ಕರ್ನಾಟಕದ ಚುಂಚನಕಟ್ಟೆ ಕೋದಂಡರಾಮನ ಮಹಿಮೆಯನ್ನು ತಿಳಿದು ಪಾವನರಾಗಿ.

0
2504

ಕರುನಾಡಿನ ಚುಂಚನಕಟ್ಟೆಯ ಕೋದಂಡರಾಮನ ನೋಡಿ, ಅಘನಾಶ ಎಂದು ಹಾಡಿ ಬೇಡಿ. ರಘುಕುಲ ಭೂಷಣನಾದ ಶ್ರೀರಾಮಚಂದ್ರನು ಸಾಕ್ಷಾತ್ ಪೂರ್ಣಬ್ರಹ್ಮ ಪರಮಾತ್ಮನಾಗಿದ್ದಾನೆ. ಅವನು ಧರ್ಮ ರಕ್ಷಣೆಗಾಗಿ ಹಾಗೂ ಲೋಕಗಳ ಉದ್ಧಾರಕ್ಕಾಗಿಯೇ ಅವತರಿಸಿದ್ದನು. ಜನಮಾನಸದಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮ. ಕರುನಾಡಿನ ನೆಲಕ್ಕೂ ಶ್ರೀರಾಮಚಂದ್ರನಿಗೂ ಒಂದು ಅವಿನಾಭಾವ ಸಂಬಂಧವಿದೆ.

ವನವಾಸದ ಸಮಯದಲ್ಲಿ ಕರ್ನಾಟಕದ ಹಲವು ಭಾಗಗಳಿಗೆ ಭೇಟಿ ನೀಡಿದ್ದಾನೆಂಬ ನಂಬಿಕೆ ನಮ್ಮಲ್ಲಿದ್ದು, ಆ ತಾಣಗಳು ಇಂದು ರಾಮನ ಭಕ್ತಿ ಕೇಂದ್ರಗಳಾಗಿವೆ, ಪ್ರವಾಸೀ ಧಾಮಗಳಾಗಿವೆ. ರಾಜ್ಯಗಳಲ್ಲಿರುವ ರಾಮ ತಾಣಗಳತ್ತ ಒಂದು ಕಿರುನೋಟ ಹರಿಸಿದರೆ, ದಕ್ಷಿಣ ಭಾರತದ ಕಾಶಿ ಎನಿಸಿರುವ ಹಂಪಿ, ಹನುಮನ ಕಿಷ್ಕಿಂದೆ, ಬೆಳಗಾವಿಯ ಜಿಲ್ಲೆಯ ರಾಮತೀರ್ಥ, ಚುಂಚನಕಟ್ಟೆಯ ಕೋದಂಡರಾಮ, ಕಲಬುರಗಿಯ ನರೋಣಾ, ಮಂಗಳೂರಿನ ಸೀತಾ ಬಾವಿ ಹೀಗೆ ಹತ್ತು ಹಲವಾರು ತಾಣಗಳಿವೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನಲ್ಲಿ ಇರುವ ಚುಂಚನಕಟ್ಟೆಯ ಕೋದಂಡರಾಮ ದೇವಸ್ಥಾನವು ಇಂದಿಗೂ ಅಸಂಖ್ಯಾತ ಜನರನ್ನು ಆಕರ್ಷಿಸುವ ಪ್ರಸಿದ್ಧ ತಾಣವಾಗಿದೆ. ಕಾವೇರಿ ನದಿಯ ದಡದಲ್ಲಿರುವ ಚುಂಚನಕಟ್ಟೆ ದೇವಸ್ಥಾನವನ್ನು ಚಾಲುಕ್ಯ ದೊರೆಗಳ ಕಾಲದಲ್ಲಿ ನಿರ್ಮಿಸಲಾಗಿದೆ ಎಂಬ ಮಾತಿದೆ.

ಒಂದು ಕಥೆಯು ಶ್ರೀರಾಮನ ಪರಮ ಭಕ್ತನಾಗಿದ್ದ ಚುಂಚನೆಂಬ ಮಹರ್ಷಿಗಳಿಗೆ ಶ್ರೀರಾಮನ ಸೀತಾ, ಲಕ್ಷ್ಮಣ ಸಮೇತನಾಗಿ ಇಲ್ಲಿ ದರ್ಶನ ನೀಡಿದನೆನ್ನುತ್ತರೆ. ಹಾಗಾಗಿ ಈ ಕ್ಷೇತ್ರ ಚುಂಚನಕಟ್ಟೆ ಎಂದು ಹೆಸರಾಯಿತು ಎನ್ನುತ್ತದೆ. ಸ್ಥಳ ಪುರಾಣದ ಮತ್ತೊಂದು ಕಥೆಯ ಪ್ರಕಾರ ಇದು ಚುಂಚ ಮತ್ತು ಚುಂಚಿಯರೆಂಬ ರಾಕ್ಷಸರು ವಾಸವಾಗಿದ್ದ ಜಾಗ. ಇವರಿಬ್ಬರು ತಮ್ಮ ಮೇರೆ ಮೀರಿದ ಅ’ಟ್ಟಹಾಸದಿಂದ ಋಷಿ ಮುನಿಗಳು ಯಜ್ಞ ಯಾಗಾದಿಗಳನ್ನು ಮಾಡದಂತೆ ಅಡ್ಡಿಪಡಿಸುತ್ತಾ, ಸುತ್ತಮುತ್ತಲು ವಾಸಿಸುವ ಜನರನ್ನು ವಿಪರೀತವಾಗಿ ಕಾಡಿಸುತ್ತಿದ್ದರು.

