ಈ ಹೆಣ್ಣುಮಗಳ ತಾಳ್ಮೆ ಅವಳ ಗಂಡನಲ್ಲಿ ಎಂತಹ ಬದಲಾವಣೆ ತಂದಿತು ನೀವೇ ನೋಡಿ.

0
6677

ನಾನು ಮದುವೆಯ ಮೊದಲೇ ನಿನಗೆ ತಿಳಿಸಿದ್ದೆನಲ್ಲವೇ ಚಿನ್ಮಯಿ. ನನ್ನ ಕುಟುಂಬ ದೊಡ್ಡದು. ನನಗೆ ನನ್ನದೇ ಆದ ಒಂದಿಷ್ಟು ಜವಾಬ್ದಾರಿಗಳಿದೆ. ಅದನ್ನು ನೆರವೇರಿಸಬೇಕು. ಅದಿಕ್ಕೆ ನೀನು ಅಡ್ಡಿ ಬರಬಾರದು ಎಂದು. ಆಗ ಒಪ್ಪಿಕೊಂಡು, ಈಗ ಬೇರೆಯದ್ದೇ ತಗಾದೆ ತಗೆದರೆ. ಅದಿಕ್ಕೆ ನಾನು ಹೊಣೆನಾ. ಸಿಟ್ಟಿನಲ್ಲಿಯೇ ತನ್ನ ಪತ್ನಿ ಚಿನ್ಮಯಿಯನ್ನು ಕೇಳಿದ್ದ ಅನಿಕೇತ್.

ಚಿನ್ಮಯಿ ಏನನ್ನೂ ಹೇಳದೆ ಹಾಗೆಯೇ ಕಣ್ಣು ತುಂಬಿಕೊಂಡಳು. ಅವಳ ಮನಸೇಕೋ ಹಳೆಯ ನೆನಪುಗಳ ಸುಳಿಯಲ್ಲೇ ಸುತ್ತಲಾರಂಭಿಸಿತ್ತು. ಎರಡು ಹೆಣ್ಣು ಮಕ್ಕಳು ಹುಟ್ಟಿದ ಮೇಲೆ, ಹುಟ್ಟಿದ ಮೂರನೆಯವಳೇ ಚಿನ್ಮಯಿ. ಮೂರನೆಯದು ಗಂಡಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಚಿನ್ಮಯಿಯ ತಂದೆ, ತಾಯಿಗೆ ಅವಳ ಹುಟ್ಟೇನೂ ಅಂಥಹ ಸಂತಸದಾಯಕವಾಗಿರಲಿಲ್ಲ. ಓದಿನಲ್ಲಿ ಮುಂದಿದ್ದ ಚಿನ್ಮಯಿ, ಡಿಗ್ರಿ ಮುಗಿಸಿ ಪ್ರೈವೇಟ್ ಕಂಪೆನಿಯೊಂದರಲ್ಲಿ ಕೆಲಸ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಳು.

ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸುವುದರೊಳಗೆ ಚಿನ್ಮಯಿಯ ತಂದೆ ಹೈರಾಣವಾಗಿ ಹೋಗಿದ್ದರು. ಆಗ ಬಂದಿದ್ದೇ ಅನಿಕೇತನ ಸಂಬಂಧ. ಅನಿಕೇತ್ ನೋಡಲು ಸುಂದರವಾಗಿಯೇ ಇದ್ದ. ಅತ್ಯುತ್ತಮವೆಂದು ಹೇಳಲಾಗದಿದ್ದರೂ, ಸಾಧಾರಣವಾದ ಕೆಲಸದಲ್ಲಿದ್ದ. ಇದಕ್ಕಿಂತ ಒಳ್ಳೆಯ ಸಂಬಂಧ ಹುಡುಕುವುದು ಕಷ್ಟವೇ ಎಂದು ಚಿನ್ಮಯಿಯ ತಂದೆ, ತಾಯಿ ಈ ಸಂಬಂಧಕ್ಕೆ ಒಪ್ಪಿದ್ದರು. ಚಿನ್ಮಯಿಯನ್ನೂ ಒಪ್ಪಿಸಿದ್ದರು. ಮದುವೆಯಾಗಿ ಅನಿಕೇತನ ಮನೆಗೆ, ಮನಕ್ಕೆ ಒಡತಿಯಾಗಿ ಬಂದಿದ್ದಳು ಚಿನ್ಮಯಿ.

