ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡಕಾಲಗಳ ಅರ್ಥ ಔಚಿತ್ಯ ಮತ್ತು ಪ್ರಾಮುಖ್ಯತೆಯನ್ನು ತಿಳಿಯೋಣ ಬನ್ನಿ.

0
4433

ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡಕಾಲಗಳ ಅರ್ಥ ಔಚಿತ್ಯ ಮತ್ತು ಪ್ರಾಮುಖ್ಯತೆ. ನಮ್ಮ ಹಿಂದೂ ಧರ್ಮದಲ್ಲಿ ಮುಖ್ಯವಾದ ಕೆಲಸ-ಕಾರ್ಯಗಳಿಗೆ ಮತ್ತು ಹಬ್ಬಗಳಾಚರಣೆಗೆ ಮುಹೂರ್ತ ನೋಡುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡ ಪದ್ಧತಿ. ನಮ್ಮವರು ಇಂದಿಗೂ ಹಬ್ಬ, ಮದುವೆ, ಗೃಹಪ್ರವೇಶ, ಮುಂಜಿವೆ ಮುಂತಾದ ಶುಭಕಾರ್ಯಗಳಿಗೆ ಮುಹೂರ್ತ ನೋಡುತ್ತಾರೆ. ಅಷ್ಟೇ ಏಕೆ, ರಾಜಕಾರಣಿಗಳು ಒಂದು ಹೆಜ್ಜೆ ಇಡಬೇಕೆಂದರೂ ಮುಹೂರ್ತ ನೋಡುತ್ತಾರೆ!

ಯಾವ ದೇವರು? ಯಾವ ಶನಿ? ಯಾವ ನಕ್ಷತ್ರ? ಎನ್ನುವ ನಾಸ್ತಿಕರೂ ಸಹ ಮನೆಯ ಹಿರಿಯರ ಮಾತು ಕೇಳಿಕೊಂಡು ತೆಪ್ಪಗೆ ಉತ್ತಮ ಮುಹೂರ್ತದಲ್ಲೇ ಮದುವೆ ಮತ್ತು ಗೃಹಪ್ರವೇಶ ಮಾಡಿಕೊಳ್ಳುತ್ತಾರೆ. ಆದರೆ ಹೊರಗೆ ತಮ್ಮಷ್ಟಕ್ಕೆ ತಾವೇ “ಹಿಂದೂ ಧರ್ಮಾಚರಣೆ ವಿರೋಧಿ”ಗಳು ಎಂದು ಬಿಂಬಿಸಿಕೊಳ್ಳುವ ಮೂಢರು ನಮ್ಮ ಪದ್ಧತಿಗಳನ್ನು ಮೂಢನಂಬಿಕೆ ಎಂದು ಬೊಬ್ಬೆ ಹಾಕುತ್ತಿರುತ್ತಾರೆ.

ಇಂಥಹವರು ಮೊದಲೇ ಬರೆದಿಡಬೇಕು “ನಾನು ಸತ್ತಾಗ ಯಾವುದೇ ಪೂಜೆ ಮಾಡುವ ಹಾಗಿಲ್ಲ ಮತ್ತು ಯಾವುದೇ ತಿಥಿ ಕೂಡ ಮಾಡುವ ಹಾಗಿಲ್ಲ” ಎಂದು. ಏಕೆಂದರೆ ವ್ಯಕ್ತಿ ಸತ್ತಾಗ ಸಮಯ ಮತ್ತು ನಕ್ಷತ್ರ ನೋಡಿಕೊಂಡೇ ತಿಥಿ ಮಾಡುವ ಪದ್ಧತಿ ನಮ್ಮಲ್ಲಿದೆ ಎಂಬುದು ಗೊತ್ತಿರದ ಪೆದ್ದರಿವರು.

ನಾವು ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡಕಾಲ ಎನ್ನುವುದನ್ನು ಕೇಳಿದ್ದೇವೆ. ಆದರೆ ಆ ಕಾಲಗಳ ಮಹತ್ವ ಇಂದಿಗೂ ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಿದ್ದವರು ಹೇಳುವುದಿಲ್ಲ. ಹೇಳಿದರೆ ಎಲ್ಲಿ ನಮ್ಮನ್ನು ಅಪಹಾಸ್ಯ ಮಾಡುತ್ತಾರೋ ಎಂಬ ಭಯ ಅವರಿಗಿರಬಹುದು!

