ಮಾಸ್ಕ್ ಹಾಕಿಕೋ ಅಂದದ್ದಕ್ಕೆ ಈ ಭೂಪ ಹೇಳಿದ್ದೇನು ಗೊತ್ತಾ. ಅದ್ಭುತ ಸಂದೇಶ.

0
2322

ನಿನ್ನೆ ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಹಾಕುವುದನ್ನು ಮರೆತಿದ್ದೆ. ದಾರಿಯಲ್ಲಿ ಮಾಸ್ಕ್, ಕಾಲು ಒರೆಸುವ ರಗ್ ಮಾರಾಟ ಮಾಡುತ್ತಿದ್ದ ಒಬ್ಬ ಸಣ್ಣ ವ್ಯಾಪಾರಿಯ ಬಳಿ ಹೋಗಿ “ಮಾಸ್ಕ್ ಬೆಲೆ ಎಷ್ಟು ಅಂತ ಕೇಳಿದೆ. ಮೂವತ್ತು ಅಂದ. ಅವನು ಮಾಸ್ಕ್ ಧರಿಸಿರಲಿಲ್ಲ. ಯಾಕೆ ಎಂದು ಕೇಳಿದೆ. ಅವನು ನಮಗೆಲ್ಲ ಕರೋನಾ ಬರುವುದಿಲ್ಲ ಬುದ್ದಿ. ಅಕಸ್ಮಾತ್ ನನ್ನ ಹಣೆಯಲ್ಲಿ ಅದು ಬರುವುದಿದ್ದರೆ ಹೇಗೋ ಬರುತ್ತದೆ ಅಂದ.

ಅದಕ್ಕೆ ನಾನು ನಾನೂ ಹಾಗೇ ಅಂದುಕೊಂಡರೆ ನನಗೂ ಮಾಸ್ಕ್ ಬೇಡ. ಎಲ್ಲರೂ ಹಾಗೇ ಅಂದುಕೊಂಡರೆ ನೀವು ಮಾರಾಟವನ್ನೇ ನಿಲ್ಲಿಸಬೇಕಾಗುತ್ತದೆ ಅಲ್ಲವೆ ಅಂದೆ. ಅದಕ್ಕವನು ಅದು ಹಾಗಲ್ಲ ಸಾರ್. ನಾನು ಬಡವ. ಕಷ್ಟ ಪಟ್ಟು ನೀಯತ್ತಾಗಿ ಕೆಲಸ ಮಾಡುತ್ತೇನೆ. ಸುಳ್ಳು ಹೇಳುವುದಿಲ್ಲ. ಮೋಸ ಮಾಡುವುದಿಲ್ಲ. ಭಗವಂತ ನನ್ನ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ನನ್ನದು ಅಂದ.

ನಾನು ಅವನ ಮಾತಿಗೆ ತಲೆಯಾಡಿಸುತ್ತಾ ಮಳೆ ಬಂತು ಅಂದರೆ ಮರದ ಅಡಿಗೆ ನಾವೇ ತಾನೇ ಹೋಗಬೇಕು ಭಗವಂತ ಕೈ ಹಿಡಿದು ಕರೆದೊಯ್ಯುತ್ತಾನೆಯೆ. ನಮ್ಮ ಛತ್ರಿ ನಾವೇ ಬಿಚ್ಚಬೇಕಲ್ಲವೆ ಅಂದೆ. ಒಂದು ಮಾಸ್ಕ್ ಬೆಲೆ ಮೂವತ್ತು ರೂಪಾಯಿ. ಐವತ್ತರ ನೋಟನ್ನು ಕೊಟ್ಟೆ. ಅವನ ಬಳಿ ಕೇವಲ ಹತ್ತು ರೂಪಾಯಿಯ ಒಂದು ನೋಟು ಇತ್ತು. ನನ್ನ ಬಳಿಯೂ ಮೂವತ್ತು ರೂಪಾಯಿ ಬಿಡಿ ಹಣ ಇರಲಿಲ್ಲ. ಅವನು ಚಿಲ್ಲರೆಗಾಗಿ ತಡಕಾಡುತ್ತಿದ್ದಾಗ ನಾನು ಇನ್ನೊಂದು ಮಾಸ್ಕ್ ನೋಡುತ್ತಿದ್ದೆ.

ಅದೇನು ನನಗೆ ಬೇಕಾಗಿರಲಿಲ್ಲ. ಅವನು ಬುದ್ಧಿ ಎರಡೂ ಮಾಸ್ಕ್ ತಗೊಂಡು ಬಿಡಿ. ಐವತ್ತು ರೂಪಾಯಿನೇ ಸಾಕು ಅಂದ. ನಾನು ನೀವೇಕೆ ಹತ್ತು ರೂಪಾಯಿ ನಷ್ಟ ಮಾಡಕೋತೀರಿ ಅಂದೆ. ಅವನು, ಬಿಡಿ ಸಾರ್ ಚಿಂತೆ ಇಲ್ಲ. ನನ್ನ ಬಳಿ ಚಿಲ್ಲರೆ ಇಲ್ಲ. ಇಪ್ಪತ್ತು ರೂಪಾಯಿಯ ಬದಲು ಹತ್ತು ರೂಪಾಯಿ ಲಾಭ ಆಯಿತು ಅಂದುಕೊಳ್ಳುತ್ತೇನೆ. ಭಗವಂತ ಕೊಡುವವನಿದ್ದರೆ ಹೇಗೋ ಕೊಡುತ್ತಾನೆ ಅಂದ. ನಾನು ಹತ್ತು ರೂಪಾಯಿನೇ ಕೊಡಿ. ಇನ್ನುಳಿದ ಹತ್ತು ರೂಪಾಯಿ ಇನ್ನೊಮ್ಮೆ ನಾನೇ ಬಂದು ಇಸ್ಕೊಳ್ಳುತ್ತೇನೆ ಅಂದೆ. ಅವನು ಒಪ್ಪಲಿಲ್ಲ.