ಅನಿಕೇತನದ್ದು ದೊಡ್ಡ ಕುಟುಂಬ. ತಂದೆ, ತಾಯಿ, ಅಕ್ಕ, ಇಬ್ಬರು ತಂಗಿಯಂದಿರು ಹಾಗೂ ಒಬ್ಬ ತಮ್ಮ. ತಂದೆಯಿಂದ ಯಾವ ಆದಾಯವೂ ಇಲ್ಲದಿದ್ದ ಕಾರಣ ಎಲ್ಲಾ ಜವಾಬ್ದಾರಿಯೂ ಅನಿಕೇತನ ಮೇಲೆಯೇ ಬಿದ್ದಿತ್ತು. ತನ್ನ ಹೆಂಡತಿಯ ಸಂಪಾದನೆಯೂ ಸೇರಿರುವುದರಿಂದ,‌ ನನ್ನ ಮೇಲಿರುವ ಭಾರ ಒಂದಿಷ್ಟು ಕಡಿಮೆಯಾಗುವುದು ಎನ್ನುವುದು ಅನಿಕೇತನ ಲೆಕ್ಕಾಚಾರವಾಗಿತ್ತು. ತನ್ನದ್ದೆಲ್ಲವೂ ಪತಿಯದ್ದೇ ತಾನೆ, ಎಂದು ಯೋಚಿಸಿ ಚಿನ್ಮಯಿ ಕೂಡ, ಇದರ ಬಗ್ಗೆ ಚಕಾರವೆತ್ತಿರಲಿಲ್ಲ.

ಆದರೆ ತನ್ನ ಯಾವ ಆಸೆ, ಆಕಾಂಕ್ಷೆಗಳಿಗೂ ಬೆಲೆ ಕೊಡದ ಅನಿಕೇತ್ ಕೇವಲ ಮನೆ, ಅಮ್ಮ, ತಂಗಿ ಎಂದೇ ಯಾವಾಗಲೂ ಬಡಬಡಿಸುತ್ತಿದ್ದದ್ದು ಚಿನ್ಮಯಿಗೇಕೋ ಹಿಂಸೆಯೆನ್ನಿಸಲಾರಂಭಿಸಿತ್ತು.

ಗಂಡಸರಿಗೆ ಅವರ ಮನೆಯ ಸೆಳೆತ ಸ್ವಲ್ಪ ಜಾಸ್ತಿಯೇ ಇರುತ್ತದೆ. ಹೆಣ್ಣು ಮಕ್ಕಳೋ ಮದುವೆಯಾಗಿ, ತವರು ತೊರೆದು ಇನ್ನು ಮುಂದೆ ತನ್ನ ಸರ್ವಸ್ವವೂ ಗಂಡ ಎಂದೇ ಬದುಕಿಬಿಡುತ್ತಾರೆ. ಆದರೆ ಗಂಡಸರು ಹಾಗಲ್ಲ. ಎಂದು ತನ್ನ ಗೆಳತಿ ಉಷಾ ಯಾವಾಗಲೂ ಹೇಳುತ್ತಿದ್ದ ಮಾತು ಚಿನ್ಮಯಿಗೂ ಹೌದೆನ್ನಿಸಲಾರಂಭಿಸಿತ್ತು.

ಈ ಬಗ್ಗೆ ಅನಿಕೇತನಲ್ಲಿ ಏನಾದರೂ ಕೇಳಿದರೆ, ನಿನ್ನನ್ನು ಮದುವೆಯಾಗಿದ್ದೇನೆ ಎಂದಾಕ್ಷಣ, ನನ್ನ ಮನೆಯ, ಅಮ್ಮ, ಅಕ್ಕ ತಂಗಿಯಂದಿರ ಜವಾಬ್ದಾರಿಗಳನ್ನೆಲ್ಲ ಬಿಟ್ಟುಬಿಡಬೇಕೆಂದೇನು ನಿನ್ನ ಅರ್ಥ. ಹೆಂಡತಿಯ ಸೆರಗು ಹಿಡಿದುಕೊಂಡು ನನ್ನ ಕರ್ತವ್ಯಗಳಿಗೆಲ್ಲ ಎಳ್ಳು ನೀರು ಬಿಡಲೇ. ಅದು ಸಾಧ್ಯವಿಲ್ಲ ಚಿನ್ಮಯಿ ಎಂದು ನಿಷ್ಠುರವಾಗಿಯೇ ಹೇಳಿದ್ದ.

ನಿಮ್ಮ ಕರ್ತವ್ಯವನ್ನು ಬಿಡಿ ಅಂತ ನಾನೆಲ್ಲಿ ಹೇಳಿದೆ ಅನಿಕೇತ್. ಆದರೆ ಮಗನಾಗಿ, ಅಣ್ಣನಾಗಿ ಹೇಗೆ ನಿಮಗೆ ಕರ್ತವ್ಯಗಳಿವೆಯೋ, ಪತಿಯಾಗಿಯೂ ಇದೆ ಅಲ್ಲವೇ. ಎಂದು ಕೇಳಿದ ಚಿನ್ಮಯಿಯ ಮಾತಿಗೆ, ನಾನು ಪತಿಯಾಗಿ ಯಾವ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ ನೀನೇ ಹೇಳು.

