ಶೃಂಗೇರಿಯ ಕೆಲವು ಕಪ್ಪು ಬಿಳುಪು ಪಟಗಳನ್ನು ನೋಡುತ್ತ ನಾವು ಸಣ್ಣವರಿದ್ದಾಗ ಕಳೆದ ಆ ಸುಂದರ ಕ್ಷಣಗಳನ್ನು ಮತ್ತೆ ಮೆಲುಕು ಹಾಕೋಣ.

0
2198

1390 ಇಂದ 1959 – ಶೃಂಗೇರಿ ಜಹಗೀರ್ (ಸಂಸ್ಥಾನ). ಶೃಂಗೇರಿ ಪಟ್ಟಣ ಬೆಳೆದು ಬಂದ ದಾರಿ. ಜಹಗೀರ್ ಇಂದ ಪುರಸಭೆಯವರೆಗೂ ಪಯಣ. ಎಪ್ಪತ್ತರ ದಶಕದ ಶೃಂಗೇರಿಯ ಪಟಗಳು. ಪಶ್ಚಿಮ ಘಟ್ಟದ ಮಲೆನಾಡಿನ ಪುಣ್ಯಕ್ಷೇತ್ರ ಶೃಂಗೇರಿಯ‌ ಮೂಲನಾಮ “ಋಷ್ಯಶೃಂಗಗಿರಿ” – ಋಷ್ಯ ಶೃಂಗ ಗಿರಿ. ಇದು ಶ್ರೀ ವಿಭಾಂಡಕ ಮಹರ್ಷಿಗಳ ಮಗನ ನಾಮಧೇಯ. ಶೃಂಗ ಅಂದರೆ ಕೊಂಬು ಮತ್ತು ಗಿರಿ ಅಂದರೆ ಪರ್ವತ ಹಾಗಾಗಿ ಮಲೆನಾಡಿನ ಈ ಪವಿತ್ರ ಗುಡ್ಡಗಾಡಿನ ಪ್ರದೇಶದಲ್ಲಿ ಹಣೆಯ ಮೇಲೆ ಒಂದು ಕೋಡಿನ ಜೊತೆಗೆ ಜನಿಸಿದ ಶ್ರೀ ಋಷ್ಯಶೃಂಗ ಮಹರ್ಷಿಯ ಫಲಶೃತವಾಗಿ ಈ ಸ್ಥಳದ ಹೆಸರು ಶೃಂಗ ಗಿರಿ ಅಂದರೆ ಶೃಂಗೇರಿ ಆಗಿ ಪರಿವರ್ತನೆಗೊಳ್ಳುತ್ತದೆ.

ಶ್ರೀ ಶಂಕರಭಗವತ್ಪಾದರು ಶೃಂಗೇರಿಯಲ್ಲಿ ತಮ್ಮ ಜೀವನದ ಅತ್ಯಮೂಲ್ಯವಾದ ೧೨ ವರ್ಷಗಳ ಕಾಲ ನೆಲಸಿದ ಮತ್ತು ತಮ್ಮ ಮೊದಲ ಮಠವನ್ನು (ದಕ್ಷಿಣಾಮ್ನಾಯ) ಸ್ಥಾಪಿಸಿದ ತರುವಾಯ ಶೃಂಗೇರಿ ಕ್ಷೇತ್ರ ಸಮಸ್ತ ಭೂಮಂಡಲದ ನಕ್ಷೆಯ ಮೇಲೆ ತನ್ನ ಛಾಪನ್ನು ಬೀರುತ್ತದೆ. ಶೃಂಗೇರಿಯ ಮೊದಲ ಅಗ್ರಹಾರ ಸಿಂಹಗಿರಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಇಂದಿಗೂ ಸಹಾ ಹಳೆಯ ಶೃಂಗೇರಿ ಎಂದೆ ಜನರು ಕರೆಯುತ್ತಾರೆ.

