ಒಂದು ಊರಿನಲ್ಲಿ ತಾಯಿ ಮಗ ಇದ್ದರು. ತಾಯಿ ಬೇರೆಯವರ ಮನೆಗಳಲ್ಲಿ ದುಡಿದು ಹಣಗಳಿಸಿ, ಅದರಲ್ಲೇ ಸಾಕಷ್ಟನ್ನು ದಾನ ಮಾಡಿ ಉಳಿದದ್ದರಲ್ಲಿ ಇಬ್ಬರ ಜೀವನ ಸಾಗಿಸುತ್ತಿದ್ದಳು. ಮಗನಿಗೆ ಈ ದಾನ ಇಷ್ಟವಿಲ್ಲ. ಆಕೆಯನ್ನು ಕೇಳಿದ, `ಯಾಕೆ ಹೀಗೆ ದಾನ ಮಾಡುತ್ತೀ. ಕೆಲವೊಮ್ಮೆ ಉಪವಾಸ ಇದ್ದು ದಾನ ಮಾಡುತ್ತಿ. ಈ ದಾನದ ಮಹತ್ವ ಏನು’ ತಾಯಿ ಹೇಳಿದಳು, `ಮಗೂ, ದಾನದಿಂದ ಪುಣ್ಯ ಬರುತ್ತದೆ.
ಪುಣ್ಯ ಎಂದರೇನು’ ಮಗ ಕೇಳಿದ. ತಾಯಿ, `ನನಗೇನು ಗೊತ್ತಪ್ಪ. ಅದು ಶಿವನಿಗೇ ಗೊತ್ತು. ಅವನನ್ನೇ ಹೋಗಿ ಕೇಳು’ ಎಂದಳು. ಮಗ ಶಿವನನ್ನು ಕಾಣಲು ಹೊರಟ. ದಾರಿಯಲ್ಲಿ ದಟ್ಟವಾದ ಅರಣ್ಯ. ಕತ್ತಲೆಯೂ ಆಯಿತು. ತರುಣನಿಗೆ ಗಾಬರಿ. ಆಗ ಅಲ್ಲಿಗೊಬ್ಬ ಬೇಡ ಬಂದ. ಈತನನ್ನು ಕರೆದುಕೊಂಡು ತನ್ನ ಗುಡಿಸಲಿಗೆ ಹೋದ. ಹೆಂಡತಿಗೆ ಹಣ್ಣು, ಹಂಪಲುಗಳನ್ನು ನೀಡಲು ಕೇಳಿದ. ಆಕೆ ಸಿಡುಕಿನಿಂದ, `ನನ್ನದ್ದನ್ನು ಕೊಡಲಾರೆ, ಬೇಕಾದರೆ ನಿನ್ನ ಪಾಲಿನಲ್ಲೇ ಕೊಡು’ ಎಂದಳು. ಬೇಡ ತನ್ನ ಪಾಲಿನ ಆಹಾರವನ್ನು ಈತನಿಗಿತ್ತು, ಕಾಲು ಒತ್ತಿ, ಹಾಸಿಗೆ ಹಾಸಿ ಗುಡಿಸಲಿನಲ್ಲಿ ಮಲಗಿಸಿದ. ತಾನು ಗುಡಿಸಿಲಿನ ಅರ್ಧ ಒಳಗೆ, ಅರ್ಧ ಹೊರಗೆ ಮಲಗಿದ. ರಾತ್ರಿ ಹುಲಿ ಬಂದು ಬೇಡನನ್ನು ಹೊಡೆದು ತಿಂದಿತು.