ಸುಮ್ಮನೆ ಮಾತನಾಡಲು ಬರುತ್ತದೆ ಅಂತ ಮನಸಿಗೆ ಬಂದದ್ದೆಲ್ಲವನ್ನೂ ಮಾತನಾಡಬೇಡ ಚಿನ್ಮಯಿ ಎಂದು ರೇಗುತ್ತಿದ್ದ ಅನಿಕೇತನ ಮಾತಿಗೆ ಏನೂ ಹೇಳದೆ ಸುಮ್ಮನಾಗಿದ್ದಳು ಚಿನ್ಮಯಿ. ಇನ್ನೂ ಮಾತು ಬೆಳೆಸಿದರೆ, ಸುಮ್ಮನೆ ದೊಡ್ಡ ಜಗಳವೇ ಆಗುವುದು ಎಂಬುವ ಅರಿವು ಚಿನ್ಮಯಿಗೂ ಇತ್ತು. ಹಾಗಾಗುವುದು ಅವಳಿಗೂ ಬೇಕಿರಲಿಲ್ಲ.

ರೀ, ನಮ್ಮ ಮದುವೆಯಾಗಿ ಮುಂದಿನ ತಿಂಗಳು ಹತ್ತನೇ ತಾರೀಕಿಗೆ ಎರಡು ವರ್ಷ ಆಗುತ್ತದೆ ಎಂದು ಹೇಳಿದ ಚಿನ್ಮಯಿಯನ್ನೇ ನೋಡಿದ ಅನಿಕೇತ್. ಹಾಂ, ಹೌದು. ಅಮ್ಮಾವ್ರಿಗೆ ಅದಕ್ಕೆ ಉಡುಗೊರೆಯೇನಾದರೂ ಬೇಕಾ. ಸೀರೆ, ಒಡವೆ ಏನೇ ಇದ್ದರೂ ಕೇಳು. ಈ ಸಲ ಇಲ್ಲವೆನ್ನದೆ ಕೊಡಿಸುತ್ತೇನೆ. ಎಂದಿದ್ದ ಅನಿಕೇತ್.

ಉಡುಗೊರೆ, ಹೌದು ಬೇಕು. ಆದರೆ ಸೀರೆ, ಒಡವೆ ಅಲ್ಲ. ಅದಕ್ಕಿಂತಲೂ ಬೆಲೆ ಬಾಳುವಂತಹದ್ದು. ಇನ್ ಫ್ಯಾಕ್ಟ್ ಬೆಲೆಯೇ ಕಟ್ಟಲಾಗದಂತಹದ್ದು. ಅಂತದ್ದೇನು ಬೇಕು ನಿನಗೆ. ನಾವು ಮದುವೆಯಾಗಿ ಎರಡು ವರ್ಷ ಆಗುತ್ತ ಬಂತು. ಇನ್ನಾದರೂ ಒಂದು ಮಗುವಿನ ಬಗ್ಗೆ ಯೋಚಿಸೋಣ ಅಂತ. ಮನೆಯ ಪರಿಸ್ಥಿತಿ ಸರಿಯಿಲ್ಲ, ತಮ್ಮನ ಓದು, ತಂಗಿಯ ಮದುವೆಯ ಸಾಲ, ಅದೂ ಇದೂ ಅಂತ ಇಷ್ಟು ದಿನ ಮುಂದೂಡುತ್ತಲೇ ಬಂದಿರಿ. ಈಗಲಾದರೂ ಎಂದು ಸ್ವಲ್ಪ ಅಳುಕಿನಲ್ಲೇ ಅನಿಕೇತನಲ್ಲಿ ಕೇಳಿದ್ದಳು ಚಿನ್ಮಯಿ.

ಚಿನ್ಮಯಿ. ನಿನ್ನ ಆಸೆ ನನಗೂ ಅರ್ಥವಾಗುತ್ತದೆ. ಆದರೆ ಈಗಲೂ ನನ್ನ ಜವಾಬ್ದಾರಿಗಳು, ಸಾಲಗಳು ಹಾಗೇ ಇವೆ. ನನ್ನ ತಮ್ಮನದ್ದು ಈ ವರ್ಷ ಪಿ.ಯು.ಸಿ ಮುಗಿಯುತ್ತದೆ ಅಷ್ಟೇ. ಇನ್ನು ಅವನನ್ನು ಮುಂದಿನ ವರ್ಷ ಒಳ್ಳೆಯ ಕಾಲೇಜಿಗೆ ಸೇರಿಸಬೇಕು. ತಂಗಿ ಸ್ವಾತಿಯ ಮದುವೆಗೆ ಮಾಡಿದ ಸಾಲವನ್ನೂ ತೀರಿಸಬೇಕು. ಇನ್ನು ಸಣ್ಣ ತಂಗಿ ಸರಯೂ ಅವಳ ಓದೂ ಈ ವರ್ಷ ಮುಗಿಯುತ್ತದೆ.

