ನವರಾತ್ರಿಯ ಎಂಟನೇ ದಿನದ ಮಹತ್ವವನ್ನು ತಿಳಿಯಿರಿ.

0
2593

ನವರಾತ್ರಿಯ ಎಂಟನೆಯ ದಿನ : ನವರಾತ್ರಿಯ ಎಂಟನೆಯ ರೂಪವು ಸರ್ವ ಸನ್ಮಂಗಳ ಕಾರಿಣಿಯಾದ ದೇವಿಯ ಮಹಾ ಗೌರಿಯ ರೂಪವಾಗಿದೆ. ಶ್ವೇತ ವರ್ಣದಿಂದ ಕಂಗೊಳಿಸುವ ಮಾತೆಯ ದೇಹವೆಲ್ಲಾ ಕೋಟಿ ಸೂರ್ಯ ಪ್ರಭೆಯಂತೆ ಹೊಳೆಯುವುದು. ನಂದಿ ವಾಹನೆಯಾದ ಈಕೆಯ ರೂಪವು ಶಾಂತಿ ಹಾಗೂ ಸಂತೋಷಗಳ ಪ್ರತೀಕವಾಗಿದೆ. ನಾಲ್ಕು ಭುಜಗಳನ್ನು ಹೊಂದಿರುವ ಮಾತೆ, ಅಭಯ ಹಸ್ತದೊಂದಿಗೆ ಹರಸುವ ಮಾತೆ, ತನ್ನ ಇನ್ನೊಂದು ಕೈಯಲ್ಲಿ ತ್ರಿಶೂಲ ಧಾರಿಣಿಯಾಗಿರುತ್ತಾಳೆ. ಇನ್ನೊಂದು ಕೈಯಲ್ಲಿ ಡಮರನ್ನು ಹಿಡಿದಿರುವಳು. ಮಾತೆಯ ಈ ರೂಪ ಬಹಳ ಆನಂದಮಯವಾದುದು.

ತಾಯಿ ಮಹಾಗೌರಿಯ ಪುರಾಣದ ಕಥೆ : ಒಂದು ಸಾರಿ ದೇವಿ ದುರ್ಗೆಯು ಭೂಮಿಯ ಮೇಲೆ ಜನ್ಮವನ್ನು ಪಡೆದು, ಮತ್ತು ಮರಳಿ ದೇವಲೋಕಕ್ಕೆ ಹೋಗುವುದಕ್ಕಾಗಿ ಶಿವನನ್ನು ಮದುವೆಯಾಗಲು ಬಯಸುವಳು. ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡುವಳು. ಆಕೆ ತಪಸ್ಸಿನಲ್ಲಿ ಸಂಪೂರ್ಣವಾಗಿ ಮಗ್ನಳಾಗಿರುವ ವೇಳೆ ದೇಹದಲ್ಲಿ ಧೂಳು ಹಾಗೂ ಕೊಳೆಯು ತುಂಬಿರುವುದು. ಆಕೆ ಆಹಾರ ಹಾಗೂ ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವಳು.

ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿರುವುದು ಮತ್ತು ಆಕೆಯು ಸಾವಿರಾರು ವರ್ಷಗಳು ಇದೇ ರೀತಿ ಇರುವಳು. ಶಿವನು ಆಕೆಯ ತಪಸ್ಸಿನಿಂದ ಪ್ರಭಾವಿತನಾಗಿ, ಆಕೆಯ ದೇಹವನ್ನು ಹೊಳೆಯುವಂತೆ ಮಾಡಲು ಗಂಗೆಯ ಪವಿತ್ರ ಜಲವನ್ನು ಇವಳ ಶರೀರದ ಮೇಲೆ ಹರಿಸಿದ್ದರಿಂದ, ಶರೀರವೆಲ್ಲಾ ವಿದ್ಯುತ್ತಿನ ಕಾಂತಿಯಂತೆ, ಹೊಳೆಯತೊಡಗಿತು. ಇದರಿಂದಾಗಿ ಮಹಾಗೌರಿಯ ಅವತಾರವು ತುಂಬಾ ಕಾಂತಿಯುತ, ಬಿಳಿ ಹಾಗೂ ಧ್ಯಾನಾಸಕ್ತದಲ್ಲಿರುವುದು. ಮಹಾಗೌರಿಯ ವಯಸ್ಸು ಕೇವಲ ಎಂಟು ವರ್ಷವೆಂದು ಹೇಳಲಾಗಿದೆ. ಶ್ವೇತವರ್ಣದ ವೃಷಭ ವಾಹನೆಯಾಗಿರುವ ಇವಳ ಬಿಳುಪನ್ನು ಹುಣ್ಣಿಮೆಯ ಚಂದ್ರ, ಶಂಖ, ಹಾಗೂ ಕಂದ ಪುಷ್ಪಗಳಿಗೆ ಹೋಲಿಸಲಾಗಿದೆ.

