ವೈಕುಂಠ ಏಕಾದಶಿಯ ಗೊತ್ತಿರದ ಇನ್ನೊಂದು ವಿಶೇಷತೆ ಏನೆಂದು ತಿಳಿಯಿರಿ.

0
3268

ಶ್ರೀ ವೈಕುಂಠ ಏಕಾದಶಿ. ಮಾಸದಲ್ಲಿ ಎರಡು ಬಾರಿ ಬರುವ ಏಕಾದಶಿ ಅತ್ಯಂತ ಪವಿತ್ರ ದಿನ. ಭಕ್ತರು ಈ ದಿನದಂದು ಉಪವಾಸ ಮಾಡಿ ಸಂಪೂರ್ಣವಾಗಿ ಶ್ರೀಕೃಷ್ಣನ ಸ್ಮರಣೆಯಲ್ಲಿ ತೊಡಗಿಕೊಂಡಿರುತ್ತಾರೆ. ಏಕಾದಶಿಯ ದಿನ ಯಾವುದೇ ಬಗೆಯ ಆಹಾರವನ್ನೂ ಸ್ವೀಕರಿಸದೆ ಉಪವಾಸ ಮಾಡುವ ಭಕ್ತರಿದ್ದಾರೆ. ಆದರೆ ಇದು ಎಲ್ಲರಿಂದಲೂ ಸಾಧ್ಯವಾಗದು. ಆದ್ದರಿಂದ ಕಡೆಯ ಪಕ್ಷ ಧಾನ್ಯ ಸೇವನೆಯನ್ನಾದರೂ ವರ್ಜಿಸಿ ಕೇವಲ ಹಾಲು, ಹಣ್ಣು, ಗೆಡ್ಡೆ ಗೆಣಸುಗಳಿಂದ ತಯಾರಿಸಿದ ಆಹಾರವನ್ನು ಸೇವಿಸಬೇಕೆಂದು ಪ್ರಮುಖ ಆಚಾರ್ಯರ ನಿರ್ದೇಶನವಿದೆ.

ಏಕಾದಶಿಯ ಅವಿರ್ಭಾವ : ಏಕಾದಶಿಯ ಅವಿರ್ಭಾವದ ಬಗ್ಗೆ ಪದ್ಮಪುರಾಣದಲ್ಲಿ ಹೇಳಲಾಗಿದೆ. ಕೃತಯುಗದಲ್ಲಿ ಮುರಾಸುರನು ಕಠಿಣ ತಪಸ್ಸಿನಿಂದ ಅಸೀಮ ಬಲವನ್ನು ಸಂಪಾದಿಸಿದನು. ಹೀಗೆ ಬಲಶಾಲಿಯಾದ ಮುರಾಸುರನ ಉಪಟಳ ಮಿತಿಮೀರಿತು. ಸ್ವರ್ಗಲೋಕದ ಮೇಲೆ ದಂಡೆತ್ತಿ ಹೋದ ಅವನು ದೇವತೆಗಳನ್ನು ಪರಾಜಯಗೊಳಿಸಿ ತನ್ನ ಕೈವಶ ಮಾಡಿಕೊಂಡನು. ದಿಕ್ಕುಗಾಣದ ದೇವತೆಗಳು ಪರಶಿವನ ಬಳಿ ಸಾರಿ ತಮ್ಮನ್ನು ರಕ್ಷಿಸುವಂತೆ ಕೇಳಿಕೊಂಡರು. ಆಗ ಶಿವನು ಇಂದ್ರಾದಿ ದೇವತೆಗಳನ್ನು ಕುರಿತು ಭಗವಾನ್ ಶ್ರೀವಿಷ್ಣುವಿನಲ್ಲಿ ಆಶ್ರಯ ಕೋರುವಂತೆ ಉಪದೇಶಿಸಿದನು.

ಪರಶಿವನ ಮಾತಿನಂತೆ ದೇವತೆಗಳು ವಿಷ್ಣುವಿನ ಮೊರೆ ಹೊಕ್ಕರು. ದೇವತೆಗಳ ಪ್ರಾರ್ಥನೆಯನ್ನು ಆಲಿಸಿದ ಭಗವಂತನು ಅವರನ್ನು ರಕ್ಷಿಸುವುದಾಗಿ ಅಭಯವಿತ್ತು, ಮುರನ ಸಂ’ಹಾರಕ್ಕೆ ಹೊರಟನು. ಭಗವಂತ ಮತ್ತು ಮುರನ ನಡುವೆ ಘೋ’ರ ಕಾ’ಳಗ ನಡೆಯಿತು. ಈ ಯು’ದ್ಧವು ಸಹಸ್ರ ಸಹಸ್ರ ವರ್ಷಗಳವರೆಗೆ ಸಾಗಿತು. ಭಗವಂತನಿಗೆ ಮುರಾಸುರನು ತನ್ನ ಅಸ್ತ್ರಗಳಿಂದ ಸಾ’ಯಲಾರನೆಂಬುದು ನೆನಪಾಯಿತು. ಆತನ ಕೊಂಚ ಕಾಲ ವಿಶ್ರಮಿಸಲು ಬದರಿಕಾಶ್ರಮದಲ್ಲಿನ ಹಿಮವತಿ ಎಂಬ ಗುಹೆಗೆ ತೆರಳಿದನು.

