ದೀಪಾವಳಿ ಮುಹೂರ್ತ, ಶುಭ – ಲಾಭ. ದೀಪಾವಳಿ ಹಬ್ಬದ ಬಗ್ಗೆ ಎಲ್ಲಾ ವಿವರಗಳನ್ನು ಇಲ್ಲಿ ತಿಳಿಯಿರಿ.
ನೀರುತುಂಬುವ ಹಬ್ಬ : ದಿನಾಂಕ 02/11/2021, ಮಂಗಳವಾರ, ಗೋವತ್ಸ ದ್ವಾದಶಿ. ಗೋಪೂಜಾ, ಗೋದಾನ. ಧನತೃಯೋದಶಿ. ಧನ್ವಂತರಿ ಜಯಂತಿ, ಯಮದೀಪದಾನ.
ನರಕಚತುರ್ದಶಿ : ದಿನಾಂಕ 04/11/2021, ಗುರುವಾರ, ನರಕಚತುರ್ದಶಿ. ಅಭ್ಯಂಗ, ಆರತಿ.
ಶ್ರೀಮಹಾಲಕ್ಷ್ಮಿ ಕುಬೇರ ಪೂಜಾ ಮುಹೂರ್ತ : ದಿನಾಂಕ 04/11/2021. ಗುರುವಾರ, ಸಂಜೆ ವ್ಯವಹಾರಿಕ ಸ್ಥಳಗಳಲ್ಲಿ ಶ್ರೀಮಹಾಲಕ್ಷ್ಮೀ ಕುಬೇರ ಪೂಜಾ, ಸಾಯಂಕಾಲ 04.30ರಿಂದ 06.00ರ ವರೆಗೆ ಶುಭ, 07.30ರಿಂದ 09.00 ಉತ್ತಮ, ಮಧ್ಯರಾತ್ರಿ 12.11 ರಿಂದ 01.41 ಲಾಭ, ಮಧ್ಯರಾತ್ರಿ 01.00 ರಿಂದ 03.05 ರವರೆಗೆ ಸಿಂಹಲಗ್ನ ಮುಹೂರ್ತವಿದೆ.
ಪಾಡ್ಯಪೂಜಾ : ದಿನಾಂಕ 05/11/2021, ಶುಕ್ರವಾರ, ನಸುಕಿನ 03.30ರಿಂದ 05.00 ಶುಭ, 05.00 ರಿಂದ 06.30 ಅಮೃತ, ಬೆಳಿಗ್ಗೆ 07.30ರಿಂದ 09.00 ಲಾಭ, 09.00ರಿಂದ 10.30 ಅಮೃತ, ಮಧ್ಯಾಹ್ನ 12.00ರಿಂದ 01.30 ಶುಭ, ಸಂಜೆ 05.20ರಿಂದ 06.12ರವರೆಗೆ ಗೋಧೂಳಿ, ಗೋದೂಳಿ ಮುಹೂರ್ತದಲ್ಲಿ ಘನಸರಕಾರದ ನಿರ್ಣಯದಂತೆ ಮನೆಮನೆಗಳಲ್ಲಿ, ಮಂದಿರಗಳಲ್ಲಿ, ಸಂಘಸಂಸ್ಥೆ, ವ್ಯವಹಾರಿಕ ಸ್ಥಳಗಳಲ್ಲಿ ಗೋಪೂಜೆ, ರಾತ್ರಿ 09.01 ರಿಂದ 10.31ರ ವರೆಗೆ ಲಾಭ ಮುಹೂರ್ತವಿದೆ.
ದಿನಾಂಕ 06/11/2021 ಶನಿವಾರ, ಭಾವಬಿದಿಗೆ. ದಿನಾಂಕ 07/11/2021 ರವಿವಾರ, ಭಗಿನಿ ತೃತಿಯಾ, ದಿನಾಂಕ 09/11/2021 ಸೋಮವಾರ, ಪಾಂಡವಪಂಚಮಿ, ಕಡೆಪಂಚಮಿ. ಪಾಡ್ಯದಿಂದ ಪಂಚಮಿವರೆಗಿನ ಈ ಐದು ದಿನಗಳಲ್ಲಿ , ಉದ್ಯಮ, ಅಂಗಡಿಗಳ ಮುಂತಾದ ಹೊಸ ವ್ಯವಹಾರ ಮಾಡಬೇಕು.