ಸರ್ವಾಂಗಾಭರಣದಿಂದ, ಶ್ವೇತವಸ್ತ್ರ ಭೂಷಿತೆಯಾಗಿರುವಳು. ‘ಅಷ್ಟವರ್ಷಾ ಭವೇದ್‌ ಗೌರಿ’ (8 ವರ್ಷದವಳು) ಯಾಗಿರುವ ಇವಳನ್ನು ಉಪಾಸಿಸಿದಾಗ ಸಂಚಿತ ಪಾಪಗಳು ತೊಳೆದುಹೋಗುತ್ತವೆ. ಸಂತಾಪ, ದು:ಖಗಳು ನಿವಾರಣೆಯಾಗುವುದು. ನವರಾತ್ರಿಯ ಎಂಟನೇ ದಿನದ ದೇವಿಯು ರಾಹುವಿನ ಅಧಿಪತಿಯಾಗಿರುವಳು. ಜನ್ಮ ಕುಂಡಲಿಯಲ್ಲಿ (ಜಾತಕ) ರಾಹುವಿನಿಂದಾಗುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧ್ಯಾನವನ್ನು ನೀಡುವಳು. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ನೆರವಾಗುವಳು.

ಪೂಜೆಯ ಮಹತ್ವ : ಮಹಾಗೌರಿ ದೇವಿಯನ್ನು ಪರಿಪೂರ್ಣತೆಯ ಅಧಿಕಾರಿಣಿ ಎಂದು ಹೇಳಲಾಗುವುದು. ಭಕ್ತರ ಸಕಲ ಸಂಕಷ್ಟಗಳನ್ನು ನಿವಾರಣೆ ಮಾಡಿ, ಚಿಂತೆಯನ್ನು ದೂರ ಮಾಡಿ, ಸದ್ಗುಣವನ್ನೂ, ಸಕಲ ಸಂಪತ್ತನ್ನು, ಸುಖ ಜೀವನವನ್ನು ಸಾಗಿಸಲು ಜೀವನದಲ್ಲಿ ಬೇಕಾಗಿರುವ ಎಲ್ಲವನ್ನೂ ಭಕ್ತರಿಗೆ ಕರುಣಿಸಿ, ಎಲ್ಲಾ ಆಕಾಂಕ್ಷೆಗಳನ್ನು ಈಡೇರಿಸುವಳು. ನವರಾತ್ರಿಯ ಎಂಟನೇ ದಿನದ ಗೌರಿಪೂಜೆಯು – ಎರಡನೇ ಸರಸ್ವತಿ ಪೂಜೆಯಾಗಿರುವುದು. ಇದನ್ನು ಮಹಾ ಅಷ್ಟಮಿ ಎಂದು ಕರೆಯಲಾಗುವುದು.

ಸಾಧಕರು ಸಹಸ್ರಾರ ಚಕ್ರದ ಮೇಲೆ ಗಮನವಿಟ್ಟು ಧ್ಯಾನ ಮಾಡಬೇಕು. ಇದರಿಂದ ಸಕಲ ಸಿದ್ದಿಗಳೂ ಪ್ರಾಪ್ತಿಯಾಗುವುದು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here