೧೩೩೬ರಲ್ಲಿ ಶ್ರೀ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡ ವಿಜಯನಗರ ಸಾಮ್ರಾಜ್ಯ ಶೃಂಗೇರಿಯ ಇತಿಹಾಸಕ್ಕೆ ಒಂದು ಹೊಸ ಆಯಾಮ ನೀಡುತ್ತದೆ. ೧೩೪೬ರ ಶ್ರಿಂಗಪುರ ಶಾಸನದಲ್ಲಿ ಉಲ್ಲೇಖಿಸಿದ ಹಾಗೆ ವಿಜಯನಗರದ ರಾಯರು ಶೃಂಗೇರಿ (ಇಂದಿನ ಪೇಟೆ) ಮತ್ತು ವಿದ್ಯಾರಣ್ಯಪುರ ಅಗ್ರಹಾರವನ್ನು ಸ್ಥಾಪಿಸಿ ೫೦೨.೫ ಗದ್ಯಾಣದಷ್ಟು ವರಮಾನ ನೀಡುವ ಜಮೀನನ್ನು ದಾನವಾಗಿ ನೀಡುತ್ತಾರೆ. ಈ ಅಗ್ರಹಾರದಲ್ಲಿ ಪ್ರಪ್ರಥಮವಾಗಿ ಮಹಾಸನ್ನಿಧಾನಮ್ ಅವರ ಸಹಾಯಕರಾಗಿದ್ದ ೪೦ ಬ್ರಾಹ್ಮಣರು ಮತ್ತು ಅವರ ಕುಟುಂಬಗಳು ಇಲ್ಲಿ ನೆಲೆಸುತ್ತಾರೆ.

೧೩ ಫೆಬ್ರುವರಿ ೧೩೯೦ರಂದು ಶ್ರೀ ವಿದ್ಯಾಶಂಕರ ದೇವಾಲಯಕ್ಕೆ ಭೇಟಿ ನೀಡಿದ ಶ್ರೀ ಬುಕ್ಕರಾಯರ ಮಗ ಶ್ರೀ ಚಿಕ್ಕ ಹರಿಹರ ರಾಯರು ಶೃಂಗೇರಿಯ ಅಗ್ರಹಾರದ ಬ್ರಾಹ್ಮಣರಿಗೆ ೩೦ ವೃತ್ತಿಯನ್ನು ನೀಡಿ ಅದರ ಜೊತೆಗೆ ಶ್ರೀಮಠಕ್ಕೆ ವಾರ್ಷಿಕ ಸರಿಸುಮಾರು ೩೦೦೩ ಗದ್ಯಾಣದಷ್ಟು ವರಮಾನ ನೀಡುವ ಜಮೀನನ್ನು ದಾನವಾಗಿ ನೀಡುತ್ತಾರೆ. ಇದರಿಂದಾಗಿ ಶೃಂಗೇರಿಯನ್ನು‌ ಮೂರು ಸಾವಿರ ಸೀಮೆ ಎಂದು ಕರೆಯಲಾಗುತ್ತಿತ್ತು. ವಿಜಯನಗರದ ಸಾಮ್ರಾಜ್ಯದಲ್ಲಿ ಶೃಂಗೇರಿ ಸಂಸ್ಥಾನವಾಗಿ ಮಾರ್ಪಡಾಗುತ್ತದೆ ಮತ್ತು ತನ್ನ ಜಹಗೀರ್ (ಸ್ವತಂತ್ರ ಆಡಳಿತ) ಅನ್ನು ತಾನೇ ನಿಭಾಯಿಸಿಕೊಂಡು ಹೋಗುತ್ತದೆ.

ಅಂದಿನಿಂದ ಅಂದರೆ ೧೩ ಫೆಬ್ರುವರಿ ೧೩೯೦ರಿಂದ ೧ ಏಪ್ರಿಲ್‌ ೧೯೫೯ರ ವರೆಗೂ ಅಂದರೆ ೫೬೯ ವರ್ಷಗಳ ಕಾಲ ಶ್ರೀಮಠ ತನ್ನ ಜಹಗೀರ್ ಅನ್ನು ಸ್ವತಂತ್ರವಾಗಿಯೇ ತಾನೇ ನಿಭಾಯಿಸಿಕೊಂಡು ಹೋಗುತ್ತದೆ. ೧೯೪೭ರಲ್ಲಿ ಭಾರತದೇಶ ಸ್ವಾತಂತ್ರ್ಯ ಆದ ನಂತರ ಸಮಸ್ತ ದೇಶದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತದೆ ಇದಕ್ಕೆ ಶೃಂಗೇರಿಯು ಸಹಾ ಸಾಕ್ಷಿ ಆಗುತ್ತದೆ. 1-4-1959ರಂದು ಮೈಸೂರು ರಾಜ್ಯ ಸರ್ಕಾರ ಶೃಂಗೇರಿಯ ಶ್ರೀಮಠದ ಖಜಾನೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಮುಖಾಂತರ 569 ವರ್ಷಗಳ ಕಾಲ ಶ್ರೀಮಠ ಅನುಭವಿಸಿದ ಜಹಗೀರ್ ಪಟ್ಟ ಮುಕ್ತಾಯ ಗೊಳ್ಳುತ್ತದೆ.

