ಶಮಿ ಪತ್ರವನ್ನು ಯಾಕೆ ಸುವರ್ಣಕ್ಕೆ ಹೋಲಿಸುತ್ತಾರೆ.

0
2817

ಶಮಿ ಪತ್ರವನ್ನು ಯಾಕೆ ಸುವರ್ಣಕ್ಕೆ ಹೋಲಿಸುತ್ತಾರೆ. ಶಮಿ ಪತ್ರ ಅಂದರೆ ಬನ್ನಿ ಎಲೆಗಳು. ಹಿಂದಿನ ಕಾಲದಲ್ಲಿ ಹೋಮ ಹವನಗಳನ್ನು ಮಾಡುವಾಗ ಶಮೀವೃಕ್ಷದ ಕಾಂಡಗಳನ್ನು ಒಂದಕ್ಕೊಂದು ತಿಕ್ಕುವುದರ ಮೂಲಕ ಅ’ಗ್ನಿ ಪ್ರಜ್ವಲಿಸುವಂತೆ ಮಾಡುತ್ತಿದ್ದರು. ಈಗಲೂ ಭಾರತದ ಹಲವೆಡೆಗಳಲ್ಲಿ ಈ ವಿಧಾನದಲ್ಲೇ ಅ’ಗ್ನಿಕುಂಡವನ್ನು ಹಚ್ಚಲಾಗುತ್ತದೆ. ಇದನ್ನು ಅರಣೀ ಮಂಥನವೆಂದು ಕರೆಯುತ್ತಾರೆ. ಶಮೀವೃಕ್ಷದಿಂದ ಉಂಟಾಗುವ ಅ’ಗ್ನಿಗೆ ಕಾರಣವೆಂದರೆ ಶಮೀವೃಕ್ಷವು ಅ’ಗ್ನಿಯ ಆವಾಸ ಸ್ಥಾನ ಹಾಗೂ ಸುವರ್ಣವು ಅ’ಗ್ನಿಯ ವೀರ್ಯವೆಂದು ಹೇಳಲಾಗಿದೆ. ಆದ್ದರಿಂದಲೇ ಶಮೀ ವೃಕ್ಷವನ್ನು ಸುವರ್ಣ ಸಮಾನವಾದ ದೈವೀವೃಕ್ಷವೆಂಬ ಭಾವನೆಯಿಂದ ನೋಡಲಾಗುತ್ತದೆ.

ಹಿಂದೆ ಭರತಖಂಡವನ್ನು ಸೂರ್ಯವಂಶಸ್ಥನಾದ ರಘು ಮಹಾರಾಜನು ಆಳುತ್ತಿದ್ದ ಸಮಯದಲ್ಲಿ ಕೌಸ್ಥೇಯನೆಂಬ ಬಡ ಬ್ರಾಹ್ಮಣ ಬಾಲಕನೊಬ್ಬನು ವಿದ್ಯಾರ್ಜನೆಗಾಗಿ ಅರುಣಿ ಮಹರ್ಷಿಗಳ ಗುರುಕುಲವನ್ನು ಸೇರಿಕೊಳ್ಳುತ್ತಾನೆ. ತನ್ನ ಶಿಕ್ಷಣವು ಪೂರ್ಣಗೊಂಡ ಮೇಲೆ ಗುರುಗಳಲ್ಲಿ ತಾನು ಗುರುದಕ್ಷಿಣೆಯಾಗಿ ಏನು ನೀಡಲಿ ಎಂದು ಕೇಳುತ್ತಾನೆ. ಅರುಣಿ ಮುನಿಗಳು ಕೌಸ್ಥೇಯನು ಬಡವನಾದ್ದರಿಂದ ಯಾವುದೇ ಗುರುದಕ್ಷಿಣೆಯನ್ನು ಅಪೇಕ್ಷಿಸದೇ ಗುರುಕುಲವನ್ನು ಬಿಡುವ ಆಜ್ಞೆಯನ್ನು ನೀಡುತ್ತಾರೆ. ಆದರೆ ಕೌಸ್ಥೇಯನು ಗುರುದಕ್ಷಿಣೆಯಾಗಿ ಏನನ್ನಾದರೂ ಆಜ್ಞಾಪಿಸಬೇಕೆಂದು ಆಗ್ರಹಪೂರ್ವಕವಾಗಿ ಪ್ರಾರ್ಥಿಸುತ್ತಾನೆ.

