ಮಹಾಲಕ್ಷ್ಮಿಯನ್ನು ಪೂಜಿಸುವ ಮೊದಲು ಈ ಕೆಲವು ಸಂಗತಿಗಳನ್ನು ತಪ್ಪದೇ ತಿಳಿದುಕೊಳ್ಳಿ. ಹೊನ್ನಿನ ಸುರಿಮಳೆ ಶತಸಿದ್ಧ.

0
2740

ಧನ-ಧಾನ್ಯದ ಅಧಿದೇವತೆಯಾದ ಮಹಾಲಕ್ಷ್ಮಿಯ ಬಗ್ಗೆ ಕೆಲವು ಸಂಗತಿಗಳು. ಸಂಸ್ಕೃತದ ‘ಲಕ್ಷ್’ ಎನ್ನುವ ಪದದಿಂದ ‘ಲಕ್ಷ್ಮಿ’ ಎನ್ನುವ ಪದ ಬಂದಿದೆ ಎನ್ನುವರು. ಲಕ್ಷ್ ಎಂದರೆ ‘ಗ್ರಹಿಸುವುದು’ ಅಥವಾ ‘ಗಮನಿಸುವುದು’. ಇದರ ಸಮಾನಾರ್ಥಕ ‘ಗುರಿ’ ಅಥವಾ ‘ಗಮ್ಯ’. ಲಕ್ಷ್ಮಿಗೆ ಅನೇಕ ಹೆಸರುಗಳಿವೆ. ಲಕ್ಷ್ಮಿ ಜೊತೆಗೆ ಆಕೆಯ ನೆರಳಿನ ಸ್ವರೂಪವಾದ ಅಲಕ್ಷ್ಮಿಯನ್ನು ಕೆಲವು ಬಂಗಾಳಿ ಸಮುದಾಯಗಳಲ್ಲಿ ದೀಪಾವಳಿ ಸಮಯದಲ್ಲಿ ಪೂಜಿಸಲಾಗುತ್ತದೆ. ಕೋಲ್ಕತ್ತಾದ ಕಾಳಿಘಾಟ್ ಎಂಬಲ್ಲಿ ಇರುವ ಕಾಳಿ ದೇವಿಯನ್ನು ದೀಪಾವಳಿಯ ಸಂದರ್ಭದಲ್ಲಿ ಮಹಾಲಕ್ಷ್ಮಿ ರೂಪದಲ್ಲಿ ಪೂಜಿಸಲಾಗುತ್ತದೆ. ಮಹಾಲಕ್ಷ್ಮಿಯು ಕಮಲದೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದ್ದಾಳೆ. ಅವಳ ವೈವಿಧ್ಯಮಯ ಹೆಸರುಗಳು ಕಮಲದ ಹೂವಿನೊಂದಿಗೆ ಸಂಪರ್ಕ ಹೊಂದಿವೆ.

ಅವುಗಳೆಂದರೆ : ಪದ್ಮ, ಕಮಲಾ – ಕಮಲದಲ್ಲಿ ನೆಲೆಸಿರುವವಳು, ಪದ್ಮಪ್ರಿಯೆ – ಕಮಲಗಳನ್ನು ಇಷ್ಟಪಡುವವಳು, ಪದ್ಮಮಾಲಾಧರ ದೇವಿ – ಕಮಲದ ಹಾರವನ್ನು ಧರಿಸಿದವವಳು, ಪದ್ಮಮುಖಿ – ಕಮಲದಂತಹ ಮುಖವನ್ನು ಉಳ್ಳವಳು, ಪದ್ಮಾಕ್ಷಿ – ಕಮಲದಂತೆ ಸುಂದರವಾದ ನಯನಗಳನ್ನು ಹೊಂದಿರುವವಳು, ಪದ್ಮಹಸ್ತೆ – ಕಮಲವನ್ನು ಹಿಡಿದವಳು, ಪದ್ಮಸುಂದರಿ – ಕಮಲದಂತೆ ಸುಂದರವಾಗಿರುವವಳು. ಮಹಾಲಕ್ಷ್ಮಿಯನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ : ಮನುಶ್ರೀ, ಚಕ್ರಿಕಾ, ಕಮಲಿಕಾ, ಐಶ್ವರ್ಯ, ಕಲ್ಯಾಣಿ, ನಂದಿಕಾ, ವೈಷ್ಣವಿ, ಸಮೃದ್ಧಿ, ನಾರಾಯಣಿ, ಭಾರ್ಗವಿ, ಶ್ರೀದೇವಿ, ಚಂಚಲ, ಜಲಜಾ, ಮಾಧವಿ, ಸುಜಾತ, ಶ್ರೇಯಾ. ಶ್ರೀ ಮಹಾಲಕ್ಷ್ಮಿ ಅಷ್ಟಕಂ’ನಲ್ಲಿ ಅವಳನ್ನು ಜಗನ್ಮಾಥಾ ಅಂದರೆ ಬ್ರಹ್ಮಾಂಡದ ತಾಯಿ ಎಂದೂ ಕರೆಯಲಾಗುತ್ತದೆ.

