಿದರೂ ಅವರಿಗೆ ಹಿಡಿಸ್ತಾ ಇರಲಿಲ್ಲ. ಅದೇ ಟೈಂಗೆ ಆಫೀಸ್ ಅಟೆಂಡರ್ ಪ್ರಸಾದ್ ಅವರ ಹತ್ತಿರ ಬಂದು “ಸರ್ ನಿಮ್ಮನ್ನು ನೋಡಲು ಒಬ್ಬ ಮುಸ್ಲಿಂ ಭಕ್ತ ತುಂಬಾ ದೂರದ ಊರಿನಿಂದ ಬಂದಿದ್ದಾನೆ. ಭಹಳ ಹೊತ್ತಿನಿಂದ ಕಾಯುತ್ತಿದ್ದಾನೆ”ಎಂದು ನಿಧಾನವಾಗಿ ಹೇಳಿದನು.

ಮೊದಲೇ ಅಸಹನೆಯಿಂದ ಇದ್ದ ಪ್ರಸಾದ್ “ಯಾರಯ್ಯ ಅದು?ಇಂಥಹ ಮೀಟಿಂಗ್ ನಲ್ಲಿ ಬಂದು ನನ್ನ ಡಿಸ್ಟರ್ಬ್ ಮಾಡುತ್ತಿಯಾ ಬುದ್ಧಿ ಇಲ್ಲವೇ ನಿನಗೆ?”ಎಂದು ಕೂಗಾಡಿದರು.ಆಗ ಅಟೆಂಡರ್ “ಸರ್ ನಾನು ತುಂಬಾ ಹೇಳಿ ನೋಡಿದೆ, ನಿಮ್ಮ ಹತ್ರ ಏನೋ ಅರ್ಜೆಂಟ್ ಕೆಲಸ ಇದೆ,ಎಷ್ಟೊತ್ತಾದರೂ ಕಾಯುತ್ತೇನೆ ಎಂದು ಹೇಳುತ್ತಿದ್ದಾನೆ “ಅಂದನು. ಅಸಹನೆಯಿಂದಲೇ “ಅವನ ಹೆಸರೇನೋ?” ಎಂದು ವಿವಿಆರ್ ಪ್ರಸಾದ್ ಕೇಳಿದಾಗ.

” ಸರ್ ಅವನು ಶೇಕ್ ಮಸ್ತಾನ್ ಅಂತೆ ಮುಸ್ಲಿಂ ಭಕ್ತ ” ಎಂದು ಅಟೆಂಡರ್ ಹೇಳಿದನು. “ಆಯಿತು ಯಾವದಾದರೂ ರಿಕಮಂಡೇಶನ್ ಲೆಟರ್ ತೆಗೆದುಕೊಂಡು ಬಂದಿರುತ್ತಾನೆ ಕೂಡಿಸು”ಎಂದು ಪ್ರಸಾದ್ ಹೇಳಿದರು. ಅಲ್ಲಿರುವ ಯಾರಿಗೂ ಸ್ವತಃ ಪ್ರಸಾದ್ ಅವರಿಗೂ ಗೊತ್ತಿಲ್ಲದ ವಿಷಯವೇನೆಂದರೆ, ಆ ಮುಸ್ಲಿಂ ಭಕ್ತನಿಂದಲೇ ಮುಂದೆ ತಮ್ಮ ಸಮಸ್ಯೆಗೆ ಒಂದು ಅದ್ಭುತ ಪರಿಷ್ಕಾರ ಸಿಗುತ್ತೆ ಎಂದು ಸ್ವಲ್ಪ ಹೊತ್ತಿನ ನಂತರ ತಲೆಚಿಟ್ಟು ಹಿಡಿದು ಪ್ರಸಾದ್ ಅವರು ತಣ್ಣನೆಯ ಗಾಳಿಗೋಸ್ಕರ ರೂಮಿನ ಹೊರಗಡೆ ಬಂದರು.