ಗುಡಿಸಲಿನೊಳಗೆ ನುಗ್ಗಿ ಅವನ ಹೆಂಡತಿಯನ್ನು ಎಳೆದುಕೊಂಡು ಹೋಗಿ ಮುಗಿಸಿತು. ಹುಡುಗ ದುಃಖದಿಂದ ಮುಂದೆ ನಡೆದ. ಮುಂದೆ ದಾರಿಯಲ್ಲಿ ರಾಜನೊಬ್ಬ ಸಿಕ್ಕ. ಈತ ಶಿವನ ಕಡೆಗೆ ಹೊರಟಿದ್ದನ್ನು ತಿಳಿದು, `ಹುಡುಗಾ, ನನ್ನದೊಂದು ಸಮಸ್ಯೆಗೆ ಶಿವನಿಂದ ಪರಿಹಾರ ಕೇಳಿಕೊಂಡು ಬಾ, ನಾನು ಕೋಟಿ ಹೊನ್ನು ಖರ್ಚುಮಾಡಿ ಕೆರೆ ಕಟ್ಟಿಸಿದ್ದೇನೆ. ಆದರೆ ಒಂದು ಹನಿ ನೀರೂ ಬೀಳಲಿಲ್ಲ’. ಹುಡುಗ `ಹ್ಞೂ’ ಎಂದು ನಡೆದ. ಸ್ವಲ್ಪ ಮುಂದೆ ಹೋಗುವಾಗ ದಾರಿಯಲ್ಲಿ ಒಬ್ಬ ಕುಂಟ ಮನುಷ್ಯ ಸಿಕ್ಕ. ಆತನೂ ಕೇಳಿದ, `ನನ್ನ ಕುಂಟತನಕ್ಕೆ ಕಾರಣವನ್ನು ಕೇಳಿ ಬಾ’. ಹಾಗೆಯೇ ಮುಂದುವರೆದಾಗ ದಾರಿಯಲ್ಲಿ ಒಂದು ದೊಡ್ಡ ಸರ್ಪ ಕಂಡಿತು. ಅದು ಹುತ್ತದೊಳಗೆ ಹೋಗಲಾರದೆ, ಹೊರಗೆ ಬರಲಾರದೆ ಒದ್ದಾಡುತ್ತಿತ್ತು. `ನಾನು ಇದರಿಂದ ಪಾರಾಗುವುದು ಹೇಗೆ ಎಂದು ಕೇಳಿಕೊಂಡು ಬಾ’ ಎಂದಿತು.
ತರುಣ ಬಂದು ಶಿವನನ್ನು ಕಂಡ `ಪ್ರಭೋ, ದಾನದ ಪುಣ್ಯ ಎಂದರೇನು, ದಯವಿಟ್ಟು ಹೇಳು’ ಎಂದ. ಅದಕ್ಕೆ ಶಿವ, `ನೋಡು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನಾನು ಕೊಡುವ ಪ್ರಸಾದವನ್ನು ಆಕೆಗೆ ಕೊಡು. ಆಕೆ ಗಂಡು ಮಗುವನ್ನು ಹಡೆಯುತ್ತಾಳೆ. ಆ ಕೂಸು ನಿನಗೆ ದಾನದ ಪುಣ್ಯವೇನೆಂದು ಹೇಳುತ್ತದೆ’ ಎಂದ. ರಾಜನ ಕೆರೆಯ ನೀರಿನ ಬಗ್ಗೆ ಕೇಳಿದಾಗ, `ರಾಜ ತನ್ನ ಮಗಳಿಗೆ ಒಳ್ಳೆಯ ವರನನ್ನು ನೋಡಿ ಮದುವೆ ಮಾಡಿದರೆ ನೀರು ಬೀಳುತ್ತದೆ’ ಎಂದ. ಅಂತೆಯೇ ಕುಂಟನ ಕಾಲಿನ ಪರಿಹಾರವನ್ನು ಕೇಳಿದಾಗ, `ಆತ ವಿದ್ಯಾದಾನ ಮಾಡಿಲ್ಲ.
ತನ್ನ ವಿದ್ಯೆಯನ್ನು ಯಾರಿಗಾದರೂ ದಾನ ಮಾಡಿದರೆ ಕುಂಟತನ ಹೋಗುತ್ತದೆ’ ಎಂದು ನುಡಿದ. ಹಾಗಾದರೆ ಹಾವಿನ ತೊಂದರೆಗೆ ಪರಿಹಾರವೇನು ಎಂಬ ಪ್ರಶ್ನೆಗೆ, `ಅದರ ನೆತ್ತಿಯಲ್ಲಿ ಒಂದು ರತ್ನವಿದೆ. ಅದನ್ನು ಯಾರಿಗಾದರೂ ಕೊಟ್ಟರೆ ಅದರ ಸಮಸ್ಯೆ ಬಗೆಹರಿಯುತ್ತದೆ’ ಎಂದು ಉತ್ತರಿಸಿದ. ಬರುವಾಗ ದಾರಿಯಲ್ಲಿ ಹಾವು ಸಿಕ್ಕಿತು. ಶಿವನ ಮಾತನ್ನು ತಿಳಿಸಿದಾಗ ನೆತ್ತಿಯ ರತ್ನವನ್ನು ಇವನಿಗೇ ಕೊಟ್ಟಿತು. ಕುಂಟ ಈತನಿಗೆ ಎಲ್ಲ ವಿದ್ಯೆಗಳನ್ನು ದಾನ ಮಾಡಿದ. ವಿದ್ಯೆ ಮತ್ತು ರತ್ನವನ್ನು ಪಡೆದ ಇವನಿಗೇ ರಾಜ ಮಗಳನ್ನು ಕೊಟ್ಟು ಮದುವೆ ಮಾಡಿದ.