ಕಮಲದ ಹೂವುಗಳು, ಶ್ರೀಗಂಧ, ಸಿಂಧೂರ, ವಿಳ್ಳೇದೆಲೆಗಳು, ಬಾದಾಮಿ, ಖರ್ಜೂರ, ಹಣ್ಣುಗಳು, ಬೆಲ್ಲ, ಅಕ್ಕಿ ಮತ್ತು ತೆಂಗಿನಕಾಯಿಗಳಿಂದ ತಯಾರಿಸಿದ ವಿವಿಧ ಸಿಹಿ ಪದಾರ್ಥಗಳನ್ನು ಮಾತೆಯ ಧಾರ್ಮಿಕ ಪೂಜೆಯಲ್ಲಿ ನೈವೇದ್ಯವಾಗಿ ಬಳಸಲಾಗುತ್ತದೆ. ಶುಕ್ರವಾರ ಅಥವಾ ಹುಣ್ಣಿಮೆಯ ದಿನಗಳಲ್ಲಿ ಲಕ್ಷ್ಮೀ ವ್ರತವನ್ನು ಆಚರಿಸುವುದು ಸಾಕಷ್ಟು ಜನಪ್ರಿಯವಾಗಿದೆ. ದೇವಿಯ ವೈಭವವನ್ನು ನಿರೂಪಿಸುವ ಹಾಡುಗಳ ಗುಚ್ಛವನ್ನು ಮಹಿಳೆಯರು ಹಾಡುತ್ತಾರೆ. ಮಹಾಲಕ್ಷ್ಮಿಯು ಸಮೃದ್ಧಿ ಮತ್ತು ಏಳಿಗೆಯ ಸಂಕೇತವಾಗಿ ನಾಣ್ಯಗಳನ್ನು ದಯಪಾಲಿಸುತ್ತಾಳೆ. ಅವಳ ಅಕ್ಕಪಕ್ಕದಲ್ಲಿರುವ ಆನೆಗಳು ಅವಳ ರಾಜ ಶಕ್ತಿಯನ್ನು ಸೂಚಿಸುತ್ತವೆ. ಆದಾಗ್ಯೂ, ಕೆಲವು ಕಡೆ ಅವಳ ವಾಹನವಾಗಿ ಗೂಬೆಯನ್ನು ಕಾಣಬಹುದು. ಅವಳ ಪ್ರಸನ್ನವದನವು ಯಾವಾಗಲೂ ಶಾಂತತೆ ಮತ್ತು ಪ್ರೀತಿಯನ್ನು ಅಭಿವ್ಯಕ್ತಪಡಿಸುತ್ತದೆ.

ಕಮಲವು ಜೀವನದ ಫಲವತ್ತಾದ ಬೆಳವಣಿಗೆಯನ್ನು ಸಂಕೇತಿಸುತ್ತದೆ. ವಿಷ್ಣುವಿನ ಹೊಕ್ಕಳಿನಿಂದ ಬೆಳೆಯುವ ಕಮಲದ ಮೇಲೆ ಜಗತ್ತು ನಿರಂತರವಾಗಿ ಮರುಜನ್ಮ ಪಡೆಯುತ್ತಿದೆ. ಮಹಾಲಕ್ಷ್ಮಿಯನ್ನು ಪ್ರತಿದಿನ ಪೂಜಿಸಲಾಗುತ್ತದೆ, ಆದರೆ ವಿಶೇಷವಾದ ಪೂಜಾವಿಧಾನಗಳಿಂದ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು, ನವರಾತ್ರಿ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮೀ ಪೂಜೆ ಮಾಡುವ ಮೂಲಕ ದೇವಿಯನ್ನು ಅರ್ಚಿಸಲಾಗುತ್ತದೆ. ಪೂಜಾ ಸಮಾರಂಭಗಳಲ್ಲಿ ಜನರು ದೇವಿಗೆ ಸಿಹಿತಿಂಡಿಗಳನ್ನು ಅರ್ಪಿಸಿ, ಅವಳ ನೂರಾ ಎಂಟು ಅಷ್ಟೋತ್ತರ ನಾಮಗಳನ್ನು ಜಪಿಸಿ, ಪ್ರಾರ್ಥನೆಗಳನ್ನು ಮತ್ತು ಭಕ್ತಿಗೀತೆಗಳನ್ನು ಹಾಡುವುದರ ಮೂಲಕ ವಿಶೇಷವಾಗಿ ಪೂಜಿಸುತ್ತಾರೆ.