ಕಾಲಗಳ ಮಹತ್ವ ಗೊತ್ತಿದ್ದವರು ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಲೇ ಹೋಗುತ್ತಿರುತ್ತಾರೆ. ಇವರ ಯಶಸ್ಸನ್ನು ನೋಡಿ ಕೆಲವರು “ಇವನಿಗೇನೂ ಬರೋದೇ ಇಲ್ಲ! ಆದರೂ ಇವನೆಂಗೆ ಇಷ್ಟೆತ್ತರಕ್ಕೇರಿದ” ಎಂದು ಹುಬ್ಬೇರಿಸಿಕೊಂಡು ಹೊಟ್ಟೆಕಿಚ್ಚು ಪಡುತ್ತಾ ಚಡಪಡಿಸುತ್ತಿರುತ್ತಾರೆ.

ಆದರೆ, ಸಮಯ ನೋಡಿಕೊಂಡು ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ಸಾಗುತ್ತವೆ ಎಂಬ ಗುಟ್ಟು ಬಹಳಷ್ಟು ಜನರಿಗೆ ಗೊತ್ತಿಲ್ಲ. ಗೊತ್ತಿದ್ದು ಗೊತ್ತಿದ್ದು ಅವರು ನಿಷ್ಕಾಳಜಿ ಮಾಡುತ್ತಿರಬಹುದು ಎನ್ನಬಹುದು ಅಷ್ಟೇ.

ರಾಹು ಕಾಲ : ಸಾಮಾನ್ಯವಾಗಿ ರಾಹುಕಾಲವು ವಾರದ ಒಂದೊಂದು ದಿನ ಸರಿಸುಮಾರು ಒಂದೇ ಸಮಯದಲ್ಲಿರುತ್ತದೆ. ರಾಹುಕಾಲಕ್ಕೆ “ವಿಷಘಳಿಗೆ” ಎಂದು ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮುಖ್ಯವಾದ ಕೆಲಸಗಳಿಗೆ ಹೊರಡದಿರುವುದು ಸೂಕ್ತ. ಏಕೆಂದರೆ ಯಾವ ಉದ್ದೇಶ ಇಟ್ಟುಕೊಂಡು ನಾವು ಈ ವೇಳೆಯಲ್ಲಿ ಹೊರಟಿರುತ್ತೇವೆಯೋ ಅದು ಯಶಸ್ಸಾಗುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೇ ಬಂದಿದೆ.

ರಾಹುಕಾಲದಲ್ಲೇನಾದರೂ ಹೋದಿರೆನ್ನಿ, ಆಗಬೇಕಾದ ಕೆಲಸ ಲೇಟಾಗುತ್ತದೆ ಅಥವಾ ಏನಾದರೂ ಅಡೆತಡೆ ಬರುತ್ತದೆ ಇಲ್ಲವೇ ಆಗೋದೇ ಇಲ್ಲ. ಈ ಸಮಯದಲ್ಲಿ ಹಣದ ವ್ಯವಹಾರ ಮಾಡುವುದು ಕೂಡ ಸೂಕ್ತವಲ್ಲ. ಉದಾಹರಣೆಗೆ ಖರೀದಿ, ಸಾಲ ಕೊಡುವುದು-ಪಡೆಯುವುದು, ಮತ್ತಿತರೆ. ಇನ್ನು ಕೆಲವೊಂದು ಮಹತ್ವದ ಮಾತುಕತೆಗಳನ್ನು ಕೂಡ ರಾಹುಕಾಲದಲ್ಲಿ ಮಾಡದಿರುವುದು ಸೂಕ್ತ. ಏಕೆಂದರೆ ಮಾತುಕತೆಯಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದಿಲ್ಲ.