ರಾಜ್ಯವನ್ನು ಕೊಟ್ಟ. ಕೆರೆ ತುಂಬಿತು. ನಂತರ ತರುಣ ನೇಪಾಳಕ್ಕೆ ಹೋದ. ರಾಣಿ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದಳು. ಈತ ಕೊಟ್ಟ ಪ್ರಸಾದ ತಿಂದೊಡನೆ ಸುಖಪ್ರಸವವಾಗಿ ಗಂಡುಮಗು ಹುಟ್ಟಿತು. ಅದನ್ನು ಬಂಗಾರದ ತಟ್ಟೆಯಲ್ಲಿ ತಂದು ಇವನ ಮುಂದಿಟ್ಟರು. ಈತ ಕೇಳಿದ, `ದಾನದ ಪುಣ್ಯ ಯಾವುದು’ ಮಗು ಪಕಪಕನೇ ನಕ್ಕು ಹೇಳಿತು, `ಹುಚ್ಚಾ, ಶಿವನನ್ನು ಕಂಡು ಬಂದರೂ ಜ್ಞಾನ ಬರಲಿಲ್ಲವೇ? ಯಾವ ಬೇಡ ನಿನಗೆ ಕಾಡಿನಲ್ಲಿ ಆಶ್ರಯ ಕೊಟ್ಟನೋ ಅವನೇ ನಾನು. ಅನ್ನದಾನ ಮಾಡಿದ್ದಕ್ಕೆ ಈಗ ರಾಜಕುಮಾರನಾಗಿ ಹುಟ್ಟಿದ್ದೇನೆ. ದಾನ ಮಾಡದ ನನ್ನ ಹೆಂಡತಿ ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ’.
ಹುಡುಗ ತನ್ನ ಊರಿಗೆ ಬಂದು ತಾಯಿಯನ್ನು ಕರೆದುಕೊಂಡು ಹೋಗಿ ದೊರೆತ ರಾಜ್ಯದ ರಾಜನಾಗಿ ಸುಖದಿಂದ ಬದುಕಿದ. ನಾವು ಜೀವನದಲ್ಲಿ ಏನಾದರೂ ಒಂದನ್ನು ಪಡೆಯುತ್ತಲೇ ಇರುತ್ತೇವೆ. ಅದರಲ್ಲೇ ಸಂತೋಷವನ್ನೂ ಪಡೆಯುತ್ತೇವೆ. ಆದರೆ, ನಿಜವಾದ ಮಾತೆಂದರೆ ನೀಡುವುದರಲ್ಲಿ ಇರುವ ಸುಖ, ನೆಮ್ಮದಿ ಪಡೆಯುವುದರಲ್ಲಿ ಇಲ್ಲ. ಹಾಗೆಂದು ಎಲ್ಲವನ್ನು ತ್ಯಾಗ ಮಾಡಿ ಸನ್ಯಾಸಿಯಾಗಬೇಕೆಂದಿಲ್ಲ. ನಮ್ಮ ಆಸೆ, ದುರಾಸೆಯಾಗದಂತೆ. ಅಪೇಕ್ಷೆ ಪರಪೀಡಕವಾಗದಂತೆ, ಬದುಕು ಪರರಿಗೆ ಹೊರೆಯಾಗದಂತೆ, ಇರುವ ನೆಲೆಯಲ್ಲೇ ಮತ್ತಷ್ಟು ಜನರಿಗೆ ನೆರಳಾಗುವ, ಪ್ರಯೋಜನಕಾರಿಯಾಗುವಂತೆ ಬದುಕುವುದು ಸಾರ್ಥಕತೆಯ ಲಕ್ಷಣ.