ಶ್ರೀಮಾತೆಗೂ ಕದಂಬವನಕ್ಕೂ ಅವಿನಾಭಾವ ಸಂಬಂಧ. ಹೇಗೆ ಎಂದು ತಿಳಿದು ಪಾವನರಾಗಿ.

0
1248

ಕದಂಬವನವಾಸಿನ್ಯೈ ನಮಃ ಶ್ರೀಮಾತೆಗೂ ಕದಂಬವನಕ್ಕೂ ಅವಿನಾಭಾವ ಸಂಬಂಧ. ಮಾತೆ ಯಾವಾಗಲೂ ಕದಂಬವನಚಾರಿಣಿಯೇ. ಏಕೆ. ಕದಂಬದ ವಿಶೇಷತೆ ಏನು. (ಇಂದು ನಾವು ಕಾಣುತ್ತಿರುವ, ಹೆಸರಿಸಿರುವ ಕದಂಬ ಎಂಬ ಮರವೇ ಇಲ್ಲಿ ಉಕ್ತವಾಗಿರುವ ಕದಂಬ ವೃಕ್ಷ ಹೌದೋ ಅಲ್ಲವೋ ಎಂಬ ನಿಖರತೆ ಇಲ್ಲ). ಕದಂಬವು ಸಾಧಾರಣವಾಗಿ ಮಳೆಗಾಲದಲ್ಲಿ ಹೂ ಬಿಡುವ ವೃಕ್ಷ. ವಿಶೇಷ ಇದಲ್ಲ. ಈ ವೃಕ್ಷದ ಎಲ್ಲಾ ಮೊಗ್ಗುಗಳೂ ಗುಡುಗು ಶಬ್ದ ಮಾಡಿದಾಗ ಮಾತ್ರವೇ, ಒಟ್ಟಿಗೆ ಅರಳುತ್ತದೆಯಂತೆ. ಇದು ವಿಶೇಷ.

ಅತಿಸುಂದರವಾದ ಚೆಂಡಿನಾಕಾರದ ಹೂಗಳು. ಕೆಂಪು ಕೇಸರೀ ಮಿಶ್ರವಾದ ಗಾಢ ಬಣ್ಣ. ದೈವಿಕವೆನಿಸುವ ಸುವಾಸನೆ. ಇವೆಲ್ಲದರ ಜೊತೆಗೆ ಎಲ್ಲಾ ಮೊಗ್ಗುಗಳೂ ಗುಡುಗು ಜೋರಾಗಿ ಶಬ್ದ ಮಾಡಿದ ಕೂಡಲೇ ಒಮ್ಮೆಗೇ ಅರಳುತ್ತದೆ ಎಂಬ ಪ್ರತೀತಿ. ಹಾಗಾಗಿಯೇ, ಯಾವುದಾದರೂ ಒಂದು ಕಾರ್ಯದ ನಿರ್ಧಾರ ಅಥವಾ ಯೋಜನೆ ಮಾಡುತ್ತಿರುವ ಜೊತೆಜೊತೆಗೇ ಆ ಕಾರ್ಯ ಸಮಾಪ್ತಿಗೆ ಪೂರಕವಾದ ಎಲ್ಲಾ ಹಂತಗಳ ಕೆಲಸವೂ ಒಂದೇ ಸಲ ತಕ್ಷಣವೇ ಮುಗಿದು ಹೋದರೆ ಅದಕ್ಕೆ ಕದಂಬಕೋರಕ ನ್ಯಾಯ ಎಂಬ ಪ್ರಸಿದ್ಧ ಉಕ್ತಿಯನ್ನು ಉಲ್ಲೇಖಿಸುತ್ತಾರೆ.

ಸುಧಾಸಾಗರಮಧ್ಯಸ್ಥಾಯೈ ನಮಃ ಬಾಹ್ಯಾರ್ಥ : ಸುಧಾ ಎಂದರೆ ಅಮೃತ. ಬೆಳ್ಳಗಿನ ಈ ಅಮೃತಸಾಗರದ ಮಧ್ಯದಲ್ಲಿ ಶ್ರೀಮಾತೆಯ ವಾಸ. ಗೋವಿನ ಹಾಲನ್ನೂ ಅಮೃತ ಸಮಾನವೆಂದೇ ಕರೆಯುವರು. ಅಮೃತಸಾಗರದ ಮಧ್ಯೆ ಮಾತೆಯವಾಸ ಕ್ಷೀರಸಾಗರದ ಮಧ್ಯೆ ಪುರಾಣಗಳ ವಿಷ್ಣುವಿನ ವಾಸದ ರೀತಿಯಲ್ಲೇ ವರ್ಣಿಸಲ್ಪಟ್ಟಿದೆ. ವಿವರಣೆಯ ವ್ಯತ್ಯಾಸವಷ್ಟೇ. ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ (ಬಸವಣ್ಣನವರ ವಚನ) ಮನೋನೇತ್ರಗಳ ಮುಂದೆ ಸಂಕಲ್ಪವಾಗುವುದು ಪರಬ್ರಹ್ಮ.

