ಇಂದು ಸಂಜೆ 6.15ರಿಂದ 8ರವರೆಗೆ ಗುರು ಮತ್ತು ಶನಿ ಗ್ರಹಗಳ ಸಾಮೀಪ್ಯವನ್ನು ಕಣ್ತುಂಬಿಕೊಳ್ಳಬಹುದು. 20 ವರ್ಷಗಳಿಗೊಮ್ಮೆ ಈ ದೃಶ್ಯ ಕಾಣಸಿಗುತ್ತದೆ ಎಂದು ಪೂರ್ಣಪ್ರಜ್ಞ ಕಾಲೇಜಿನ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ಅತುಲ್ ಭಟ್ ತಿಳಿಸಿದ್ದಾರೆ.
ಗುರು ಹಾಗು ಶನಿಯ ಸಾಮೀಪ್ಯವನ್ನು ಒಂದು ವಿಶೇಷವಾದ ಖಗೋಳ ವಿದ್ಯಮಾನ ಎನ್ನಬಹುದಾಗಿದ್ದು, ಇದನ್ನು ಗ್ರೇಟ್ ಕಂಜಂಕ್ಷನ್ ಎನ್ನಲಾಗುತ್ತದೆ. ಭೂಮಿಯಿಂದ ಸೂರ್ಯನಿಗಿರುವ ದೂರದ 5ರಷ್ಟು ದೂರದಲ್ಲಿ ಗುರುಗ್ರಹವಿದ್ದು, ಗುರುವು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷ ಬೇಕು.
ಶನಿಯು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ 2ರಷ್ಟು ದೂರದಲ್ಲಿದ್ದು, ಪರಿಭ್ರಮಿಸಲು 29.46 ವರ್ಷಗಳು ಬೇಕು. ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು. ಗುರು ಹಾಗೂ ಶನಿ ಗ್ರಹಗಳು ಒಂದೇ ಸಮತಲದಲ್ಲಿ ಪರಿಭ್ರಮಿಸುವುದಿಲ್ಲ. ಪ್ರತಿ ಸಮಾಗಮದಲ್ಲಿ ಅಂತರವು ಬದಲಾಗುತ್ತಿರುತ್ತದೆ.
ಖಗೋಳಶಾಸ್ತ್ರದಲ್ಲಿ ಈ ಅಂತರಗಳನ್ನು ಕೋನಾಂತರದಲ್ಲಿ ಅಳೆಯಲಾಗುತ್ತದೆ. ಮದುವೆ ಸಮಾರಂಭಗಳಲ್ಲಿ ವರನು ವಧುವಿಗೆ ಅರುಂಧತಿ ಹಾಗು ವಸಿಷ್ಠ ನಕ್ಷತ್ರಗಳನ್ನು ತೋರಿಸುವ ಶಾಸ್ತ್ರವಿದೆ. ಅಲ್ಲಿ ಎರಡು ನಕ್ಷತ್ರಗಳು ತುಂಬ ಹತ್ತಿರದಲ್ಲಿ ಜೋಡಿ ನಕ್ಷತ್ರಗಳಂತೆ ಕಾಣುತ್ತದೆ. ಇವುಗಳ ನಡುವಿನ ಅಂತರ 0.2 ಡಿಗ್ರಿಗಳಿರುತ್ತದೆ.
ಆದರೆ, ಈಗ ಕಾಣುವ ಗುರು ಶನಿ ಗ್ರಹದ ನಡುವಿನ ಅಂತರ ಅರುಂಧತಿ ಹಾಗೂ ವಸಿಷ್ಠ ನಕ್ಷತ್ರಗಳ ಅಂತರದ ಅರ್ಧದಷ್ಟಿರುತ್ತದೆ (0.1) ಎಂದು ಅತುಲ್ ಭಟ್ ತಿಳಿಸಿದ್ದಾರೆ. 2040 ರಲ್ಲಿ ಈ ಸಮಾಗಮವನ್ನು ಮತ್ತೊಮ್ಮೆ ವೀಕ್ಷಿಸಬಹುದಾಗಿದ್ದರೂ ಅಂತರ ಎರಡರಷ್ಟಿರುತ್ತದೆ. ಹಾಗಾಗಿ, ಈಗ ನೋಡದಿದ್ದರೆ ಮತ್ತೊಮ್ಮೆ, 0.1 ಡಿಗ್ರಿ ಅಂತರವಿರುವ ಸಮಾಗಮವನ್ನು ವೀಕ್ಷಿಸಲು ಮಾರ್ಚ್ 2080ರವರೆಗೆ ಕಾಯಬೇಕು. ಹಿಂದೆ, 1623ರಲ್ಲಿ ಇದೇ ರೀತಿಯ ವಿದ್ಯಮಾನ ನಡೆದಿತ್ತು. ಅದಕ್ಕಿಂತ ಹಿಂದೆ 1226 ರಲ್ಲಿ ಕಂಡಿತ್ತು.
ಈ ಜೋಡಿ ಗ್ರಹಗಳು ಕೇವಲ 1 ಗಂಟೆ 45 ನಿಮಿಷ ಮಾತ್ರ ಕಾಣ ಸಿಗುತ್ತದೆ. ಎರಡು ಗ್ರಹಗಳು ಸೂರ್ಯಾಸ್ತದ ನಂತರ 6.15 ರಿಂದ ರಾತ್ರಿ 8ಗಂಟೆಯವರೆಗೆ ಕಾಣಲಿದ್ದು, ನಂತರ ನೈರುತ್ಯದಲ್ಲಿ ಅಸ್ತವಾಗುತ್ತದೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ 21ರಂದು ಸಂಜೆ 6ಗಂಟೆಗೆ ಈ ಗ್ರಹಗಳ ವೀಕ್ಷಣೆ ಆಯೋಜಿಸಲಾಗಿದೆ.
ನೋಡ ಬಯಸುವವರು ಅವರವರ ಮನೆಯ ಮೇಲಿನ ಬಾನಂಗಳದಲ್ಲಿ ಈ ಗ್ರಹಗಳ ವಿಸ್ಮಯಕಾರಿ ಚಮತ್ಕಾರವನ್ನು ನೋಡಬಹುದಾಗಿದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.