ಆಗ ಅಲ್ಲೇ ಬೆಂಚಿನ ಮೇಲೆ ಇದ್ದ ಕೊಳಕು ಬಟ್ಟೆ ಧರಿಸಿದ್ದ ಒಬ್ಬ ಮುಸ್ಲಿಂ ವ್ಯಕ್ತಿ ವಿನಮ್ರದಿಂದ ಎದ್ದು ನಿಂತನು. ಆಗ ಪ್ರಸಾದ್ ರಿಗೆ ಅಟೆಂಡರ್ ಹೇಳಿದ ವಿಷಯ ನೆನಪಿಗೆ ಬಂತು.” ಹೇಳಯ್ಯ ನನ್ನಿಂದ ನಿನಗೇನಾಗಬೇಕು?” ಎಂದು ಪ್ರಸಾದ್ ಕೇಳಿದರು. ಆಗ ಆ ಮುಸ್ಲಿಂ ವ್ಯಕ್ತಿ” ಸರ್ ನನ್ನ ಹೆಸರು ಶೇಕ್ ಮಸ್ತಾನ್. ನಮ್ಮೂರು ಗುಂಟೂರ್ ಜೆಲ್ಲೆಯ ಒಂದು ಸಣ್ಣ ಹಳ್ಳಿ. ನಮ್ಮದು ಅಣ್ಣ ತಮ್ಮಂದಿರಿದ್ದ ದೊಡ್ಡ ಜಾಯಿಂಟ್ ಫ್ಯಾಮಿಲಿ. ಎಲ್ಲರೂ ನಮ್ಮ ಅಜ್ಜನ ಕಾಲದಿಂದಲೂ ಕೂಡಿಯೇ ಇರುತ್ತೇವೆ.

ಎಲ್ಲರೂ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡುತ್ತೇವೆ. ಸರ್ ನಮ್ಮ ಅಜ್ಜನ ಕಾಲದಿಂದಲೂ ನಾವೆಲ್ಲರೂ ಆ ವೆಂಕಟರಮಣ ಸ್ವಾಮಿಯ ಭಕ್ತರು. ನಾವೆಲ್ಲರೂ ಬೆಳಿಗ್ಗೆ ಎದ್ದು ವೆಂಕಪ್ಪನ ಸುಪ್ರಭಾತವನ್ನು ಪಠಿಸುತ್ತೇವೆ,ಶ್ರೀ ವೆಂಕಟೇಶ್ವರ ಮಂತ್ರವನ್ನು ಜಪಿಸುತ್ತೇವೆ. ನಾನಂತೂ ಮಂಗಳಶಾಸನ, ಶ್ರೀನಿವಾಸಗದ್ಯವನ್ನು ದಿನನಿತ್ಯ ಪಠಿಸುತ್ತೇನೆ. ಅಜ್ಜನಕಾಲದಿಂದಲೂ ಪ್ರತಿ ಮಂಗಳವಾರ ನಾವೆಲ್ಲರೂ ಬೆಳಿಗ್ಗೆಯಿಂದಲೇ ನಮ್ಮ ಹಿತ್ತಲಿನಲ್ಲಿಯೇ ವಿವಿಧ ಗಿಡಗಳಲ್ಲಿ ಅರಳಿದ ಹೂಗಳಿಂದ ಸ್ವಾಮಿಯ 108 ನಾಮಗಳನ್ನು ಪಠಿಸುತ್ತಾ ಒಂದೊಂದು ಪುಷ್ಪವನ್ನು ಸ್ವಾಮಿಯ ಒಂದೊಂದು ಹೆಸರಿಗೆ ಸಮರ್ಪಿಸುತ್ತಾ ಅಷ್ಟೋತ್ತರ ಶತನಾಮ ಪೂಜೆ ಮಾಡುತ್ತೇವೆ.

ಅಯ್ಯಾ ನಾನು ಹೇಳುವ ಇನ್ನೊಂದು ಮುಖ್ಯ ವಿಷಯ,ನನ್ನ ತಂದೆಯ ತಂದೆ ಅಂದರೆ ಅಜ್ಜ ತನ್ನ ಕಸುಬಿನಿಂದಲೇ 108 ಬಂಗಾರದ ಕಮಲದ ಹೂಗಳನ್ನು ಮಾಡಿಸಿ ಆ ಸ್ವಾಮಿಗೆ ಸಮರ್ಪಣೆ ಮಾಡಬೇಕೆಂದು ಹರಕೆ ಹೊತ್ತಿದ್ದನು. ಆದರೆ ಬಡತನದ ಮತ್ತು ಅನಾರೋಗ್ಯದ ಕಾರಣ ಸ್ವಲ್ಪವೇ ಸ್ವರ್ಣದ ಹೂಗಳನ್ನು ಮಾಡಿಸಲು ಸಾಧ್ಯವಾಯಿತು. ಅಜ್ಜನ ಆಸೆಯಂತೆ ನಮ್ಮ ಅಪ್ಪ ಆ ಹರಕೆ ತೀರಿಸಲು ಎಷ್ಟೋ ಭಕ್ತಿ ಶ್ರದ್ಧೆಯಿಂದ ಇನ್ನು ಸ್ವಲ್ಪ ಬಂಗಾರದ ಪುಷ್ಪಗಳನ್ನು ಮಾಡಿದರು.

