ಎಲ್ಲಾ ಹೂಗಳು ಅಪ್ಸರೆಯರಾದರೆ ಗುಲಾಬಿ ಅಪ್ಸರೆಯರ ಒಡತಿ, ಪರಿಮಳ ಮತ್ತು ಸೊಬಗಿನಲ್ಲಿ ಗುಲಾಬಿ ಎಲ್ಲಕ್ಕೂ ಮುಂದೆ ಇದಕ್ಕೆ ಔಷಧಿಯ ಗುಣ ಕರ್ಮಗಳು ಇವೆ.
ಗುಲಾಬಿ ಹೂವಿನ ಅರ್ಕ ತಯಾರಿಸಿ ಕಣ್ಣಿನ ಔಷಧಿಯಾಗಿ ಬಳಸುತ್ತಾರೆ, ರೋಜ್ ವಾಟರ್ ಹಾಗೂ ಗುಲಕಂದಗಳು ಮಾರುಕಟ್ಟೆಯಲ್ಲಿ ಲಭಿಸುವ ಗುಲಾಬಿಯುಕ್ತ ತಯಾರಿಕೆಗಳಾಗಿವೆ.
ಚರ್ಮದ ಬಣ್ಣದಲ್ಲಿನ ತೊಂದರೆಗಳು ಮತ್ತು ಪಿತ್ತದಿಂದ ಉಂಟಾಗುವ ವ್ರಣ ಶೋಥದಲ್ಲಿ ಗುಲಾಬಿ ಉಪಯುಕ್ತವಿದೆ, ಹುಣ್ಣುಗಳ ಮೇಲೆ ಇದನ್ನು ಅವ ಚೂರ್ಣ ಮಾಡುತ್ತಾರೆ, ಬೆವರಿನಲ್ಲಿ ವಾಸನೆ ಇದ್ದಾಗ ಚರ್ಮದ ಮೇಲೆ ಲೇಪಿಸುತ್ತಾರೆ.
ದೌರ್ಬಲ್ಯದಿಂದ ಉಂಟಾಗುವ ರೋಗಗಳಲ್ಲಿ ಉದ್ವೇಗ ಮುಂತಾದವುಗಳಲ್ಲಿ ಇದು ಸೌಮನಸ್ಯ ಜನಕವಾಗಿ ಕಾರ್ಯ ಮಾಡುತ್ತದೆ, ಇದು ಬುದ್ಧಿ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
ಜಠರ, ಕರುಳು ಮತ್ತು ಯಕೃತಿಗೆ ಇದು ಬಲದಾಯಕವಾಗಿದೆ, ಮೃದುವಾಗಿ ವಿರೇಚನ ಮಾಡಿಸುತ್ತದೆ, ಜೀರ್ಣಾಂಗಕ್ಕೆ ಸಂಬಂಧಿಸಿದ ರೋಗಗಳನ್ನು, ಕೋಷ್ಠ ವಾತಗಳನ್ನು ನಿವಾರಿಸುತ್ತದೆ, ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಅತೀಸಾರ ಮತ್ತು ಪ್ರವಾಹಿಕಾ ಎಂಬ ರೋಗಗಳನ್ನು ತಡೆಯುತ್ತದೆ ರಕ್ತ ವ್ಯಾಧಿಗಳನ್ನು ಮತ್ತು ರಕ್ತಪಿತ್ತವನ್ನು ಗುಣಪಡಿಸುವ ಶಕ್ತಿಯು ಇದೆಕ್ಕಿದೆ.
ನಪುಂಸಕತೆಯಲ್ಲಿ ಗುಲಾಬಿ ಅರ್ಕದ ಸೇವನೆ ಅಧಿಕ ಪ್ರಯೋಜನಕಾರಿ, ಇದರ ಪರಿಮಳವು ಸಂಭೋಗ ಶಕ್ತಿಯನ್ನು ಹೆಚ್ಚಿಸುತ್ತದೆ ಶೀತವಾಗಿರುವುದರಿಂದ ದಾಹ ಪ್ರಶಮನವನ್ನು ಮಾಡುತ್ತದೆ, ಶರೀರದ ಧಾತುಗಳನ್ನು ವರ್ಧಿಸುತ್ತದೆ.
ಪನ್ನೀರು ಗುಲಾಬಿಯೇ ಗುಲಾಬಿಗಳಲ್ಲಿ ಶ್ರೇಷ್ಠವಿದ್ದು ಅದರ ದಳಗಳನ್ನು ಚಿಕಿತ್ಸೆಗಾಗಿ ಉಪಯೋಗಿಸುತ್ತಾರೆ, ಗುಲಾಬಿ ಹೂವಿನ ದಳಗಳಿಂದ ಸಿದ್ಧಪಡಿಸಿದ ಗುಲಕಂದವು ಒಂದು ಶ್ರೇಷ್ಠವಾದ ಪಾಕವಾಗಿದೆ, ಗುಲಕಂದವನ್ನು ಹತ್ತರಿಂದ ಇಪ್ಪತ್ತು ಗ್ರಾಂ ಪ್ರಮಾಣದಲ್ಲಿ, ಅರ್ಕವನ್ನು 20 ರಿಂದ 40 ಮಿಲಿ ಗ್ರಾಂ ಪ್ರಮಾಣದಲ್ಲಿ, ಚೂರ್ಣವನ್ನು ಮೂರರಿಂದ ನಾಲ್ಕು ಗ್ರಾಂ ಪ್ರಮಾಣದಲ್ಲಿ ಸೇವಿಸಬಹುದು.