ಆಶ್ವಯುಕ್ ಕೃಷ್ಣಪಕ್ಷಸ್ಯ ಚತುರ್ದಶ್ಯಾಂ ವಿಧೂದಯೇ | ತೈಲಾಭ್ಯಂಗಂ ಪ್ರಕರ್ತವ್ಯಂ ನರೈರ್ನರಕಭೀರುಭಿಃ || ಈ ದಿನ ತೈಲಾಭ್ಯಂಗ ವಿಧಿ. ನರಕಚತುರ್ದಶೀವಿಷಯದಲ್ಲಿ ಸ್ಮೃತಿಯು ಹೀಗೆ ಹೇಳುತ್ತದೆ. ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ದಿನ ಚಂದ್ರೋದಯ ಸಮಯದಲ್ಲಿ ನರಕದಿಂದ ಹೆದರುವ ಮಾನವರೆಲ್ಲರೂ ತೈಲಾಭ್ಯಂಗವನ್ನು ಅವಶ್ಯವಾಗಿ ಮಾಡಬೇಕು. ( ನರಕ ಚತುರ್ದಶೀ ಚಂದ್ರೋದಯ 05:20 AM )
ನೀರು ತುಂಬುವ ಹಬ್ಬ ಮತ್ತು ನರಕ ಚತುರ್ದಶಿ. ದೀಪಾವಳಿ ಹಬ್ಬ ವರ್ಷಗಳಲ್ಲಿ ಬರುವ ಪ್ರಮುಖವಾದ ಹಬ್ಬ. ದೀಪಾವಳಿ ಸಂಭ್ರಮದ ಆಚರಣೆ ಮತ್ತು ಪರ್ವಕಾಲವು ಆಗಿದೆ. ಪುರಾಣಗಳ ಪ್ರಕಾರ ದೀಪಾವಳಿ ದಾರಿದ್ರ್ಯವನ್ನು ನಾಶಮಾಡುತ್ತದೆ. ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ ಮತ್ತು ವರ್ಷವಿಡಿ ಸಂತೋಷವಾಗಿ ಇರುತ್ತಾರೆ ಎಂಬುದೊಂದು ನಂಬಿಕೆ. ಆಶ್ವೀಜ ಮಾಸದ ಕೊನೆಯ ದಿನ ಹಾಗೂ ಕಾರ್ತಿಕ ಮಾಸದ ಪ್ರಾರಂಭದಲ್ಲಿ ಬರುವ ಹಬ್ಬ ‘ದೀಪಾವಳಿ’.
ಈ ಹಬ್ಬ ತ್ರಯೋದಶಿಯ ಸಂಜೆಯಿಂದಲೇ ಆರಂಭವಾಗುತ್ತದೆ. ಈ ಹಬ್ಬಕ್ಕಾಗಿ ಎರಡು ದಿನಗಳ ಮೊದಲೇ ತಯಾರಿ ಮಾಡಿಕೊಂಡಿರುತ್ತಾರೆ. ಹೋಳಿಗೆಯಿಂದ ಹಿಡಿದು ಈಗ ಎಲ್ಲವೂ ಮಾರ್ಕೆಟಿನಲ್ಲಿ ಸಿಗುತ್ತದೆ. ಹಿಂದೆಲ್ಲ ಹಾಗೆ ಇರಲಿಲ್ಲ. ಅದಕ್ಕಾಗಿ ತಯಾರಿ ಮಾಡಬೇಕಿತ್ತು. ಅಟ್ಟದ ಮೇಲಿನಿಂದ ಹಣತೆ ದೀಪಗಳನ್ನು ತೆಗೆದಿಡುವುದು. ಆಕಾಶಬುಟ್ಟಿ ಮಾಡುವುದು, ತಂದ ಪಟಾಕಿಗಳನ್ನು ಮಕ್ಕಳಿಗೆಲ್ಲಾ ಹಂಚುವುದು, ಹೊಸ ಬಟ್ಟೆಗಳನ್ನು ಹೊಲಿಸಿಕೊಂಡು ಹಬ್ಬದ ಹಿಂದಿನ ಸಂಜೆ ತರುವುದು. ದೊಡ್ಡ ದೊಡ್ಡ ಅಂಗಳ ಗಳಿರುವ ಹಳೆಯ ಮನೆಗಳು.