ಆದರೂ ಅವರಿಗೂ ಅಜ್ಜನ ಹರಕೆ ತೀರಿಸಲು ಆಗಲಿಲ್ಲ. ನನ್ನ ಅಜ್ಜನ ಅಪ್ಪನ ಕೋರಿಕೆ ಹರಕೆ ತೀರಿಸುವ ಜವಾಬ್ದಾರಿ ದೊಡ್ಡಮಗನಾದ ನನ್ನ ಮೇಲೆ ಬಿತ್ತು ನನ್ನ ಆರ್ಥಿಕ ಸ್ಥಿತಿಯು ಅಷ್ಟಕಷ್ಟೇ. ಆದರೂ ಛಲ ಬಿಡದೇ ನಾನು ಭಕ್ತಿಯಿಂದ ಆ ವೆಂಕಟರಮಣನ ಆಶೀರ್ವಾದದಿಂದ ಇತ್ತೀಚೆಗಷ್ಟೇ 108 ಸ್ವರ್ಣ ಕಮಲಗಳನ್ನು ಪೂರ್ತಿಗೊಳಿಸಿದೆ. ಭಕ್ತಿಯಿಂದ ನನ್ನ ಕುಟುಂಬದ ಎಲ್ಲ ಸದಸ್ಯರೂ 54 ಜನ ಪಾದಯಾತ್ರೆಯ ಮುಖಾಂತರ ಬೆಟ್ಟ ಹತ್ತಿ ಬಂದಿದ್ದೇವೆ.

ಆ ಸ್ವಾಮಿಗೆ ಈ 108 ಸ್ವರ್ಣ ಕಮಲಗಳನ್ನು ತಮಗೆ ಹೇಳಿ ಸಮರ್ಪಿಸಲು ಬಂದಿದ್ದೇನೆ” ಎಂದು ಹೇಳಿದನು. ಸಂಭ್ರಮಾಶ್ಚರ್ಯದಿಂದ ಕೇಳಿದ ಟಿ ಟಿ ಡಿ EO ಪ್ರಸಾದ್ ಶೇಕ್ ಮಸ್ತಾನ್ ನನ್ನು ಆಲಿಂಗನ ಮಾಡಿಕೊಂಡು ಕೈ ಹಿಡಿದು ಬೋರ್ಡ್ ರೂಮಿನಲ್ಲಿ ಕರೆದುಕೊಂಡು ಹೋಗಿ ಎಲ್ಲರಿಗೂ ಪರಿಚಯ ಮಾಡಿ ಆತನ ಕಥೆ ಹೇಳಿದನು. ಶೇಕ್ ಮಸ್ತಾನ್ ಗೆ ಮಾತನಾಡುವ ಅವಕಾಶ ಕೊಟ್ಟಾಗ ಆತ ವಿನಮ್ರದಿಂದ ಒಂದೊಂದು ಸ್ವರ್ಣದ ಹೂವು 23 ಗ್ರಾಮ್ ಇದೆ.

108 ಸ್ವರ್ಣ ಕಮಲದ ಹೂಗಳನ್ನು ಸ್ವೀಕರಿಸಿ ಸ್ವಾಮಿಯ ಯಾವದಾದರೂ ಒಂದು ಸೇವೆಯಲ್ಲಿ ಇವನ್ನು ಉಪಯೋಗ ಮಾಡಿದರೆ ಅಜ್ಜನ, ಅಪ್ಪನ ಆಸೆ ತೀರುವದೆಂದು ಅವರ ಆತ್ಮಕ್ಕೆ ಶಾಂತಿ ಸಿಗುವದೆಂದು, ತಮ್ಮ ಬಯಕೆಯೂ ಪರಿಪೂರ್ಣವಾಗುವದೆಂದು ಕಳಕಳಿಯಿಂದ ಕೇಳಿಕೊಂಡನು.

ಎಲ್ಲರ ಎದುರೇ 108 ಸ್ವರ್ಣ ಕಮಲಗಳಿದ್ದ ಆ ಚೀಲವನ್ನು ಟೇಬಲ್ ಮೇಲಿಟ್ಟನು. ಒಂದು ಕ್ಷಣ ನಿಶಬ್ಧ, ಮೌನ. ನಂತರ ಎಲ್ಲೆಡೆ ಚಪ್ಪಾಳೆ! ಆನಂದ ಉದ್ವೇಗಭರಿತ ಕ್ಷಣಗಳವು. ಸದಸ್ಯರ ಹಾಗೂ ಪ್ರಸಾದ್ ರ್ ಕಣ್ಣಲ್ಲಿ ನೀರು ಸಾದಾ ಸೀದಾ ಭಕ್ತನ ಹಾಗೆ ಏನು ಜರಗಲಿಲ್ಲವೇನೋ ಎಂಬಂತೆ ತಮ್ಮೆದುರು ನಿಂತಿರುವೆ ಒಬ್ಬ ಮಹಾನ್ ಮುಸ್ಲಿಂ ಭಕ್ತ. EO ಪಸಾದ್ ಅಂತೂ ಕಣ್ಣೀರಿನಿಂದ ಆ ಭಕ್ತನ ಹತ್ತಿರ ಹೋಗಿ “ಮಸ್ತಾನ್ ಅವರೇ ಆ ವೆಂಕಟರಮಣಸ್ವಾಮಿ ನಮ್ಮ ಸಮಸ್ಯೆ ಪರಿಹಾರ ಮಾಡಲು ಕಳುಹಿಸಿದ ದೇವದೂತ ನೀವು.