ಬ್ರಿಟೀಷ್ ಸರ್ಕಾರದ ಅಧೀನದಲ್ಲಿ ಶೃಂಗೇರಿ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಯನ್ನು ಕಾಣುತ್ತದೆ. 1890ರ ದಶಕದಲ್ಲಿ ಬ್ರಿಟೀಷ್ ಸರ್ಕಾರ ನಡೆಸಿದ ಸರ್ವೇ ನಂತರದಲ್ಲಿ ಅಂದರೆ 1897ರಲ್ಲಿ “Sringeri Jagir Inam Settlement Regulation” ಕಾಯಿದೆಯನ್ನು ಶೃಂಗೇರಿಯ ಜಹಗೀರ್ ನಲ್ಲಿ ಇದ್ದ ೨೭ ಹಳ್ಳಿಗಳಲ್ಲಿ ಜಾರಿಗೊಳಿಸುತ್ತದೆ. 1901ರಲ್ಲಿ‌ ಮೊದಲ ಬಾರಿಗೆ ಶೃಂಗೇರಿಯಲ್ಲಿ ಕೈಗೊಂಡ ಜನಗಣತಿ ಪ್ರಕಾರ ಪೇಟೆಯಲ್ಲಿ 2430 ಜನರಿದ್ದರೆ ಇಡೀ ತಾಲ್ಲೂಕಿನಲ್ಲಿ 10,656 ಜನರಿದ್ದರು.

ಆದರೆ 1921ರ ಜನಗಣತಿಯಲ್ಲಿ ದಿಢೀರ್ ಕುಸಿತವನ್ನು ಅನುಭವಿಸುತ್ತದೆ. ಇದಕ್ಕೆ ಪ್ರಮುಖ ಕಾರಣ 1911ರಿಂದ 1921ರ ವರೆಗೂ ಮಲೆನಾಡಿಗೆ ಶಾಪವಾಗಿ ಪರಿಣಮಿಸಿದ ಪ್ಲೇಗ್ ಮತ್ತು ಮಲೇರಿಯಾ ಎಂಬ ಮಹಾ ರೋಗಕ್ಕೆ ಸಾಕಷ್ಟು ಜನರು ಮರಣ ಹೊಂದಿದ್ದು. ತದನಂತರ ಚೇತರಿಸಿಕೊಂಡ ಶೃಂಗೇರಿ ತನ್ನ ಜಹಗೀರ್ ಪಟ್ಟ ಕಳೆದುಕೊಳ್ಳುವ ಸಮಯದಲ್ಲಿ ಪೇಟೆಯಲ್ಲಿ 3343 ಜನರಿದ್ದರೆ ಅತ್ತಾ ಇಡೀ ತಾಲ್ಲೂಕಿನಲ್ಲಿ 14,780 ಜನರಿದ್ದರು.

ಅಂದಿನ ಕಾಲದಲ್ಲಿ ಜೂನ್ ಇಂದ ಅಕ್ಟೋಬರ್ ವರೆಗೂ ಇರುತ್ತಿದ್ದ ಮಳೆಯ ಆರ್ಭಟದಿಂದ ಇಂದಿನ‌ ಶೃಂಗೇರಿ ಪೇಟೆಯ ಹಲವಾರು ಇಳಿಜಾರು ಪ್ರದೇಶಗಳು ಐದು ತಿಂಗಳುಗಳ ಕಾಲ ಮುಳುಗಿರುತ್ತಿತ್ತು. 24 October 1972ರಂದು ಶೃಂಗೇರಿಗೆ ಅಪ್ಪಳಿಸಿದ ಚಂಡಮಾರುತ ಸಾಕಷ್ಟು ಹಾನಿಯನ್ನು ಉಂಟು ಮಾಡುತ್ತದೆ. 1884ರಲ್ಲಿ ಪುರಸಭೆಯ ಪ್ರಾರಂಭದ ಜೊತೆಗೆ ಶೃಂಗೇರಿ ನಗರ ಸ್ಥಾನಮಾನವನ್ನು ಪಡೆಯುತ್ತದೆ. 1920ರ ಕಾಲದಲ್ಲಿ ಶೃಂಗೇರಿಯಿಂದ ಬೆಂಗಳೂರು ಅಥವಾ ಮೈಸೂರಿಗೆ (ಅಂದಿನ ಮುಖ್ಯ ಊರು) ಹೋಗಲು ಇದ್ದ ಒಂದೇ ದಾರಿ ಅಂದರೆ ತರೀಕೆರೆಯ ಮುಖಾಂತರ.