ಆದಷ್ಟು ಬೇಗ ಅವಳಿಗೆ ಮದುವೆ ಮಾಡಿ ಬಿಡಬೇಕು ಎಂದು ಅಮ್ಮ‌ ಹೇಳುತ್ತಿದ್ದಳು. ಇವೆಲ್ಲದ್ದರ ಮಧ್ಯೆ, ನಮಗೀಗ ಮಗುವಾದರೆ; ಅದರ ಖರ್ಚು ವೆಚ್ಚಗಳನ್ನೆಲ್ಲ ಭರಿಸುವವರು ಯಾರು ಚಿನ್ಮಯಿ. ಇಲ್ಲ ಇನ್ನೂ ಎರಡು ಮೂರು ವರ್ಷ ಮಗುವಿನ ಬಗ್ಗೆ ಯೋಚಿಸುವ ಪರಿಸ್ಥಿತಿಯಲ್ಲಿಯೂ ನಾನಿಲ್ಲ ಎಂದು ನೇರವಾಗಿಯೇ ನುಡಿದಿದ್ದ ಅನಿಕೇತ್.

ಅನಿಕೇತ್, ಹಾಗಲ್ಲ. ಅದು, ಎಂದು ಮತ್ತೇನೋ ಹೇಳಲು ಬಂದ ಚಿನ್ಮಯಿಯ ಮಾತನ್ನೂ ಕೇಳಿಸಿಕೊಳ್ಳದೆ ಅಲ್ಲಿಂದ ಹೊರಟು ಹೋಗಿದ್ದ ಅನಿಕೇತ್. ಇವರ ಮನೆ, ಅಮ್ಮ, ತಮ್ಮ, ತಂಗಿಯಂದಿರು. ಹಾಗಾದರೆ ಇವುಗಳ ಮಧ್ಯೆ ನನ್ನ ಸ್ಥಾನ ಯಾವುದು. ನನ್ನ ಆಸೆಗಳಿಗೆ, ಕನಸುಗಳಿಗೆ ಬೆಲೆಯೇ ಇಲ್ಲವೇ. ಇವರ ಜವಾಬ್ದಾರಿಗಳ ಹೊರೆಯನ್ನು ನಾನೂ ಹೊರುತ್ತಿದ್ದೇನೆ. ಆದರೂ ನನ್ನ ಬಗ್ಗೆ ಯಾಕೀ ತಿರಸ್ಕಾರ.

ಹನುಮಂತನ ಬಾಲದಂತಿರುವ ಅನಿಕೇತನ ಮನೆಯ ಸಮಸ್ಯೆಗಳು ತೀರುವುದ್ಯಾವಾಗ, ನಾನು ತಾಯಿಯಾಗುವುದು ಯಾವಾಗ. ಹೀಗೇ ಯೋಚಿಸಿದ ಚಿನ್ಮಯಿಯ ಮನಸು ಅದಾಗಲೇ ಬಾಡಿ ಹೋಗಿತ್ತು. ಇನ್ನು ಅನಿಕೇತ್ ನ ಹತ್ತಿರ ಇದರ ಬಗ್ಗೆ ಮಾತನಾಡಿದರೂ, ಅವರ ನಿರ್ಧಾರವನ್ನಂತೂ ಅವರು ಬದಲಾಯಿಸುವುದಿಲ್ಲ. ಕೆಲವು ವಿಷಯಗಳಲ್ಲಿ ತನ್ನದೇ ನಡೆಯಬೇಕು ಎನ್ನುವ ತನ್ನ ಪತಿಯ ಮೊಂಡುತನದ ಪರಿಚಯ ಚಿನ್ಮಯಿಗೂ ಇತ್ತು. ಕಾಯುವುದೊಂದೇ ನನಗೀಗ ಉಳಿದಿರುವ ದಾರಿ ಎಂದುಕೊಂಡ ಚಿನ್ಮಯಿ ನಿಟ್ಟುಸಿರನ್ನು ಬಿಟ್ಟು ಸುಮ್ಮನಾಗಿದ್ದಳು.

