ದುರ್ಯೋಧನನ ಸಾ’ವಿಗೆ ತಾಯಿ ಗಾಂಧಾರಿಯೇ ಪರೋಕ್ಷವಾಗಿ ಕಾರಣವಾದ್ರಾ.

0
26693

ಪಟ್ಟಿ ಕಟ್ಟಿಕೊಂಡಿದ್ದ ಕಣ್ಣುಗಳಲ್ಲಿ ಸಂಚಯವಾಗಿದ್ದ ಶಕ್ತಿಯನ್ನು ತನ್ನ ಮಗ ದುರ್ಯೋಧನನ ಮೇಲೆರೆದು ಆತನನ್ನು ವಜ್ರಕಾಯನನ್ನಾಗಿಸಲು ಗಾಂಧಾರಿ ಮುಂದಾದಳು. ಆದರೂ ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಭೀಮ ದುರ್ಯೋಧನನ ತೊಡೆ ಮುರಿದು ಸಂ’ಹರಿಸಿದ. ಹಾಗಾದರೆ ಗಾಂಧಾರಿ ಎಡವಿದ್ದೆಲ್ಲಿ. ಅವಳ ಮೈಮರೆವೇ ದುರ್ಯೋಧನನ ಸಾವಿಗೆ ಕಾರಣವಾಯಿತೇ ಎನ್ನುವುದು ಒಂದು ದೊಡ್ಡ ಪ್ರಶ್ನೆ. ಗಾಂಧಾರ ದೇಶದ ರಾಜಕುಮಾರಿ ಗಾಂಧಾರಿ ಕುರುಡನಾಗಿದ್ದ ಧೃತರಾಷ್ಟ್ರನನ್ನು ಸ್ವ ಇಚ್ಛೆಯಿಂದಲೇ ಮದುವೆಯಾದಳು. ಆಮೇಲೆ ಗಂಡ ನೋಡದ ಲೋಕವನ್ನು ನಾನೇಕೆ ನೋಡಲಿ ಎಂದು ಕಣ್ಣಿಗೆ ಪಟ್ಟಿ ಕಟ್ಟಿಕೊಂಡಳು.

ಗಂಡನ ಕುರುಡುತನವನ್ನು ನಾನೂ ಅನುಭವಿಸುತ್ತೇನೆ ಎಂದು ಬದ್ಧಸಂಕಲ್ಪ ಮಾಡಿದಳು. ಈ ಕಾರಣದಿಂದಲೇ ಗಾಂಧಾರಿಯನ್ನು ಮಹಾ ಪತಿವ್ರತೆಯರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ. ವರ್ಷಗಟ್ಟಲೆ ಪಟ್ಟಿಯಿಂದ ಮುಚ್ಚಲ್ಪಟ್ಟಿದ್ದ ಆ ಕಣ್ಣುಗಳಲ್ಲಿ ಅಪಾರವಾದ ಶಕ್ತಿ ಸಂಚಯವಾಗಿದ್ದಿತು. ಈ ಶಕ್ತಿಯನ್ನೇನು ಮಾಡುವುದು ಎಂದು ಅವಳು ಯೋಚಿಸಿದಳು. ಪಾಂಡವರಿಗೂ ತನ್ನ ಮಕ್ಕಳಿಗೂ ಆಗಾಗ ಹೊಡೆದಾಟ ನಡೆಯುತ್ತಲೇ ಇರುತ್ತದೆ. ಅವರೆಲ್ಲ ದೊಡ್ಡವರಾದ ಮೇಲೆ ಅದು ಯುದ್ಧಕ್ಕೆ ತಿರುಗಬಹುದು. ದಾಯಾದಿ ಕಲಹ ಯಾವತ್ತೂ ಅಪಾಯಕಾರಿ. ಆದ್ದರಿಂದ ದುರ್ಯೋಧನನನ್ನು ವಜ್ರಕಾಯನಾಗಿಸುತ್ತೇನೆ. ಅವನು ಮಹಾ ಬಲಶಾಲಿ ಭೀಮನ ಪ್ರಹಾರ ತಡೆದು, ಅವರಿಂದ ತನ್ನ ಮಕ್ಕಳಿಗಾಗಲೀ ಅವರ ಅಧಿಕಾರಕ್ಕಾಗಲೀ ಸಂಚಕಾರ ಬರದಂತೆ ನೋಡಿಕೊಳ್ಳುತ್ತಾನೆ ಎಂದು ತೀರ್ಮಾನಿಸಿದಳು.

