ನಮ್ಮ ತಟ್ಟೆ, ನಮ್ಮ ಊಟ. ಒಳ್ಳೆಯ ರುಚಿಕಟ್ಟಾದ ಅಡುಗೆ. ತಟ್ಟೆಯಲ್ಲಿ ಬಡಿಸಿದೆ. ಪ್ರತ್ಯೇಕ ವ್ಯಂಜನ , ತಮ್ಮ ತಮ್ಮ ಸ್ಥಾನದಲ್ಲಿ, ತಮ್ಮದೇ ಆದ ಒಂದು ಸ್ವಾದ. ನಮ್ಮ ಜೀವನ ಇದೇ ಊಟದ ತಟ್ಟೆಯ ತರಹ ಇದ್ದರೆ. ಒಂದು ಮನದ ವಿಚಾರ. ಹೇಗೆ ಊಟದ ತಟ್ಟೆಯಲ್ಲಿ ಪ್ರತಿಯೊಂದು ಪದಾರ್ಥದ ಒಂದು ನಿರ್ದಿಷ್ಟ ಸ್ಥಳ ಇರುತ್ತದೆಯೋ, ಅದರ ಹಾಗೆ, ನಮ್ಮ ಹೃದಯದಲ್ಲೂ, ನಮ್ಮ ನಮ್ಮವರ ಒಂದು ಸ್ಥಳ.
ಊಟದ ತಟ್ಟೆಯಲ್ಲಿ, ಮೊದಲು ಬಡಿಸುವುದು ಉಪ್ಪು. ಅದೂ ತಟ್ಟೆಯ ಎಡ ಬದಿಯಿಂದ, ಆದರೂ ಅದು ಯಾವಾಗಲೂ ಬಲಬದಿಯಲ್ಲಿ. ಏಕೆ ಹೇಳಿ. ಉಪ್ಪು ಇಲ್ಲದ ಅಡುಗೆ, ರುಚಿಯೇ ಇಲ್ಲ. ಇದೇ ನಮ್ಮ ಜೀವನದ ಸಾರ. ಜನ್ಮ ಕೊಟ್ಟ ತಂದೆ ತಾಯಿಯರು, ಇವರು ನಮ್ಮ ತಟ್ಟೆಯ ಉಪ್ಪು ಇದ್ದ ಹಾಗೆ, ಇವರು ಇಲ್ಲದೆ ಇದ್ದರೆ, ಜೀವನ ಉಪ್ಪು ಇಲ್ಲದ ಊಟದ ತರಹ.
ತಟ್ಟೆಯ ಮಧ್ಯ ಭಾಗದಲ್ಲಿ, ಅನ್ನ, ಸಾಂಬಾರ್. ಚೆನ್ನಾಗಿ ಕಲಿಸಿಯೇ ತಿನ್ನುವುದು, ಒಮ್ಮೆ ಚೆನ್ನಾಗಿ, ಅನ್ನ ಸಾಂಬಾರ್ ಕಲಿಸಿದರೆ ಆಯಿತು, ಮತ್ತೆ ಅದನ್ನು ಬೇರೆ ಬೇರೆ ಮಾಡಬಾರದು. ಹೀಗೆಯೇ ಇರುವುದು ಪತಿ ಪತ್ನಿಯ ಸಂಬಂಧಗಳು. ಸ್ವಲ್ಪವೇ ಕಾಲದಲ್ಲಿ ಹೇಗೆ ಒಂದು ಜೀವಿಯಾಗಿ ಬೆಸೆದು ಹೋಗುತ್ತಾರೆ.
ಈ ಅನ್ನ ಸಾಂಬಾರ್ ಮೇಲೆ ಸ್ವಲ್ಪ ಘಮ ಘಮಿಸುವ ತುಪ್ಪ ಹಾಕಿದರೆ ಇನ್ನಷ್ಟು ರುಚಿ ಬರುವದಲ್ಲವೆ. ಈ ರುಚಿ, ನಮ್ಮ ಜೀವನದಲ್ಲಿ ತರುವುರು ನಮ್ಮ ಮಕ್ಕಳು. ಅಜ್ಜ ಅಜ್ಜಿಯರಂತೂ, ಹಾಲಿನ ಮೇಲಿನ ಕನೆಯ ತರಹ. ಅನ್ನ ಸಾಂಬಾರು ಆದ ಮೇಲೆ ಬರುವದು ಬಿಸಿ ಬಿಸಿ ರೊಟ್ಟಿ, ಇಲ್ಲವೇ ಮೆತ್ತನೆ ಪದರು ಪದರು ಬಿಸಿ ಚಪಾತಿ. ನೀವು ಹೇಗೆ ಲಟ್ಟಿಸುವಿರಿ, ಹಾಗೆ ಆಕಾರ ತೆಗೆದು ಕೊಳ್ಳುವುದು ಚಪಾತಿ.