ಮಕ್ಕಳಿಗೆ ಹೇಳುವಂತೆ ಸಾರ್ಸಿ, ಗುಡ್ಸಿ, ರಂಗೋಲಿ ಹಾಕಿ, ಮುಖ್ಯವಾಗಿ ಬಚ್ಚಲ ಮನೆ, ಕೊಟ್ಟಿಗೆ, ಭಾವಿ ಇವುಗಳಿಗೆಲ್ಲ ಸುಣ್ಣ, ಕೆಮ್ಮಣ್ಣು ಹಚ್ಚುವುದು, ತಾಮ್ರದ ಹಂಡೆಗಳನ್ನು ತೊಳೆದು ಹೊಸ ನೀರು ತುಂಬಿಸಿ, ಹಂಡೆಯ ಕಂಠಕ್ಕೆ ಹಿಂಡ್ಳಚ್ಚಿ ಬಳ್ಳಿ ಕಟ್ಟಿ, ಒಲೆಗೆ ಕುಂಟೆ ಕಟ್ಟಿಗೆ ಜೋಡಿಸಿ, ಸಂಜೆ 6 ಗಂಟೆ ಹೊತ್ತಿಗೆ, ಸಗಣಿಯಿಂದ ಗಣಪತಿ ಮಾಡಿ, ಗರಿಕೆ ಸಿಗಿಸಿ, ಶಂಖ,ಚಕ್ರ, ಪದ್ಮ ,ಗೋಪಾದ, ರಂಗೋಲಿ ಬರೆದು, ಪೂಜೆ ಮಾಡಿ, ಬಟವೆ ಪಾಯಸ(ಶಾಸ್ತ್ರಕ್ಕೆ ಅಂತ) ನೈವೇದ್ಯ ಮಾಡುತ್ತಾರೆ. ಆಗ ತುಳಸಿ ಮುಂದೆ, ಹಾಗೂ ಮುಂದುಗಡೆ ಒಂದಷ್ಟು ದೀಪಗಳನ್ನು ಹಚ್ಚಿಟ್ಟರೆ, ಹಬ್ಬಕ್ಕೆ ನಾಂದಿ ಹಾಡಿದಂತೆ.
ಮರುದಿನ ‘ನರಕ ಚತುರ್ದಶಿ’ ಬೆಳಗಿನ ಜಾವ 4:00 ಗಂಟೆಗೆ ಎದ್ದು, ಹಳೆಯ ರೇಡಿಯೋ ಅಥವಾ ಟ್ರಾನ್ಸಿಸ್ಟರ್ ಹಾಕಿ ಅಕ್ಕಪಕ್ಕದವರಿಗೆಲ್ಲ ಕೇಳುವಂತೆ ರೆಡಿಯೋನಲ್ಲಿ ಒಂದೇ ಮಾತರಂ ಗೀತೆಯನ್ನು ಜೋರಾಗಿ ಹಾಕುತ್ತಿದ್ದೆವು. ಇದು ಮುಗಿಯುತ್ತಿದ್ದಂತೆ, ನಾಗಸ್ವರ ವಾದನ ಸಣ್ಣಗೆ ಹಾಕಿ, ಸ್ನಾನದ ತಯಾರಿ ದೇವರ ಮುಂದೆ ದೀಪ ಹಚ್ಚಿ, ಹಸೆ ಬರೆದು ಮಣೆ ಹಾಕಿ, ಮಣೆಯ ಮೇಲೆ ಶಲ್ಯ ಹಾಕಿ ಇಬ್ಬಿಬ್ಬರನ್ನು ಕೂರಿಸಿ ಎಣ್ಣೆ ಶಾಸ್ತ್ರ. ಇದಾದಮೇಲೆ ಬಚ್ಚಲು ಮನೆಯಲ್ಲಿ ಬಾನಿ ಎರೆತ(ದೊಡ್ಡದೊಂದು ಬಳಪದ ಬಾನಿ ನೆಲದೊಳಗೆ ಹೂಳಿಸಿರುತ್ತಿದ್ದರು.