ತನ್ನ ತೀರ್ಮಾನದಂತೆ, ಗಾಂಧಾರಿ ತನ್ನ ಕಣ್ಣುಗಳಲ್ಲಿ ಮಡುಗಟ್ಟಿದ್ದ ಶಕ್ತಿಯನ್ನು ದುರ್ಯೋಧನನಿಗೆ ಧಾರೆ ಎರೆಯಲು ಮುಂದಾದಳು. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ತನ್ನ ಮಗನ ಮೇಲೆ ತನ್ನ ದೃಷ್ಟಿಯನ್ನು ಬೀರಿ ಶಕ್ತಿಪಾತ ಮಾಡುವ ಯೋಚನೆ ಅವಳದು. ಹೀಗೆ ಮೊದಲ ಬಾರಿಗೆ ದುರ್ಯೋಧನನ್ನು ಕರೆಸಿಕೊಂಡಾಗ ಅವನಿನ್ನೂ ಹನ್ನೆರಡರ ಬಾಲಕ. ಮಗನನ್ನು ಬಟ್ಟೆಯೆಲ್ಲ ಕಳಚಿ ಬೆತ್ತಲು ನಿಲ್ಲಲು ಹೇಳಿ ತಾನು ಕಟ್ಟಿಕೊಂಡಿದ್ದ ರೇಶಿಮೆ ಪಟ್ಟಿ ಕಳಚಿದಳು ಗಾಂಧಾರಿ. ಆಕೆಯ ದೃಷ್ಟಿಯಿಂದ ಹೊಮ್ಮಿದ ತೇಜಸ್ಸು ಅವನ ದೇಹವನ್ನು ಗಟ್ಟಿಗೊಳಿಸಿತು.

ಮತ್ತೆ ಹನ್ನೆರಡು ವರ್ಷ ಕಳೆಯಿತು. ಗಾಂಧಾರಿ ತನ್ನ ಪುತ್ರನಿಗೆ ಕರೆ ಕಳುಹಿಸಿದಳು. ಆದರೀಗ ದುರ್ಯೋಧನ ತರುಣ. ತಾಯಿಯಾದರೂ ಸರಿ, ಹೋಗಿ ನಿರ್ವಸ್ತ್ರನಾಗಿ ನಿಲ್ಲುವುದೆ. ಮಾವ ಶಕುನಿಯ ಸಲಹೆಯಂತೆ ಎಲ್ಲಿಂದಲೋ ಹನ್ನೆರಡು ವರ್ಷದ ಬಾಲಕನನ್ನು ಕರೆಸಿ, ವಿವಸ್ತ್ರಗೊಳಿಸಿ ಗಾಂಧಾರಿಯ ಬಳಿ ಕಳಿಸಿದ. ಆಕೆ ಹಿಂದಿನಂತೆಯೇ ದೃಷ್ಟಿ ಬೀರಿ ಕಳಿಸಿದಳು. ಅನಂತರದ ಸರದಿಯಲ್ಲೆಲ್ಲ ದುರ್ಯೋಧನ ತನ್ನ ಬದಲು ಹನ್ನೆರಡರ ಬಾಲಕರನ್ನೆ ತಾಯಿಯ ಬಳಿ ಕಳಿಸುತ್ತಿದ್ದ. ಗಾಂಧಾರಿಯೂ ತನ್ನೆದುರು ನಿಂತಿರುವುದು ಹನ್ನೆರಡರ ಬಾಲಕ ಎಂಬುದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಶಕ್ತಿ ಬೀರಿ ಕಳಿಸುತ್ತಿದ್ದಳು.

ವರ್ಷದಿಂದ ವರ್ಷಕ್ಕೆ ತನ್ನ ಮಗ ದೊಡ್ಡವನಾಗುತ್ತಿದ್ದಾನೆ ಎಂದೂ ಅರಿಯಲಾಗದಷ್ಟು ಮೈಮರೆವು ಗಾಂಧಾರಿಗೆ. ಕುಂತೀಪುತ್ರರಿಗಿಂತ ತನ್ನ ಮಗ ಶಕ್ತಿಶಾಲಿಯಾಗಬೇಕೆಂಬ ಹಠ. ಅವಳು ಪಟ್ಟಿ ಬಿಚ್ಚಿದಾಗಲೂ ದೃಷ್ಟಿಶೂನ್ಯವೇ ಆಗಿಸಿತ್ತು. ಮುಂದೆ ಜೂ’ಜಿನ ಪ್ರಸಂಗ ನಡೆದು ಪಾಂಡವರು ವನವಾಸಕ್ಕೆ ತೆರಳಿದಾಗ ಗಾಂಧಾರಿಗೆ ಹೊಸ ಯೋಚನೆ ಮೂಡಿತು. ಇನ್ನೀಗ ವನವಾಸ, ಅಜ್ಞಾತವಾಸ ಕಳೆದು ಮರಳುವ ಪಾಂಡವರು ತನ್ನ ಮಕ್ಕಳನ್ನು ಉಳಿಸಲಾರರು. ಆದ್ದರಿಂದ ತನ್ನ ಮಗನನ್ನು ಮತ್ತಷ್ಟು ಬಲಶಾಲಿಯಾಗಿಸಬೇಕು. ಅದಕ್ಕಾಗಿ ಹೆಚ್ಚು ನೇಮ ನಿಷ್ಠೆಗಳನ್ನು ಮಾಡಿ ಶಕ್ತಿ ಸಂಚಯ ಮಾಡಿಕೊಳ್ಳಬೇಕು.