ಚೆನ್ನಾಗಿ ಸುಟ್ಟು, ಉಪಯೋಗ ಮಾಡಿದರೆ, ಎಲ್ಲಾ ಪಲ್ಲೆ, ಚಟ್ನಿಯ ಜೊತೆ ತಿನ್ನಬಹುದು. ಇದು, ನಮ್ಮ ಮನೆಗೆ ಬರುವ ಸೊಸೆಯ ಹಾಗೆ. ಎಲ್ಲರ ಜೊತೆ, ಸಮರಸ ಆಗಿ ಬಾಳುವಳು. ತಟ್ಟೆಯ ಬಲಗಡೆ ಇರುವದು, ಪಲ್ಲೆ. ರಸಪಲ್ಲೆ, ಸುಕ್ಕಾ ಭಾಜಿ, ಕೆಲವೊಮ್ಮೆ ಬಹಳ ಖಾರ. ಕೆಲವೊಮ್ಮೆ ಹುಳಿ ಜಾಸ್ತಿ. ಆದರೆ ಹೇಗೂ ಇರಲಿ, ತಟ್ಟೆಯಲ್ಲಿ ಇರಬೇಕು ಪಲ್ಲೆ. ಸ್ವಲ್ಪ ಇದ್ದರೂ ಪರವಾಗಿಲ್ಲ, ಒಂದೇ ಪಲ್ಲೆ ಇದ್ದರೂ ಪರವಾಗಿಲ್ಲ.
ಆದರೆ ಬೇಕು ತಟ್ಟೆಯಲ್ಲಿ. ಇವು ನಮ್ಮ ಒಡ ಹುಟ್ಟಿದವರು. ಅಕ್ಕ, ತಂಗಿ, ಅಣ್ಣ ತಮ್ಮ, ಯಾರೇ ಇರಲಿ. ಇರಲಿ ಒಬ್ಬಿಬ್ಬರು. ಮಸ್ತಿ ಮಾಡಲು, ತುಂಟ ನಗೆ, ಒಮ್ಮಮ್ಮೆ ಜಗಳ, ಮಾಡಲೂ ಬೇಕು. ತಟ್ಟೆಯಲ್ಲಿ, ಒಂದು ಬಟ್ಟಲಲ್ಲಿ ಹುಣ್ಣಿಮೆ, ಅಮಾವಾಸ್ಯೆ. ದಿನಗಳಲ್ಲಿ ಯಾವದೋ ಒಂದು ಸಿಹಿ ತಿಂಡಿ.
ನಾವು ದಿನಾಲೂ ತಿನ್ನುವುದಿಲ್ಲ , ಆ ಸಿಹಿ ತಿಂಡಿಗಳು. ಆದರೆ ಆ ಸಿಹಿ ತಿಂಡಿ ಇದ್ದರೆ ಊಟಕ್ಕೆ ಒಂದು ವಿಶೇಷ ಕಳೆ. ಇವರೇ ನಮ್ಮ ನೆಂಟರು.
ದಿನಾಲೂ ಭೇಟಿ ಆಗದ ನೆಂಟರು ಆಪ್ತರು. ಇವರು ಭೇಟಿ ಆದರೆ, ಮನಸ್ಸಿಗೆ ಏನೋ ಒಂದು ತರಹ ದ ಸಿಹಿ ತಿಂಡಿ ತಿಂದ ಹಾಗೆ ಸಂತೃಪ್ತಿ,
ಅವರೊಡನೆ ಹರಟೆ. ಸುಖ ದುಃಖ ಹಂಚಿ ಕೊಳ್ಳುವುದು. ಮನಸ್ಸು ಹಗುರ ಗೊಳಿಸುವ ಸುಲಭ ವಿಧಾನ.
ತಟ್ಟೆಯ ಉಪ್ಪಿನ ಕೆಳಗೆ ಇರುವದು ಲಿಂಬೆ ಹಣ್ಣಿನ ತುಣುಕು, ಚಟ್ನಿ, ಉಪ್ಪಿನ ಕಾಯಿ, ಇವು ಊಟದ ಸ್ವಾದ ಹೆಚ್ಚಿಸುವ ವ್ಯಂಜನಗಳು. ಬಾಯಿಗೆ ಚಟ್ ಪಟ ಸ್ವಾದ ಹೆಚ್ಚಿಸುವ ವಸ್ತುಗಳು. ಈ ಕೆಲಸ ಮಾಡುವರು ನಮ್ಮ ಗೆಳೆಯರು ನಮ್ಮ ಜೀವನದ ಸುಖ ದುಃಖಗಳಲ್ಲಿ ಜೊತೆಗೆ ಇರುವವರು.
ಚಟ್ನಿಯ ನಂತರ ಬರುವದು ಕೋಸಂಬರಿ, ಯಾವುದೇ ಪ್ರಕಾರದ್ದೇ ಇರಲಿ ಅದು ಪೌಷ್ಠಿಕ ಆಹಾರ.
