ಅತಿಯಾದ ಹಣದ ವ್ಯಾಮೋಹ ನಮ್ಮ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ನೀವೇ ನೋಡಿ.

0
5205

ಅತಿಯಾದ ಹಣ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದೇ. ಈ ಬಗ್ಗೆ ಒಂದು ವಿಶ್ಲೇಷಣೆ. ಹೌದು, ನಾನು ಎಲ್ಲೋ ಓದಿದಠ ನೆನಪು, ಹಣ ಉಪ್ಪಿನಂತೆ ಅದು ಹೆಚ್ಚಾದರೆ ಮುಂದೆ ನೀರು ಕುಡಿಯಲೇ ಬೇಕು ಎಂದು. ನಿಜವಾಗಿ ಹೇಳಬೇಕೆಂದರೆ ಅತಿಯಾದ ಹಣ ಮನುಷ್ಯನಿಗೆ ಆ ಕ್ಷಣದ ಸಂತೋಷ ಕೊಡಬಹುದೇನೋ ಆದರೆ ಇದೊಂದು ಜೀವಮಾನದ ತೊಂದರೆ ಎಂಬುದೂ ಸುಳ್ಳಲ್ಲ. ಹಣ ಎಂದರೆ ಐಶಾರಾಮ, ಹಾಗೂ ಐಶಾರಾಮ ಎಂದರೆ ಅನಾರೋಗ್ಯ.

ಒರಳು ಕಲ್ಲಿನ ಜಾಗ ಮಿಕ್ಸರ್ ಗ್ರೈಂಡರ್ ಆವರಿಸಿತು, ಬಟ್ಟೆ ಒಗೆಯಲು ಯಂತ್ರ, ಕಸ ಗುಡಿಸಲು ಮನೆ ಒರೆಸಲು ಯಂತ್ರಗಳು ಬಂದಾಯಿತು, ಮನೆಗೆ ನಾಕು ಕಾರು ನಾಕು ಬೈಕುಗಳಿಗಳಿವೆ. ಇನ್ನು ಈ ರೆಫ್ರಿಜಿರೇಟರ್ ಬಂದು ನಮ್ಮ ಆರೋಗ್ಯವನ್ನು ಎಷ್ಟು ಹಾಳು ಮಾಡಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ..? ಇವೆಲ್ಲದರ ಮೂಲ ಹುಡುಕೋದಾದರೆ ನಿಮಗೆ ಸಿಗುವ ಉತ್ತರ ಹಣ.

ಇದು ಇನ್ನಿಲ್ಲದಂತೆ ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿದೆ. ಇದಕ್ಕೆ ಕೊಡುವ ಸಬೂಬು ಏನೆಂದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನಕ್ಕೆ ಒಂದು ವೇಗ ಬೇಕು ಎನ್ನುವುದು. ಸರಿಯೇ.. ವೇಗ ಯಾಕೆ ಬೇಕು..? ಹಣ ಮಾಡಲು ಬೇಕು. ಹಣ ಯಾಕೆ ಬೇಕು..? ಮತ್ತದೇ ಯಂತ್ರಗಳ ಖರೀದಿಗೆ ಐಶಾರಾಮಿ ಜೀವನಕ್ಕಾಗಿ ಬೇಕು.. ಈ ಚಕ್ರವ್ಯೂಹದಲ್ಲಿ ಸಿಕ್ಕು ನರಳುವುದು ಮಾತ್ರ ನಮ್ಮ ದೇಹ ಮತ್ತು ಮನಸ್ಸು.

ನಾನು ಚಿಕ್ಕೋನಿದ್ದಾಗ ಯಾವ ಬೇಕರಿಯ ತಿಂಡಿ ತಿನಿಸುಗಳನ್ನು ತಿಂದವನೇ ಅಲ್ಲ, ಯಾಕೆಂದರೆ ನಮ್ಮ ಪೋಷಕರು ಕೊಡಿಸುತ್ತಲೇ ಇರಲಿಲ್ಲ, ಇದಕ್ಕೆ ಕಾರಣ ಅವರಿಗೆ ನನ್ನ ಮೇಲೆ ಪ್ರೀತಿ ಇರಲಿಲ್ಲ ಎಂದಲ್ಲ, ಆಗ ಹಣವಿರಲಿಲ್ಲ. ಒಮ್ಮೊಮ್ಮೆ ಯೋಚಿಸಿದಾಗ ನಮ್ಮ ತಂದೆ ತಾಯಿ ಹಣವಿಲ್ಲದ ಕಾರಣ ಹೀಗೆ ಮಾಡಿದರೂ ಸರಿಯಾಗೇ ಮಾಡಿದ್ದಾರೆ ಎನ್ನಿಸುತ್ತದೆ. ಏಕೆಂದರೆ ನನ್ನ ಓರಗೆಯ ವಯಸ್ಸಿನವರು ಬಳಲುತ್ತಿರುವ ಯಾವ ಖಾಯಿಲೆಯೂ ನನ್ನ ಹತ್ತಿರ ಸುಳಿದೇ ಇಲ್ಲ.

