ಯಾವ ಜಿಮ್’ಗೂ ಹೋಗದೆಯೇ ಕೇವಲ ಒಂದೇ ತಿಂಗಳಲ್ಲಿ ಈ ವ್ಯಕ್ತಿ 8kg ತೂಕ ಇಳಿಸಿರುವುದು ಹೇಗೆ.

0
7173

ನಾನು ಕೇವಲ ಒಂದೇ ತಿಂಗಳಲ್ಲಿ 8kg ತೂಕ ಇಳಿಸಿಕೊಂಡದ್ದು ಹೇಗೆ. ಹ್ಯಾಶ್ಟ್ಯಾಗ್ ಒನ್ ಮಂತ್ ವೆಯ್ಟ್ ಲಾಸ್ ಚಾಲೆಂಜ್ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ ನೋಡಿ. ನನಗೆ ಹೇಗೆ ಸಾಧ್ಯವಾಯ್ತು ಒಂದೇ ತಿಂಗಳಲ್ಲಿ, 76 kg ಇದ್ದವನು 68 kg ಅಂದರೆ ಬರೋಬ್ಬರಿ 8 kg ತೂಕ ಇಳಿಸಲು. ನನಗೇನು ಗೊತ್ತಿಲ್ಲ, ಆದರೆ ನಾನೇನು ಮಾಡಿದೆ ಎಂಬುದನ್ನ ತಿಳಿಸ್ತೀನಿ ನಿಮಗೆ ಉಪಯೋಗ ಆಗಬಹುದಾ ನೋಡಿ.

ದಿನಚರಿಯ ಬಗ್ಗೆ ಹೇಳುವುದಾದರೆ ಬೆಳಗ್ಗೆ 5:30 ಕ್ಕೆ ಎದ್ದು, ಸೀದಾ ಅಡುಗೆ ಮನೆಗೆ ಹೋಗಿ ಒಂದು ದೊಡ್ಡ ಲೋಟ ಸುಮಾರು 300 ಎಂ.ಎಲ್ ನೀರು ಕುಡಿಯುತ್ತಿದ್ದೆ. ನೀರು ಕುಡಿದ 5 ನಿಮಿಷಗಳ ಬಳಿಕ ಒಂದು ಹಸಿ ಬೆಳ್ಳುಳ್ಳಿಯ ಇಲುಕನ್ನು ಬಾಯಲ್ಲಿಟ್ಟು, ಜಗಿದು ಜಗಿದು, ರಸ ಹೀರಿ, ನುಣ್ಣಗಾದ ಮೇಲೆ ನುಂಗಿಬಿಡುತ್ತಿದ್ದೆ. ನಂತರ 4 ನಾಲ್ಕು ಕಿಲೋ ಮೀಟರ್ ನಡೆಯುತ್ತಿದ್ದೆ.

ವಾಕಿಂಗ್ ನಂತರ ಮನೆಗೆ ಬಂದವನು, ಹಲ್ಲನ್ನು ಉಜ್ಜಿ ಮುಖ ತೊಳೆದು, ಟೀ, ಕಾಫಿ ಏನೂ ಕುಡಿಯುತ್ತಿರಲಿಲ್ಲ, ಬದಲಿಗೆ ಬೂದುಗುಂಬಳ ಇಲ್ಲವೇ ಸೌತೆಕಾಯಿ, ಇಲ್ಲವೇ ಅಮೃತ ಬಳ್ಳಿಯ ರಸ ಕುಡಿಯುತ್ತಿದ್ದೆ. ಯಾವುದು ಸಿಗಲಿಲ್ಲವಾದರೆ ಶುಂಠಿ, ಕಾಳು ಮೆಣಸು ಹಾಗೂ ಅರಿಸಿನ ಹಾಕಿದ ಕಷಾಯಕ್ಕೆ ಸ್ವಲ್ಪವೇ ಬೆಲ್ಲ ಸೇರಿಸಿ, ಒಂದು ಸಣ್ಣ ಟೀ ಲೋಟದಷ್ಟು ಕುಡಿಯುತ್ತಿದ್ದೆ, ಹೆಚ್ಚು ಅಲ್ಲ.