ಮುರಾಸುರನ ಸಂಹಾರಕ್ಕಾಗಿ ವಿಶಿಷ್ಟ ಆಯುಧದ ಅಗತ್ಯವಿತ್ತು. ಗುಹೆಯಲ್ಲಿ ವಿಶ್ರಮಿಸಿದ ಭಗವಂತನು ಅದನ್ನು ಚಿಂತಿಸುತ್ತ ನಿದ್ರೆ ಹೋದನು. ಈ ಸಂದರ್ಭದಲ್ಲಿ ಮುರನು ಆತನ ಮೇಲೆ ಪ್ರ’ಹಾರ ಮಾಡಲು ಎರಗಿದನು. ಆದರೆ ಭಗವಂತನ ಶಕ್ತಿಯು ಸ್ತ್ರೀ ರೂಪದಲ್ಲಿ ಹೊರಹೊಮ್ಮಿ ಮುರನೊಂದಿಗೆ ಹೋರಾಡಿದಳು. ಅವಳ ಒಂದೇ ನೋಟಕ್ಕೆ ಮುರಾಸುರ ಉರಿದು ಬೂದಿಯಾದನು.

ವೈಕುಂಠ ಏಕಾದಶಿ : ಭಗವಾನ್ ವಿಷ್ಣುವು ಎಚ್ಚರಗೊಂಡಾಗ ಮುರನು ಉರಿದುಬಿದ್ದಿರುವುದನ್ನೂ, ತನ್ನೆದುರು ಸುಂದರಿಯಾದ ಸ್ತ್ರೀಯೊಬ್ಬಳು ನಿಂತಿರುವುದನ್ನು ಕಂಡನು. ತನ್ನ ಶಕ್ತಿಯಾದ ಆಕೆಯ ಕಾರ್ಯದಿಂದ ಸಂತುಷ್ಟನಾದ ಭಗವಂತನು ಆಕೆಯನ್ನು ‘ಏಕಾದಶಿ’ ಎಂದು ಕರೆದನು. ಪ್ರಸನ್ನನಾದ ಆತನು ಆಕೆಗೆ ಏನಾದರೊಂದು ವರವನ್ನು ಕೇಳುವಂತೆ ಆದೇಶಿಸಿದನು.

ಕೃತಾರ್ಥಳಾದ ಏಕಾದಶಿಯು, ಮುರ ಸಂಹಾರ ನಡೆದ ಈ ದಿನದಂದು ಯಾರು ಉಪವಾಸ ಆಚರಿಸುತ್ತಾರೋ, ಅವರನ್ನು ಎಲ್ಲ ಬಗೆಯ ಪಾಪಗಳಿಂದ ಮುಕ್ತಗೊಳಿಸುವ ಶಕ್ತಿಯನ್ನು ಕರುಣಿಸುವಂತೆ ಬೇಡಿಕೊಂಡಳು. ಅದರಂತೆ ಭಗವಂತನು, ‘ಯಾರು ಏಕಾದಶಿಯಂದು ಉಪವಾಸ ನಡೆಸುತ್ತಾರೋ ಅವರು ವೈಕುಂಠವನ್ನು ಹೊಂದುತ್ತಾರೆ’ ಎಂದು ಘೋಷಿಸಿದನು.

