ಜಾಸ್ತಿ ಮಾರ್ಕ್ಸ್ ತಗೋಬೇಕು ಅಂತ ಒಂದೇ ಸಮನೆ ಆ ಮಗು ಹಿಂದೆ ಬಿದ್ದಿದ್ರಲ್ಲಾ, ನೋಡಿ ಈಗ ಸರದಿಲಿರೋ ಎಲ್ಲರನ್ನೂ ಹಿಂದಕ್ಕೆ ತಳ್ಳಿ ತಾನು ಮುಂದೆ ಹೋಗಿ ಶಿವನ ಪಾದ ಸೇರಿಕೊಂಡ. ಅಲ್ಲಾ, ನಾನು ಬಾಳ್ವೆ ಮಾಡಿಲ್ವಾ? ನಿಮ್ಮಪ್ಪ ಬಾಳ್ವೆ ಮಾಡಿಲ್ವಾ? ನಮಗೇನು ಕಮ್ಮಿ ಆಗಿತ್ತಪ್ಪ ನುಂಗಿ ನೀರಾಡಿ ಬಿಟ್ಟರಲ್ಲ ನನ್ನ ಮೊಮ್ಮಗನ್ನ “ಎಂದು ಸಿಟ್ಟಿನಲ್ಲಿ ಗೋಳಿಡುತ್ತ ಸರಸಜ್ಜಿ ಅತ್ತಳು.
ಅದಕ್ಕೆ ಶಿವೇಗೌಡ, “ಮೊದಲೇ ನಾಗೇಶ ಮತ್ತು ಸುಧಾ ನೊಂದಿದ್ದಾರೆ ಈಗ ನೀನು ಇನ್ನೊಂದಿಷ್ಟು ಉಪ್ಪು ಸುರೀಬೇಡ ನೀನೂ ಸಮಾಧಾನ ಮಾಡ್ಕೋ ಸ್ವಲ್ಪ ಕಾಲ ಸುಮ್ಮನಿರು” ಅಂತ ಕಣ್ಣೀರಿಟ್ಟರು. ಮಗ ನಾಗೇಶ ಮತ್ತು ಸೊಸೆ ಸುಧಾಳ ಆಕ್ರಂದನ ಮುಗಿಲು ಮುಟ್ಟಿತ್ತು. ಮಗ ಸುಧೀರನ ಅಂತ್ಯಕ್ರಿಯೆ ಮತ್ತು ಕರ್ಮಗಳನ್ನೆಲ್ಲ ಮುಗಿಸಿ ಮನೆಗೆ ಬಂದಿದ್ದರು. ಸುಧಾ ದೇವರ ಕೋಣೆಯ ಬಾಗಿಲಿನಲ್ಲಿ ಹತಾಶಳಾಗಿ ಬಿದ್ದಳು. 12 ವರ್ಷದ ಕಿರಿಮಗಳು ದಿಶಾ ಓಡಿಬಂದು ಅಮ್ಮನ ಬಿಗಿಯಾಗಿ ತಬ್ಬಿಕೊಂಡಳು.
ಕೆಲವು ದಿನಗಳ ಹಿಂದೆ ಮಗನ ಮಗ ಸುಧೀರ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತೆಂದು, ತನ್ನ ದುಃಖ ಯಾರಲ್ಲೂ ಹೇಳಿಕೊಳ್ಳಲಾಗದೆ ಮತ್ತು ಎಲ್ಲರ ನಿರೀಕ್ಷೆಗೆ ನಿಲ್ಲಲ್ಲಿಲ್ಲವಲ್ಲ ಎಂದು ಬೇಜಾರು ಮಾಡಿಕೊಂಡು, ಸೋತ ಭಾವ ತೀವೃವಾದಾಗ ತನ್ನ ರೂಮಿನ ಫ್ಯಾನ್ಗೆ ನೇ’ಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದ. ಅನಾರೋಗ್ಯದ ಕಾರಣ ಅಜ್ಜಿ ಸರಸಮ್ಮನಿಗೆ ವಿಷಯ ತಡವಾಗಿ ತಿಳಿಸಿದ್ದರು. ವಿಷಯ ತಿಳಿದ ಕೂಡಲೇ ಸರಸಜ್ಜಿ ಮತ್ತು ಶಿವಜ್ಜ ತಕ್ಷಣ ಕಾರಿನಲ್ಲಿ ದೂರದ ಹಳ್ಳಿಯಿಂದ ಧಾವಿಸಿದ್ದರು.