ಅಂದು ಮುಂಜಾನೆಯೇ ಅನಿಕೇತನ ತಾಯಿ ಲಲಿತಾರವರು ಕರೆ ಮಾಡಿದ್ದರು. ಕಾಲ್ ರಿಸೀವ್ ಮಾಡಿ ಮಾತನಾಡಿದ್ದ ಅನಿಕೇತನನ್ನು ವಿಷಯವೇನೆಂದು ಕೇಳಿದ್ದಳು ಚಿನ್ಮಯಿ. ಸ್ವಾತಿ ತಾಯಿಯಾಗುತ್ತಿದ್ದಾಳಂತೆ ಚಿನ್ಮಯಿ. ಅದನ್ನು ತಿಳಿಸಲೆಂದೇ ಅಮ್ಮ ಕಾಲ್ ಮಾಡಿದ್ದಳು. ಬಸುರಿಯ ಆರೈಕೆ ತವರು ಮನೆಯಲ್ಲೇ ಆಗಬೇಕೆಂಬುದು ಅಮ್ಮನ ಆಸೆ. ನಮ್ಮೂರು ತೀರಾ ಹಳ್ಳಿ, ನಿನಗೂ ಗೊತ್ತು. ಅಲ್ಲಿ ಅಂತಹ ಯಾವ ಸೌಕರ್ಯಗಳೂ ಇಲ್ಲ.

ಹಾಗಾಗಿ ಸ್ವಾತಿಯ ಹೆರಿಗೆ, ಬಾಣಂತನ ಎಲ್ಲವೂ ಇಲ್ಲೇ, ನಮ್ಮ ಮನೆಯಲ್ಲೇ ಆಗಬೇಕು ಎಂದಳು ಅಮ್ಮ. ಇಲ್ಲಿ. ನಮ್ಮ ಮನೆಯಲ್ಲ ಎಂದು ಕೇಳಿದ ಅವಳಿಗೆ ಹೌದು ಚಿನ್ಮಯಿ. ನಮ್ಮ ಮನೆಯಲ್ಲಿಯೇ. ನೀನೇನೂ ಚಿಂತೆ ಮಾಡಬೇಡ. ಸ್ವಾತಿಯನ್ನು ನೋಡಿಕೊಳ್ಳಲು ಅಮ್ಮನೇ ಊರಿನಿಂದ ಬರುತ್ತಿದ್ದಾಳೆ. ಆ ಜವಾಬ್ದಾರಿಯೇನೂ ನಿನ್ನ ಮೇಲೆ ಬರುವುದಿಲ್ಲ. ಎಂದ ಅನಿಕೇತನ ಮಾತಿಗೆ ಏನೂ ಹೇಳದೆ ಸುಮ್ಮನಿದ್ದಳು ಚಿನ್ಮಯಿ.

ಅನಿಕೇತ್ ಹೇಳಿದಂತೆ, ಮುಂದಿನ ಕೆಲವೇ ದಿನಗಳಲ್ಲಿ ಸ್ವಾತಿ ಅನಿಕೇತನ ಮನೆಗೆ ಬಂದಿದ್ದಳು. ಅವಳ ಹಿಂದೆಯೇ ಅನಿಕೇತನ ತಾಯಿ ಲಲಿತ ಕೂಡ ಬಂದಿದ್ದರು. ಬಸುರಿ ಮಗಳು ಸ್ವಾತಿಯ ಆರೈಕೆ ಜೋರಾಗಿಯೇ ನಡೆದಿತ್ತು. ಹಾಲು, ಮೊಸರು, ತುಪ್ಪ, ಡ್ರೈ ಫ್ರೂಟ್ಸ್, ಹೀಗೆ ಪ್ರತಿದಿನವೂ ಮನೆಯ ಸಾಮಾನುಗಳ ಪಟ್ಟಿ ಬೆಳೆಯುತ್ತಲೇ ಹೋಗಿತ್ತು. ಮಗಳಿಗೆ ಬಯಕೆ ಎಂದು ದಿನಕ್ಕೆ ಎರಡು, ಮೂರು ಬಗೆಯ ತಿಂಡಿಯನ್ನು ಮಾಡಿ ಹಾಕುತ್ತಿದ್ದರು ಲಲಿತ.