ಒಮ್ಮೊಮ್ಮೆ ಪಲ್ಲೆ ಇರದೇ ಇದ್ದರೂ, ಕೋಸಂಬರಿ ಜೊತೆ ಊಟ ಮುಗಿಸಬಹುದು. ಕೋಸಂಬರಿ ಪಲ್ಲೆಯ ಕೆಲಸ ಮಾಡಿತು. ಪಲ್ಲೆಯ ಬದಲಿಗೆ, ಸಹಾಯ ಮಾಡುವ ಕೆಲಸ ಕೋಸಂಬರಿ ಮಾಡುತ್ತದೆ. ಕೋಸಂಬರಿ ಅಂದರೆ, ನಮ್ಮ ನೆರೆ ಹೊರೆಯ ವರು, ಇವರೇ ಆಪದ್ಬಾಂಧವರು, ಈ ವ್ಯಂಜನಗಳ ಮತ್ತು ನಮ್ಮ ಸಂಬಂಧಗಳ ತುಲನೆ ಮಾಡುತ್ತಿಲ್ಲ. ಆದರೆ ಹೋಲಿಕೆ ಮಾಡುವ ಪ್ರಯತ್ನ ಮಾಡಿದೆ ಅಷ್ಟೇ.
ಪ್ರತ್ಯೇಕ ಪದಾರ್ಥಕ್ಕೂ ಒಂದು ವಿಶಿಷ್ಟ ಗುಣಧರ್ಮ ಇರುತ್ತದೆ. ಉಪ್ಪಿನ ರುಚಿ, ಸಕ್ಕರೆಯ ಸಿಹಿ, ಹುಣಸೆಯ ಹುಳಿ, ಮೆಣಸಿನ ಕಾಯಿಯ ಖಾರ, ಮೆಂತೆ ಪಲ್ಲೆಯ ರುಚಿ, ಹಾಗಲ ಕಾಯಿಯ ಕಹಿ. ಹೀಗೆಂದು ಹಾಗಲ ಕಾಯಿ ಪಲ್ಲೆ ತಿನ್ನುವದನ್ನು ಬಿಡುತ್ತೇವೆ ಏನು. ಅದಕ್ಕೆ ಬೆಲ್ಲ, ಹುಣಸೆ ಹುಳಿ ಸೇರಿಸಿ ರುಚಿಯಾದ ಪಲ್ಲೆ ಮಾಡುತ್ತೇವೆ ಅಲ್ಲವೇ. ಹೀಗೆಯೇ ಸಂಬಂಧ ಗಳಲ್ಲಿ ಕೂಡ ಒಮ್ಮೊಮ್ಮೆ ಕಹಿ ರುಚಿ ಬರುತ್ತದೆ.
ಹಾಗೆಂದ ಮಾತ್ರಕ್ಕೇ ಸಂಬಂಧಗಳನ್ನ ಬಿಡಲಿಕ್ಕೆ ಆಗ್ತದೇನು. ಅದಕ್ಕೆ ಕೆಲವು ಸಿಹಿ, ಹುಳಿ ಸೇರಿಸಿ ಮತ್ತೆ ಜೋಡಿಸಲಿಕ್ಕೆ ಆಗುವದಿಲ್ಲವೇನು.
ಇಲ್ಲದಿದ್ದರೆ ನಮ್ಮ ರುಚಿ ಸ್ವಲ್ಪ ಬದಲು ಮಾಡಿಕೊಳ್ಳಬೇಕಾಗುತ್ತದೆ. ಏಕೆ. ಸಂಬಂಧಗಳು ಮುರಿದು ಬೀಳಬಾರದು. ಪಂಚ ಪಕ್ವಾನ್ನಗಳನ್ನ ಗಬ ಗಬ ತಿಂದರೆ ಬಿಕ್ಕು ಹತ್ತಲಿಕ್ಕೆ, ನೀರು ಕುಡಿಯ ಬೇಕು, ಬೆನ್ನ ಮೇಲೆ ನಿಧಾನವಾಗಿ ಚಪ್ಪರಿಸಿ ಬೇಕು. ಈ ಬೆನ್ನ ಮೇಲೆ ಕೈ ಆಡಿಸುತ್ತಾ ಇರುವವರೇ ನಮ್ಮವರು ಆಲ್ಲವೆ.
ಯಾವುದೂ ಅತೀ ಆಯಿತು ಎಂದರೆ ಅದು ಕೆಡುವುದೇ. ಸಂಬಂಧಗಳಲ್ಲಿ ಕೂಡ, ಅತೀ ಸಲುಗೆ ಆದರೂ ಅದು ಒಳ್ಳೆಯದಲ್ಲ. ಸಂಬಂಧಗಳು ಕೆಲವೊಮ್ಮೆ ನಮಗೋಸ್ಕರ. ಅವನ್ನು ಎಂದೂ ಕಳೆದುಕೊಳ್ಳಬಾರದು. ಸಿಟ್ಟು, ಲೋಭ, ಪ್ರೇಮ, ಮಾಯೆ, ಆದರ, ಸಮ್ಮಾನ, ಮರ್ಯಾದೆ ಇವೆಲ್ಲ ತಮ್ಮ ತಮ್ಮ ಪ್ರಮಾಣದಲ್ಲಿ ಕೂಡಿದರೆ ತಯಾರಾಯಿತು ರುಚಿಯಾದ ಊಟದ ತಟ್ಟೆ.
ಪ್ರಯತ್ನ ಮಾಡಿ ನೋಡಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.