ಕೇವಲ 350 ರೂಪಾಯಿಗಳಲ್ಲಿ ನಿಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಿ.

0
1324

ಸ್ಪರ್ಧಾತ್ಮಕ ಪರೀಕ್ಷೆಗಳಾದ, ಯು ಪಿ ಎಸ್ ಸಿ, ಕೆ ಪಿ ಎಸ್ ಸಿ, ಬ್ಯಾಂಕಿಂಗ್ ಅಥವಾ ಯಾವುದೇ ಇರಲಿ ಭವಿಷ್ಯದಲ್ಲಿ ನಿಮ್ಮ ಮಕ್ಕಳು ಉತ್ತಮ ಸಾಧನೆ ಮಾಡಬೇಕೆಂದು ನಿಮ್ಮ ಅಪೇಕ್ಷೆಯಾಗಿದ್ದರೆ ನೀವು ಮಾಡಬೇಕಾದ ಪ್ರಾಥಮಿಕ ಕೆಲಸ. ದಿನ ಪತ್ರಿಕೆಯನ್ನು ಮನೆಗೆ ಕೊಂಡುಕೊಳ್ಳುವುದು. ಅತ್ಯಂತ ಕಡಿಮೆ ಬೆಲೆಯಲ್ಲಿ ಅತಿಹೆಚ್ಚು ಸಾಮಾನ್ಯ ಜ್ಞಾನ ದೊರೆಯುವ ಏಕೈಕ ಮಾರ್ಗ ದಿನಪತ್ರಿಕೆಗಳ ಓದು.

ಮಾತೃಭಾಷೆಯ ಮುಖ್ಯ ಪತ್ರಿಕೆ ಮತ್ತು ಒಂದು ಇಂಗ್ಲೀಷ್ ಪತ್ರಿಕೆ ಈ ಎರಡೂ ಬಹಳ ಮುಖ್ಯ. ಎರಡೂ ಸೇರಿ ತಿಂಗಳಿಗೆ ಸುಮಾರು ೩೫೦ ರೂಪಾಯಿಗಳು ಆಗಬಹುದು. ಸ್ಥಳೀಯ ವಿಷಯಗಳಿಂದ ವಿಶ್ವದ ಎಲ್ಲಾ ಮುಖ್ಯ ವಿಷಯಗಳು, ಎಲ್ಲಾ ಕ್ಷೇತ್ರಗಳ ಮಹತ್ವದ ಸಾಧನೆಗಳು ಅದರಲ್ಲಿ ಅಡಕವಾಗಿರುತ್ತವೆ. ಅವು ನಿಮ್ಮ ಮನಸ್ಸಿನಲ್ಲಿ ಅಚ್ಚು ಒತ್ತಿದಂತೆ ಮನದಟ್ಟಾಗಿರುತ್ತದೆ. ತಕ್ಷಣಕ್ಕೆ ಅಲ್ಲದಿದ್ದರೂ ಪರೋಕ್ಷವಾಗಿ ಮುಂದೆ ಎಂದೋ ಅವಶ್ಯಕವಾದಾಗ ನೆನಪಾಗುತ್ತದೆ.

ಅಲ್ಲದೆ ಇತ್ತೀಚೆಗೆ ಪತ್ರಿಕೆಗಳು ಪ್ರತಿನಿತ್ಯ ಸಪ್ಲಿಮೆಂಟುಗಳನ್ನು ಸಹ ಪ್ರಕಟಿಸುತ್ತವೆ. ಅದರಲ್ಲಿ ಎಲ್ಲಾ ವಿಷಯಗಳನ್ನು ವಿಮರ್ಶಾತ್ಮಕವಾಗಿ ಬರೆಯಲಾಗಿರುತ್ತದೆ. ದಿನಪತ್ರಿಕೆಗಳಿಂದ ವಂಚಿತವಾಗುವ ಮುಖ್ಯ ವಿಷಯಗಳು ಇಲ್ಲವೇ ಇಲ್ಲ ಎನ್ನುವಷ್ಟು ಪ್ರಾಮುಖ್ಯತೆ ಅದಕ್ಕೆ ಇದೆ. ವಿದ್ಯಾರ್ಥಿಗಳ ಎಂದಿನ ವಿದ್ಯಾಭ್ಯಾಸ ಮತ್ತು ಆಟಗಳ ಜೊತೆ ದಿನಕ್ಕೆ ಕೇವಲ ೩೦ ರಿಂದ ೪೫ ನಿಮಿಷಗಳ ಪತ್ರಿಕೆಗಳ ಓದು. ಅವರಲ್ಲಿ ಸಾಮಾನ್ಯ ಜ್ಞಾನದ ಮಟ್ಟವನ್ನು ಅದ್ಬುತ ಎನ್ನುವಷ್ಟು ಹೆಚ್ಚಿಸುತ್ತದೆ.