ಅದರಂತೆ ತಪೋನಿರತಳಾದಳು ಗಾಂಧಾರಿ. ಮುಂದೆ ನಿರೀಕ್ಷೆಯಂತೆ ಎಲ್ಲವೂ ನಡೆದು ಯುದ್ಧ ಘೋಷಣೆಯೂ ಆಯಿತು. ಗಾಂಧಾರಿಯ ತಪಸ್ಸೂ ಮುಗಿದು, ಶಕ್ತಿಪಾತ ಮಾಡಲು ಅಣಿಯಾಗಿ ದುರ್ಯೋಧನನಿಗೆ ಹೇಳಿ ಕಳಿಸಿದಳು. ಈ ಬಾರಿ ಸಾಧ್ಯವಿರುವ ಎಲ್ಲ ಶಕ್ತಿಯನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದ ದುರ್ಯೋಧನ ತಾಯಿಯ ಬಳಿ ತಾನೇ ಹೋಗುವೆನೆಂದು ತೀರ್ಮಾನಿಸಿದ. ಅದರಂತೆ ವಿವ’ಸ್ತ್ರನಾಗಿ ಹೊರಟ ಕೂಡ. ಇದರಿಂದ ಪಾಂಡವರಿಗೆ ಅಪಾಯ ಎಂದರಿತ ಶ್ರೀಕೃಷ್ಣ ಆತನನ್ನು ತಡೆದು ನಿಲ್ಲಿಸಿ ಮಾತಿಗೆಳೆದ.

ತಾಯಿಯಾದರೂ ಆಕೆ ಸ್ತ್ರೀಯಲ್ಲವೆ. ಸ್ತ್ರೀಯೊಬ್ಬಳ ಎದುರು ಬಟ್ಟೆ ಇಲ್ಲದೆ ನಿಲ್ಲುವುದು ಕ್ಷತ್ರಿಯನಿಗೆ ತರವೆ ಎಂದು ಕೇಳಿ ಗೊಂದಲಕ್ಕೆ ದೂಡಿಬಿಟ್ಟ. ಹಾಗಾದರೆ ಏನು ಮಾಡಬೇಕೆಂದು ಕೇಳಿದಾಗ, ಒಂದು ಬಾಳೆ ಎಲೆಯನ್ನಾದರೂ ಸುತ್ತಿಕೊಂಡು ಹೋಗು ಎಂದು ಉಪಾಯ ಸೂಚಿಸಿದ ಶ್ರೀಕೃಷ್ಣ. ಅದರಂತೆ ದುರ್ಯೋಧನ ಗಾಂಧಾರಿಯ ಎದುರು ನಿಂತ. ತನ್ನ ಈ ಬಾರಿಯ ತಪೋವಿಶಿಷ್ಟ ಶಕ್ತಿಯನ್ನು ಮಗನ ಮೇಲೆ ಸುರಿದುಬಿಡುವ ಹುಮ್ಮಸ್ಸಿನಿಂದ ಪಟ್ಟಿ ಕಳಚಿದಳು ಗಾಂಧಾರಿ.

