ಯುಗಾದಿ ಹಬ್ಬದ ಮಹತ್ವ ತಿಳಿದು ಹಬ್ಬವನ್ನು ಸಂತಸದಿಂದ ಆಚರಿಸೋಣ. ಇದರ ಮಹತ್ವವನ್ನು ತಿಳಿದ ಎಲ್ಲರ ಬಾಳು ಹಸಿರಾಗುತ್ತದೆ.

0
3242

ಪುರಾಣಗಳ ಪ್ರಕಾರ ಸೃಷ್ಟಿಕಾರ್ಯವನ್ನು ನಡೆಸುವವರು ತ್ರಿಮೂರ್ತಿಗಳಲ್ಲಿ ಓರ್ವರಾದ ಬ್ರಹ್ಮದೇವರು. ಪ್ರಳಯದಿಂದಾಗಿ ಲಯವಾಗಿ ಹೋದ ಹಿಂದಿನ ಕಲ್ಪದ ಪ್ರಪಂಚವನ್ನು ಬ್ರಹ್ಮದೇವರು ಪುನಹ ಸೃಷ್ಟಿಸಲು ಆರಂಭಿಸಿದ ದಿನವನ್ನೇ ನಾವು “ಯುಗಾದಿ” ಎಂಬುದಾಗಿ ಆಚರಿಸುತ್ತಾ ಇದ್ದೇವೆ. ಅಂದರೆ, ಹೊಸ ಕಲ್ಪದ ಮೊದಲನೇ ಯುಗವಾದ ಕೃತ ಯುಗದ ಆರಂಭದ ದಿನವಿದು.

ಹೀಗಾಗಿ ಈ ದಿನವನ್ನು ಯುಗಾದಿ ಎನ್ನುತ್ತಾರೆ. ಈ ಯುಗಾದಿಯ ದಿನದಿಂದಲೇ ಕಾಲಗಣನೆಯು ಆರಂಭವಾಗುತ್ತದೆ. ಹಿಂದೂಗಳಲ್ಲಿ ಕಾಲಗಣನೆಯ ಎರಡು ಪದ್ಧತಿಗಳು ಚಾಲ್ತಿಯಲ್ಲಿದೆ. ಒಂದು ಚಾಂದ್ರಮಾನ ಪದ್ಧತಿ ಮತ್ತು ಇನ್ನೊಂದು ಸೌರಮಾನ ಪದ್ಧತಿ.

ಭೂಮಿಯ ಸುತ್ತ ಸುತ್ತುತ್ತಿರುವ ಚಂದ್ರನ ಗತಿಯನ್ನು ಆಧರಿಸಿ ಚಾಂದ್ರಮಾನ ಪದ್ಧತಿಯು ರಚಿತವಾಗಿದೆ. ಈ ಚಾಂದ್ರಮಾನ ಪದ್ಧತಿಯ ಪ್ರಕಾರ ಒಂದು ವರ್ಷಕ್ಕೆ ಚೈತ್ರಮಾಸ, ವೈಶಾಖಮಾಸ, ಜ್ಯೇಷ್ಠಮಾಸ, ಆಷಾಡಮಾಸ, ಶ್ರಾವಣಮಾಸ, ಭಾದ್ರಪದಮಾಸ, ಆಶ್ವಯುಜಮಾಸ, ಕಾರ್ತಿಕಮಾಸ, ಮಾರ್ಗಶೀರ್ಷಮಾಸ, ಪೌಷಮಾಸ, ಮಾಘಮಾಸ ಮತ್ತು ಪಾಲ್ಗುಣಮಾಸಗಳೆಂಬ 12 ತಿಂಗಳು(ಮಾಸ)ಗಳು ಇರುತ್ತವೆ.

ಪ್ರತಿಯೊಂದು ಮಾಸವೂ ಕೂಡಾ ಒಂದು ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಯವರೆಗೆ ಇರುತ್ತದೆ. ಅಂತಹ ಪ್ರತಿ ಮಾಸದಲ್ಲಿಯೂ ಸರಿ ಸುಮಾರು 15 ದಿನಗಳ ಎರಡು ಪಕ್ಷಗಳು ಇರುತ್ತವೆ. ಹುಣ್ಣಿಮೆಯ ಹಿಂದಿನ ಪಕ್ಷಕ್ಕೆ ಶುಕ್ಲಪಕ್ಷ ಎಂತಲೂ , ಅಮಾವಾಸ್ಯೆಯ ಹಿಂದಿನ ಪಕ್ಷಕ್ಕೆ ಕೃಷ್ಣಪಕ್ಷ ಎಂತಲೂ ಕರೆಯುತ್ತಾರೆ. ಪ್ರತಿಯೊಂದು ಪಕ್ಷದ ಆ 15 ದಿನಗಳನ್ನು ತಿಥಿಗಳು ಎನ್ನುತ್ತಾರೆ. ಪಾಡ್ಯ , ಬಿದಿಗೆ , ತದಿಗೆ , ಚೌತಿ , ಪಂಚಮಿ , ಷಷ್ಠೀ , ಸಪ್ತಮಿ , ಅಷ್ಟಮಿ , ನವಮಿ , ದಶಮಿ , ಏಕಾದಶೀ , ದ್ವಾದಶೀ , ತ್ರಯೋದಶೀ , ಚತುರ್ದಶೀ ಮತ್ತು ಹುಣ್ಣಿಮೆ ಅಥವಾ ಅಮಾವಾಸ್ಯೆ ಎಂಬುದಾಗಿ ಆ ತಿಥಿಗಳನ್ನು ಕರೆಯುತ್ತಾರೆ.