ನನ್ನ ಸರ್ವಿಸ್ ನಲ್ಲಿ ಎಷ್ಟೋ ಮಹಾನ್ ಭಕ್ತರನ್ನು ನಾನು ನೋಡಿದ್ದೇನೆ,ಆದರೆ ನಿಮ್ಮಂಥ ಅದ್ವಿತೀಯ ಭಕ್ತನನ್ನು ನಾನು ನೋಡಿಲ್ಲ.ವಿ ನಿಮ್ಮನ್ನು ನೋಡುವದು ನಮ್ಮ ಪೂರ್ವಜನ್ಮದ ಪುಣ್ಯ. ನಾನು ನನ್ನ ಸರ್ಕಾರದೊಂದಿಗೆ ಮಾತನಾಡಿ ನಿಮ್ಮ ಈ ಸೇವೆಗೆ ಅಭೂತಪೂರ್ವ ಗೌರವವನ್ನು ನೀಡುತ್ತೇನೆ” ಎಂದು ಮಸ್ತಾನ್ ಎರಡು ಕೈಗಳನ್ನು ಹಿಡಿದುಕೊಂಡು ಭಾವೋದ್ವೇಗದಿಂದ ಹೇಳಿದರು.

ನಂತರದ ಕೆಲಸಗಳೆಲ್ಲಾ ಚಕಚಕನೆ ನಡೆದುಹೋದವು. ಆ ಸ್ವರಣೋತ್ಸವದ ಸಂಭ್ರಮದಲ್ಲಿಯೇ ಹೊಸ ಅರ್ಜಿತ ಸೇವೆಯೊಂದು ವೈಭವದಿಂದ ಪ್ರಾರಂಭಗೊಂಡಿತು. ಆ ಸೇವೆಯನ್ನು ಪ್ರತಿ ಮಂಗಳವಾರ ಅಷ್ಟೋತ್ತರ ಸ್ವರ್ಣ ಪದ್ಮಪೂಜ ಸೇವಾ ಎಂದು ನಾಮಕರಣ ಮಾಡಲಾಯಿತು. ಆ ಪೂಜೆಯಲ್ಲಿ ವೆಂಕಟೇಶ್ವರ ಸ್ವಾಮಿಯ 108 ನಾಮಗಳನ್ನು ಪಠಿಸುತ್ತಾ ಶೇಕ್ ಮಸ್ತಾನ್ ನೀಡಿದ ಒಂದೊಂದು ಬಂಗಾರದ ಪುಷ್ಪಗಳನ್ನು ಸ್ವಾಮಿಯ ಪಾದದಡಿಯಲ್ಲಿ ಇಡುತ್ತಾರೆ.

ಈಗಲೂ 37 ವರ್ಷಗಳಿಂದ ಪ್ರತಿ ಮಂಗಳವಾರ ಜರಗುವ ಈ ಸೇವೆಯಲ್ಲಿ ಶೇಕ್ ಮಸ್ತಾನ್ ನೀಡಿದ ಹೂಗಳನ್ನೇ ಉಪಯೋಗಿಸುತ್ತಾರೆ. ಮೊದಲು “ಅಷ್ಟದಳ ಸ್ವರ್ಣ ಪದ್ಮ” ಪೂಜಾ ಎಂದಿದ್ದ ಈ ಸೇವೆ ಈಗ “ಅಷ್ಟದಳ ಪಾದ ಪದ್ಮಾರಾಧನ” ಸೇವೆ ಎಂದು ಮತ್ತಷ್ಟು ಪ್ರಾಮುಖ್ಯವನ್ನು ಪಡೆದುಕೊಂಡಿದೆ. ಆ ಕಲಿಯುಗ ದೇವ ಶ್ರೀ ವೆಂಕಟೇಶ್ವರ ಸ್ವಾಮಿ ಭಕ್ತರ ಕೋರಿಕೆಯನ್ನು ತಪ್ಪದೆ ನೆರೆವೇರಿಸುತ್ತಾನೆ ಎಂಬುವದಕ್ಕೆ ಉದಾಹರಣೆ ಈ ಪ್ರಸಂಗ

LEAVE A REPLY

Please enter your comment!
Please enter your name here