ಮಹಾ ಗುರು ಒಬ್ಬರು ಪುಟ್ಟ ಮಗುವಿನ ಬಳಿ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಮಗು ಈ ಬೆಳಕು ಎಲ್ಲಿಂದ ಬಂದಿತು ಹೇಳು. ಆ ಮಗು ದೀಪವನ್ನು ಆರಿಸಿ ಮಹಾ ಗುರುವನ್ನು ಕೇಳುತ್ತದೆ. ಈ ಬೆಳಕು ಎಲ್ಲಿಗೆ ಹೋಯಿತು ಹೇಳಿ. ಅದು ಎಲ್ಲಿಂದ ಬಂದಿದೆ ಎಂದು ನಾನು ಹೇಳುತ್ತೇನೆ. ಬೆಳಕು ಎಲ್ಲಿಂದಲೂ ಬರುವುದಿಲ್ಲ ಎಲ್ಲಿಗೂ ಹೋಗುವುದಿಲ್ಲ. ಬರುವುದು ಮತ್ತು ಹೋಗುವುದು ನಾವು. ಬೆಳಕು ಸ್ಥಿರ ನೆರಳು ಚರ. ನಾನು ಇದ್ದೇನೆ ಎಂಬುವುದು ಅರಿವು.
ನಾನು ಇಲ್ಲ ಎಂಬುದು ಕೂಡ ಅರಿವು. ಇಲ್ಲದೇ ಇದ್ದಾಗ ನಾನು ಇಲ್ಲ ಎಂದು ಅರಿವಾಗುವುದಕ್ಕೆ ಸಾಧ್ಯವೇ. ಅರಿವಾಗುವುದು ಯಾರಿಗೆ. ಹಾಗಿದ್ದರೆ ನಾನು ಇಲ್ಲ ಎಂಬ ಅರಿವು ಅರ್ಥ ಹೀನವೇ. ಅದು ಸುಳ್ಳೇ. ನಾನಿದ್ದಾಗಲೇ ನನಗೆ ನಾನಿಲ್ಲ ಅಂತ ಅನ್ನಿಸುವುದು ಆಧ್ಯಾತ್ಮವೇ. ಬೋಧೆಯೇ, ಸಮಾಧಿ ಸ್ಥಿತಿಯೇ, ಜ್ಞಾನೋದಯವೇ ಅಥವಾ ವಕ್ರೀಭವನವೆ. ಅದು ಕತ್ತಲು. ಕತ್ತಲು ಇರುವುದೇ ಹಾಗೆ. ಅದು ಇರುತ್ತದೆ. ಇದ್ದೇನೆ ಅನ್ನುವುದು ಅದಕ್ಕೆ ಗೊತ್ತು.
ಅದು ಇರುವುದಿಲ್ಲ ನಾನಿಲ್ಲ ಅನ್ನುವುದು ಅದಕ್ಕೆ ಗೊತ್ತಾಗುವುದಿಲ್ಲ. ಏಕೆಂದರೆ ಗೊತ್ತಾಗುವುದಕ್ಕೆ ಅದು ಇರುವುದೇ ಇಲ್ಲ. ಇರುವುದು ಇಲ್ಲದಿದ್ದಾಗ ಇರದೇ ಇರುವುದು ಇರುತ್ತದೆ. ಅದು ಸೂತ್ರ. ಅದೇ ಬೆಳಕು. ಅದು ಯಾರನ್ನು ಸಹ ಓಡಿಸುವುದಿಲ್ಲ. ತನ್ನ ಅಸ್ತಿತ್ವವನ್ನು ಅದು ಸಾಬೀತು ಮಾಡುವುದಿಲ್ಲ. ಅದು ಇರುವುದರಿಂದ ಮಿಕ್ಕ ಎಲ್ಲದರ ಅಸ್ತಿತ್ವ ಸಾಬೀತಾಗುತ್ತಾ ಹೋಗುತ್ತದೆ. ಫೋಟೋಗ್ರಾಫರ್ ನ ಡಾರ್ಕ್ ರೂಂನಲ್ಲಿ ಫಿಲಿಮ್ ನೆಗೆಟಿವ್ ತೊಳೆದಾಗ ಬಿಂಬಗಳು ಮೂಡುತ್ತಾವಲ್ಲ, ಆ ಬಿಂಬಗಳು ಬೆಳಕಿನಲ್ಲಿ ಇದ್ದಾಗ ಚಿತ್ರೀಕರಿಸಿಕೊಂಡವು.
ಅವನ್ನು ಮತ್ತೆ ಮೂಡಿಸಲಿಕ್ಕೆ ಕತ್ತಲೆ ಬೇಕು. ಈ ಕತ್ತಲೆ ಬೆಳಕಿನ ಆಟವೋ, ಲೀಲೆಯೋ, ಮೆರವಣಿಗೆಯೋ, ಪಾಳಿಯೋ, ಸರದಿಯೋ, ವರದಿಯೋ ಗೊತ್ತಿಲ್ಲ. ಆದರೆ ನಮಗೆ ಬೇಕಿರುವುದು ಬೆಳಕು ಮಾತ್ರ. ಯಾವುದು ನಿನ್ನನ್ನು ಬದುಕಿಸುತ್ತದೆಯೋ ಅದೇ ಬೆಳಕು. ಗುರುಗಳು ಹೇಳಿಕೊಟ್ಟ ಸರಳ ಪಾಠ ಇದು.
ಹರಿತ್ತು ಎಂದು ಕರೆಸಿಕೊಳ್ಳುವ ಕ್ಲೋರೋಫಿಲ್ ಸೂರ್ಯನಿಂದ ಬೆಳಕನ್ನು ಪಡೆದು ಅದನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ದ್ಯುತಿ ಸಂಶ್ಲೇಷಣೆ ನಡೆಯದೇ ಹೋದರೆ ಹಸಿರೂ ಇಲ್ಲ, ನಾವೂ ಇಲ್ಲ. ಫೋಟೋಸಿಂತೆಸಿಸ್ ಗೆ ಮೂಲವೇ ಬೆಳಕು. ಹೀಗಾಗಿ ಜೀವನವೆಂದರೆ ಬೆಳಕು ಬೆಳಕಿಗೆ ನಾವೆಲ್ಲರೂ ಶರಣಾಗಲೇಬೇಕು.