ಅಷ್ಟ ಲಕ್ಷ್ಮಿ ಎನ್ನುವುದು ಲಕ್ಷ್ಮಿಯ ಎಂಟು ಅಭಿವ್ಯಕ್ತಿಗಳ ಒಂದು ಗಣ. ಆಕೆ ಎಂಟು ಸಂಪತ್ತಿನ ಮೂಲಗಳನ್ನು ಪ್ರತಿನಿಧಿಸುತ್ತಾಳೆ. ವಾಸ್ತವವಾಗಿ, ಮಹಾಲಕ್ಷ್ಮಿಯು ಮೂಲತಃ ಹದಿನೆಂಟು ರೂಪದ ಸಂಪತ್ತಿನ ಅಧಿದೇವತೆ ಎಂದು ಹೇಳುತ್ತಾರೆ. ಅವುಗಳಲ್ಲಿ ಹತ್ತು ಅಷ್ಟಸಿದ್ಧಿಗಳು, ಆಧ್ಯಾತ್ಮಿಕ ಜ್ಞಾನ ಅಥವಾ ಜ್ಞಾನ ಎಂದು ಕರೆಯಲ್ಪಡುವ ಎಂಟು ಶ್ರೇಷ್ಠ ಸಿದ್ಧರು. ವಿವಿಧ ರೂಪಗಳನ್ನು ಧರಿಸಿರುವ ಮೂಲ ಉದ್ದೇಶ, ಯಾವುದೇ ವರ್ಗ ವ್ಯತ್ಯಾಸವಿಲ್ಲದೆ ಇಡೀ ಜಗತ್ತಿಗೆ ಆಧ್ಯಾತ್ಮಿಕ ಜ್ಞಾನವನ್ನು ಬೋಧಿಸುವುದು. ಕೆಲವು ಪುರಾಣಗಳ ಪ್ರಕಾರ ಮಹಾಲಕ್ಷ್ಮಿಯು ಅಷ್ಟ ಸಿದ್ಧಿ, ಜ್ಞಾನವನ್ನು ಹೊರತುಪಡಿಸಿ ಹದಿನಾರು ಪ್ರಕಾರದ ಲೌಕಿಕ ಸಂಪತ್ತಿನ ಪ್ರತಿನಿಧಿಯಾಗಿದ್ದಾಳೆ. ಅವುಗಳು ಕೀರ್ತಿ, ಜ್ಞಾನ, ಧೈರ್ಯ ಮತ್ತು ಸಾಮರ್ಥ್ಯ, ವಿಜಯ, ಸುಸಂಸ್ಕೃತ ಮಕ್ಕಳು, ಶೌರ್ಯ, ಅಪಾರವಾದ ಸಂಪತ್ತು, ಹೇರಳವಾದ ಧಾನ್ಯಗಳು, ಸಂತೋಷ, ಆನಂದ, ಧ್ಯಾನ ಶಕ್ತಿ, ಸೌಂದರ್ಯ, ಉನ್ನತ ಗುರಿ ಮತ್ತು ಚಿಂತನೆ, ನೈತಿಕತೆ, ಒಳ್ಳೆಯ ಆರೋಗ್ಯ, ದೀರ್ಘಾಯುಷ್ಯ.