ಇನ್ನೂ ಕೆಲವರು ತಮ್ಮ ತಂದೆ ತಾಯಿಗಳಿಂದ ಐಶಾರಾಮಿ ಬೈಕುಗಳನ್ನು ಉಡುಗೊರೆಯಾಗಿ ಪಡೆದು ವೇಗವಾಗಿ ಓಡಿಸಿ ಕಸರತ್ತು ಮಾಡಿಕೊಂಡು ಕೈ ಕಾಲು ಊನ ಮಾಡಿಕೊಂಡಿದ್ದರೆ ಇನ್ನೂ ಕೆಲವರು ಸತ್ತೇ ಹೋಗಿದ್ದಾರೆ. ಆದರೆ ಭರ್ಜರಿ ಆಸ್ತಿ ಇದೆ ಹಣ ಇದೆ. ಇದುವೇ ಆರೋಗ್ಯವೇ..? ಇನ್ನು ಕೆಲ ಸಿರಿವಂತರು ಮಕ್ಕಳಿಗೆ ಪಾಕೆಟ್ ಮನಿ ಕೊಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದರಿಂದ ಮಕ್ಕಳು ಒಂದೆಡೆ ಜಂಕ್ ಫುಡ್ ತಿಂದು ಆರೋಗ್ಯ ಕೆಡಿಸಿಕೊಂಡರೆ, ಮತ್ತೊಂದೆಡೆ, ಸಿಗರೇಟು, ಬೀರು, ಮಾದಕ ದ್ರವ್ಯಗಳಿಗೆ ದಾಸರಾಗ್ತಿದ್ದಾರೆ, ಇದುವೇನಾ ಆರೋಗ್ಯ..?

ಹೆಣ್ಣು ಮಕ್ಕಳೆಂದರೆ ಪೋಷಕರಿಗೆ ಬಲು ಮುದ್ದು ಖರ್ಚು ಮಾಡಲು ದಂಡಿಯಾಗಿ ಹಣ ಕೊಡುತ್ತಾರೆ, ಆಗ ಆ ಹೆಣ್ಣು ಮಕ್ಕಳು ಬಗೆ ಬಗೆಯ ಮೈದಾಹಿಟ್ಟಿನ ಹಾಗೂ ಅತಿ ಸಕ್ಕರೆಯ ಹಾಗೂ ದಾಲ್ಡಾದಿಂದ ತಯಾರಿಸಿದ ತಿಂಡಿಗಳನ್ನು ತಿಂದು ಸಂಭ್ರಮಿಸಿ ಮುಂದೊಂದು ದಿನ ಮದುವೆಯಾಗಿ ಮಕ್ಕಳಾಗುತ್ತಿಲ್ಲ ಎಂದು ಕೊರಗುತ್ತಾರೆ. ಇದುವೇನಾ ಆರೋಗ್ಯ,?? ಇದುವೇನಾ ಸುಖ ಜೀವನ ಎಂದರೆ..?