ಇನ್ನೂ ಮಲೆನಾಡಿನ ಅರಣ್ಯ ಪ್ರದೇಶದಲ್ಲಿ ಸಾಗಿ ಶೃಂಗೇರಿ ಇಂದ ತರೀಕೆರೆ ತಲುಪುವುದೆ ಅಂದು ದೊಡ್ಡ ಸಾಹಸವಾಗಿತ್ತು. ಅಂದಿನ ಕಾಲದಲ್ಲಿ ಹರಿಹರಪುರ, ಕೊಪ್ಪ, ನರಸಿಂಹರಾಜಪುರ ಮತ್ತು ಲಕ್ಕವಳ್ಳಿಯ ಮುಖೇನ ಜನರು ಕಾಲು ನಡಿಗೆ, ಕುದುರೆಗಾಡಿ ಅಥವಾ ಎತ್ತಿನಗಾಡಿಯಲ್ಲಿ ಪ್ರಯಾಣಿಸುತ್ತಿದ್ದರು. ಕುದುರೆಗಾಡಿ ೧೨೦ ಕಿಲೋಮೀಟರ್ ಅನ್ನು ಸರಿಸುಮಾರು ೧೩ ಗಂಟೆಗಳಲ್ಲಿ ಅಂದರೆ ಬೆಳಗ್ಗೆ ಶೃಂಗೇರಿಯನ್ನು ಏಳು ಗಂಟೆಗೆ ಬಿಟ್ಟರೆ ರಾತ್ರಿ ಎಂಟು ಗಂಟೆಗೆ ತರೀಕೆರೆ ತಲುಪಬಹುದಿತ್ತು.

ಒಂದು ಕುದುರೆಗಾಡಿಯಲ್ಲಿ ನಾಲ್ಕು ಜನರು ಪಯಣಿಸಬಹುದಿತ್ತು ಮತ್ತು ಒಬ್ಬರಿಗೆ ಅಂದಿನ‌ ಕಾಲದಲ್ಲಿ ಐದು ರೂಪಾಯಿ ಟಿಕೆಟ್ ಶುಲ್ಕವನ್ನು ಪಾವತಿಸ ಬೇಕಿತ್ತು. ಇನ್ನೂ ಎತ್ತಿನಗಾಡಿ ತರೀಕೆರೆ ಮುಟ್ಟಲು ಮೂರುದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಇನ್ನೂ 1926ರಲ್ಲಿ ಮೂರು ಜನ‌ ಉದ್ಯಮಿಗಳು ಜೊತೆಗೂಡಿ ಶಂಕರ ಮೋಟರ್ಸ್ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ. 1916ರಲ್ಲಿ ಶ್ರೀ ಶಾರದಾ ದೇವಾಲಯದಲ್ಲಿ ಆಚರಿಸಲಾಗುತ್ತಿದ್ದ ಕುಂಭಾಭಿಷೇಕದಲ್ಲಿ ಪಾಲ್ಗೊಳ್ಳಲು ಅಂದಿನ ಮೈಸೂರು ಮಹಾರಾಜರು ತಮ್ಮ ಕಾರಿನಲ್ಲಿ ಆಗಮಿಸುತ್ತಾರೆ ಇದು ಶೃಂಗೇರಿ ಪೇಟೆಗೆ ಬಂದ ಮೊದಲ ಕಾರು.

1894ರಲ್ಲಿ ಮೊದಲ ಅಂಚೆ ಕಚೇರಿ ಪ್ರಾರಂಭವಾದರೆ 1964ರಲ್ಲಿ ದೂರವಾಣಿ ಎಕ್ಸ್ಚೇಂಜ್ ಕಚೇರಿ ಪ್ರಾರಂಭಗೊಳ್ಳುತ್ತದೆ. ಇನ್ನೂ ಶೃಂಗೇರಿಯಲ್ಲಿ ಮೊದಲ ಪೋಲಿಸ್ ಠಾಣೆ ಪ್ರಾರಂಭವಾಗಿದ್ದು 1930ರಲ್ಲಿ ಮತ್ತು ಅರಣ್ಯ ಇಲಾಖೆಯ ರೇಂಜ್ ಫಾರೆಸ್ಟ್ ಕಚೇರಿ 1916ರಲ್ಲಿ ಪ್ರಾರಂಭಗೊಳ್ಳುತ್ತದೆ. ಶೃಂಗೇರಿಯ ಹೆಗ್ಗುರುತುಗಳಲ್ಲಿ ಒಂದಾದ ವೆಲ್ ಕಮ್ ಕಮಾನು ಗೇಟ್ ಫೆಬ್ರವರಿ 1972ರಲ್ಲಿ ಲೋಕಾರ್ಪಣೆ ಗೊಳ್ಳುತ್ತದೆ. ಇನ್ನೊಂದು ಸ್ವಾರಸ್ಯಕರ ವಿಷಯ ಏನೆಂದರೆ ಈ ಕಮಾನು ಗೇಟ್ ನಿರ್ಮಾಣಕ್ಕೆ ತಗಲಿದ ವೆಚ್ಚವನ್ನು ಅಂದಿನ ಗುರುಗಳ ಆಪ್ತ ಸಹಾಯಕರು ದಾನವಾಗಿ ನೀಡುತ್ತಾರೆ.