ಅನಿಕೇತನ ಸಂಬಳವೆಲ್ಲ ಮನೆಯ ಬಾಡಿಗೆ, ಸಾಲದ ಬಡ್ಡಿ ಹೀಗೇ ಖರ್ಚಾಗಿ ಹೋಗುತ್ತಿತ್ತು. ಇನ್ನು ಉಳಿದಿದ್ದಕ್ಕೆಲ್ಲ ಚಿನ್ಮಯಿಯೇ ತನ್ನ ಸಂಬಳವನ್ನು ನೀಡುತ್ತಿದ್ದಳು. ತನಗೆ ಬರುತ್ತಿದ್ದ ಸಂಬಳದಲ್ಲಿ ತನಗೆಂದು ಒಂದು ರೂಪಾಯಿಯನ್ನೂ ಎತ್ತಿಟ್ಟುಕೊಳ್ಳದೆ, ಎಲ್ಲವನ್ನೂ ಅನಿಕೇತನ ಸಂಸಾರಕ್ಕೇ ಬಳಸುತ್ತಿದ್ದಳು ಚಿನ್ಮಯಿ. ಸ್ವಾತಿಯ ಸೀಮಂತಕ್ಕೆಂದು ತುಂಬಾ ಬೆಲೆಬಾಳುವ ಸೀರೆಯನ್ನೇ ಸ್ವಾತಿಗೆ ಕೊಡಿಸುವಂತೆ ಅನಿಕೇತನಿಗೆ ಹೇಳಿದ್ದರು ಲಲಿತ.

ನಿನ್ನ ಅಕ್ಕ ಸೌಮ್ಯಾಳ ಸೀಮಂತವನ್ನಂತೂ ತುಂಬಾ ಸರಳವಾಗಿ ಮಾಡುವಂತಾಗಿತ್ತು.‌ ಆದರೆ ಸ್ವಾತಿಯ ಸೀಮಂತವನ್ನು ಅದ್ಧೂರಿಯಾಗಿಯೇ ಮಾಡಬೇಕು ಅನಿ. ಅವಳ ಗಂಡನ ಮನೆಯವರೂ ಶ್ರೀಮಂತರೇ. ಅದು ನಿನಗೂ ಗೊತ್ತು. ಅವರ ಮನೆಗೆ ಸರಿಸಮವಾಗಿ ಸೀಮಂತ ಮಾಡೋಣ. ನಾಳೆ ಅವರು ನಮ್ಮ ಸ್ವಾತಿಯನ್ನು ಆಡಿಕೊಳ್ಳಬಾರದಲ್ಲವೇ. ಎಂದ ಲಲಿತಾರ ಮಾತಿಗೆ ಏನೂ ಹೇಳದೆ ತಲೆಯಾಡಿಸಿದ್ದ ಅನಿಕೇತ್.

ಎಲ್ಲವೂ ಸರಾಗವಾಗಿಯೇ ನಡೆದಿತ್ತು. ಸ್ವಾತಿ ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತಿದ್ದಳು. ಸಿಸೇರಿಯನ್ ಆಗಿದ್ದರ ಕಾರಣ ಆಸ್ಪತ್ರೆಯ ಬಿಲ್ ಕೂಡ ಹೆಚ್ಚೇ ಬಂದಿತ್ತು. ತವರಿನಿಂದ ಮಗುವಿಗೆ ಏನಾದರೂ ಉಡುಗೊರೆಯಾಗಿ ಕೊಡದಿದ್ದರೆ ಸರಿಹೋಗುವುದಿಲ್ಲವೆಂದು, ಸಣ್ಣದೊಂದು ಚಿನ್ನದ ಸರವನ್ನು ಮಗುವಿಗೆ ಮಾಡಿಸಿ ಹಾಕುವಂತೆ ಮಗನನ್ನು ಒತ್ತಾಯಿಸಿದ್ದರು ಲಲಿತ. ಅನಿಕೇತನಿಗದು ಇಷ್ಟವಿಲ್ಲದಿದ್ದರೂ, ತಾಯಿಯ ಮಾತಿಗೆ ಕಟ್ಟು ಬಿದ್ದು ಅದಕ್ಕೂ ಒಪ್ಪಿಕೊಂಡಿದ್ದ.

ಸ್ವಾತಿಯ ಬಾಣಂತನವೆಲ್ಲ ಮುಗಿದು, ಅವಳೂ ತನ್ನ ಗಂಡನ ಮನೆಗೆ ಹೊರಟಿದ್ದಳು. ಹೊರಡುವಾಗ ಚಿನ್ಮಯಿಯನ್ನು ಕುರಿತು, ನೀವೂ ಆದಷ್ಟು ಬೇಗ ಒಂದು ಸಿಹಿ ಸುದ್ದಿಯನ್ನು ಕೊಡಿ ಅತ್ತಿಗೆ. ಈ ಮನೆಯಲ್ಲೂ ಒಂದು ತೊಟ್ಟಿಲು ತೂಗುವಂತಾಗಲಿ. ತಮ್ಮ ಮಗನ ಮಗುವನ್ನು ಎತ್ತಿ ಆಡಿಸಬೇಕೆಂದು ಅಮ್ಮನಿಗೂ ಆಸೆಯಿರುತ್ತದೆಯಲ್ಲವೇ ಎಂದು ಹೇಳಿದ್ದಳು.