ಅತಿಯಾಗಿ ಹಣ ಸೇರುತ್ತಾ ಸೇರುತ್ತಾ ಯಾವುದೇ ಮನುಷ್ಯನಲ್ಲಿ, ಒಂದು ಹುಂಬತನ, ಉದ್ಧಟತನ ಬೆಳೆಯುತ್ತಾ ಹೋಗುತ್ತದೆ. ಅದೆಂತ ಖಾಯಿಲೆಯೇ ಆದರೂ ಹಣವಿದ್ದರೆ ಪರಿಹಾರ ಮಾಡಿಕೊಂಡುಬಿಡುತ್ತೇನೆ ಎಂಬ ಭ್ರಮೆ ಹೆಚ್ಚುತ್ತದೆ. ಅಲ್ಲಾ ರೀ ವೆಂಟಿಲೇಟರ್ ನಲ್ಲಿ ಬದುಕೋದು, ಒಂದು ಬದುಕೇ, ಇನ್ನೊಬ್ಬರಿಂದ ಮಲ ಮೂತ್ರ ಬಾಚಿಸಿಕೊಂಡು ಬದುಕುವುದೂ ಒಂದು ಬದುಕೇ..? ಔಷಧಗಳನ್ನೇ ಆಹಾರ ಮಾಡಿಕೊಂಡು ಐಶಾರಾಮಿ ಬಂಗಲೆಯಲ್ಲಿರುವುದು, ಕಾರುಗಳಲ್ಲಿ ಓಡಾಡುವುದೂ ಒಂದು ಬದುಕೇ..? ಆರೋಗ್ಯವೇ..???

ಬಹಳ ಮಂದಿಯ ತಪ್ಪು ತಿಳುವಳಿಗೆ ಒಂದಿದೆ, ರೋಗಕ್ಕೆ ಔಷಧ ಪಡೆದು ಗುಣಮುಖವಾಗುವುದೇ ಆರೋಗ್ಯ ಎಂದು. ಇದಂತೂ ಅಪ್ಪಟ ಸುಳ್ಳು. ರೋಗಗಳು ಬರದಂತೆ, ಬಂದರೂ ದೇಹ ಹಾಗೂ ಮನಸ್ಸುಗಳು ತಂತಾನೇ ಗುಣ ಪಡಿಸಿಕೊಳ್ಳುವಲ್ಲಿ ದೇಹವನ್ನು ಸಜ್ಜುಗೊಳಿಸುವುದೇ ನಿಜವಾದ ಆರೋಗ್ಯ. ಇತ್ತೀಚಿನ ಬೆಳವಣಿಗೆಯನ್ನೇ ನೋಡಿ ಹಣವಿದ್ದವನನ್ನು ಕೊರೋನಾ ಉಳಿಸಿತೇ..? ಅದಕ್ಕೆ ಹಣವಿದ್ದವ ಇಲ್ಲದವ ಮುಖ್ಯ ಅಲ್ಲ.

ರೋಗ ನಿರೋಧಕ ಶಕ್ತಿ ಯಾರಲ್ಲಿ ಇತ್ತೋ ಅವರೇ ಸಿರಿವಂತರು. ಜೀವವೇ ಇಲ್ಲವಾದ ಮೇಲೆ ಹಣವನ್ನಿಟ್ಟುಕೊಂಡು ಏನು ಮಾಡೋದು…?
ಹಣ ಹೆಚ್ಚುತ್ತಾ ಹೆಚ್ಚುತ್ತಾ. ದೊಡ್ಡ ದೊಡ್ಡ ಜನರ ಸಂಪರ್ಕ, ದೊಡ್ಡ ದೊಡ್ಡ ಚಟಗಳು, ಇನ್ನೂ ಹೆಚ್ಚು ಹಣ ಮಾಡುವ ಹಪಹಪಿ, ತಡರಾತ್ರಿಯ ಪಾರ್ಟಿಗಳು. ಬೇಡದ ವ್ಯಸನಗಳು. ಹೀಗೇ ಸಾಲು ಸಾಲು ಅನಾರೋಗ್ಯಕರ ಜೀವನ ಶೈಲಿಯ ಪಟ್ಟಿ ಬೆಳೆಯುತ್ತದೆ. ಶ್ರೇಷ್ಟತೆಯ ಹುಚ್ಚು ಹಿಡಿದು ಮಾನಸಿಕವಾಗಿ ಬಳಲಬೇಕಾಗುತ್ತದೆ.