ಮಗ ನಾಗೇಶ ಇಂಜಿನಿಯರ್ ಪದವಿ ನಂತರ ಎಂಬಿಎ ಮುಗಿಸಿ ಒಂದು ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ. ಅತ್ಯಂತ ಜಾಣ ಹಾಗೂ ವಾಕ್ ಚತುರ. ಸೊಸೆ ಸುಧಾ ಇಂಗ್ಲಿಷಿನಲ್ಲಿ ಎಂ ಎ ಮಾಡಿ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದಳು. ತನ್ನ ಜೊತೆಗಾರರ ಮಕ್ಕಳೆಲ್ಲಾ ಉನ್ನತ ವ್ಯಾಸಂಗಕ್ಕೆ ಸೇರುತ್ತಿದ್ದುದ್ದರ ಹಿನ್ನಲೆಯಲ್ಲಿ ನಾಗೇಶ ಪದೇ ಪದೇ ಸುಧೀರನಿಗೆ ವಿದ್ಯಾಭ್ಯಾಸ, ಶಿಸ್ತು, ಪರಿಶ್ರಮದ ಬಗ್ಗೆ ಪಾಠ ಹೇಳುತ್ತಲೇ ಇದ್ದ.
ಕೊನೆಕೊನೆಗೆ ಸುಧೀರನಿಗೆ ರೋಸಿಹೋಗಿತ್ತು. ಕೇವಲ 15 ನಿಮಿಷದಲ್ಲಿ ಊಟ ಮುಗಿಸಬೇಕಿತ್ತು, ಸ್ನೇಹಿತರನ್ನು ಭೇಟಿ ಮಾಡುವಂತಿರಲಿಲ್ಲ, ಮೊಬೈಲ್ ಉಪಯೋಗಿಸುವಂತಿಲ್ಲ, ಟಿವಿ ನೋಡುವಂತಿಲ್ಲ, ಅಮ್ಮ ತಂಗಿಯರ ಜೊತೆ ಹರಟೆ ಹೊಡೆಯುವಂತಿಲ್ಲ. ಹೀಗೆ ಶಿಸ್ತಿನ ಹೆಸರಲ್ಲಿ ಮನಸ್ಸಿಗೆ ಮುದ ನೀಡುವ, ಮಾನಸಿಕ ಒ’ತ್ತಡವನ್ನು ಕಮ್ಮಿ ಮಾಡುವ ಎಲ್ಲಾ ಕೆಲಸಗಳಿಗೂ ನಿರ್ಭಂದ ಹೇರಲಾಗಿತ್ತು. ಸುಧೀರ್ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಮಂಕಾಗತೊಡಗಿದ್ದ.
ರಾತ್ರಿ ಅಪ್ಪ ಮನೆಗೆ ಬಂದ ಮೇಲೆ “ಅಪ್ಪ ಅಕಸ್ಮಾತ್ ನನಗೆ ಐಐಟಿಯಲ್ಲಿ ಸೀಟು ಸಿಕ್ಕಲಿಲ್ಲ ಅಂದರೆ?” ಅಂದಾಗ ನಾಗೇಶ ಯಾವತ್ತೂ ಅದನ್ನು ಒಪ್ಪಿಕೊಳ್ಳುತ್ತಲೇ ಇರಲಿಲ್ಲ “ಯಾಕೆ ಹಂಗ್ ಅಂತೀಯ? ಸಿಕ್ಕೇ ಸಿಗಬೇಕು ಅನ್ನೋ ರೀತಿಯಲ್ಲಿ ನಿನ್ನ ತಯಾರಿ ಇರಬೇಕು. ಸರಿ ಈಗ ಈ ಯೋಚನೆಯಲ್ಲೇ ಸಮಯ ವ್ಯರ್ಥ ಮಾಡಬೇಡ ಓದ್ಕೋ ಹೋಗು” ಅಂತ ಹೇಳುತ್ತಿದ್ದನೋ ಹೊರತು “ಹೌದು ನೀನು ಪಾಸ್ ಆಗದೆ ಇರಬಹುದು ಆಗ ಇನ್ಯಾವುದಾದರೂ ಕೋರ್ಸ್ ಗೆ ಸೇರಿಕೊಂಡರಾಯಿತು ಅಥವಾ ನಿನಗೆ ಇಚ್ಛೆಯಿದ್ದಲ್ಲಿ ಮುಂದಿನ ವರ್ಷ ಮತ್ತೊಮ್ಮೆ ಪ್ರಯತ್ನಿಸಿದರಾಯಿತು” ಅಂತ ಹೇಳುತ್ತಲೇ ಇರಲಿಲ್ಲ.