ಹೀಗೆ ಚಾಂದ್ರಮಾನ ವರ್ಷ(ಸಂವತ್ಸರ)ದ ಮೊದಲ ದಿನವೆಂದರೆ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನವಾಗಿರುತ್ತದೆ. ಆದ್ದರಿಂದ ಚಾಂದ್ರಮಾನ ಪದ್ಧತಿಯನ್ನು ಅನುಸರಿಸುವವರ ಪ್ರಕಾರ ಈ ದಿನವೇ ಯುಗಾದಿಯ ದಿನವಾಗಿರುತ್ತದೆ. ಇದನ್ನು ಎಲ್ಲರೂ ಚಾಂದ್ರಮಾನ ಯುಗಾದಿ ಎಂದೇ ಕರೆಯುತ್ತಾರೆ.

ಭೂಮಿಯ ಸುತ್ತ ಸೂರ್ಯನು ಸುತ್ತುತ್ತಿದ್ದಾನೆ ಎಂದೇ ಭಾವಿಸಿಕೊಂಡು ಆ ಸೂರ್ಯನ ಗತಿಯನ್ನು ಆಧರಿಸಿ ಸೌರಮಾನ ಪದ್ಧತಿಯು ರಚಿತವಾಗಿದೆ. ಭೂಮಿಯ ಸುತ್ತ ಅಂತರಿಕ್ಷದಲ್ಲಿ ಇರುವ ಸೂರ್ಯನ ಕಾಲ್ಪನಿಕ ಪಥವನ್ನು ಒಟ್ಟು ಹನ್ನೆರಡು ಭಾಗಗಳಾಗಿ ವಿಭಾಗಿಸಲಾಗಿದೆ. ಅವುಗಳಿಗೆ ರಾಶಿಗಳು ಎನ್ನುತ್ತಾರೆ. ಮೇಷ , ವೃಷಭ , ಮಿಥುನ , ಕರ್ಕಾಟಕ , ಸಿಂಹ , ಕನ್ಯಾ , ತುಲಾ , ವೃಶ್ಚಿಕ , ಧನುಃ , ಮಕರ , ಕುಂಭ ಮತ್ತು ಮೀನ ಹೀಗೆ ಹನ್ನೆರಡು ರಾಶಿಗಳು.

ಪ್ರತಿಯೊಂದು ರಾಶಿಯಲ್ಲಿಯೂ ಸೂರ್ಯನು ಒಂದೊಂದು ತಿಂಗಳು ಇರುತ್ತಾನೆ. ಸೂರ್ಯನು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಾಂತಿ ಎನ್ನುತ್ತಾರೆ. ಪ್ರತಿಯೊಂದು ಸಂಕ್ರಾಂತಿಯನ್ನೂ ಅದರ ಮುಂದಿನ ರಾಶಿಯ ಹೆಸರಿನಿಂದ ಕರೆಯುತ್ತಾರೆ. ಒಂದು ಸಂಕ್ರಾಂತಿಯಿಂದ ಇನ್ನೊಂದು ಸಂಕ್ರಾಂತಿಯವರೆಗಿನ ಆ ಒಂದು ತಿಂಗಳನ್ನು ಆ ರಾಶಿಯ ಹೆಸರಿನಿಂದಲೇ ಕರೆಯಲಾಗುತ್ತದೆ.

ಹೀಗೆ ಒಂದು ಸೌರಮಾನ ವರ್ಷಕ್ಕೆ ಮೇಷ(ಹಗ್ಗು) , ವೃಷಭ(ಬೇಸಗೆ) , ಮಿಥುನ(ಕಾರ್) , ಕರ್ಕಾಟಕ(ಆಸಾಡಿ) , ಸಿಂಹ(ಸೋಣೆ) , ಕನ್ಯಾ(ಕನ್ನೆ) , ತುಲಾ(ದಿವಾಳಿ) , ವೃಶ್ಚಿಕ(ಕೊಡಿ) , ಧನು(ಹಂಚೇಸಿ) , ಮಕರ(ಬಾರಾತ್) , ಕುಂಭ(ಶಿವರಾತ್ರಿ) ಮತ್ತು ಮೀನ(ಸುಗ್ಗಿ) ಮಾಸಗಳೆಂಬ ಹನ್ನೆರಡು ತಿಂಗಳುಗಳು.