ವಿಷ್ಣುವು ಹಾಲಿನ ಸಮುದ್ರದ ಮಧ್ಯೆ ಆದಿಶೇಷನನ್ನೇ ಮಂಚವಾಗಿಸಿಕೊಂಡು ಶಾಯಿಯಾಗಿದ್ದರೆ, ಶ್ರೀಮಾತೆಯು ಅಮೃತಸಾಗರದ ಮಧ್ಯೆ, ಮಹಾಪದ್ಮಾಟವಿಯಲ್ಲಿ, ಚಿಂತಾಮಣಿಯ ಮನೆಯಲ್ಲಿ, ಪಂಚ ಬ್ರಹ್ಮರನ್ನೇ ತಲ್ಪವಾಗಿಸಿಕೊಂಡು ತನ್ನ ಶಕ್ತಿ ಸಮೂಹದಿಂದ ಸುತ್ತುವರೆಯಲ್ಪಟ್ಟು ಅರ್ಧಶಾಯಿಯಾಗಿದ್ದಾಳೆ. ಎರಡೂ ಒಂದೇ ಶಕ್ತಿಯ ಎರಡು ರೂಪಗಳಲ್ಲವೇ. ‘ಬಿಂದುಸ್ಥಾನಂ ಸುಧಾಸಿಂಧುಃ ಪಂಚಯೋನ್ಯಃ ಸುರದ್ರುಮಾಃ’ ಎಂಬುದು ವಾಮಕೇಶ್ವರರ ಮಾತು.

ರಹಸ್ಯಾರ್ಥದಲ್ಲಿ ಶ್ರೀ ಚಕ್ರದ ಮಧ್ಯಬಿಂದುವೇ ಅಮೃತಸಾಗರ. ಪಂಚಯೋನಿಗಳೆಂದರೆ ಯೋಗಸಿದ್ಧಿಗೆ ಸಾಧನೆಯ ಮಾರ್ಗಗಳಾದ ಧೃತಿ, ಶ್ರದ್ಧಾ, ಸುಖ, ಅವಿವಿದಿಶಾ ಮತ್ತು ವಿವಿದಿಶಾ ಎಂಬ ಐದು ಕರ್ಮಯೋನಿಗಳು. ಬಿಂದುವೆಂಬ ಅಮೃತಸಾಗರವನ್ನು ಸುತ್ತುವರೆದಿರುವ ಕಲ್ಪತರುಗಳು (ಸುರದ್ರುಮಗಳು). ಪಿಂಡಾಂಡ ಅಂದರೆ ಜೀವಿಗಳ ಉಗಮದ ಮೂಲ. ಅದುವೇ ಈ ಶರೀರ. ಇದರ ಸಹಸ್ರಾರ ಕಮಲವೇ, ಮಧ್ಯಬಿಂದು, ಅಮೃತಸಾಗರ.

ಸಾಧಕನ ಒಂದೊಂದು ಚಕ್ರದ ಸಿದ್ಧಿಯು ಒಂದೊಂದು ಜನ್ಮದಂತೆಯೇ (ಪಂಚಯೋನಿಗಳು). ಹಾಗೆ ಐದು ಚಕ್ರಗಳನ್ನು ಸಿದ್ಧಿಸಿಕೊಂಡು ಸಹಸ್ರಾರವನ್ನು ಸೇರುವವೇಳೆಗೆ ಶ್ರೀಮಾತೆಯ ಭಾಗವೇ ಆಗಿಬಿಟ್ಟಿರುತ್ತಾನೆ. ಅದೇ ಅಮರ ಸ್ಥಿತಿ. ಅಮೃತಸಾಗರದ ಮಧ್ಯೆ ಇದ್ದಂತೆಯೇ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here