ವನವಾಸದ ಕಾಲದಲ್ಲಿ ಸೀತಾ, ಲಕ್ಷ್ಮಣರ ಸಮೇತವಾಗಿ ಶ್ರೀ ರಾಮನು ಇಲ್ಲಿಗೆ ಬಂದಾಗ, ಋಷಿಮುನಿಗಳು, ಜನರು ಈ ರಾಕ್ಷಸರಿಂದ ಮುಕ್ತಿ ನೀಡುವಂತೆ ಕೋರಿದರು. ಜನರ ಸುಭಿಕ್ಷೆಗಾಗಿ, ಯುಗಪುರುಷನಾದ ಶ್ರೀ ರಾಮನು ಚುಂಚ ಚುಂಚಿಯರನ್ನು ಸಂ’ಹರಿಸಿದನಂತೆ. ಅದರ ನೆನಪಿಗೆ ಈ ಪ್ರದೇಶವು ಚುಂಚನ ಕಟ್ಟೆ ಎಂದಾಯಿತು ಎನ್ನುತ್ತದೆ.
ಚುಂಚ ಚುಂಚಿಯರ ಸಂಹಾರದ ನಂತರ ಮನಃಶಾಂತಿಗೆ ಸ್ನಾನ ಮಾಡುವಂತೆ ಸೀತಾಮಾತೆ ರಾಮನಿಗೆ ಹೇಳುತ್ತಾಳೆ. ಆಗ ರಾಮನ ಅನುಜ್ಞೆಯಂತೆ ಲಕ್ಷ್ಮಣನು ಪುಷ್ಕರಿಣಿಯನ್ನು ನಿರ್ಮಿಸುತ್ತಾನೆ. ಅದು ಇಂದಿಗೂ ಕೂಡ ತನ್ನ ನೈಜತೆ ಕಾಪಾಡಿಕೊಂಡಿದೆ. ರಾಮ, ಸೀತೆ, ಲಕ್ಷ್ಮಣ ಇಲ್ಲಿಗೆ ಬಂದ ಜ್ಞಾಪಕಾರ್ಥ ಕೋದಂಡರಾಮ ದೇವಾಲಯ ನಿರ್ಮಿಸಲಾಗಿದೆ.

ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯಕ್ಕೆ ಹೋಗಲು 30 ಮೆಟ್ಟಿಲುಗಳಿವೆ. ವಿಜಯನಗರ ಶೈಲಿಯ ಮೂರು ಅಂತಸ್ತಿನ ರಾಜಗೋಪುರವು ಜಯವಿಜಯ ಹಾಗೂ ಇನ್ನಿತರ ದೇವತೆಗಳ ಶಿಲ್ಪಗಳನ್ನೊಳಗೊಂಡಿದೆ. ಪ್ರವೇಶ ದ್ವಾರದ ಒಳಗೆ ದೊಡ್ಡ ಪ್ರಾಕಾರವಿದ್ದು, ಒಳ ಭಿತ್ತಿಗಳಲ್ಲಿ ದಶಾವತಾರದ ಚಿತ್ರಗಳಿವೆ. ದೇವಾಲಯದ ಸುತ್ತಲೂ ಹಲವು ಪುಟ್ಟ ಮಂಟಪಗಳಿವೆ, ದೇವಾಲಯದ ಪ್ರಾಂಗಣದಲ್ಲಿ ಶ್ರೀ ರಾಮನ ವಿವಿಧ ಅವತಾರಗಳ ತೈಲ ವರ್ಣಚಿತ್ರಣಗಳಿವೆ. ಗೋಡೆಗಳ ಮೇಲೆ ರಾಮ ಸೀತೆ, ಲಕ್ಷ್ಮಣರ ಅನೇಕ ಬಗೆಯ ಚಿತ್ರಗಳು ಮೂಡಿವೆ. ಹಸಿರ ಮಧ್ಯೆ ಈ ದೇವಾಲಯವು ತನ್ನ ಪ್ರಾಚೀನತೆಯನ್ನು ಉಳಿಸಿಕೊಂಡಿದೆ.

