ಪತ್ನಿ ಮತ್ತೆ ಮತ್ತೆ ತಾಯಿಯ ಮೇಲೆ ಆರೋಪ ಮಾಡುತ್ತಿದ್ದಳು ಆದರೆ ಪತಿ ಅವಳಿಗೆ ತನ್ನ ಮಾತಿನ ಮಿತಿ ಮೀರಬೇಡವೆಂದು ಮನವಿ ಮಾಡುತ್ತಿದ್ದ. ಆದರೂ ಪತ್ನಿ ಮೌನವಾಗದೆ ಜೋರು ಜೋರಾಗಿ ಟೇಬಲ್ ಮೇಲೆ ಕೈಸನ್ನೆ ಮಾಡುತ್ತಾ ಕೂಗಿ ಹೇಳುತ್ತಿದ್ದಳು ನಾನು ಚಿನ್ನದ ಹಾರವನ್ನು ಇಲ್ಲೇ ಟೇಬಲ್ ಮೇಲೆ ಮಡಗಿದ್ದೆ ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರು ಕೋಣೆಯೊಳಗೆ ಬಂದಿಲ್ಲ ಮನೆಯಲ್ಲಿ ಮೂರನೆಯವವಳು ನಿಮ್ಮ ತಾಯಿಯೇ ಅದನ್ನು ಕಳವು ಮಾಡಿದ್ದು.
ಮಾತು ಪತಿಯ ಸಂಯಮವನ್ನೇ ಮೀರಿಸಿತು ಅವನು ಪತ್ನಿಯ ಕಪಾಳಕ್ಕೊಂದು ಜೋರಾಗಿ ಬಾರಿಸಿದ. ಇನ್ನೂ ಮದುವೆಯಾಗಿ ಮೂರು ತಿಂಗಳು ಕಳೆದಿರಲಿಲ್ಲ. ಹೊಡೆತ ಹೆಂಡತಿಗೆ ಸಹನೆಯಾಗಲಿಲ್ಲ ಮನೆ ಬಿಟ್ಟು ಹೊರಟು ಬಿಟ್ಟಳು ಹೊರಡುತ್ತಾ ಸವಾಲು ಒಂದನ್ನು ಕೇಳಿದಳು “ನಿಮಗೆ ತಾಯಿಯ ಮೇಲೆ ಯಾಕೆ ಇಷ್ಟು ಭರವಸೆ ?
ಪತಿ ನೀಡಿದ ಪ್ರತ್ಯುತ್ತರದಿಂದ ಬಾಗಿಲ ಹಿಂದೆ ಬಗ್ಗಿ ಹೋದ ಬಡಕಲು ಶರೀರದ ಹೆತ್ತವ್ವನ ಮನಸ್ಸಿನ ದುಃಖ ಕಣ್ಣಿನ ಮೂಲಕ ಧುಮ್ಮಿಕಿತು, ಪತಿ ಪತ್ನಿಗೆ ತನ್ನ ಪೂರ್ವ ಇತಿಹಾಸವನ್ನು ಈ ರೀತಿ ಪರಿಚಯಿಸುತ್ತಾನೆ. ತಾನು ಚಿಕ್ಕವನಾಗಿರುವಾಗಲೇ ತಂದೆಯನ್ನು ಕಳೆದು ಕೊಂಡೆ ನನ್ನ ಪಾಲನೆ ಪೋಷಣೆಗಾಗಿ ಪೆತ್ತ ಅವ್ವ ಪಕ್ಕದ ಬೀದಿಯ ಮನೆಯಲ್ಲಿ ಪಾತ್ರೆ ಮುಸುರೆ ತಿಕ್ಕಿ ಏನು ಸಂಪಾದಿಸಲು ಸಾಧ್ಯವಿತ್ತೋ ಅದರಿಂದ ಒಂದು ಹೊತ್ತಿನ ಊಟ ತರುತ್ತಿದ್ದಳು.
ತಾಯಿ ತಟ್ಟೆಯೊಂದರಲ್ಲಿ ನನಗೆ ಊಟ ಬಡಿಸಿ ಖಾಲಿ ಡಬ್ಬವನ್ನು ಮುಚ್ಚಿ ಮಡಗುತ್ತಿದ್ದಳು. ನನ್ನ ಊಟ ಇದರಲ್ಲಿದೆ ನೀನು ಊಟ ಮಾಡು ಅನ್ನುತ್ತಿದ್ದಳು ನಾನು ಸಹ ಪ್ರತಿದಿನವೂ ಅರ್ಧ ಊಟ ಮಾಡಿ ಹೊಟ್ಟೆ ತುಂಬಿ ಹೋಯಿತು ಎಂದು ಎದ್ದು ಓಡುತ್ತಿದ್ದೆ, ಅಮ್ಮ ನನ್ನ ಎಂಜಿಲು ಊಟ ಮಾಡಿ ನನ್ನನ್ನು ಬೆಳೆಸಿ ದೊಡ್ಡವನಾಗಿ ಮಾಡಿ ನಾನು ಇಂದು ಮೂರು ಹೊತ್ತು ಊಟ ಸಂಪಾದಿಸುವ ಮಟ್ಟಕ್ಕೆ ತಂದಿದ್ದಾಳೆ ನನಗಾಗಿ ಅವಳು ತನ್ನ ಎಲ್ಲಾ ಇಚ್ಚೆಯನ್ನೇ ಕೊಂದಿದ್ದಾಳೆ. ಆ ತಾಯಿಗೆ ಈ ವಯಸ್ಸಿನಲ್ಲಿ ನಿನ್ನ ಚಿನ್ನದ ಹಾರದ ಹಸಿವು ಇರಲಿಕ್ಕಿಲ್ಲ ನನಗೆ ಮೂರು ತಿಂಗಳಿನಿಂದ ನಿನ್ನ ಪರಿಚಯ ಅಷ್ಟೇ, ನನ್ನ ಅವ್ವನ ತಪಸ್ಸನ್ನು ನಾನು ಇಪ್ಪತ್ತೈದು ವರುಷದಿಂದ ನೋಡುತ್ತಿದ್ದೇನೆ.
ಮಗನ ಮಾತನ್ನು ಕೇಳಿದ ಆ ಮುಗ್ಧ ಮಾತೆಗೆ ಕಂಬನಿ ನಯನಗಳಿಂದ ನಿಲ್ಲದೆ ಹರಿಯಿತು ಹೆತ್ತವ್ವನಿಗೆ ಅರ್ಥವೇ ಆಗಲಿಲ್ಲ, ತಾನು ಮಗನಿಗೆ ಬಡಿಸಿದ ಅರ್ಧ ಊಟದ ಋುಣ ಅವನು ತೀರಿಸುತ್ತಿದ್ದಾನ ಇಲ್ಲಾ ಅವನು ಉಳಿಸಿದ ಅರ್ಧ ಊಟದ ಋುಣ ನಾನು ತೀರಿಸುತ್ತಿದ್ದೇನಾ.