ಇದರಿಂದ ಕುಪಿತರಾದ ಅರುಣಿ ಮುನಿ ಗುರುದಕ್ಷಿಣೆ ಕೊಡಲೇಬೇಕೆಂದಿದ್ದರೆ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೊಡು ಎಂದು ಬಡ ಕೌಸ್ಥೇಯನಲ್ಲಿ ಕೇಳುತ್ತಾರೆ. ಇಷ್ಟು ದೊಡ್ಡ ಗುರುದಕ್ಷಿಣೆ ಕೇಳುತ್ತಾರೆಂಬ ಅರಿವಿಲ್ಲದ ಕೌಸ್ಥೇಯ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಹೇಗೆ ಸಂಪಾದಿಸುವುದೆಂಬ ಚಿಂತೆಯಲ್ಲಿ ರಘು ಮಹಾರಾಜನ ಆಸ್ಥಾನಕ್ಕೆ ಬರುತ್ತಾನೆ. ರಘು ಮಹಾರಾಜ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ತನ್ನ ಪತ್ನಿ ಸಮೇತನಾಗಿ ತನ್ನ ರಾಜ ಭಂಡಾರದ ಸಮಸ್ತ ಧನ-ಕನಕಗಳನ್ನು ಪ್ರಜೆಗಳಿಗೆ ದಾನ ಕೊಡುವ ಪರಿಪಾಠವಿಟ್ಟುಕೊಂಡಿದ್ದು ಆ ರೀತಿ ದಾನ ನೀಡಿ ಕೆಲವೇ ದಿನಗಳು ಕಳೆದಿರುತ್ತವೆ.

ರಾಜ ಭಂಡಾರ ಬರಿದಾಗಿರುತ್ತದೆ. ರಘು ಮಹಾರಾಜನ ತಪಃಶಕ್ತಿಯ ಫಲವಾಗಿ ಕೆಲ ವರ್ಷಗಳಲ್ಲಿ ರಾಜಕೋಶವು ಮತ್ತೆ ತುಂಬುತ್ತಿರುತ್ತದೆ. ರಾಜನು ಒಮ್ಮೆ ಕೌಸ್ಥೇಯನಿಗೆ ನಿತ್ಯ ಆಸ್ಥಾನಕ್ಕೆ ಬರುವ ಕಾರಣವೇನೆಂದು ಕೇಳುತ್ತಾನೆ. ಕೌಸ್ಥೇಯ ತನ್ನ ಸಮಸ್ಯೆಯನ್ನು ಮಹಾರಾಜನಲ್ಲಿ ಭಿನ್ನವಿಸಿಕೊಳ್ಳುತ್ತಾನೆ. ರಾಜ್ಯಕೋಶ ಬರಿದಾದರೂ ಕೌಸ್ಥೇಯನಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಧನಾಧಿಪತಿಯಾದ ಕುಬೇರನ ಮೇಲೆ ಯುದ್ಧವನ್ನು ಮಾಡಿ ಕೌಸ್ಥೇಯನ ಅಭಿಲಾಷೆಯನ್ನು ಪೂರ್ಣಗೊಳಿಸಬೇಕೆಂಬ ಸಂಕಲ್ಪ ಮಾಡುತ್ತಾನೆ. ತನ್ನ ಚತುರಂಗಬಲದ ಸಮೇತ ಕುಬೇರನ ಮೇಲೆ ಯುದ್ಧಕ್ಕೆ ಸನ್ನದ್ಧನಾಗಿ ತೆರಳುತ್ತಿರುವಾಗ ಮಾರ್ಗ ಮಧ್ಯೆ ಕತ್ತಲಾದ ಕಾರಣ ಒಂದು ವನದಲ್ಲಿ ಬಿಡಾರ ಹೂಡುತ್ತಾನೆ.

ಅದು ಶಮೀ ವೃಕ್ಷ ತುಂಬಿದ್ದ ವನ. ಕುಬೇರನಿಗೆ ಮಹಾ ತೇಜಸ್ವಿಯಾದ ರಘು ಮಹಾರಾಜನು ಬಡ ವಿದ್ಯಾರ್ಥಿ ಗುರುದಕ್ಷಿಣೆಗೆ ಬೇಕಾಗಿರುವ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೊಡಿಸುವ ಉದ್ದೇಶದಿಂದ ತನ್ನ ಮೇಲೆ ಯುದ್ಧಕ್ಕೆ ಬರುತ್ತಿರುವ ವಿಷಯ ತಿಳಿಯುತ್ತದೆ. ಸಕಲ ಬ್ರಹ್ಮಾಂಡಕ್ಕೆ ಧನೇಶ್ವರನಾದ ಕುಬೇರ, ರಾಜನ ಸದುದ್ದೇಶದಿಂದ ಸುಪ್ರೀತನಾಗುತ್ತಾನೆ. ಕುಬೇರನು ತನ್ನ ಮಾಯೆಯಿಂದ ರಘು ಮಹಾರಾಜ ಬಿಡಾರ ಹೂಡಿದ್ದ ಶಮೀ ವೃಕ್ಷದ ಪ್ರತಿಯೊಂದು ಎಲೆಯೂ ಸುವರ್ಣ ನಾಣ್ಯವಾಗುವಂತೆ ಮಾಡುತ್ತಾನೆ.