ಇತರರನ್ನು ಕೀಳಾಗಿ ನೋಡುವ ದುರ್ಗುಣವೂ ಹುಟ್ಟಿಕೊಳ್ಳುತ್ತದೆ. Dr. ಬಿ.ಎಂ ಹೆಗ್ಡೆ ಸಾಹೇಬರು ಹೇಳುವಂತೆ, ನಾವು ಇತರರನ್ನು ಕೀಳಾಗಿ ನೋಡುವುದು ಅಥವಾ ದ್ವೇಷಿಸುವುದು ಮಾಡುವುದರಿಂದ ನಮ್ಮ ಜೀವ ಕೋಶಗಳು ತಮ್ಮನ್ನು ತಾವೇ ದ್ವೇಷಿಸಿಕೊಳ್ಳಲು ಕೀಳಾಗಿ ನೋಡಲು ಶುರು ಮಾಡ್ತವಂತೆ, ಇಲ್ಲಿದೆ ನೋಡಿ ಎಲ್ಲ ಮಾನಸಿಕ ದೈಹಿಕ ವ್ಯಾಧಿಗಳ ಮೂಲ.

ನನ್ನ ಬಳಿ ಹಣವಿದೆ, ಕೋಟಿ ರೂಪಾಯಿಗಳ ಆರೋಗ್ಯ ವಿಮೆ (health insurance) ಇದೆ, ಯಾವ ರೋಗ ಬಂದರೂ ಆಸ್ಪತ್ರೆ ಸೇರಿ ಸರಿ ಪಡಿಸಿಕೊಳ್ತೀನಿ, ಅನ್ನೋ ಒಂದು ತಪ್ಪು ಸಂದೇಶ ಮೆದುಳಿಗೆ ರವಾನೆಯಾದರೆ ಅಲ್ಲಿಗೆ ಮುಗಿಯಿತು, ನಮ್ಮ ಸುಪ್ತ ಮನಸ್ಸು ತನ್ನ ಕಾರ್ಯ ಶುರು ಮಾಡಿ ಎಲ್ಲ ರೋಗಗಳನ್ನು ತಂದು ಗುಡ್ಡೆ ಹಾಕಿಬಿಡುತ್ತದೆ. ಅಸಲಿಗೆ ಆಸ್ಪತ್ರೆ ಸೇರುವುದು ಆರೋಗ್ಯವೇ ಅಲ್ಲ. (ಅಪಘಾತಗಳನ್ನು ಹೊರತು ಪಡಿಸಿ) ಇನ್ನು ಹಣವಿಲ್ಲದವರಂತೂ ಇರುವವರನ್ನು ಅನುಕರಣೆ ಮಾಡಲು ಹೋಗಿ, ಇಲ್ಲವೇ ನಾವು ಹಾಗೆ ಇಲ್ಲವಲ್ಲ ಎಂದು ಕೊರಗಿ, ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕೆಡಿಸಿಕೊಂಡಿರುವ ಬಹಳ ಮಂದಿಯನ್ನು ನೋಡಿದ್ದೇನೆ.

ಇನ್ನು ಕೆಲವರು ಊಟ ನಿದ್ದೆಯನ್ನೂ ಬಿಟ್ಟು ದುಡಿಯುತ್ತಾರೆ, ಕೇಳಿದರೆ ದುಡಿಯುವ ವಯಸ್ಸಲ್ಲಿ ದುಡಿದು ಬಿಡಬೇಕು, ಆಮೇಲೆ ಕೂತು ತಿನ್ನಬಹುದು ಎನ್ನುತ್ತಾರೆ. ಅಲ್ಲಾ ಸ್ವಾಮಿ ಚೆನ್ನಾಗಿ ತಿಂದುಂಡು, ನಿದ್ರಿಸಿ, ದುಡಿಯುವುದನ್ನು ಬಿಟ್ಟು ಬರಿದೇ ದುಡಿಯುತ್ತಾ ಹೋದರೆ ನೀವು ಕೂತು ಉಣ್ಣುವ ಸಮಯಕ್ಕೆ, ನಿಮಗೆ ರುಚಿಯಾಗಿ ಏನನ್ನೂ ತಿನ್ನುವ ಯೋಗವನ್ನೇ ಕಳೆದುಕೊಂಡು ರೋಗಗ್ರಸ್ಥರಾಗಿರ್ತೀರಿ, ಆವಾಗ ಏನು ತಿಂತೀರಿ…? ದುಡೀವಾಗಲೂ ತಿನ್ನಲಿಲ್ಲ ಮಲಗಲಿಲ್ಲ, ಕೂತು ಉಣ್ಣುವಾಗ ದೇಹ ಸಹಕರಿಸ್ತಿಲ್ಲ. ಮತ್ತೆ ನಿಮ್ಮ ಜೀವನವನ್ನೂ ಜೀವಿಸಿದ್ದಾದರೂ ಯಾವಾಗ..? ಇದುವೇ ಆರೋಗ್ಯವೇ..?