ಯಾವಾಗ ನೋಡಿದರೂ ನಾ ಹಾಗೆ ಮಾಡಿದೆ ನೀ ಹೀಗೆ ಮಾಡಬೇಕು ಐ ಯಾಮ್ ದ ಫಸ್ಟ್ ಟು. ಅಂತಲೇ ವಾಕ್ಯಗಳು ಶುರುವಾಗುತ್ತಿದ್ದವು. ಶಿವಜ್ಜನ 70ನೇ ವರ್ಷದ ಶಾಂತಿಗೂ ಮಗನನ್ನು ಹಳ್ಳಿಗೆ ಕರೆದುಕೊಂಡು ಹೋಗಿರಲಿಲ್ಲ. ಸರಸಜ್ಜಿ ದೇವರ ಕೋಣೆಗೆ ಹೋಗಿ ಒಬ್ಬಳೇ ಕಣ್ಣೀರಿಟ್ಟಿದ್ದಳು. ಸಂಕ್ರಾಂತಿಗೆ ಅವರೇ ಬೆಂಗಳೂರಿಗೆ ಬಂದಾಗ ಮೊಮ್ಮಗನ ಕಟ್ಟುಪಾಡು ನೋಡಿ ಮರುಕ ಪಟ್ಟಿದ್ದರು. ಶಿವಜ್ಜ ಸಮಾಧಾನ ಮಾಡಿದ್ದರು “ಈಗೆಲ್ಲಾ ಹೀಗೇನೇ ಕಣೆ, ವಿದ್ಯಾಭ್ಯಾಸ, ಒಳ್ಳೆಯ ಕೆಲಸ ಅಂದರೆ ತುಂಬಾ ಪೈಪೋಟಿ ಸರಸು.
ಪಾಪ ಮಕ್ಕಳು ಹೆಣಗಾಡುತ್ವೆ” ಕೆಲವು ದಿನ ಬೆಂಗಳೂರಿನಲ್ಲಿ ಉಳಿಯುವುದಾಗಿ ಸರಸಜ್ಜಿ ನಿರ್ಧರಿಸಿದಾಗ ಶಿವಜ್ಜನು ಉಳಿಯಬೇಕಾಯಿತು. ಐದಾರು ವಾರಗಳು ಕಳೆಯುತ್ತಿದ್ದಂತೆ ಎಲ್ಲರೂ ಮುಂಚಿನ ಸ್ಥಿತಿಗೆ ಬಂದಿದ್ದರು. ದಿಶಾ ಯಾವಾಗಲೂ ಅಜ್ಜ-ಅಜ್ಜಿ ಜೊತೇನೆ ಮಲಗುತ್ತಿದ್ದಳು. ಅಂದು ರಾತ್ರಿ ನಾಗೇಶ ವರಾಂಡದಲ್ಲಿ ಲ್ಯಾಪ್ಟಾಪ್ನಲ್ಲಿ ಏನೋ ಆಫೀಸಿನ ಕೆಲಸ ಮಾಡುತ್ತಿದ್ದ. ದೀಕ್ಷಾ ರೂಮಿನೊಳಗೆ ಅಜ್ಜಿಯ ಜೊತೆ ಮಾತನಾಡುತ್ತಿದ್ದುದು ಸಣ್ಣಗೆ ಕೇಳಿಸುತ್ತಿತ್ತು.