ಭಗವಾನ್ ವಿಷ್ಣುವಿನ ಶಕ್ತಿ ಸ್ವರೂಪಳಾದ ಏಕಾದಶಿಯು ಮುರನನ್ನು ಸಂಹರಿಸಿದ್ದು, ಮಾರ್ಗಶೀರ್ಷ ಮಾಸದ ಶುಕ್ಲಪಕ್ಷದ ಹನ್ನೊಂದನೆಯ ದಿನದಂದು. ಏಕಾದಶಿ ಭಗವಂತನಿಂದ ವರ ಪಡೆದಿದ್ದೂ ಈ ದಿನವೇ. ಆದ್ದರಿಂದ ಇದು ‘ವೈಕುಂಠ ಏಕಾದಶಿ’ ಎಂದು ಕರೆಯಲ್ಪಡುತ್ತದೆ. ಇದು ಮೊತ್ತ ಮೊದಲ ಏಕಾದಶಿ. ಈ ದಿನ ವೈಕುಂಠದ ದ್ವಾರಗಳು ಮುಕ್ತವಾಗಿದ್ದು, ಶ್ರದ್ಧಾಭಕ್ತಿಗಳಿಂದ ಉಪವಾಸ ಮಾಡಿ ಭಗವಂತನನ್ನು ಅರ್ಚಿಸಿದವರು ಭಗವಂತನ ಸಾನ್ನಿಧ್ಯ ಪಡೆಯುತ್ತಾರೆ.

ದೇವದಾನವರು ಒಟ್ಟಾಗಿ ಅಮೃತ ಮಥನ ನಡೆಸಿದರಲ್ಲದೆ, ಅದು ಕೊನೆಗೊಂಡಿದ್ದೂ ಈ ದಿನವೇ. ಕುರುಕ್ಷೇತ್ರದ ರಣಾಂಗಣದಲ್ಲಿ ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ್ದೂ ಈ ದಿನದಂದೇ. ಮಾರ್ಗಶೀರ್ಷ ಶುಕ್ಲಪಕ್ಷ ಏಕಾದಶಿಯ ವೈಶಿಷ್ಟ್ಯಗಳು ಹಲವಾರು. ಇದನ್ನು ‘ಮೋಕ್ಷದಾ ಏಕಾದಶಿ’ ಎಂದೂ ಕರೆಯುವರು. ದಕ್ಷಿಣ ಭಾರಗದಲ್ಲಿ ವೈಕುಂಠ ಏಕಾದಶಿ ಉತ್ಸವವು ಅದ್ಧೂರಿಯಾಗಿ ಆಚರಿಸಲ್ಪಡುತ್ತದೆ. ಎಲ್ಲ ವೈಷ್ಣವ ದೇಗುಲಗಳ ದ್ವಾರದಲ್ಲಿ ‘ವೈಕುಂಠದ್ವಾರ’ವನ್ನು ನಿರ್ಮಿಸಿ, ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

ಈ ದಿನದಂದು ಉಪವಾಸ ಮಾಡಿ, ದೇಗುಲದ ವೈಕುಂಠ ದ್ವಾರವನ್ನು ಹಾದು ಭಗವಂತನ ದರ್ಶನ ಪಡೆದರೆ ಮೋಕ್ಷ ದೊರೆಯುವುದು ಎಂಬ ನಂಬಿಕೆಯಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ವೈಕುಂಠ ಏಕಾದಶಿಯ ದಿನ ದೇವಾಲಯಕ್ಕೆ ಭೇಟಿ ನೀಡಿ ಕೃತಾರ್ಥರಾಗುತ್ತಾರೆ. ದಕ್ಷಿಣ ಭಾರತದ ಪ್ರಮುಖ ಸಂತರಲ್ಲೊಬ್ಬರಾದ ನಮ್ಮಾಳ್ವಾರರು ಇಹಲೋಕ ತ್ಯಜಿಸಿದ್ದು ವೈಕುಂಠ ಏಕಾದಶಿಯಂದು. ಸ್ವತಃ ಭಗವಂತನೇ ವೈಕುಂಠ ದ್ವಾರದಲ್ಲಿ ನಿಂತು ಅವರನ್ನು ಬರಮಾಡಿಕೊಂಡನೆಂದು ಪ್ರತೀತಿಯಿದೆ. ಈ ಸಂಸ್ಮರಣೆಯಲ್ಲಿ ತಮಿಳುನಾಡಿನ ದೇಗುಲಗಳಲ್ಲಿ ವೈಭವದ ಉತ್ಸವಗಳು ನಡೆಯುತ್ತದೆ.