ಅಷ್ಟ ಲಕ್ಷ್ಮಿಯರ ರೂಪವು ಪ್ರತಿ ಯುಗದಲ್ಲಿಯೂ ಭಿನ್ನವಾಗಿರುತ್ತದೆ. ಈ ಕಾರಣದಿಂದ ಹಿಂದೂ ಪವಿತ್ರ ಗ್ರಂಥಗಳಲ್ಲಿ ಅಷ್ಟ ಲಕ್ಷ್ಮಿಯರ ಹೆಸರಿನಲ್ಲಿ ಏಕರೂಪತೆಯು ಕಾಣ ಸಿಗುವುದಿಲ್ಲ. ಮಹಾಲಕ್ಷ್ಮಿಯ ರೂಪಗಳು ಕೋಟಿಗಿಂತಲೂ ಹೆಚ್ಚು ಎಂದು ಪುರಾಣಗಳು ಹೇಳುತ್ತವೆ. ಅವಳು ಇಲ್ಲದೆ ಈ ಜಗತ್ತಿನಲ್ಲಿ ಏನೂ ನಡೆಯುವುದಿಲ್ಲ, ಏಕೆಂದರೆ ಅವಳು ಸೃಷ್ಟಿಯ ಸಂಪೂರ್ಣ ಅರಿವಿನ ಆಧಾರವಾಗಿದ್ದಾಳೆ. ಅವಳ ಅನುಗ್ರಹವಿಲ್ಲದೆ, ತಿನ್ನಲು ಆಹಾರ, ಉಸಿರಾಡಲು ಗಾಳಿ, ಕುಡಿಯುವ ನೀರು, ಏನೂ ಇರುವುದಿಲ್ಲ. ಮಹಾಲಕ್ಷ್ಮಿ ಹಲವಾರು ಇತರ ರೂಪಗಳು ಅಸ್ತಿತ್ವದಲ್ಲಿದೆ ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದ ರೂಪಗಳು ಶ್ರೀದೇವಿ, ಭೂದೇವಿ ಮತ್ತು ನೀಲದೇವಿ. ಸುಮಾರು 5050 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಜನಿಸಿದ ಪ್ರಸಿದ್ಧ ವೈಷ್ಣವ ಯೋಗಿನಿ ಆಂಡಾಳ್, ಸ್ವತಃ ಮಹಾಲಕ್ಷ್ಮಿ ಅವತಾರ ಎಂದು ನಂಬಿಕೆ.

ಶ್ರೀದೇವಿಯು ಅಸ್ಥಿರವಾಗಿ ಇರುವ ಸಂಪತ್ತನ್ನು (ಚಂಚಲ) ಸೂಚಿಸಿದರೆ, ಭೂದೇವಿ ಸ್ಥಿರ ಆಸ್ತಿಗಳನ್ನು (ಅಚಂಚಲ) ಪ್ರತಿನಿಧಿಸುತ್ತಾಳೆ. ದೀಪಗಳ ಹಬ್ಬವಾದ ದೀಪಾವಳಿಯಂದು ಹಿಂದೂಗಳು ಲಕ್ಷ್ಮಿಯನ್ನು ಹೆಚ್ಚು ಪೂಜಿಸುತ್ತಾರೆ, ದೀಪಗಳ ಹಬ್ಬದಂದು ಸಂಪ್ರದಾಯದ ಪ್ರಕಾರ, ಜನರು ತಮ್ಮ ಮನೆಗಳ ಹೊರಗೆ ಸಣ್ಣ ಎಣ್ಣೆ ದೀಪಗಳನ್ನು ಹಚ್ಚುತ್ತಾರೆ. ‘ಶ್ರೀ’ ಎಂದರೆ ‘ಸಿರಿ’ ಎಂದರ್ಥ. ಹಾಗೆಯೇ ‘ಶ್ರೀ’ ಎಂದರೆ ಸಂತಸ, ನೆಮ್ಮದಿ ತರುವಂತಹದ್ದು ಎಂದೂ ಹೇಳುತ್ತಾರೆ. ಆದ್ದರಿಂದ, ಶ್ರೀ ಲಕ್ಷ್ಮಿ ಎಂದರೆ ಯಾವುದೇ ರೀತಿಯ ಸಂಪತ್ತು ತರುವವಳು. ಶ್ರೀಮಂತವಾಗಬೇಕಾದ ಯಾವುದೇ ವಿಷಯವನ್ನೂ ಶುಭ ಪೂರ್ವಪ್ರತ್ಯಯ ‘ಶ್ರೀ’ಯೊಂದಿಗೆ ಆರಂಭಿಸುತ್ತೇವೆ.