ದೇವಾಲಯದ ಗರ್ಭಗುಡಿಯಲ್ಲಿ ಸೀತಾ, ಲಕ್ಷ್ಮಣ ಸಹಿತನಾಗಿ ಕೋದಂಡ ಹಿಡಿದು ನಿಂತ ಶ್ರೀರಾಮಚಂದ್ರನ ಸುಂದರ ಮೂರ್ತಿಯಿದೆ. ಇಲ್ಲಿ ಸೀತಾ ಮಾತೆಯು ಶ್ರೀರಾಮನ ಮೂರ್ತಿಯು ಬಲಭಾಗದಲ್ಲಿರುವುದು ವಿಶೇಷ. ಸಾಮಾನ್ಯವಾಗಿ ‘ಎಲ್ಲಿ ರಾಮನೋ ಅಲ್ಲಿ ಹನುಮನು’ ಎಂಬಂತೆ ಶ್ರೀರಾಮನಿರುವ ಸ್ಥಳಗಳಲ್ಲಿ ರಾಮಭಕ್ತ ಹನುಮಂತನೂ ಜೊತೆಗಿರುತ್ತಾನೆ. ಆದರೆ ಈ ದೇವಾಲಯದಲ್ಲಿ ಸೀತಾ ಲಕ್ಷ್ಮಣ ಸಮೇತನಾಗಿರುವ ಶ್ರೀರಾಮನು ಮಾತ್ರ ಕಾಣುತ್ತಾನೆ, ಜೊತೆಗೆ ಹನುಮನಿಲ್ಲ. ಕಾರಣ ಈ ಸ್ಥಳಕ್ಕೆ ಬರುವ ಮುನ್ನ ರಾಮ ಸೀತೆಯರಿಗೆ ಆಂಜನೇಯನ ಪರಿಚಯವಿರಲಿಲ್ಲ.

ಹೀಗಾಗಿ ಇಲ್ಲಿ ಸೀತಾ ರಾಮ ಲಕ್ಷ್ಮಣರು ಮಾತ್ರ ಇರುವರು. ರಾಮಭಂಟ ಆಂಜನೇಯ ಇಲ್ಲ. ಇವೆಲ್ಲ ನೋಡಿದಾಗ ಇದೊಂದು ಅತ್ಯಂತ ವಿಶೇಷವಾದ ಅಪರೂಪದ ದೇವಾಲಯವೆನಿಸುತ್ತದೆ. ಇದರ ಮತ್ತೊಂದು ವಿಶೇಷ ಎಂದರೆ ಇಲ್ಲಿ ರಾಜ್ಯದ ಜೀವನಾಡಿಯಾದ ಕಾವೇರಿ ನದಿಯು ಸುಮಾರು 70 ಅಡಿಗಳ ಎತ್ತರದಿಂದ ಭೋರ್ಗರೆಯುತ್ತಾ ಧುಮ್ಮಿಕ್ಕಿ ಮೋಹಕ ಜಲಪಾತವನ್ನು ಸೃಷ್ಟಿಸುತ್ತಾಳೆ. ಧನುಷ್ಕೋಟಿಎಂದು ಸ್ಥಳೀಯರು ಕರೆಯುವ ಈ ಜಲಪಾತದ ಮೊರೆತ ಗಾವುದ ಗಾವುದ ದೂರದವರೆಗೂ ಕೇಳಿಸುತ್ತದೆ.

ಆದರೆ ದೇವಾಲಯದ ಗರ್ಭಗುಡಿಯ ಒಳಗಡೆ ನದಿಯ ನೀರಿನ ಭೋರ್ಗರೆತ ಸ್ವಲ್ಪವೂ ಕೇಳಿಸದಿರುವುದು ಅಷ್ಟೇ ಅಚ್ಚರಿಯ ಸಂಗತಿ. ವರ್ಷಕ್ಕೊಮ್ಮೆ ಜನವರಿ ತಿಂಗಳಿನಲ್ಲಿ ನಡೆಯುವ ರಾಮದೇವರ ರಥೋತ್ಸವದ ಸಂದರ್ಭದಲ್ಲಿ ಜಾನುವಾರುಗಳ ಜಾತ್ರೆ ನಡೆಯುತ್ತದೆ. ದೂರದೂರಿನಿಂದ ಬಂದು ಸೇರುವ ನೂರಾರು ಭಕ್ತರು ಕಾವೇರಿನದಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ರಾಮನ ದರ್ಶನದಿಂದ ಪುನೀತರಾಗುತ್ತಾರೆ. ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ.

ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ. ಶ್ರೀರಾಮಕೃಷ್ಣಾರ್ಪಣಮಸ್ತು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here