ವೈಕುಂಠ ಏಕಾದಶಿಯ ವೈಶಿಷ್ಟ್ಯ – ಭೂಮಿಯ ಒಂದು ವರ್ಷ, ದೇವಲೋಕದ ಒಂದು ದಿನಕ್ಕೆ ಸಮ. ಭೂವರ್ಷವು ಸೂರ್ಯನ ಭ್ರಮಣವನ್ನಾಧರಿಸಿ ಉತ್ತರಾಯಣ ಮತ್ತು ದಕ್ಷಿಣಾಯನವೆಂಬ ಎರಡು ಸಮಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಉತ್ತರಾಯಣವು ಮಾರ್ಗಶೀರ್ಷ ಮಾಸದಿಂದ ಆಷಾಢ ಮಾಸದವರೆಗೆ ಇರುತ್ತದೆ. ಈ ಉತ್ತರಾಯಣವು ಸ್ವರ್ಗಲೋಕದಲ್ಲಿ ಹಗಲಾಗಿಯೂ ದಕ್ಷಿಣಾಯನವು ಇರುಳಾಗಿಯೂ ಪರಿಗಣಿತವಾಗುತ್ತದೆ.

ಉತ್ತರಾಯಣವು ಅಂತ್ಯಗೊಳ್ಳುವ ಅವಧಿಯಲ್ಲಿ ಮಾರ್ಗಶೀರ್ಷ ಮಾಸವು ಬರುವುದರಿಂದ, ಅದು ಮುಂಜಾವಿನ ಪೂರ್ವ ಸ್ಥಿತಿಯಂತೆಯೂ ಮಾರ್ಗಶೀರ್ಷ ಮಾಸದ ಹನ್ನೊಂದನೆಯ ಏಕಾದಶಿ ದಿನದಿಂದ ಮುಂಜಾವು ಆರಂಭಗೊಳ್ಳುವುದೆಂದೂ ಪರಿಗಣಿಸಲ್ಪಡುತ್ತದೆ. ಹೀಗೆ ಸೂರ್ಯೋದಯ ಆರಂಭಗೊಳ್ಳುವ ಶುಭಕಾಲವಾದ್ದರಿಂದ ಮಾರ್ಗಶೀರ್ಷ ಶುಕ್ಲ ಏಕಾದಶಿ ಅತ್ಯಂತ ಮಂಗಳಕರವಾದ ದಿನವೆಂದು ಕರೆಯಲ್ಪಟ್ಟಿದೆ. ಈ ದಿನದಂದು ಉಪವಾಸ ಮಾಡಿ, ಭಗವಂತನ ಸ್ಮರಣೆಯಲ್ಲಿ ತಲ್ಲೀನರಾಗುವವರಿಗೆ ಎಲ್ಲ ಬಗೆಯ ಸತ್ಫಲಗಳೂ ದೊರೆಯುತ್ತವೆ.

ಶ್ರೀರಂಗಂನಲ್ಲಿ ವೈಕುಂಠ ಏಕಾದಶಿ ಉತ್ಸವ – ಭಾರತದ ಅತಿ ದೊಡ್ಡ ದೇಗುಲಗಳಲ್ಲಿ ಮುಖ್ಯವಾದುದು ಶ್ರೀರಂಗಂನ ಶ್ರೀ ರಂಗನಾಥ ದೇವಾಲಯ. ಇಲ್ಲಿ ಪೂಜೆಗೊಳ್ಳುವ ಶ್ರೀ ರಂಗನಾಥ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಪರಮಭಕ್ತನಾಗಿದ್ದ ವಿಭೀಷಣ. ಶ್ರೀರಾಮ ಪಟ್ಟಾಭಿಷೇಕ ಮುಗಿಸಿಕೊಂಡು ಲಂಕೆಗೆ ಮರಳುವಾಗ ವಿಭೀಷಣ ಸ್ವತಃ ಶ್ರೀರಾಮನಿಂದಲೇ ಈ ಮೂರ್ತಿಯನ್ನು ಉಡುಗೊರೆಯಾಗಿ ಪಡೆಯುತ್ತಾನೆ. ಮಾರ್ಗಮಧ್ಯದಲ್ಲಿ ಸಂಧ್ಯಾವಂದನೆಗಾಗಿ ಮೂರ್ತಿಯನ್ನು ನೆಲದ ಮೇಲಿರಿಸಿದಾಗ, ಅದು ಅಲ್ಲಿಯೇ ನೆಲೆಗೊಳ್ಳುತ್ತದೆ.

ಭಗವಂತನ ಆದೇಶದಂತೆ ವಿಭೀಷಣನು ತಾನೇ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸುತ್ತಾನೆ ಎಂದು ಅಲ್ಲಿನ ಐತಿಹ್ಯಗಳು ಹೇಳುತ್ತವೆ. ಇಂತಹ ಇತಿಹಾಸ ಪ್ರಸಿದ್ಧ ಶ್ರೀರಂಗಮ್ ದೇಗುಲದಲ್ಲಿ ವೈಕುಂಠ ಏಕಾದಶಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರೀ ರಾಮಾನುಜಾಚಾರ್ಯರು ಈ ದೇಗುಲದಲ್ಲಿ ತಂಗಿದ್ದಾಗ ವೈಕುಂಠ ಏಕಾದಶಿ ಉತ್ಸವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಈಗಲೂ ಅದೇ ಮುಂದುವರೆದಿದೆ.