ಅರೆ, ಎಂಥ ಆ’ಘಾತ. ಇಷ್ಟು ವರ್ಷ ಕಾಲ ತನ್ನೆದುರು ನಿಲ್ಲುತ್ತಿದ್ದ ಹನ್ನೆರಡರ ಬಾಲಕನೆಲ್ಲಿ. ಈ ನಡುವಯಸ್ಸು ಮೀರಿದ ಪುರುಷನ್ಯಾರು. ಅದು ಕೂಡ ಈತ ನಿಯಮದಂತೆ ಸಂಪೂರ್ಣ ಬೆ’ತ್ತಲಾಗಿ ನಿಂತಿಲ್ಲ. ಅವಳ ತಲೆಯಲ್ಲಿ ನೂರು ಸಿ’ಡಿಲು. ಅಷ್ಟೂ ಪರ್ವಗಳ ಕಾಲ ತಾನು ಅವಿವೇಕಿಯಂತೆ ಹನ್ನೆರಡರ ಹುಡುಗನನ್ನೆ ದುರ್ಯೋಧನ ಎಂದುಕೊಂಡಿದ್ದಳಲ್ಲವೆ. ಅಷ್ಟೊಂದು ಕುರುಡು ಕವಿದಿತ್ತೆ ಬುದ್ಧಿಗೆ. ಶಕ್ತಿ ಎರೆಯುವ ಧಾವಂತದಲ್ಲಿ ಯುಕ್ತಿ ಮೂರ್ಛೆ ಹೋಗಿತ್ತೆ. ಈಗ ತನ್ನ ವಿಶಿಷ್ಟ ಶಕ್ತಿ ಸಂಚಯ ಪಾತ ಮಾಡುವ ಹೊತ್ತಲ್ಲಿ ಈ ದುರ್ಯೋಧನ ತೊಡೆಗೆ ಬಾಳೆ ಎಲೆಯನ್ನು ಮರೆ ಮಾಡಿಕೊಂಡು ಬಂದಿದ್ದಾನೆ.

ಅವಳಿಗೆ ತಿಳಿವು ಮೂಡುವ ವೇಳೆಗಾಗಲೇ ಎಲ್ಲವೂ ಮಿಂಚಿಹೋಗಿತ್ತು. ದೃಷ್ಟಿಯಿಂದ ಹೊಮ್ಮಿದ ಶಕ್ತಿಗೆ ತೊ’ಡೆ ಭಾಗವೊಂದನ್ನು ಬಿಟ್ಟು ಉಳಿದ ದೇಹವಿಡೀ ವಜ್ರಕಾಯವಾಗಿತ್ತು. ಕೃಷ್ಣನಿಗೆ ಈ ಗುಟ್ಟು ಗೊತ್ತಾಗಿಬಿಟ್ಟಿತು. ಕುರುಕ್ಷೇತ್ರ ಯುದ್ಧದ ಅಂತಿಮ ದಿನ ಸರೋವರದಲ್ಲಿ ಅಡಗಿದ್ದ ದುರ್ಯೋಧನನನ್ನು ಹೊರಗೆಳೆದು ಭೀಮ ಕಾದಾಡುವಾಗ ಕೃಷ್ಣ ತನ್ನ ತೊ’ಡೆ ತಟ್ಟಿದ್ದು ಇದೇ ಕಾರಣಕ್ಕೆ. ಸಂಕೇತವರಿತ ಭೀಮ, ದುರ್ಯೋಧನನ ತೊಡೆಗೆ ಗದಾಪ್ರ’ಹಾರ ಮಾಡಿದ. ಅದೊಂದು ಭಾಗ ಅಳ್ಳಕವಾಗಿದ್ದ ವಜ್ರದೇಹಿ ದುರ್ಯೋಧನ ಘಾ’ತ ತಾಳಲಾಗದೆ ನೆಲಕಚ್ಚಿದ. ಅವನ ಪ್ರಾಣಪ’ಕ್ಷಿ ಹಾರಿಹೋಯಿತು.

ಎರಡನೇ ಬಾರಿ ಹನ್ನೆರಡು ವರ್ಷದ ಬಾಲಕನನ್ನು ಕಂಡಾಗಲೇ ಗಾಂಧಾರಿ ಎಚ್ಚೆತ್ತುಕೊಂಡಿದ್ದರೆ ದುರ್ಯೋಧನನಿಗೆ ಅವಳು ಬುದ್ಧಿ ಹೇಳಿ ಒಪ್ಪಿಸುತ್ತಿದ್ದಳೇನೋ. ಮುಂದೆ ತಾನೇ ಶಕ್ತಿಪುಂಜ ಸ್ವೀಕರಿಸಿ ದುರ್ಯೋಧನ ಪೂರ್ಣ ವಜ್ರದೇಹಿಯಾಗಿಬಿಡುತ್ತಿದ್ದನೋ ಏನೋ. ಶಕುನಿ, ದುರ್ಯೋಧನರಂತೂ ಮೂರ್ಖತನ ಮಾಡಿದರು. ಗಾಂಧಾರಿಯೂ ವಿವೇಚನೆ ಇಲ್ಲದೆ ವರ್ತಿಸಿ, ಪರೋಕ್ಷವಾಗಿ ತನ್ನ ಮಗ ಯುದ್ಧದಲ್ಲಿ ಸಾಯಲು ಕಾರಣವಾಗಿಬಿಟ್ಟಳೇ. ಈ ಪ್ರಶ್ನೆ ಯೋಚನೆಗೆ ಹಚ್ಚುವುದು ಸುಳ್ಳಲ್ಲ.

LEAVE A REPLY

Please enter your comment!
Please enter your name here