ಉತ್ತರಾಖಂಡದಲ್ಲಿ, ದೀಪಾವಳಿಯ ರಾತ್ರಿ ದೇವಿಯನ್ನು ಪೂಜಿಸಿದ ನಂತರ, ಶಂಖವನ್ನು ಊದುವುದಿಲ್ಲ. ಯಾಕೆಂದರೆ, ಶಂಖವೂ ಸಹ ದೇವಿಯಂತೆ ಸಾಗರದಿಂದ ಬಂದ ವಸ್ತು. ಆದ್ದರಿಂದ ಅದಕ್ಕೆ ಒಂದು ದಿನದ ವಿಶ್ರಾಂತಿ ನೀಡಲಾಗುತ್ತದೆ. ಅಂಬಾಬಾಯಿ ಎಂದ ಕರೆಯಲ್ಪಡುವ ಕರವೀರ ನಿವಾಸಿನಿ ಮಹಾಲಕ್ಷ್ಮಿಯು ಮಹಾರಾಷ್ಟ್ರದ ಕೊಲ್ಹಾಪುರ ನಗರದ ಪೋಷಕ ದೇವತೆ. ಬಂಗಾಳದಲ್ಲಿ ಶರತ್ಕಾಲದ ಹುಣ್ಣಿಮೆಯ ದಿನ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಇದು ವರ್ಷದ ಪ್ರಕಾಶಮಾನವಾದ ರಾತ್ರಿ ಎಂದು ನಂಬಲಾಗಿದೆ. ಈ ರಾತ್ರಿಯಲ್ಲಿ ಅವಳು ಸಂಪತ್ತನ್ನು ಸುರಿಸುತ್ತಾಳೆ ಎಂದು ನಂಬಲಾಗಿದೆ. ಅವಳು ತನ್ನ ವಾಹನವಾದ ದೊಡ್ಡ ಶ್ವೇತ ವರ್ಣದ ಗೂಬೆಯೊಂದಿಗೆ ನಮ್ಮ ಪ್ರಪಂಚದಲ್ಲಿರುವ ಬಡತನ, ಕಷ್ಟ, ನೋವು, ಸೋಮಾರಿತನ ಮುಂತಾದ ಕತ್ತಲೆಯನ್ನು ನಮ್ಮ ಜೀವನದಿಂದ ದೂರ ಸರಿಸುತ್ತಾಳೆ ಎಂಬ ನಂಬಿಕೆಯಿದೆ. ಅವಳ ವಾಹನವಾದ ಗೂಬೆಯು ತೀಕ್ಷ್ಣ ದೃಷ್ಟಿ ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ.

ಸಾಮಾನ್ಯವಾಗಿ ಲಕ್ಷ್ಮಿಯನ್ನು ಎಲ್ಲ ಚಿತ್ರಗಳಲ್ಲಿ ಕೆಂಪು ಉಡುಪಿನಲ್ಲಿ ಚಿತ್ರಿಸಲಾಗಿರುತ್ತದೆ. ಕೆಂಪು ಬಣ್ಣ ನಿರಂತರ ಚಟುವಟಿಕೆಯನ್ನು ಪ್ರತಿನಿಧಿಸುತ್ತದೆ. ಚಿನ್ನದ ಉಡುಪಿನಲ್ಲಿ, ಚಿನ್ನದಿಂದ ತುಂಬಿದ ಆಭರಣಗಳನ್ನು ಮತ್ತು ಚಿನ್ನದ ಮಾಣಿಕ್ಯದ ಹೊದಿಕೆಯ ಕಿರೀಟವನ್ನು ಧರಿಸಿರುವ ದೇವಿಯು ಮನದ ಆಶೋತ್ತರಗಳ ನೆರವೇರಿಕೆಯನ್ನು ಪ್ರತಿನಿಧಿಸುತ್ತಾಳೆ. ಒಡಿಶಾದಾದ್ಯಂತ, ಸಮೃದ್ಧವಾಗಿ ಅಲಂಕರಿಸಲ್ಪಟ್ಟ ಸುಂದರವಾದ ಗಜಲಕ್ಷ್ಮಿಯನ್ನು ಸ್ಥಾಪಿಸಿ ಪೂಜಿಸಲಾಗುವುದು. ಈ ಉತ್ಸವವು ಜನರಲ್ಲಿ ಪಾವಿತ್ರ್ಯದ ಮನೋಭಾವವನ್ನು ತುಂಬುತ್ತದೆ. ಒಡಿಶಾದಲ್ಲಿ ‘ಕುಮಾರ ಪೂರ್ಣಿಮಾ’ ಎಂದೂ ಕರೆಯಲ್ಪಡುವ ಈ ಹಬ್ಬವು ಹುಣ್ಣಿಮೆಯಂದು ಆಚರಿಸುವರು.