ಹೀಗಾಗಿ ಸೌರಮಾನ ವರ್ಷ(ಸಂವತ್ಸರ)ದ ಮೊದಲ ದಿನವೆಂದರೆ ಮೇಷ(ಹಗ್ಗು)ಮಾಸದ ಮೊದಲ ದಿನವಾಗುತ್ತದೆ. ಆದ್ದರಿಂದ ಸೌರಮಾನ ಪದ್ಧತಿಯನ್ನು ಅನುಸರಿಸುವವರ ಪ್ರಕಾರ ಮೇಷ ಸಂಕ್ರಾಂತಿಯ ಮರುದಿನವು ಯುಗಾದಿಯ ದಿನವಾಗಿರುತ್ತದೆ. ಇದನ್ನು ಎಲ್ಲರೂ ಸೌರಮಾನ ಯುಗಾದಿ ಎಂದೇ ಕರೆಯುತ್ತಾರೆ.

ಭಾರತದಲ್ಲಿ ಕೆಲವರು ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ ಇನ್ನು ಕೆಲವರು ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಈ ಯುಗಾದಿ ಎಂಬುದು ಹಿಂದೂಗಳ ಹೊಸ ವರ್ಷಾಚರಣೆಯಾಗಿದೆ. ಈ ಯುಗಾದಿ ಹಬ್ಬಕ್ಕೆ ಬೇರೆ ಬೇರೆ ಹೆಸರುಗಳೂ ಇವೆ. ಕೆಲವರು ಬೈಸಾಕಿ ಹಬ್ಬ ಎನ್ನುತ್ತಾರೆ.

ಇನ್ನು ಕೆಲವರು ಗುಡಿಪಾಡ್ ಹಬ್ಬ ಎನ್ನುತ್ತಾರೆ. ಹಾಗೇ ಆಚರಣೆಯ ವಿಧಾನಗಳಲ್ಲೂ ವ್ಯತ್ಯಾಸಗಳಿವೆ. ಸಾಮಾನ್ಯವಾಗಿ ನಮ್ಮಲ್ಲಿ ಮನೆಯ ಮುಂದೆ ತಳಿರು ತೋರಣಗಳನ್ನು ಕಟ್ಟುತ್ತಾರೆ. ಅಂಗಣದಲ್ಲಿ ಅಂದವಾದ ರಂಗೋಲಿಗಳನ್ನು ಹಾಕುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಊರಿನ ದೇವಸ್ಥಾನಗಳಲ್ಲಿ ಅಥವಾ ಊರ ಪ್ರಮುಖರ ಮನೆಗಳಲ್ಲಿ ಪುರೋಹಿತರನ್ನು ಕರೆಸಿ ಪಂಚಾಂಗ ಶ್ರವಣ ಕಾರ್ಯಕ್ರಮ ಏರ್ಪಡಿಸುತ್ತಾರೆ.

ರಾವಣಾದಿಗಳನ್ನು ಸಂಹರಿಸಿ ವನವಾಸದಿಂದ ಮರಳಿ ಬಂದ ನಂತರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನಿಗೆ ನಿಜ ಪಟ್ಟಾಭಿಷೇಕವಾದದ್ದು ಇದೇ ದಿನ ಎಂಬುದಾಗಿ ನಂಬಲಾಗಿದೆ. ದಕ್ಷಿಣ ಭಾರತವನ್ನು ಆಳಿದ್ದ ಪ್ರಸಿದ್ಧ ಅರಸ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದೇ ಸಿಂಹಾಸನಾರೂಢನಾದನೆಂದೂ, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗುತ್ತದೆ.

ಈಗಲೂ ಕೂಡಾ ಹಿಂದೂಗಳು ಶಾಲಿವಾಹನ ಶಕೆಯ ಸಂವತ್ಸರಗಳನ್ನೇ ಆಧರಿಸಿ ಆಯಾ ಸಂವತ್ಸರವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಆರಂಭಿಸುವರು ಮತ್ತು ತಮ್ಮ ಪಂಚಾಂಗ(ಕ್ಯಾಲೆಂಡರ್)ಗಳನ್ನು ರಚಿಸುವರು.

ಚಾಂದ್ರಮಾನವೇ ಇರಲಿ ಅಥವಾ ಸೌರಮಾನವೇ ಇರಲಿ ಯುಗಾದಿಯು ವಸಂತ ಋತುವಿನ ಆಗಮನ ಕಾಲದಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ. ವಸಂತ ಕಾಲವೆಂದರೆ ಹೊಸ ಚಿಗುರುಗಳು ಮೊಳೆಯುವ ಕಾಲ, ಹೊಸ ಮೊಗ್ಗುಗಳು ಮೂಡುವ ಕಾಲ, ಸಸ್ಯಗಳು ಫಲ ಬಿಡುವ ಕಾಲವಾಗಿದೆ. ಆದ್ದರಿಂದ ಈ ಹಬ್ಬವು ಹೊಸ ಯುಗದ ಹುಟ್ಟನ್ನು ಸೂಚಿಸುತ್ತದೆ. ಹೀಗಾಗಿ ಈ ಯುಗಾದಿ ಹಬ್ಬವು ಸಮೃದ್ಧಿಯ ದ್ಯೋತಕವಾಗಿದೆ.

LEAVE A REPLY

Please enter your comment!
Please enter your name here