ಕುದಿಯುವ ನೀರನ್ನು ಅದಕ್ಕೆ ಹಾಕಿ ತಣ್ಣೀರು ಬೆರೆಸಿ ಬಾನಿ ಒಳಗೆ ಇಬ್ಬರು ಮಕ್ಕಳು ಒಬ್ಬರಿಗೊಬ್ಬರು ನೀರು ಹಾಕಿಕೊಳ್ಳುತ್ತಿರುತ್ತಾರೆ) ನಂತರ ಯಾರಿಗೆ ಕೈಬಿಡುವಾಗುವುದೊ ಅವರು ಬಂದು ಬಚ್ಚಲು ಮನೆಯಲ್ಲಿ ಕೂರಿಸಿ ತಲೆ ತಿಕ್ಕಿ ಶುಭ್ರವಾದ ನೀರು ಹಾಕಿ ತಲೆ ಒರೆಸುತ್ತಿದ್ದರು, ಎಷ್ಟೇ ಜನ ಇದ್ದರು ಎಂಟು ಗಂಟೆ ಒಳಗೆ ಎಲ್ಲರ ಅಭ್ಯಂಜನ ಮುಗಿದುಹೋಗುತ್ತಿತ್ತು.
ಎಲ್ಲರಿಗೂ ಒಂದೇ ತರಹದ ಹೊಸ ಬಟ್ಟೆಗಳು (ಆಕಾಶಬಣ್ಣದ ನೀಲಿ ಬಿನ್ನಿ ಬಟ್ಟೆಗಳು ಅದರೊಳಗೆ, ಶರಟು, ಲಂಗ, ಬ್ಲೌಸ್ ಎಲ್ಲವೂ) ಅದನ್ನೇ ಸಂಭ್ರಮದಿಂದ ಕುಂಕುಮ ಹಚ್ಚಿ ಹಾಕಿಕೊಂಡು ದೇವರಿಗೆ ನಮಸ್ಕರಿಸಿ, ಊರ ಹುಡುಗರೆಲ್ಲ ಸೇರಿ ಪಟಾಕಿ ಹೊಡೆಯಲು ಶುರು. ಬೆಳಗಿನ ತಿಂಡಿ ಕಡ್ಲೇಬೀಜ ಹಾಕಿರುವ ಗೊಜ್ಜವಲಕ್ಕಿ, ಅಥವಾ ಉಪ್ಪಿಟ್ಟು, ಜೊತೆಗೊಂದು ಗುಳ ಪಾವಟೆ. ಆಮೇಲೆಲ್ಲ ದೊಡ್ಡವರ ಪೂಜೆ, ಅಡುಗೆ ಕೆಲಸಗಳು. ಇದು ತ್ರಯೋದಶಿ ದಿನದಿಂದ ನರಕ ಚತುರ್ದಶಿ ದಿನದವರೆಗಿನ ಆಚರಣೆ.