ಮಹಾಲಕ್ಷ್ಮಿಯನ್ನು ಹೊಗಳುವ ಅಸಂಖ್ಯಾತ ಶ್ಲೋಕಗಳಿವೆ. ಅವಳನ್ನು ಪೂಜಿಸಲು ಅತ್ಯಂತ ಪ್ರಸಿದ್ಧವಾದ ಕೆಲವು ಪ್ರಾರ್ಥನೆಗಳು ಶ್ರೀ ಮಹಾಲಕ್ಷ್ಮಿ ಅಷ್ಟಕಂ, ಸನತ್‌ಕುಮಾರ ಅವರ ಶ್ರೀ ಲಕ್ಷ್ಮಿ ಸಹಸ್ರನಾಮ ಸ್ತೋತ್ರ, ಶ್ರೀ ವೇದಾಂತ ದೇಸಿಕರ್ ಅವರ ಶ್ರೀ ಸ್ತುತಿ, ಇಂದ್ರರ ಶ್ರೀ ಲಕ್ಷ್ಮಿ ಸ್ತುತಿ, ಆದಿಗುರು ಶಂಕರಾಚಾರ್ಯ ವಿರಚಿತ ಶ್ರೀ ಕನಕಧಾರ ಸ್ತೋತ್ರ, ಭಗವಾನ್ ಶ್ರೀ ಹರಿ ಸ್ವಾಮೀಜಿ ಅವರ ಶ್ರೀ ಲಕ್ಷ್ಮಿ ಶ್ಲೋಕ, ವೇದಗಳಲ್ಲಿರುವ ಶ್ರೀ ಸೂಕ್ತ. ಅಗಸ್ತ್ಯ ಮಹರ್ಷಿಯ ಪ್ರಸಿದ್ಧ ಅಗಸ್ತ್ಯ ಲಕ್ಷ್ಮಿ ಸ್ತೋತ್ರ. ತಾಯಿ ಲಕ್ಷ್ಮಿಯನ್ನು ಅದೃಷ್ಟದ ದೇವತೆಯಾಗಿ ಪೂಜಿಸಲಾಗಿದ್ದರೂ, ನಾರಾಯಣನೊಂದಿಗೆ ಪೂಜಿಸಿದಾಗ, ಆರಾಧಕನಿಗೆ ಸಂಪತ್ತು ಮಾತ್ರವಲ್ಲದೆ ಶಾಂತಿ ಮತ್ತು ಸಮೃದ್ಧಿಯೂ ಸಿಗುವುದು. ಲಕ್ಷ್ಮಿನಾರಾಯಣ, ಲಕ್ಷ್ಮಿನರಸಿಂಹ, ಸೀತಾರಾಮ, ರಾಧಾಕೃಷ್ಣ, ವಿಠಲರುಕ್ಮಿಣಿ ಮುಂತಾದ ರೂಪಗಳಲ್ಲಿ ಪೂಜಿಸಬಹುದು.

ಮಹಾಲಕ್ಷ್ಮಿಯು ಕೇವಲ ದುಡ್ಡಿನ ದೇವತೆಯಷ್ಟೇ ಅಲ್ಲ, ಸಮೃದ್ಧಿ, ಸೌಂದರ್ಯ ಹಾಗೂ ಅದೃಷ್ಟದ ತಾಯಿ. ಆಕೆ ಒಲಿದ ಮನೆಯಲ್ಲಿ ಸದಾ ಶ್ರೀಮಂತಿಕೆ, ಸಂಪತ್ತು, ನೆಮ್ಮದಿ ತುಂಬಿ ತುಳುಕುತ್ತಿರುತ್ತದೆ. ಲಕ್ಷ್ಮೀ ಪೂಜೆಯನ್ನು ಧನಸಾಧನೆಗಾಗಿ ಮಾತ್ರವಲ್ಲ, ಗುರಿ ಸಾಧನೆಗಾಗಿಯೂ ಮಾಡಬೇಕು. ನಮಸ್ತೇಸ್ತು ಮಹಾಮಾಯೆ ಶೀಪೀಠೆ ಸುರಪೂಜಿತೆ, ಶಂಖಚಕ್ರಗದಾಹಸ್ತೆ ಮಹಾಲಕ್ಷ್ಮೀ ನಮೋಸ್ತುತೇ. ಶ್ರೀ ಕೃಷ್ಣಾರ್ಪಣಮಸ್ತು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯವನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ಕೆಲಸ. ಹಾಗೆಯೇ ಮರೆಯದೆ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಹೆಚ್ಚಿನ ಆಧ್ಯಾತ್ಮಿಕ ಮಾಹಿತಿಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here