ಅಯ್ಯೋ ಈಗಿನ ಕಾಲದ ಹುಡುಗಿಯರು ತಮ್ಮ ಗಂಡನ, ಅತ್ತೆಯ ಆಸೆಗೆಲ್ಲ ಎಲ್ಲಿ ಬೆಲೆ ಕೊಡುತ್ತಾರಮ್ಮ ಸ್ವಾತಿ. ನಮಗೀಗಲೇ ಮಗು ಬೇಡ ಎಂಬುದೇ ಈಗಿನ ಎಷ್ಟೋ ಹುಡುಗಿಯರ ವರಾತ. ನೀನೋ ಮದುವಾಯಾಗಿ ಒಂದೂವರೆ ವರ್ಷದೊಳಗೇ ತಾಯಿಯಾದೆ, ನಿನ್ನ ಗಂಡನ ಮನೆಯವರಿಗೆ ವಂಶೋದ್ಧಾರಕನನ್ನು ಹೆತ್ತು ಕೊಟ್ಟೆ.

ನಿನ್ನಂತಹ ಅಪರಂಜಿಯಂತಹ ಹುಡುಗಿ ಸೊಸೆಯಾಗಿ, ಎಲ್ಲರಿಗೂ ಸಿಗಬೇಕಲ್ಲ ಎಂದು ಲಲಿತಾರವರು ಆಡಿದ ಮಾತುಗಳನ್ನು ಕೇಳಿ ಚಿನ್ಮಯಿಯ ಮನಸಿಗೆ ತುಂಬಾ ನೋವಾಗಿತ್ತು.‌ ತನ್ನ ತಾಯಿ ಹೀಗೆ ಚಿನ್ಮಯಿಯನ್ನು ಚುಚ್ಚಿ ಮಾತನಾಡಿದ್ದು ಅನಿಕೇತನಿಗೂ ಸಿಟ್ಟನ್ನೇ ತರಿಸಿತ್ತು. ಏನೋ ಹೇಳಲು ಮುಂದಾದ ಅನಿಕೇತನನ್ನು ತಡೆದಿದ್ದಳು ಚಿನ್ಮಯಿ.

ರೀ ಸುಮ್ಮನಿದ್ದು ಬಿಡಿ. ಸ್ವಾತಿ ಗಂಡನ ಮನೆಗೆ ಹೊರಟು ನಿಂತಿದ್ದಾಳೆ. ಈಗ ನೀವೇನೋ ಹೇಳಿ, ಅದಿಕ್ಕೆ ಅತ್ತೆಯ ಮನಸಿಗೆ ನೋವಾಗಿ, ಸುಮ್ಮನೆ ರಂಪಾಟವಾಗುವುದು ಬೇಡ. ಇಷ್ಟು ದಿನ ಎಲ್ಲವೂ ಸುಸೂತ್ರವಾಗಿಯೇ ನಡೆದುಕೊಂಡು ಹೋಯಿತು. ಈಗ ಕೊನೆಯ ಹಂತದಲ್ಲಿ ಸುಮ್ಮನೆ ಮನಸುಗಳು ಕಹಿಯಾಗುವುದು ಬೇಡ ಎಂದ ಚಿನ್ಮಯಿಯ ಮುಖವನ್ನೇ ನೋಡಿದ್ದ ಅನಿಕೇತ್. ತನ್ನ ಹೆಂಡತಿಯ ಮಾತಿನಂತೆ ಏನೂ ಹೇಳದೆ ಸುಮ್ಮನಾಗಿದ್ದ.

ಸ್ವಾತಿಯನ್ನು ಅವಳ ಗಂಡನ ಮನೆಗೆ ಬಿಟ್ಟು ಬಂದು, ತನ್ನ ತಾಯಿತನ್ನು ಊರಿನ ಬಸ್ಸಿಗೆ ಹತ್ತಿಸಿದ್ದ. ಮನೆಗೆ ಬಂದಾಗ ಚಿನ್ಮಯಿ ಅಡುಗೆ ಮನೆಯಲ್ಲಿದ್ದಳು. ಅಡುಗೆ ಮನೆಯಲ್ಲಿ ಅದೇನೋ ಕೆಲಸ ಮಾಡುತ್ತಿದ್ದ ಚಿನ್ಮಯಿಯನ್ನೇ ನೋಡಿದ ಅನಿಕೇತನಿಗೆ ಅವಳ ತಾಳ್ಮೆ, ಸಂಯಮ, ಒಳ್ಳೆಯತನವನ್ನು ನೆನೆದು ಮನಸು ತುಂಬಿ ಬಂದಿತ್ತು. ಇಷ್ಟು ದಿನ ಬರೀ ಮನೆ, ಮನೆ ಎಂದೇ ಬಡಬಡಿಸುತ್ತಿದ್ದ ತನ್ನ ನಡವಳಿಕೆಯ ಬಗ್ಗೆ ಅದೇಕೋ ಜಿಗುಪ್ಸೆ ಮೂಡಿದಂತಾಗಿತ್ತು.