ನೀವು ಬರ್ತೀರೋ ಇಲ್ಲವೋ, ನಿಮ್ಮ ಹತ್ತು ರೂಪಾಯಿ ನನಗೇಕೆ ಅಂದವನೇ ಎರಡೂ ಮಾಸ್ಕ್ ಗಳನ್ನು ಕೊಟ್ಟ. ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ ಸಮಃ ಸಿದ್ಧಾಸಿದ್ಧೌ ಚ ಕೃತ್ವಾಪಿ ನ ನಿಭದ್ಯತೇ. ಜ್ಞಾನಕರ್ಮಸಂನ್ಯಾಸ ಯೋಗ – ಭಗವದ್ಗೀತೆ.

ತಾನಾಗಿ ಬಂದ ಲಾಭದಲ್ಲಿ ತೃತ್ಪನೂ ದ್ವಂದ ಭಾವವನ್ನು ಮೀರಿದವನೂ ಬಂಧನಕ್ಕೆ ಸಿಲುಕುವುದಿಲ್ಲ. ಅವನು ಭಗವದ್ಗೀತೆಯನ್ನ ಓದಿದವನಲ್ಲ. ಆದರೂ ಗೀತೆಯ ಶ್ಲೋಕದಂತೆ ಅವನ ನಡೆ ನುಡಿ ಇತ್ತು. ಭಗವತ್ಪಾದ ಶಂಕಕರರು ಸಾಮಾನ್ಯನಲ್ಲಿ ಬ್ರಹ್ಮಜ್ಞಾನವನ್ನು ಕಂಡು ಅವನು ತನ್ನ ಗುರು ಎಂದು ಪ್ರಣಾಮ ಮಾಡಿದರು.

ದೊಡ್ಡವರೇ ಹಾಗೆಂದ ಮೇಲೆ ಇನ್ನು ಆ ವ್ಯಾಪಾರಿ ಬಂಧುವಿನ ಮುಂದೆ ನಾನೆಷ್ಟರವನು. ಸಂಜೆ ಮನೆಗೆ ಬರುವ ಹೊತ್ತಿನಲ್ಲಿ ಐವತ್ತರ ನೋಟನ್ನು ಮುರಿಸಿ ಹತ್ತು ರೂಪಾಯಿಗಳನ್ನು ಇಟ್ಟುಕೊಂಡೆ. ದಾರಿಯಲ್ಲಿ ಬರುವಾಗ ಅವನ ಬಳಿ ಹೋಗಿ ಬೆಳಗಿನ ಘಟನೆಯನ್ನು ನೆನಪಿಸಿ ಹತ್ತು ರೂಪಾಯಿಯನ್ನು ಅವನಿಗೆ ಕೊಡಲು ಹೋದೆ. ಅವನು ಅದನ್ನು ಪಡೆಯಲು ಒಪ್ಪಲಿಲ್ಲ. ಸ್ವಾಮಿ, ನೀವು ಆಫೀಸಿಗೆ ಹೋಗುವ ಸಾಹೇಬರು. ನನ್ನ ಜೊತೆ ನಿಮ್ಮ ಕೆಲಸ ಬದಿಗಿಟ್ಟು ಬಾಯ್ತುಂಬ ಮಾತನಾಡಿದಿರಲ್ಲ.

ಅದು ಹತ್ತು ರೂಪಾಯಿಗಿಂತ ದೊಡ್ಡದು. ನನಗೆ ದುಡ್ಡು ಬೇಡ. ಭಗವಂತ ಹೇಗೋ ಕೊಡ್ತಾನೆ ಅಂದ. ನಾನು ನೀವು ಭಗವಂತನ ದೊಡ್ಡ ಭಕ್ತರು. ನಿಮ್ಮ ಹತ್ತು ರೂಪಾಯಿ ನಾನು ಇಟ್ಟುಕೊಂಡರೆ ಅದು ನಾನು ಭಗವಂತನಿಗೆ ಮಾಡುವ ದ್ರೋಹ. ದಯವಿಟ್ಟು ತೆಗೆದುಕೊಳ್ಳಿ ಎಂದು ಬಲವಂತವಾಗಿ ಕೊಟ್ಟು ಮನೆಗೆ ಬಂದೆ. ಮನಸ್ಸು ಹಗುರವಾಗಿತ್ತು.

LEAVE A REPLY

Please enter your comment!
Please enter your name here