ಪ್ರತಿನಿತ್ಯ ಕೇವಲ ಒಂದೂವರೆ ಗಂಟೆಗಳಷ್ಟಿರುವ ರಾಹುಕಾಲವು, ರಾಹುದೋಷ ನಿವಾರಣಾ ಪೂಜೆಗೆ ಮತ್ತು ಮಾತೆ ದುರ್ಗಾದೇವಿಯ ಆರಾಧನೆಗೆ ತುಂಬಾ ಸೂಕ್ತ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ರಾಹುಕಾಲ ನಮಗೆ ಲಾಭವನ್ನೂ ತರುತ್ತದೆ. ಹೇಗೆಂದರೆ ನಮಗೇನಾದರೂ ಕೆಲಸ ಆಗದಿರುವ ಹಾಗೆ ಮಾಡಬೇಕೆಂದರೆ, ತೊಂದರೆಗಳಿಂದ ನಮಗೆ ಖುಷಿಯಾಗಬೇಕೆಂದರೆ ರಾಹುಕಾಲವನ್ನು ಆಯ್ಕೆ ಮಾಡಿಕೊಳ್ಳಬೇಕು! ಬೇಕಿದ್ದವರು ಪರೀಕ್ಷಿಸಿಕೊಳ್ಳಬಹುದು.

ಗುಳಿಕ ಕಾಲ : ಗುಳಿಕ ಕಾಲವೂ ಕೂಡ ಪ್ರತಿನಿತ್ಯ ವಾರದಲ್ಲೊಂದೊಂದು ದಿನ ಒಂದೂವರೆ ಗಂಟೆಗಳಷ್ಟಿರುತ್ತದೆ. ರವಿವಾರ ಮಧ್ಯಾಹ್ನ 3 ರಿಂದ 4-30ರವರೆಗೆ ಗುಳಿಕ ಕಾಲ. ಆದರೆ, ಉಳಿದ ದಿನ ಬೇರೆ ಬೇರೆ ಸಮಯದಲ್ಲಿರುತ್ತದೆ ಎಂಬುದು ಗಮನದಲ್ಲಿರಿಸಿಕೊಂಡಿರಬೇಕು. ಈ ಗುಳಿಕ ಕಾಲದ ವಿಶೇಷವೇನೆಂದರೆ ಈ ಸಮಯದಲ್ಲಿ ಮಾಡಿದ ಕೆಲಸ ಕಾರ್ಯಗಳು ಪುನಃ ಮರುಕಳಿಸುತ್ತವೆ ಎಂಬ ನಂಬಿಕೆ ಹಿಂದಿನಿಂದ ಬಂದಿದೆ.

ಈ ಸಮಯದಲ್ಲಿಯೇ ಸಾಮಾನ್ಯವಾಗಿ ಗೃಹಪ್ರವೇಶ, ಹೊಸ ವಾಹನ ಮತ್ತು ಬಂಗಾರ ಖರೀದಿ ಮಾಡುತ್ತಾರೆ. ಏಕೆಂದರೆ ಇದರಿಂದ ಮತ್ತೆ ಹೊಸ ಮನೆ ಗೃಹಪ್ರವೇಶ ಮತ್ತು ವಾಹನ, ಬಂಗಾರ ಖರೀದಿ ಯೋಗ ಬರುತ್ತದೆ ಎಂಬ ನಂಬಿಕೆ.

ಆದರೆ, ಗುಳಿಕ ಕಾಲದಲ್ಲಿ ಮೃತ ವ್ಯಕ್ತಿಯ ಶರೀರವನ್ನು ಮನೆಯಿಂದ ಮಸಣಕ್ಕೆ ತೆಗೆದುಕೊಂಡು ಹೋಗುವ ಹಾಗಿಲ್ಲ. ಹಾಗೂ ಅಂತ್ಯಕ್ರಿಯೆ ನಡೆಸುವ ಹಾಗಿಲ್ಲ. ಇದಕ್ಕರ್ಥ ನಿಮಗೆ ಗೊತ್ತಾಗಿರಬಹುದು. ಗೊತ್ತಾಗದವರಿಗೆ ಗುಳಿಕ ಕಾಲದಲ್ಲಿ ಮಾಡಿದ ಕೆಲಸ-ಕಾರ್ಯಗಳು ಮರುಕಳಿಸುತ್ತವೆ ಎಂಬುದನ್ನು ನೆನಪಿಸಬೇಕಾಗುತ್ತದೆ.