ಸೂರ್ಯೋದಯವಾಗುತ್ತಿದ್ದಂತೆ ಶಮೀ ವೃಕ್ಷದ ಪ್ರತಿ ಎಲೆಯೂ ಸುವರ್ಣ ನಾಣ್ಯಗಳಾಗಿ ಕಂಗೊಳಿಸುತ್ತಿರುವುದನ್ನು ನೋಡಿದ ಮಹಾರಾಜನು ದೈವೀಕೃಪೆ ಎಂದರಿತು ಕುಬೇರನ ಮೇಲಿನ ಯುದ್ಧದಿಂದ ಹಿಂದೆಸರಿಯುತ್ತಾನೆ. ಸ್ವರ್ಣಮುದ್ರೆಗಳಿಂದ ತುಂಬಿದ ಶಮೀವನಕ್ಕೆ ಕೌಸ್ಥೇಯನನ್ನು ಕರೆಸಿ, ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ತೆಗೆದುಕೊಂಡು ಅರುಣಿ ಮಹರ್ಷಿಗಳ ಗುರುದಕ್ಷಿಣೆಯನ್ನು ತೀರಿಸಲು ಹೇಳುತ್ತಾನೆ. ರಾಜನ ಭಂಡಾರ ಮತ್ತೆ ಸುವರ್ಣ ನಾಣ್ಯಗಳಿಂದ ತುಂಬಿ ತುಳುಕುತ್ತದೆ. ಗುರುದಕ್ಷಿಣೆಯನ್ನು ಸ್ವೀಕರಿಸಿದ ಅರುಣಿ ಮಹರ್ಷಿ ಕೌಸ್ಥೇಯನ ಗುರುಭಕ್ತಿಯನ್ನೂ, ರಘು ಮಹಾರಾಜನ ತೇಜಸ್ಸನ್ನೂ, ದಾನ ಬುದ್ಧಿಯನ್ನೂ ಮನಃಪೂರ್ವಕವಾಗಿ ಹರಸುತ್ತಾರೆ.

ಶಮೀವಕ್ಷದ ಎಲೆಗಳು ಸ್ವರ್ಣಮುದ್ರೆಗಳಾಗಿ ಸ್ವರ್ಣಮುದ್ರೆಗಳಾಗಿ ಪರಿವರ್ತನೆಯಾದ ದಿನವೇ ಆಶ್ವಯುಜ ಮಾಸ, ಶುಕ್ಲಪಕ್ಷದ ದಶಮಿ ಅಥವಾ ವಿಜಯದಶಮಿ. ಹಾಗಾಗಿ ದಶಮಿಯಂದು ಶಮೀವೃಕ್ಷಕ್ಕೆ ಭಕ್ತಿಯಿಂದ ಪೂಜೆ ಮಾಡಿ ಶಮೀಪತ್ರೆಗಳನ್ನು ಮನೆಗೆ ತಂದು ತಿಜೋರಿ, ಹಣದ ಪೆಟ್ಟಿಗೆ, ಆಭರಣದ ಪೆಟ್ಟಿಗೆಗಳಲ್ಲಿ ಇಡುತ್ತಾರೆ. ವಿಜಯದಶಮಿಯಂದು ಶಮೀ ಅಥವಾ ಬನ್ನೀ ವೃಕ್ಷದ ಪೂಜೆಯನ್ನು ಮಾಡಿ, ಶಮೀ ಪತ್ರೆಯನ್ನು ಮನೆಗೆ ತರಲಾಗುತ್ತದೆ. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದೆಂಬ ನಂಬಿಕೆ ಇದೆ. ಶಮೀವೃಕ್ಷದ ವೈಶಿಷ್ಟ್ಯವನ್ನು ನೋಡಿದಾಗ ಇದರ ಹಿಂದೆಯೂ ಪೌರಾಣಿಕ ಮಹತ್ವವಿರುವುದನ್ನು ಕಾಣಬಹುದು. ಬನ್ನಿಮುಡಿಯುವಾಗ ಹೇಳುವೆ ಮಂತ್ರ : ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ| ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ|| ಎಲ್ಲರೂ ಬನ್ನಿ ತಗೊಂಡು ಬಂಗಾರದಂಗ ಇರೋಣ.

LEAVE A REPLY

Please enter your comment!
Please enter your name here