ನರಕಚತುರ್ದಶಿಯ ಒಂದು ಕಥೆ :-ದೂರ್ವಾಸ ಮುನಿಗಳು ಭೂಲೋಕದಲ್ಲಿ ಸಂಚರಿಸುತ್ತಿದ್ದಾಗ, ಒಂದು ಹುಡುಗಿ ಪಾರಿಜಾತದ ಹೂಮಾಲೆ ಕಟ್ಟುತ್ತಿದ್ದಳು. ಅದರ ಸುಗಂಧ ಎಲ್ಲೆಡೆ ಹರಡಿತ್ತು. ಮುನಿಗಳು ಆ ಮಾಲೆಯನ್ನು ಕೇಳಿ ಪಡೆದು ದೇವಲೋಕಕ್ಕೆ ಹೋಗುತ್ತಿರುವಾಗ, ರಾಜ ಇಂದ್ರನು ಐರಾವತದ ಮೇಲೆ ತನ್ನ ಪರಿವಾರದೊಂದಿಗೆ ಬರುತ್ತಿದ್ದ. ದುರ್ವಾಸರು ರಾಜ ಎಂಬ ಪ್ರೀತಿಯಿಂದ, ಗೌರವದಿಂದ ಹೂವಿನ ಮಾಲೆಯನ್ನು ಇಂದ್ರನಿಗೆ ಕೊಡುತ್ತಾರೆ. ಇಂದ್ರನು ಆ ಹಾರವನ್ನು ಉದಾಸೀನದಿಂದ ಐರಾವತದ ತಲೆಯ ಮೇಲೆ ಹಾಕುತ್ತಾನೆ. ಆನೆಗೆ ಪಾರಿಜಾತದ ಹೂವಿನ ಸುಗಂಧ ತಡೆಯಲಾಗದೆ ಸಿಟ್ಟು ಬಂದು ಅದನ್ನು ಕೊಡವಿ ತಲೆಯಿಂದ ಕೆಳಗೆ ಹಾಕಿ ಕಾಲಿನಿಂದ ಹೊಸಕಿ ಹಾಕುತ್ತದೆ.
ಇದನ್ನು ಕಂಡ ದುರ್ವಾಸರಿಗೆ ಕೋಪ ಬಂದು, ಇಂದ್ರ ನೀನು ರಾಜನೆಂಬ ಅಹಂಕಾರದಿಂದ ಈ ರೀತಿ ವರ್ತಿಸುತ್ತಿರುವೆ. ಅತಿ ಬೇಗನೆ ನಿನ್ನ ಐಶ್ವರ್ಯ ವೆಲ್ಲವು ನಾಶವಾಗಿ ಪದವಿ ಕಳೆದುಕೊಳ್ಳುವೆ ಎಂದು ಶಾಪ ಕೊಟ್ಟರು. ಇಂದ್ರನಿಗೆ ತನ್ನ ತಪ್ಪಿನ ಅರಿವಾಯಿತು. ಐರಾವತದಿಂದ ಕೆಳಗೆ ಇಳಿದು ಬಂದು ಬೇಡಿದರು ದುರ್ವಾಸರು ಮಣಿಯಲಿಲ್ಲ. ನಿನ್ನ ದುರಹಂಕಾರಕ್ಕೆ ಒಂದು ಸಲ ಬುದ್ಧಿ ಬರಬೇಕು ಎಂದರು. ಕಾಲ ಮಿಂಚಿ ಹೋಗಿತ್ತು. ದೂರ್ವಾಸರ ಶಾಪದಿಂದ ಇಂದ್ರಲೋಕ ವಲ್ಲದೆ ಇತರ ಲೋಕಗಳಲ್ಲೂ ಸಹ ದರಿದ್ರ ಉಂಟಾಗುತ್ತದೆ.
ಲಕ್ಷ್ಮಿಯು ಹೊರಟುಹೋಗುತ್ತಾಳೆ. ದೇವತೆಗಳೆಲ್ಲ ಇಂದ್ರ ನಿಲ್ಲದ ರಾಜ್ಯದಲ್ಲಿ ನಿಶ್ಯಕ್ತರಾಗುತ್ತಾರೆ. ರಾಕ್ಷಸರು ಅದನ್ನು ಆಕ್ರಮಿಸುತ್ತಾರೆ. ದೇವಾನುದೇವತೆಗಳೆಲ್ಲ ಸೇರಿ ಚರ್ಚಿಸಿ, ರಾಕ್ಷಸರನ್ನು ಸೇರಿಸಿಕೊಂಡು ಸಮುದ್ರ ಮಂಥನ ಮಾಡುತ್ತಾರೆ. ಲಕ್ಷ್ಮಿ,ತುಳಸಿ, ಶಂಖ ಹೀಗೆ ಹಲವಾರು ಅಮೂಲ್ಯ, ವಸ್ತುಗಳು ಬಂದವು. ಕೊನೆಯದಾಗಿ ಸಾಕ್ಷಾತ್ ವಿಷ್ಣುವೇ ಧನ್ವಂತರಿ ಯಾಗಿ ಬಲಗೈಯಲ್ಲಿ ಧನ್ವಂತರಿ ಪುಸ್ತಕ, ಎಡಗೈಯಲ್ಲಿ ಅಮೃತಕಲಶ ಹೊತ್ತು ಪ್ರಕಟನಾದನು. ಆ ದಿನ ಕೃಷ್ಣಪಕ್ಷ ತ್ರಯೋದಶಿ ದಿನವಾಗಿತ್ತು.