ನಾಗೇಶ ಮಾತ್ರ ಕೆಲಸದಲ್ಲಿ ತಲ್ಲೀನನಾಗಿದ್ದ. ಪ್ರಶ್ನೆ ಅಜ್ಜನ ಕುರಿತೇ ಇತ್ತು. “ಅಜ್ಜ ನಿಮ್ಮ ಕಾಲದಲ್ಲೂ ಡಾಕ್ಟರ್ ಇದ್ರಾ ಹೂಂ ಎಂದ ಕೂಡಲೇ ಮತ್ತೆ ನೀನ್ಯಾಕೆ ಡಾಕ್ಟರ್ ಆಗಲಿಲ್ಲ? ನಿಮಗೂ ಮಾರ್ಕ್ಸ್ ಬಂದಿರಲಿಲ್ಲ ಅಲ್ವಾ?” ಅಂದಳು ಅದಕ್ಕೆ ಶಿವಜ್ಜ “ನನಗೆ ಡಾಕ್ಟರ್ ಆಗಬೇಕು ಅಂತ ಅನ್ನಿಸಲೇ ಇಲ್ಲ. ಐದಾರು ಎಕರೆ ಜಮೀನಿತ್ತು. ಭೂತಾಯಿ ಜೊತೆ ಬದುಕುವುದು ಇಷ್ಟವಾಗಿತ್ತು ಆದರೆ ಕಷ್ಟವೂ ಇತ್ತು.
ಎಲ್ಲಾ ಹೊತ್ ಹೊತ್ತಿಗೆ ಮಾಡಬೇಕು ನೋಡು ಪುಟ್ಟಿ. ಅದಕ್ಕೇ ನಾನು ಹಳ್ಳಿಯಲ್ಲಿಯೇ ಉಳಿದೆ”. ಅದಕ್ಕೆ ದಿಶಾ ಮತ್ತೆ ಶುರು ಮಾಡಿದಳು “ಮತ್ತೆ ನಿಮ್ಮಪ್ಪ ಬೈಯಲಿಲ್ವಾ? ನಿನ್ನ ಫ್ರೆಂಡ್ಸ್ ನಿನ್ನನ್ನು ಹಳ್ಳಿ ಗಮಾರ ಅನ್ನಲಿಲ್ವಾ? ಎಂದು ಮರು ಪ್ರಶ್ನೆ ಹಾಕಿದಳು. ಅದಕ್ಕೆ ಶಿವಜ್ಜ ಕೊಟ್ಟ ಉತ್ತರ ಈಗಲೂ ಕೆಲವೊಮ್ಮೆ ಪ್ರಸ್ತುತವೆನಿಸುತ್ತದೆ.
“ಬೇರೆಯವರಿಗೋಸ್ಕರ ನಮ್ಮ ಬದುಕನ್ನು ಬದಲಾಯಿಸಿಕೊಳ್ಳಕ್ಕಾಗುತ್ತಾ? ನಾನು ಎಷ್ಟೇ ಓದಿದ್ದರೂ ಕೊನೆಗೂ ವ್ಯವಸಾಯವನ್ನೇ ಮಾಡುವುದು ಅಂತ ನಿರ್ಧರಿಸಿದ್ದೆ. ಓದಿಗೆ ಅಂತ ಪಟ್ಟಣಕ್ಕೆ ಬಂದಿದ್ದರೆ ನನ್ನ ನೆಲ ಅನಾಥವಾಗಿ ಬಿಡುತ್ತಿತ್ತು ಅದಕ್ಕೆ ನಾ ಬಿಡಲಿಲ್ಲ. 10ನೇ ತರಗತಿಯ ವರೆಗೆ ಓದಿದ್ದು ನನಗೆ ತುಂಬಾ ಸಹಾಯವಾಯಿತು ಸರ್ಕಾರದ ಹೊಸ ಯೋಜನೆಗಳು ಮಾಹಿತಿಗಳನ್ನು ಪಡೆಯುತ್ತಿದ್ದೆ. ಕೃಷಿಯ ಆಧುನಿಕ ಉಪಕರಣಗಳನ್ನು ಖರೀದಿಸುತ್ತಿದೆ, ಕೃಷಿ ಇಲಾಖೆಯ ಸಿಬ್ಬಂದಿಗಳ ಜೊತೆ ಸಂಪರ್ಕದಲ್ಲಿದ್ದೆ.
ಎಲ್ಲಕ್ಕಿಂತ ಹೆಚ್ಚಾಗಿ ಹೊಲದಲ್ಲಿ ರಟ್ಟೆ ಮುರಿದು ದುಡಿದೆ. ಮನೆ ಮತ್ತು ಮಕ್ಕಳನ್ನು ನಿಮ್ಮ ಅಜ್ಜಿ ನೋಡಿಕೊಳ್ಳುತ್ತಿದ್ದಳು. ಆಳು ಕಾಳುಗಳ ನಿರ್ವಹಣೆ ಸಹ ಅವಳೇ ಮಾಡುತ್ತಿದ್ದಳು. ನಿಮ್ಮಪ್ಪ ಜಾಣ, ಓದಿನಲ್ಲಿ ಯಾವಾಗಲೂ ಮುಂದು. ಅವನೇ ಇಷ್ಟಪಟ್ಟು ಓದುತ್ತಿದ್ದ ನನ್ನದು ಕೇವಲ ದುಡ್ಡಿನ ಸಹಕಾರ ಹಾಗೂ ಬೆನ್ನ ಮೇಲಿನ ಕೈ ಜವಾಬ್ದಾರಿ. ಈಗ ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ ನೋಡು.