ಅಂದು ಗಾಂಧಿ ಮೈದಾನದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಜಾನುವಾರುಗಳ ವಾರ್ಷಿಕ ಜಾತ್ರೆ ಅದರಲ್ಲಿ ಹಾಕುತ್ತಿದ್ದ ಟೆಂಟ್ ಸಿನೆಮಾ, ಮಲ್ಲಪ್ಪ ಗುಡ್ಡದ ಮೇಲಿರುವ ನೀರಿನ ಜಲಾಶಯ, ಅಕ್ಕಿ ಗಿರಣಿ, ಸೌದೆ ಡಿಪೊ, ಪುರಸಭೆ ಕಾರ್ಯಾಲಯ, ಪುರಸಭೆ ಬಸ್‌ ನಿಲ್ದಾಣ, ಅಂದಿನ‌ ಕಾಲದ ಪ್ರಖ್ಯಾತ ಉಪಹಾರ ಗೃಹ ಮಲ್ಲಿಕಾ ಮಂದಿರ್, ಕಂಚಿಗುಡ್ಡ, ವಿದ್ಯಾಶಂಕರ ದೇವಾಲಯದ ಹತ್ತಿರ ಇದ್ದ ಹಳೆಯ ಕಾಲು ಸೇತುವೆ (ಗುರು ಭವನ ಹೋಗಲು), ಮಲ್ಲಿಕಾರ್ಜುನ ದೇವಸ್ಥಾನದ ಗುಡ್ಡ, ಹರಿಹರ ದೇವಸ್ಥಾನದ ಗುಡ್ಡ, ಹಳೆಯ ಪ್ರವಾಸಿ ಬಂಗಲೆ, ಭಾರತಿ ಬೀದಿ, ಹರಿಹರ ಬೀದಿ, ಆಂಜನೇಯ ದೇವಾಲಯ ಬೀದಿ, ಮಲ್ಲಿಕಾರ್ಜುನ ದೇವಾಲಯ ಬೀದಿ (ಮಲ್ಲಪ್ಪ ಬೀದಿ), ಓಣಿಗೇರಿ ಕಲ್ಲುಮೆಟ್ಟಲು, ಸುಭಾಷ್ ಬೀದಿ, ಕುರುಬರಗೇರಿ, ಕಟ್ಟೆಬಾಗಿಲು, ಸುಂಕದಕಟ್ಟೆ, ಪೋಲಿಸ್ ಠಾಣೆ, ಅರಣ್ಯ ಕಚೇರಿ ಎಲ್ಲವನ್ನೂ ನೆನಪಿಸಿಕೊಂಡರೆ ಒಂದು ತರಹದ ಫ್ಲ್ಯಾಷ್ ಬ್ಯಾಕ್ ಗೆ ಕರೆದುಕೊಂಡು ಹೋಗುತ್ತದೆ.

ಬನ್ನಿ ಎಪ್ಪತ್ತರ ದಶಕದ ಶೃಂಗೇರಿಯ ಕೆಲವು ಕಪ್ಪು ಬಿಳುಪು ಪಟಗಳನ್ನು ನೋಡುತ್ತ ನಾವು ಸಣ್ಣವರಿದ್ದಾಗ ಕಳೆದ ಆ ಸುಂದರ ಕ್ಷಣಗಳನ್ನು ಮತ್ತೆ ಮೆಲುಕು ಹಾಕೋಣ. ಶೃಂಗೇರಿ ನಮ್ಮ ಹೆಮ್ಮೆ ಶ್ರೀಮಠ ಸಂಸ್ಥಾನ ನಮ್ಮ ಅಭಿಮಾನ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here