ಗುಳಿಕ ಕಾಲದ ಇನ್ನೊಂದು ಮಜವಾದ ವಿಷಯವೆಂದರೆ, ಮದುವೆಯ ಮುಹೂರ್ತವನ್ನು ಈ ಸಮಯದಲ್ಲಿ ಮಾಡುವುದಿಲ್ಲ. ಏಕೆಂದರೆ, ಮದುವೆ ಎಂಬುದು ಜೀವನದಲ್ಲಿ ಒಂದೇ ಬಾರಿ ಬರುವುದು. ಗುಳಿಕ ಕಾಲದಲ್ಲಿ ಮಾಡಿದರೆ? ಅರ್ಥವಾಗಿರಬಹುದು ಆಸ್ತಿಕರಿಗೆ!

ಯಮಗಂಡ ಕಾಲ : ಯಮಗಂಡ ಕಾಲವೂ ಪ್ರತಿನಿತ್ಯ ಒಂದೂವರೆ ಗಂಟೆಗಳಷ್ಟಿರುತ್ತದೆ. ರವಿವಾರ ಮಧ್ಯಾಹ್ನ 12-00 ರಿಂದ 1-30 ರವರೆಗೆ. ಉಳಿದ ದಿನಗಳು ಬೇರೆ ಬೇರೆ ಸಮಯದಲ್ಲಿರುತ್ತದೆ. ಇದು ಯಾವುದೇ ಕೆಲಸಗಳನ್ನು ಅಂತ್ಯಗೊಳಿಸಬೇಕೆಂದರೆ ಉತ್ತಮ ಸಮಯ. ಈ ಸಮಯಕ್ಕೆ “ಸಾವಿನ ಸಮಯ” ಎಂದೂ ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮೃತ ಶರೀರದ ಅಂತ್ಯಕ್ರಿಯೆ, ತಿಥಿಯಾಚರಣೆ, ಶೋಕಾಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಹಾಗಿಲ್ಲ. ಮಾಡಿದಿರೆನ್ನಿ. ಆ ಕೆಲಸಕ್ಕೆ “ಎಳ್ಳು ನೀರು ಬಿಟ್ಟಂಗೆ!”

ಈ ಸಮಯದಲ್ಲಿ ಯಾವುದೇ ಮಾತುಕತೆ, ಹಣದ ವ್ಯವಹಾರ, ಖರೀದಿ ಮಾಡುವ ಹಾಗಿಲ್ಲ. ಮಾಡಲು ಹೋದರೆ ಅದು ಯಶಸ್ಸೂ ಆಗಲ್ಲ, ಅಲ್ಲದೇ ಅದೇ ಕೊನೆಯೂ ಕೂಡ ಆಗುತ್ತದೆ. ಮುಂದೆ ಆ ಯೋಗವೂ ಬರುವುದಿಲ್ಲ ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು.

ಅಲ್ಲದೇ ಉಲ್ಲಾಸ, ಉತ್ಸಾಹ ಕಳೆದುಕೊಂಡು ಬೇಸರಪಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ಯಮಗಂಡ ಕಾಲದಲ್ಲಿ ಮುಖ್ಯವಾದ ಕೆಲಸಕ್ಕೆ ಹೋಗುವುದನ್ನು ಮತ್ತು ಮಾತುಕತೆಗಳನ್ನು ತಪ್ಪಿಸಬೇಕು. ಯಾವುದೇ ವಿಷಯವನ್ನಾಗಲಿ ಅದಕ್ಕೊಂದು ಅಂತ್ಯ ಹಾಡಬೇಕೆಂದರೆ ಯಮಗಂಡ ಕಾಲ ಸೂಕ್ತ!

ಈ ಕಾಲವನ್ನೆಲ್ಲಾ ನೋಡುತ್ತಾ ಹೋದರೆ ಜಗತ್ತೇ ಕೆಲವೊಮ್ಮೆ ಸ್ತಬ್ದವಾಗುತ್ತದೆ ಎನ್ನುವವರಿಗೆ, “ವಿನಾಶಕಾಲೇ ವಿಪರೀತ ಬುದ್ಧಿ” ಎಂದು “ತುಂಬಿ ಬಂದವರಿಗೆ” ಏನ್ ಹೇಳಬೇಕು? ಕೆಲ ದುರಂತ ಮತ್ತು ಅಪಘಾತ ಆಗಿರುವ ಸಮಯ ಮತ್ತು ಅವರು ಮನೆ ಬಿಟ್ಟ ಸಮಯವನ್ನು ಪರಿಶೀಲಿಸಿದರೆ ಗೊತ್ತಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here