ಮಲೆನಾಡಿನಲ್ಲಿ ನಡೆದ ನಿಜವಾದ ಭಯಾನಕ ಕಥೆ ಇಂದು ನಿಮ್ಮ ಮುಂದೆ ತೆರೆದಿಡಲಿದ್ದೇವೆ. ಮಲೆನಾಡ ಸಮೀಪದ ಒಂದು ಹಳ್ಳಿಯಲ್ಲಿ ಒಂದು ಹಳೆಯ ಬಂಗಲೆ ಇತ್ತು. ಸಾಮಾನ್ಯವಾಗಿ ಮಲೆನಾಡಿನಲ್ಲಿ ಎಕರೆಯ ಬದಲು ಬೆಟ್ಟಗಳ ಲೆಕ್ಕದಲ್ಲಿ ಜಾಗವನ್ನು ಖರೀದಿಸಲಾಗುತ್ತದೆ. ಅಂದರೆ ಒಂದು ಗುಡ್ಡ ಎರಡು ಗುಡ್ಡ ಎಂಬ ರೀತಿಯಲ್ಲಿ ಗುಡ್ಡಗಳನ್ನು ಖರೀದಿಸುತ್ತಾರೆ. ಇದೇ ರೀತಿಯಾಗಿ ಒಂದು ನಾಲ್ಕೈದು ಗುಡ್ಡಗಳ ಒಡೆಯನೊಬ್ಬ ಪತ್ನಿಯೊಂದಿಗೆ ವಾಸವಾಗಿದ್ದ.
ಅವನ ಮನೆಯು ಹೇಗಿತ್ತೆಂದರೆ ಬೆಟ್ಟದ ತುದಿಯಲ್ಲಿ ಬಂಗಲೆ ಹಾಗೆ ಕೆಳಗೆ ಇಳಿದು ಬಂದರೆ ಅಡ್ಡವಾಗಿ ಹೆದ್ದಾರಿ. ಆ ಹೆದ್ದಾರಿಯ ಮುಂದೆಯೇ ಅಡ್ಡವಾಗಿ ಹೊಳೆ. ಹೊಳೆ ದಾಟಿದರೆ ದಟ್ಟಕಾಡು. ಆ ಕಾಡಿನೊಳಗೆ ಒಂದು ಪುರಾತನ ದೇವಾಲಯ. ಆ ಶ್ರೀಮಂತ ವ್ಯಕ್ತಿಯು ತನ್ನ ಮನೆಯ ಸುತ್ತಲೂ ಸುಮಾರು ಅರವತ್ತಕ್ಕೂ ಹೆಚ್ಚು ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದ. ಆ ಕುರಿಗಳನ್ನು ಮೇಯಿಸಲು ಒಬ್ಬ ಕುರಿಗಾಹಿಯನ್ನು ಇಟ್ಟುಕೊಂಡಿದ್ದ. ಅವನು ಕೂಡ ನೋಡಲು ಸ್ವಲ್ಪ ವಿಚಿತ್ರವಾಗಿಯೇ ಇದ್ದ.
ಅವನ ಪ್ರತಿದಿನದ ಕೆಲಸವೇನೆಂದರೆ ಬೆಳಗಾಗುತ್ತಲೇ ಎಲ್ಲ ಕುರಿಗಳನ್ನು ನದಿಯನ್ನು ದಾಟಿಸಿ ಕಾಡಿನೊಳಗೆ ಸಂಜೆಯವರೆಗೂ ಮೇಯಿಸಿಕೊಂಡು ವಾಪಸ್ಸು ಹಿಂತಿರುಗಿ ಒಳಗೆ ಕುರಿಗಳನ್ನು ಕಟ್ಟಿ ಹಾಕಿ ನಿದ್ರಿಸುವುದು. ಇದು ಆತನ ಪ್ರತಿನಿತ್ಯದ ಕೆಲಸವಾಗಿತ್ತು. ಒಂದು ದಿನ ಹೀಗೆಯೇ ಆತನು ಕುರಿಗಳನ್ನೆಲ್ಲಾ ಮೇಯಿಸಲು ಮುಂಜಾನೆಗೆ ಆ ಹೊಳೆಯನ್ನು ದಾಟಿಸಿಕೊಂಡು ಕಾಡಿನೊಳಗೆ ಹೋದ. ಕಾಡಿನೊಳಗೆ ಹೋಗುತ್ತಿದ್ದಂತೆಯೇ ಎಲ್ಲ ಕುರಿಗಳು ಸಂಜೆ 5 ಗಂಟೆಯವರೆಗೆ ಚೆನ್ನಾಗಿ ಮೇಯುತ್ತಿದ್ದವು.