ನಂತರ ಒಂದು ಬಟ್ಟಲು, ಮೊಳಕೆ ಕಟ್ಟಿದ ಹೆಸರುಕಾಳು, ಇಲ್ಲವೇ ಹುರಳಿ ಕಾಳು ಹಸಿಯಾಗಿ ತಿನ್ನುತ್ತಿದ್ದೆ, ಇಲ್ಲವೇ, ಮೂಲಂಗಿ, ಕ್ಯಾರೆಟ್, ಗಡ್ಡೆಕೋಸು, ಬೀಟ್ ರೂಟ್ ನಂತಹ ಹಸಿ ತರಕಾರಿ ಒಂದು ಬಟ್ಟಲು ತಿನ್ನುತ್ತಿದ್ದೆ. ರಾತ್ರಿ ನೆನೆಸಿ ಇಟ್ಟ 6 ಬಾದಾಮಿ ತಿನ್ನುತ್ತಿದ್ದೆ, ಆಮೇಲೆ 15 ನಿಮಿಷ ವಿಶ್ರಾಂತಿ. ವಿಶ್ರಾಂತಿಯ ನಂತರ 12 ಸೂರ್ಯ ನಮಸ್ಕಾರ ಮಾಡುತ್ತಿದ್ದೆ, ಮೊದಮೊದಲು ಇದಕ್ಕೆ 12 ನಿಮಿಷವಾಗ್ತಿತ್ತು, ನಂತರದ ದಿನಗಳಲ್ಲಿ ವೇಗ ಹೆಚ್ಚಿಸಿಕೊಂಡೆ 12 ಸೂರ್ಯ ನಮಸ್ಕಾರಗಳು ಕೇವಲ 5 ನಿಮಿಷದಲ್ಲಿ ಮುಗಿಸುತ್ತಿದ್ದೆ.

ನಂತರ 15 ನಿಮಿಷ ನೇರ ಕೂತು ಪ್ರಾಣಾಯಾಮ, ಮೊದಲ ಹನ್ನೆರಡು ಉಸಿರಾಟ ಸುಮ್ಮನೆ ಗಮನಿಸುತ್ತಿದ್ದೆ, ಆನಂತರ ಉಸಿರಾಟಕ್ಕೆ ಲಯಬದ್ಧತೆ ಸಿಗುತ್ತಿತ್ತು, ಆಮೇಲೆ ನನ್ನ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸುತ್ತಾ. ಪ್ರತಿ ಬಾರಿ ಉಸಿರು ಹೊರ ಹೋಗುವಾಗ ನನ್ನ ಮನಸ್ಸಿಗೆ ಹೇಳಿಕೊಳ್ಳುತ್ತಿದ್ದೆ, ಇಂದಿನಿಂದ ನನ್ನ ದೇಹ ಹೆಚ್ಚುವರಿ ತೂಕ ಕಳೆದುಕೊಳ್ತಿದೆ, ನನ್ನ ದೇಹ ಹಗುರವಾಗ್ತಿದೆ ಎಂದು. ನಂತರ ಸ್ನಾನ ಮುಗಿಸಿ ಎಣ್ಣೆ ಹಾಕದ 2 ಚಪಾತಿ ಜೊತೆಗೆ, ಬೇಯಿಸಿದ ಸೋಯಾಬೀನ್ ಕಾಳು ಒಂದು ಬಟ್ಟಲು.

ಮಧ್ಯಾಹ್ನ ಸಂಪೂರ್ಣವಾದ ಊಟದ (ತುಪ್ಪದ ಜೊತೆ), ಜೊತೆಗೆ ಒಂದು ಸಣ್ಣ ಬಟ್ಟಲು ಮೊಸರಿಗೆ ಸ್ವಲ್ಪ ಬೆಲ್ಲ ಸೇರಿಸಿ ತಿನ್ನುತ್ತಿದ್ದೆ. ಮೆಂತ್ಯೆ, ಓಮ ಕಾಳು, ಜೀರಿಗೆ ಕಮ್ಮಗೆ ಹುರಿದು ಪುಡಿ ಮಾಡಿಟ್ಟುಕೊಂಡು, ಒಂದು ದೊಡ್ಡ ಲೋಟ ಕಡೆದು ಬೆಣ್ಣೆ ತೆಗೆದ ಮಜ್ಜಿಗೆಗೆ ಒಂದು ಚಮಚ ಪುಡಿಯ ಜೊತೆಗೆ ಚಿಟಿಕೆ ಉಪ್ಪು, ಚಿಟಕೆ ಒಣ ಶುಂಠಿ ಪುಡಿ ಸೇರಿಸಿ, ಕುಡಿಯುತ್ತಿದ್ದೆ.

ಸಂಜೆ, ಶುಂಠಿ, ಕಾಳು ಮೆಣಸು ಹಾಗೂ ಅರಿಸಿನ ಹಾಕಿದ ಕಷಾಯಕ್ಕೆ ಸ್ವಲ್ಪವೇ ಬೆಲ್ಲ ಸೇರಿಸಿ, ಒಂದು ಸಣ್ಣ ಟೀ ಲೋಟದಷ್ಟು ಕುಡಿಯುತ್ತಿದ್ದೆ, ಹೆಚ್ಚು ಅಲ್ಲ. ನಂತರ 15 ನಿಮಿಷ ವಿಶ್ರಾಂತಿ. ವಿಶ್ರಾಂತಿಯ ನಂತರ 12 ಸೂರ್ಯ ನಮಸ್ಕಾರಗಳು (ವೇಗವಾಗಿ) ಹಾಗೂ 15 ನಿಮಿಷಗಳ ಪ್ರಾಣಾಯಾಮ. ರಾತ್ರಿ ಊಟಕ್ಕೆ 2 ಚಪಾತಿ, ಹಾಗೂ ಅರ್ಧ ಬೇಯಿಸಿದ ತರಕಾರಿಗಳು ಒಂದು ಬಟ್ಟಲು.