ನಿಮ್ಮ ಚಿಕ್ಕಪ್ಪ ಸುರೇಶ ಬಿ.ಎ ಮುಗಿಸಿ ಜಮೀನನ್ನು ನೋಡಿಕೊಳ್ಳುತ್ತಿದ್ದಾನೆ. ಅವನಿಗೆ ನನ್ನ ಥರ ವ್ಯವಸಾಯ ಮಾಡುವಾಸೆ ನಾನು “ಹ್ಞುಂ ಕಣಪ್ಪ ಹಾಗೆ ಮಾಡು” ಎಂದು ಹೇಳಿದೆ. ನನಗಿಂತ ಚೆನ್ನಾಗಿ ಕೆಲಸ ಮಾಡುತ್ತಿದ್ದಾನೆ. ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿದ್ದಾನೆ ಹಳ್ಳಿಯ ಎಲ್ಲಾ ರೈತರಿಗೂ ಅನುಕೂಲ ಮಾಡಿಕೊಟ್ಟಿದ್ದಾನೆ. ಹೈಸ್ಕೂಲ್ವರೆಗೂ ಅಷ್ಟೇ ಇದ್ದ ಹಳ್ಳಿಗೆ ಕಾಲೇಜ್ ಸಹ ಬರುವ ಹಾಗೆ ಮಾಡಿದ್ದಾನೆ. ನನ್ನನ್ನು ನೋಡಿದರೆ, ಅಧ್ಯಕ್ಷರ ಅಪ್ಪನವರು ಎಂದು ಗೌರವದಿಂದ ಕಾಣುತ್ತಾರೆ”.
ದೊಡ್ಡ ಕಣ್ಣು ಬಿಟ್ಟು ಕೇಳುತ್ತಿದ್ದ ದಿಶಾ “ಅಜ್ಜ, ಬೆನ್ನ ಮೇಲಿನ ಕೈ ಎಂದರೇನು?” ಅಂತ ಮತ್ತೆ ಪ್ರಶ್ನೆ ಹಾಕಿದಳು. ಅದಕ್ಕವರು, “ಓಹ್ ಅದಾ, ಮನುಷ್ಯ ಅಂದಮೇಲೆ ಜೀವನದಲ್ಲಿ ಒಮ್ಮೊಮ್ಮೆ ಮೇಲೆ ಕೆಳಗೆ ಆಗ್ತಿರುತ್ತೆ. ಕಷ್ಟಗಳು ಜೀವನದಲ್ಲಿ ಸದಾ ಇರುತ್ತದೆ, ಸುಖ ಯಾವಾಗ್ಲೋ ಒಮ್ಮೊಮ್ಮೆ ಹಾಗೆಂದು ದಾರಿಯಿಂದ ಸರಿಯಬಾರದು. ಅದೇನದು ನೋಡೇಬಿಡೋಣ ಅಂತ ದೇವರ ಹೆಸರು ಹೇಳಿ ಮುನ್ನುಗ್ಗುತ್ತಿರಬೇಕು. ಕಷ್ಟದ ಸಮಯದಲ್ಲಿ ನಮ್ಮವರು ತಮ್ಮವರ ಮೇಲೆ ಬೆನ್ನಮೇಲಿನ ಕೈ ಆಗಬೇಕು.