ನಮಗೀಗಲೇ ಮಗು ಬೇಡ, ಖರ್ಚು ವೆಚ್ಚಗಳನ್ನು ಭರಿಸುವುದು ಕಷ್ಟ ಎಂದು ಮುಂದೂಡುತ್ತಲೇ ಬಂದೆ. ಚಿನ್ಮಯಿಯ ಯಾವ ಆಸೆಗೂ ಬೆಲೆ ಕೊಡಲಿಲ್ಲ. ಆದರೆ ಈಗ ಸ್ವಾತಿಗಾಗಿ ಮಾಡಿದ ಖರ್ಚೇನು ಕಡಿಮೆಯೇ. ನನ್ನ ಹೆಂಡತಿಗೂ ತಾಯ್ತನದ ಸುಖವನ್ನು ಅನುಭವಿಸುವ ಹಕ್ಕಿದೆಯಲ್ಲವೆ. ಅದನ್ನು ಅವಳಿಂದ ದೂರಾಗಿಸಿ, ನಾನು ಎಷ್ಟು ಕಠೋರವಾಗಿ ನಡೆದುಕೊಂಡೆ ಎಂದುಕೊಂಡ ಅನಿಕೇತನ ಕಣ್ಣಂಚೂ ಒದ್ದೆಯಾಗಿತ್ತು. ಇಷ್ಟೆಲ್ಲ ಆದರೂ ಏನನ್ನೂ ತೋರಿಸಿಕೊಳ್ಳದೆ, ಎಲ್ಲರನ್ನೂ ನಗುತ್ತಲೇ ಸತ್ಕರಿಸಿ ಬೀಳ್ಕೊಟ್ಟ ಚಿನ್ಮಯಿಯ ಮನಸು ದೊಡ್ಡದು ಎನ್ನಿಸಿತ್ತು ಅನಿಕೇತನಿಗೆ.

ಅಡುಗೆ ಮನೆಯಲ್ಲಿದ್ದ ಚಿನ್ಮಯಿಯ ಬಳಿ ಬಂದು, ನನ್ನನ್ನು ಕ್ಷಮಿಸುವೆಯಾ ಚಿನ್ಮಯಿ ಎಂದು ಕೇಳಿದ್ದ ಅನಿಕೇತ್. ಅಚಾನಕವಾಗಿ ಅನಿಕೇತ್ ಹೀಗೆ ಕೇಳಿದ್ದನ್ನು ನೋಡಿ, ಏನೂ ಅರ್ಥವಾಗದ ಚಿನ್ಮಯಿ ಅವನ ಮುಖವನ್ನೇ ನೋಡುತ್ತ ನಿಂತಳು. ತನ್ನ ಮನಸಿನಲ್ಲಿದ್ದದ್ದೆಲ್ಲವನ್ನೂ ಚಿನ್ಮಯಿಯ ಬಳಿ ಹೇಳಿಕೊಂಡು, ಅವಳಲ್ಲಿ ಮನಸಾರೆ ಕ್ಷಮೆ ಕೇಳಿದ್ದ ಅನಿಕೇತ್. ತನ್ನ ಪತಿಯಲ್ಲಾದ ಈ ಬದಲಾವಣೆಯನ್ನು ನೋಡಿ‌ ಆಶ್ಚರ್ಯ, ಆನಂದ ಎರಡೂ ಒಟ್ಟಿಗೇ ಆಗಿತ್ತು ಚಿನ್ಮಯಿಗೆ.

ಅಂದ ಹಾಗೆ ನೀನಂದು ಕೇಳಿದ ಉಡುಗೊರೆಯನ್ನು, ನಾನಿಂದು ನಿನಗೆ ಕೊಡಲು ತಯಾರಿದ್ದೇನೆ ಎಂದು ಮುಗುಳುನಗು ಬೀರಿ, ತನ್ನ ಕಿವಿಯಲ್ಲಿ ಪಿಸುಗುಟ್ಟಿದ ಅನಿಕೇತನ ಮಾತನ್ನು ಕೇಳಿ ನಾಚಿದ ಚಿನ್ಮಯಿ, ತನ್ನ ಮುಖವನ್ನು ಅನಿಕೇತನ ಎದೆಯಲ್ಲಿ ಹುದುಗಿಸಿದ್ದಳು.

LEAVE A REPLY

Please enter your comment!
Please enter your name here