ಶ್ರೀ ರಂಗಂ ದೇವಾಲಯದಲ್ಲಿ ನಿತ್ಯ ಪೂಜೆಗಳ ಜೊತೆ ಜೊತೆಗೆ 322 ವಿವಿಧ ನಮೀಥಿಕ ಪೂಜೆಗಳು ನಡೆಯುತ್ತವೆ. ಅವುಗಳಲ್ಲಿ ಮೊತ್ತ ಮೊದಲನೆಯದು ಮತ್ತು ಅತ್ಯಂತ ಪ್ರಮುಖವಾದುದು – ವೈಕುಂಠ ಏಕಾದಶಿ ಪೂಜೆ. ಇಲ್ಲಿ ಇದನ್ನು 21 ದಿನಗಳ ಕಾಲ ಆಚರಿಸಲಾಗುತ್ತದೆ. ದೇವಾಲಯದ ಸಾವಿರ ಕಂಬಗಳ ಮಂಟಪದ ಎದುರಿನಲ್ಲಿ ತೆಂಗಿನ ತೋರಣ ಕಟ್ಟಿದರೆಂದರೆ, ಉತ್ಸವ ಆರಂಭವಾಯಿತೆಂದೇ ಅರ್ಥ. ಉತ್ಸವಕ್ಕಾಗಿ ನಲವತ್ತೈದು ತೆಂಗಿನ ಮರಗಳ ಚಪ್ಪರ ಹಾಕಲಾಗುತ್ತದೆ. ಆನಂತರ ಪೂಜಾ ವಿಧಿಗಳ ಆರಂಭ.

ಉತ್ಸವದ ಮೊದಲ ಹತ್ತು ದಿನದ ಆಚರಣೆಗಳನ್ನು ‘ಪಕಲ್ ಪತ್ತು’ (ಹತ್ತು ಹಗಲುಗಳು) ಎಂದು ಕರೆಯುತ್ತಾರೆ. ಇದು ಭಗವಂತನಿಗೆ ಮೋಹಿಸಿ ಅಲಂಕಾರ ಮಾಡಿ ಪೂಜಿಸುವುದರೊಂದಿಗೆ ಕೊನೆಗೊಳ್ಳುತ್ತದೆ. ಹನ್ನೊಂದನೆಯ ದಿನವೇ ‘ವೈಕುಂಠ ಏಕಾದಶಿ’. ಇದರೊಂದಿಗೆ ‘ರಾಂಪತ್ತು’ (ಹತ್ತು ರಾತ್ರಿಗಳು) ಆಚರಣೆಗಳು ಆರಂಭವಾಗುತ್ತವೆ. ಈ ದಿನ ಭಗವಂತನಿಗೆ ರತ್ನಕವಚ ತೊಡಿಸಿ, ಸಾವಿರ ಕಂಬಗಳ ಮಂಟಪಕ್ಕೆ ಕರೆತಂದು ‘ಪರಮಪದವಾಸ’ (ವೈಕುಂಠದ್ವಾರ)ದ ಬಳಿ ಇರಿಸಲಾಗುತ್ತದೆ.

ವರ್ಷಪೂರ್ತಿ ಮುಚ್ಚಿರುವ ಈ ದ್ವಾರವನ್ನು ತೆರೆಯುವುದು ವೈಕುಂಠ ಏಕಾದಶಿಯ ದಿನದಂದು ಮಾತ್ರ. ಈ ದಿನದಂದು ಸಾವಿರ ಕಂಬಗಳ ಮಂಟಪದ ದರ್ಬಾರಿನಲ್ಲಿ ಭಗವಂತನೊಡನೆ ಆಳ್ವಾರರು ಮತ್ತು ಆಚಾರ್ಯರ ಚಿತ್ರಪಟಗಳನ್ನು ಇರಿಸಲಾಗುತ್ತದೆ. ಪ್ರತಿವರ್ಷ ಸಾವಿರಾರು ಜನರು ವೈಕುಂಠದ್ವಾರದ ಮೂಲಕ ದೇವಾಲಯ ಪ್ರವೇಶಿಸಿ ಭಗವಂತನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.

ಶ್ರೀಕೃಷ್ಣಾರ್ಪಣಮಸ್ತು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here