ಅಂದರೆ ದುಃಖ ಬಂದು ಜೀವನದಲ್ಲಿ ಕುಗ್ಗಿ ಹೋದಾಗ ʼಅಯ್ಯಾ ನಾನಿನ್ನು ಇದೀನಿ ಏನು ಭಯಪಡಬೇಡ. ಆಗಬೇಕಾದ್ದು ಆಗುತ್ತೆ, ಧೈರ್ಯವಾಗಿರು ಅದ್ಯಾವ ಸಹಾಯ ಬೇಕು ಕೇಳು ಅಂತ ಸಮಾಧಾನ ಮಾಡಬೇಕು. ಕಷ್ಟಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತಾ? ಕೃಷ್ಣನನ್ನೇ ಬಿಟ್ಟಿಲ್ಲ ಇನ್ನು ನಮ್ಮನ್ನು ಕಾಡದೆ ಬಿಡುತ್ತಾ? ಅದೇ ಸುಖ ಬಂದಾಗ ತಮ್ಮ ಕರ್ತವ್ಯಗಳನ್ನು ಮರೆತು ಹಾರಾಡಿದರೆ ಆಗ “ಅಯ್ಯಾ ಕಾಲು ಭೂಮಿ ಮೇಲೆ ಇರಲಿ ಎಷ್ಟೇ ಹಾರಾಡಿದರೂ ಹಕ್ಕಿಗೂಡಿರೋದು ಆಕಾಶದಲ್ಲಲ್ಲ, ಭೂಮಿ ಮೇಲೆ ಅಂತ ಬೆನ್ನು ತಟ್ಟಿ ನೆನಪಿಸಬೇಕು”.
ನಾಗೇಶ ಇದನ್ನೆಲ್ಲಾ ಕೇಳಿ ಎಂಥ ಕ್ಷುಲ್ಲಕ ಕಾರಣಕ್ಕೆ ಮಗನನ್ನು ಕಳೆದುಕೊಂಡೆನಲ್ಲ ನಾನ್ಯಾಕೆ ನಮ್ಮಪ್ಪನ ಹಾಗೆ ಆಗಲಿಲ್ಲ. ನನ್ನ ಮಗನ ಬೆನ್ನ ಮೇಲಿನ ಕೈ? ಅಂತ ಕೊರಗುತ್ತಾ ರಾತ್ರಿಯಲ್ಲಾ ಒದ್ದಾಡಿದ. ತನ್ನ ಸಹಪಾಠಿಗಳ ಜೀವನವನ್ನು ನೆನಪಿಸಿಕೊಂಡ. ಎಲ್ಲರೂ ಸುಖವಾದ ಜೀವನವನ್ನೇ ನಡೆಸುತ್ತಿದ್ದರು. ಶ್ರದ್ಧೆಯಿಂದ ದುಡಿದವರೆಲ್ಲರೂ ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನದಲ್ಲಿದ್ದರು. ಅದರಲ್ಲಿ ಎಲ್ಲರೂ ಇವನಂತೆ ಅಪ್ರತಿಮ ಮೇಧಾವಿಗಳಲ್ಲ.
ಕೇವಲ ಗೆಲುವಿನ ಮೆಟ್ಟಿಲನ್ನಷ್ಟೇ ತುಳಿದವರಲ್ಲ, ಕೆಲವೆಡೆ ಕೆಲವರು ಸೋತಿದ್ದಿರಬಹುದು ಹತಾಶತೆ ಕಾಡಿರಬಹುದು. ಆದರೆ ಯಾರು ಜೀವನದಿಂದ ಹಿಮ್ಮುಖವಾಗಿ ಓಡಿರಲಿಲ್ಲ. ಎಲ್ಲರೂ ಒಂದು ಒಳ್ಳೆಯ ಬಾಳ್ವೆ ನಡೆಸುತ್ತಿದ್ದಾರೆ. ನಾನೇಕೆ ಮಗನ ಏಳಿಗೆಯ ನೆಪದಲ್ಲಿ ಅವನಿಗೆ ಒ’ತ್ತಡ ಹೇರಿದೆ ಸೋಲು ಸಹಜ ಎಂದು ಯಾಕೆ ಹೇಳಲಿಲ್ಲ? ಅದನ್ನು ನಿಭಾಯಿಸುವುದನ್ನು ಏಕೆ ಹೇಳಿಕೊಡಲಿಲ್ಲ? ಎಂದು ನೊಂದುಕೊಂಡ. ಬೆಳಗಿನ ಜಾವದ ಹೊತ್ತಿಗೆ ನಿದ್ದೆ ಹತ್ತಿತ್ತೋ ಏನೋ ಎಷ್ಟು ಕೂಗಿದರೂ ನಾಗೇಶನಿಗೆ ಎಚ್ಚರವಾಗಲಿಲ್ಲ.