ಬೆಳಗ್ಗೆ ಮತ್ತು ಸಂಜೆ ಊಟಕ್ಕೆ 20 ನಿಮಿಷ ಮೊದಲು ಅರ್ಧ ಚಮಚ ಅಗಸೆ ಬೀಜದ ಪುಡಿ ತಿಂದು, ಒಂದು ಲೋಟ ಬೆಚ್ಚಗಿನ ನೀರು ಕುಡಿಯುತ್ತಿದ್ದೆ. ಒಂದು ದಿನಕ್ಕೆ ಯಾವುದಾದರೂ ಒಂದು ಹಣ್ಣು ತಿನ್ನುತ್ತಿದ್ದೆ. ನನ್ನ ತೂಕಕ್ಕೆ ಅನುಗುಣವಾಗಿ ಕನಿಷ್ಟ 5 ರಿಂದ 6 ಲೀಟರ್ ನೀರು ಕುಡೀತಿದ್ದೆ. 1 ತಿಂಗಳು ಸಕ್ಕರೆ ಮುಟ್ಟಲಿಲ್ಲ, ತೀರಾ ಅಗತ್ಯವಿದ್ದರೆ ಮಾತ್ರ ಅದೂ ಕಡಿಮೆ ಪ್ರಮಾಣದಲ್ಲಿ ಬೆಲ್ಲ, ಇಲ್ಲವೇ ಕರ್ಜೂರದ ಸಿರಪ್

30 ದಿನಗಳಲ್ಲಿ ಒಂದು ದಿನವೂ ಮೇಲೆ ತಿಳಿಸಿದ ಆಹಾರ ಹಾಗೂ ದೈಹಿಕ ಶಿಸ್ತು ಮೀರಲಿಲ್ಲ. ನನ್ನ ತೂಕ ಇಳಿಕೆ ಕಂಡು ಬಂಧುಮಿತ್ರರು ಬೆಕ್ಕಸ ಬೆರಗಾದರು. ನಾನು ಯಾವುದೇ ಜಿಮ್ ಸೇರದೆ ಇಷ್ಟು ತೂಕ ಇಳಿಸಲು ಹೇಗೆ ಸಾಧ್ಯವಾಯ್ತು ಅನ್ನೋದು ಅವರಿಗೆ ಅಚ್ಚರಿ ಮೂಡಿಸಿತ್ತು. ನಾನು ಮಾಡಿಯೇ ತೀರುತ್ತೇನೆ ಎಂಬ ಮಾನಸಿಕ ಬದ್ಧತೆ, ಹಾಗೂ ಎಡಬಿಡದ ಪರಿಶ್ರಮದಿಂದ ಇದು ಸಾಧ್ಯವಾಗಿರಬಹುದು. ಮೊದಲ ವಾರದಲ್ಲಿ ಏನೂ ಬದಲಾವಣೆ ಕಾಣಿಸಲ್ಲ, ಆದರೂ ಎದೆಗುಂದದೆ ಪ್ರಯತ್ನ ಮಾಡುತ್ತಲೇ ಹೋಗಬೇಕು.

ಕೊನೆಯದಾಗಿ ಆರೋಗ್ಯವು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ, ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳ ಬೇಕಾದರೆ ಸ್ವಲ್ಪ ಪರಿಶ್ರಮ ಪಡಲೇಬೇಕು, ಮಾತ್ರೆ ನುಂಗಿಯೋ, ಯಾವುದೋ ಪುಡಿಯನ್ನು ತಿಂದೋ ಸಣ್ಣ ಆಗುವುದು ಕೇವಲ ತಾತ್ಕಾಲಿಕ ನೀವು ಔಷಧಿ ನಿಲ್ಲಿಸಿದರೆ ಮತ್ತೆ ತೂಕ ಏರುತ್ತದೆ, ಹಾಗೂ ಅಡ್ಡ ಪರಿಣಾಮಗಳೇನು ಅಷ್ಟಿಷ್ಟಲ್ಲ. ಒಳ್ಳೇದಾಗ್ಲಿ. ಧನ್ಯವಾದಗಳೊಂದಿಗೆ, ಸರ್ವೇ ಜನಾಃ ಸುಖಿನೋ ಭವಂತು ಲೋಕಾ ಸಮಸ್ತ ಸುಖಿನೋ ಭವಂತು. ಶ್ರೀ ಕೃಷ್ಣಾರ್ಪಣಮಸ್ತು.

LEAVE A REPLY

Please enter your comment!
Please enter your name here