ನಿಮ್ಮ ಕಷ್ಟ ಕಾಲಕ್ಕೆ ನಿಮ್ಮಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಇದೆ, ಬಂಗಲೆ ಇದೆ, ಎಲ್ಲ ಇದೆ ಆರೋಗ್ಯವೇ ಇಲ್ಲ.. ಹೀಗೆ ಬದುಕಿಯಾದರೂ ಏನನ್ನು ಸಾಧಿಸಬೇಕು. ಬದುಕು ಎಂದರೆ ಸುಖವಾಗಿರಬೇಕು ಎನ್ನುವುದೇ ಎಲ್ಲರ ಕನಸು ಅಲ್ಲವೇ..? ಅದಕ್ಕಾಗಿ ದುಡಿದು ದುಡಿದೂ ಹಣ್ಣಾದಿರಿ ಅಲ್ಲವೇ..? ಎಲ್ಲಿ ಸುಂದರವಾಗಿ ಬದುಕಿದಿರಿ..? ಸುಖ ದುಃಖ ಸೌಂದರ್ಯಗಳು ಅನುಭವವಾಗಿರಬೇಕು ಅಲ್ಲವೇ..? ನಾಳಿನ ಕನಸಿಗಾಗಿ ದುಡಿದಿರಿ, ವಾಸ್ತವದಲ್ಲಿ ಬದುಕಲೇ ಇಲ್ಲ. ಈಗ ಎಲ್ಲ ಇದೆ, ಆದರೂ ಬದುಕು ಯಾತನಾಮಯ. ನಾನು ದುಡಿಯಬೇಡಿ ಎಂದು ಹೇಳಲು ಹೊರಟಿಲ್ಲ.

ಆದರೆ ದುಡಿಮೆಯ ಜೊತೆ ಜೊತೆಗೆ ಜೀವನದ ಸಾರವನ್ನೂ ಅನುಭವಿಸಿ, ನಾಳೆ ತಿಂದರೆ ಚೆನ್ನಾಗಿರುತ್ತದೆ ಎಂದು ಇಂದು ರುಬ್ಬಿ ಇಡಲು ಜೀವನವೇನು ದೋಸೆ ಹಿಟ್ಟೇ…? ನಾನು ಇಲ್ಲಿ ಹೇಳಲು ಬಯಸಿದ್ದು ಹಣವಂತರು ಕೆಟ್ಟವರು ಬಡವರು ಒಳ್ಳೆಯವರು ಎಂದಲ್ಲ. ಹಣವನ್ನು ಬಳಕೆ ಮಾಡಲು ಬರದವನಿಗೆ ಹಣ ಬಂದು ಸೇರಿದರೆ ಅವನು ಆಸ್ಪತ್ರೆ ಸೇರುವುದು ಖಾತ್ರಿ ಎಂದು.

ಹಣ ಬೇಕು ಆದರೆ ಹಣವೇ ಎಲ್ಲವೂ ಅಲ್ಲ, ಆರೋಗ್ಯ ಎನ್ನುವುದು ಕಾಸಿಗೆ ಸಿಗುವ ವಸ್ತುವಲ್ಲ. ಅದೊಂದು ಅಮೋಘ ಅನುಭವ. ಹಣವನ್ನು ನಿಭಾಯಿಸುವ ಕಲೆ ತಿಳಿದವನಿಗೆ ಎಷ್ಟು ಹಣ ಬಂದರೂ ವಿಚಲಿತನಾಗಲಾರ. ತನ್ನ ಆರೋಗ್ಯ ಕಾಪಾಡಿಕೊಂಡು ಹೋಗ್ತಾನೆ.

ಆರೋಗ್ಯಕರವಾಗಿ ತಿನ್ನಿ, ಸೊಂಪಾಗಿ ನಿದ್ರಿಸಿ, ನಿಯಮಿತ ವ್ಯಾಯಾಮ ಮಾಡಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ, ಆಸ್ಪತ್ರೆಗಳು ಔಷಧಗಳಿಂದ ದೂರವಿರಿ, ನಿರೋಗಿಗಳಾಗಿ, ಶತಾಯುಷಿಗಳಾಗಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here