ಆದುದರಿಂದ ಈ ದಿನ ಸಂಜೆ ಲಕ್ಷ್ಮಿ ರೂಪದ ಹಸುವಿನ ಸಗಣಿಯಿಂದ ಗಣಪತಿ, ಲಕ್ಷ್ಮಿ ರೂಪದಲ್ಲಿರುವ ನೀರು ತುಂಬಿದ ಹಂಡೆ ಪೂಜೆ, ಮಾಡುತ್ತಾರೆ. ಧನ್ವಂತರಿ ರೂಪದಲ್ಲಿ ಬಂದ ವಿಷ್ಣು ಅಮೃತವನ್ನು ದೇವತೆಗಳಿಗೆ ಕೊಡುತ್ತಾನೆ ಎಲ್ಲರೂ ಚೈತನ್ಯಶೀಲರಾಗುತ್ತಾರೆ. ರಾಕ್ಷಸರನ್ನು ಓಡಿಸುತ್ತಾರೆ. ಲಕ್ಷ್ಮೀಸಹಿತ ನಾರಾಯಣ ವೈಕುಂಠದಲ್ಲಿ ನೆಲೆಸುತ್ತಾನೆ.
ನೀರಿನಲ್ಲಿ ಗಂಗೆ, ಎಣ್ಣೆಯಲ್ಲಿ ಲಕ್ಷ್ಮಿ ಇರುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಎಣ್ಣೆ ಹಚ್ಚಿ ಕೊಂಡು ಅಭ್ಯಂಜನ ಮಾಡಿ ಹೊಸಬಟ್ಟೆ ಹಾಕಿಕೊಳ್ಳುತ್ತಾರೆ. ಇದರಿಂದ ಆಯುರಾರೋಗ್ಯ ಭಾಗ್ಯ ಎಂಬ ನಂಬಿಕೆ ಇದೆ. ಹಾಗೂ ಪಾಪಗಳ ನಿವಾರಣೆಯಾಗುತ್ತದೆ. ಇದೇ ದಿನ ನರಕಾಸುರನನ್ನು ಸಂಹಾರ ಮಾಡಿದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣನು ಎಣ್ಣೆ ಹಚ್ಚಿಕೊಂಡು ಗಂಗೆಯಾದ ನೀರಿನಿಂದ ಅಭ್ಯಂಜನ ಮಾಡುತ್ತಾನೆ. ದುಷ್ಟ ಸಂಹಾರದ ಸಂಭ್ರಮಕ್ಕಾಗಿ ಎಣ್ಣೆಸ್ನಾನ, ಹೊಸಬಟ್ಟೆ ಧರಿಸುವುದು, ಪಟಾಕಿ ಸಿಡಿಸುವುದು, ಸಿಹಿ ಭೋಜನ ಮಾಡುವುದು ರೂಢಿಯಾಗಿ ಬಂದಿದೆ. ಈ ದಿನ ಮುಖ್ಯವಾಗಿ ಈ ಶ್ಲೋಕವನ್ನು ಹೇಳುತ್ತಾರೆ.
ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ! ಅಮೃತ ಕಳಶ ಹಸ್ತಾಯ ಸರ್ವ ಭಯ ವಿನಾಶಾಯ ಸರ್ವ ರೋಗ ನಿವಾರಣಾಯ! ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ ಓಂ ಶ್ರೀ ಮಹಾವಿಷ್ಣು ಸ್ವರೂಪ! ಶ್ರೀ ಧನ್ವಂತರಿ ಸ್ವರೂಪ! ಓಂ ಶ್ರೀ ಶ್ರೀ ಔಷಧ ಚಕ್ರ ನಾರಾಯಣಾಯ ನಮಃ!