ಕೊನೆಗೆ ದಿಶಾ ಶಾಲೆಗೆ ಅಮ್ಮನ ಜೊತೆಗೇ ಹೋದಳು. ಸಾಯಂಕಾಲ ಮನೆಗೆ ಬಂದ ದಿಶಾ ಸಪ್ಪಗಿದ್ದಳು. ಸರಸಜ್ಜಿ ಅವಳನ್ನು ಗಮನಿಸಿ “ಯಾಕಪ್ಪ ಕೂಸಿನ ಮುಖ ಬಾಡಿದೆಯಲ್ಲಾ?” ಎಂದು ಕೇಳಿದಾಗ, ದಿಶಾ ನೋಡಜ್ಜಿ ನಾನು ದಿನಾಲೂ ಶಾಲೆಗೆ ಸರಿಯಾದ ವೇಳೆಗೆ ಹೋಗ್ತೀನಿ, ಗಲಾಟೇನೂ ಮಾಡಲ್ಲ, ಟೀಚರ್ ಹೇಳಿದ ಎಲ್ಲಾ ಹೋಂವರ್ಕನ್ನು ಮಾಡ್ತೀನಿ, ಆದರೂ ಆ ಸ್ಮಿತಾಳನ್ನು ಕ್ಲಾಸ್ ಮಾನಿಟರ್ ಮಾಡಿದ್ರು ಅದಕ್ಕೆ ಬೇಜಾರಾಯಿತು ಅಜ್ಜಿ” ಎಂದು ಹೇಳುತ್ತಿದ್ದಾಗ ಅವಳ ಕಣ್ಣಿನಲ್ಲಿ ಆಗಲೇ ಕಾರ್ಮೋಡ ಕವಿದಿತ್ತು.
ಸರಸಜ್ಜಿ ” ಅಯ್ಯೋ ಅಷ್ಟೇನಾ, ಒಳ್ಳೆದಾಯ್ತು ಬಿಡು ಅದ್ಯಾವ ಊರಿನ ಪಾಳೇಗಾರನ ಕೆಲಸ ಅಂತ? ಅವಳೇ ಆಗಲಿ. ಈಗ ಅವಳು ಗಲಾಟೆ ಮಾಡುವಂತಿಲ್ಲ, ಟೀಚರ್ ಏನೇ ಹೇಳಿದರೂ ಮಾಡಬೇಕು, ನಿಮಗೆಲ್ಲಾ ಬಯ್ಯಬೇಕು ,ಎಲ್ಲರನ್ನೂ ನಿರ್ವಹಿಸಬೇಕು, ಎಲ್ಲರಿಗಿಂತ ಮುಂಚೆ ಬರಬೇಕು, ಎಲ್ಲರೂ ಹೋದ ಮೇಲೆ ಹೋಗಬೇಕು. ಅದ್ಯಾವ ಕರ್ಮ? ಅವಳೇ ಆಗಲಿ ಕ್ಲಾಸ್ ಮೋಟಾರ್” ಎಂದು ಸಮಾಧಾನಿಸಿದರು.
ಅದಕ್ಕೆ ದಿಶಾ ಪಕ್ಕನೆ “ಅಯ್ಯೋ ಅಜ್ಜಿ ಮೋಟರ್ ಅಲ್ಲ ಮಾನಿಟರ್ “ಎಂದು ಅಜ್ಜನ ನೋಡುತ್ತಾ ನಕ್ಕಳು ಅದಕ್ಕೆ ಅಜ್ಜಿ “ಅದೇ ಕಣೆ ನಾನು ಹೇಳಿದ್ದು” ಎಂದು ಮುಖ ಸಿಂಡರಿಸಿದದಾಗ ಶಿವಜ್ಜ ತಕ್ಷಣ “ಬ್ರಿಟಿಷರು ಹೋಗೋರು ಹೋದರು ಇವಳನ್ನು ಮಾತ್ರ ನನಗೆ ಬಿಟ್ಟು ಹೋದರು” ಎಂದು ಗೊಳ್ಳೆಂದು ನಕ್ಕರು. ವಾತಾವರಣ ತಕ್ಷಣ ತಿಳಿಯಾಯಿತು. ಮಗುವಿನ ಮುಖದ ಮೇಲೆ ಮಂದಹಾಸ ಮೂಡಿತು. ಈ ಬಾರಿ ಬೆನ್ನಮೇಲಿನ ಕೈ ಜವಾಬ್ದಾರಿ ಸರಸಜ್ಜಿ ಹೊತ್ತಿದ್ದಳು.