ಅಲ್ಲದೆ ಇದರಿಂದ ಪರೋಕ್ಷವಾಗಿ ಅವರು ಸಮಾಜದ ಮುಖ್ಯವಾಹಿನಿಯ ಎಲ್ಲಾ ವಿಷಯಗಳನ್ನು ಅರಿತು ಎಲ್ಲರೊಂದಿಗೂ ಬೆರೆಯಲು ಸುಲಭವಾಗುತ್ತದೆ. ನನಗೆ ರಾಜಕೀಯ ಗೊತ್ತಿಲ್ಲ, ಸಂಗೀತ ಜ್ಞಾನವಿಲ್ಲ, ಕ್ರೀಡೆ ಬಗ್ಗೆ ಯಾವುದೇ ಮಾಹಿತಿಯಿಲ್ಲ, ವಿಜ್ಞಾನದ ಬಗ್ಗೆ ತಿಳುವಳಿಕೆಯಿಲ್ಲ, ಇತಿಹಾಸ ಅರ್ಥವಾಗುವುದಿಲ್ಲ, ವಿದೇಶಗಳ ಬಗ್ಗೆ ಏನೂ ಗೊತ್ತಾಗುವುದಿಲ್ಲ, ಖಗೋಳಶಾಸ್ತ್ರ ನನ್ನಿಂದ ಬಹಳ ದೂರ ಮುಂತಾದ ನೆಪಗಳನ್ನು ಹೇಳುವುದು ಇಲ್ಲವಾಗುತ್ತದೆ.

ವಿಷಯಗಳ ಪಾಂಡಿತ್ಯ ಸಾಧ್ಯವಾಗದಿದ್ದರೂ ಕನಿಷ್ಠ ಸಾಮಾನ್ಯ ಮಾಹಿತಿ ನಿಮಗೆ ಸಿಗುತ್ತದೆ. ಖಂಡಿತವಾಗಿಯೂ ದಿನಪತ್ರಿಕೆಗಳು ಮಾತ್ರವಲ್ಲ, ವಾರ ಪತ್ರಿಕೆ, ಪಾಕ್ಷಿಕ, ಮಾಸ ಪತ್ರಿಕೆಗಳು, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಪತ್ರಿಕೆಗಳು, ಸಾಹಿತ್ಯ, ಸಾಂಸ್ಕೃತಿಕ, ವಿಜ್ಞಾನ ಇತ್ಯಾದಿ ಪತ್ರಿಕೆಗಳು ಎಲ್ಲವೂ ನಮ್ಮ ಜ್ಞಾನದ ಕಣಜಗಳು ಎಂದು ನಿಸ್ಸಂದೇಹವಾಗಿ ಹೇಳಬಹುದು.

ಕೇವಲ ಸ್ಪರ್ಧಾತ್ಮಕ ಪರೀಕ್ಷೆಯ ವಿದ್ಯಾರ್ಥಿಗಳಲ್ಲದೆ, ಗೃಹಿಣಿಯರು ಸೇರಿದಂತೆ ಎಲ್ಲರೂ ಸಹ ಈ ಓದುವ ಹವ್ಯಾಸ ಬೆಳೆಸಿಕೊಂಡರೆ ಅದರಿಂದ ಅನೇಕ ಪ್ರತ್ಯಕ್ಷ ಮತ್ತು ಪರೋಕ್ಷ ಮಾನಸಿಕ ಲಾಭಗಳು ಖಂಡಿತವಾಗಿಯೂ ಇದೆ.

ದಯವಿಟ್ಟು ಇನ್ನು ಮುಂದಾದರು, ಪತ್ರಿಕೆ ಕೊಳ್ಳದವರು ತಕ್ಷಣದಿಂದಲೇ ನಿಮ್ಮ ಇಷ್ಟದ ಪತ್ರಿಕೆಗಳನ್ನು ತರಿಸಿ. ಪ್ರತಿನಿತ್ಯ ತಪ್ಪದೇ ಓದಬೇಕು ಎಂಬ ಒ’ತ್ತಡಕ್ಕೆ ಒಳಗಾಗಬೇಡಿ. ಪ್ರಾರಂಭದಲ್ಲಿ ಸಮಯವಾದಾಗ ಓದಿ. ನಂತರ ನಿಮಗರಿವಿಲ್ಲದೆ ನೀವು ಅದರ ದಾಸರಾಗುವಿರಿ.

ಕೇವಲ ೩೫೦ ರೂಪಾಯಿಗಳಲ್ಲಿ ನಿಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಿ. ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟದಲ್ಲಿದ್ದರೆ ಆ ಪತ್ರಿಕೆಗಳು ಹಳೆಯದಾದಾಗ ಅದನ್ನು ಮಾರಿದರೆ ನಿಮ್ಮ ಪತ್ರಿಕೆ ಕೊಳ್ಳುವ ಖರ್ಚಿನ ಸ್ವಲ್ಪ ಹಣ ವಾಪಸ್ಸು ಸಹ ಬರುತ್ತದೆ. ಧನ್ಯವಾದಗಳು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here