ಸಾಯಂಕಾಲದ ಕತ್ತಲೆ ಆವರಿಸಿಕೊಳ್ಳಲು ಶುರುವಾಗಿತ್ತು. ಅಂತಹ ಸಮಯದಲ್ಲಿ ಎಂದಿನಂತೆ ಎಲ್ಲ ಕುರಿಗಳನ್ನು ಒಗ್ಗೂಡಿಸಿ ಒಂದು ಪುಟಾಣಿ ಮರಿ ಕುರಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ವಾಪಸ್ಸು ಹಿಂದಿರುಗುತ್ತ ಹಾಡು ಹೇಳಿಕೊಳ್ಳುತ್ತಾ ಬರುತ್ತಿದ್ದ. ಆದರೆ ಸ್ವಲ್ಪ ದೂರ ಬರುತ್ತಿದ್ದಂತೆ ಹೆಗಲಮೇಲಿದ್ದ ಕುರಿಯ ತೂಕವು ಹೆಚ್ಚಾಗಲು ಪ್ರಾರಂಭವಾಯಿತು. ತಕ್ಷಣವೇ ಗಾಬರಿಗೊಂಡ ಕುರಿಗಾಹಿ ಅದನ್ನು ಇಳಿಸಿ ನೋಡಿದ. ಆದರೆ ಅದು ಕೇವಲ ಒಂದು ಪುಟ್ಟ ಕುರಿಮರಿ ಮಾತ್ರವಾಗಿತ್ತು.
ಎಲ್ಲೋ ತನಗೆ ಭ್ರಮೆ ಇರಬೇಕು ಎಂದುಕೊಂಡು ಆತ ಮತ್ತೆ ಆ ಪುಟ್ಟ ಕುರಿಮರಿಯನ್ನು ಹೆಗಲ ಮೇಲೆ ಹಾಕಿಕೊಂಡು ವಾಪಸ್ಸು ಬಂಗಲೆಗೆ ಹಿಂತಿರುಗುವುದಕ್ಕೆ ಅಣಿಯಾಗುತ್ತಾ ನಡೆದುಕೊಂಡು ಬರುತ್ತಿದ್ದ. ಆದರೆ ಮತ್ತೊಮ್ಮೆ ಹೆಗಲ ಮೇಲಿದ್ದ ಕುರಿಮರಿಯು ಭಾರವಾಗಲು ಶುರುವಾಯಿತು. ಮತ್ತೊಮ್ಮೆ ಗಾಬರಿಗೊಂಡ ಕುರಿಗಾಹಿ ಮತ್ತೆ ಕುರಿಯನ್ನು ಕೆಳಗಿಳಿಸಿ ಹಿಂತಿರುಗಿ ನೋಡದಂತೆ ಓಡಿ ಹೋಗಿ ಅಲ್ಲೇ ಹತ್ತಿರದಲ್ಲಿದ್ದ ದೇವಸ್ಥಾನದ ಒಳಗೆ ಹೋಗಿ ಚಿಲಕವಿಲ್ಲದಿದ್ದರೂ ಬಲವಂತವಾಗಿ ಬಾಗಿಲನ್ನು ಹಾಕಿಕೊಂಡು ಹೆದರಿ ಕುಳಿತುಬಿಟ್ಟ.
ಸ್ವಲ್ಪ ಸಮಯದ ನಂತರ ಕೀಲಿಕೈಯನ್ನು ಹಾಕುವ ಜಾಗದಿಂದ ಕಣ್ಣರಳಿಸಿ ನೋಡಿದಾಗ ಯಾವುದೋ ಒಂದು ಬಿಳಿ ಸೀರೆಯುಟ್ಟ ಮುದುಕಿಯು ಇಂದು ನೀನು ಬದುಕಿಬಿಟ್ಟೆ ಮಗನೇ ಎಂದು ಹೇಳಿ ಹಿಂದಿರುಗಿದರಂತೆ. ಗಾಬರಿಗೊಂಡ ಕುರಿಗಾಹಿಯು ಮತ್ತೆ ಬೆಳಗಾಗುವವರೆಗೂ ಕಾದು ಎಲ್ಲ ಕುರಿಗಳನ್ನು ಹೊಡೆದುಕೊಂಡು ವಾಪಸ್ ಹಿಂತಿರುಗಿ ಬಂಗಲೆಗೆ ಬಂದು ಇದನ್ನೆಲ್ಲವನ್ನು ಶ್ರೀಮಂತನಿಗೆ ಹಾಗೂ ಆತನ ಪತ್ನಿಗೆ ವಿವರಿಸಿದಾಗ ಎಲ್ಲರೂ ಬೆಚ್ಚಿ ಬಿದ್ದರಂತೆ. ಆಗಲಿಂದಲೆ ಆತನು ಸಂಜೆ 4:00 ಮುಂಚೆಯೇ ಮನೆಗೆ ಹಿಂದಿರುಗುತ್ತಾನೆ.