ಕನ್ನಡದ ಹೆಸರಾಂತ ಧಾರವಾಹಿ ಗಟ್ಟಿಮೇಳದ ಖ್ಯಾತ ಕಳನಾಯಕಿಯ ಪಾತ್ರ ನಿರ್ವಹಿಸುತ್ತಿರುವ ನಟಿ ಸ್ವಾತಿ ಅವರ ಸಂದರ್ಶನ ಇಲ್ಲಿದೆ. ತಮ್ಮ ಉತ್ತಮ ಅಭಿನಯದಿಂದ ಜನರ ಮನದಲ್ಲಿ ಅಚ್ಚಳಿಯದ ಅಮೋಘ ನಟನೆಯನ್ನು ಮಾಡುತ್ತಿರುವ ಸ್ವಾತಿಯವರು ನಮ್ಮ ಮಾಹಿತಿಗುರು ವೆಬ್ ಸೈಟ್ ಗೆ ವಿಶೇಷವಾಗಿ ಸಂದರ್ಶನವನ್ನು ನೀಡಿದ್ದಾರೆ. ಸ್ವಾತಿ ಅವರು ಹುಟ್ಟಿದ್ದು ಎಲ್ಲಿ? ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲ ಮೈಸೂರಿನಲ್ಲಿ.
ನಾನು ಪಕ್ಕಾ ಮೈಸೂರಿನ ಹುಡುಗಿ. ಮೈಸೂರಿನ ಸಂಸ್ಕೃತಿ, ಆಚರಣೆ ಹಾಗೂ ಗುಣಗಳನ್ನು ನಮ್ಮ ತಂದೆ-ತಾಯಿ ನನ್ನಲ್ಲಿ ತುಂಬಿದ್ದಾರೆ. ನಾನು ಜ್ಯುವೆಲ್ರಿ ಡಿಸೈನಿಂಗ್ ನಲ್ಲಿ ಡಿಪ್ಲೋಮೋ ಮಾಡಿದ್ದೇನೆ. ಹಾಗೂ ಬಿಕಾಂ ಕೂಡ ಕಂಪ್ಲೀಟ್ ಮಾಡಿಕೊಂಡಿದ್ದೇನೆ. ನನ್ನ ಬೆನ್ನೆಲುಬಾಗಿ ನಮ್ಮ ತಂದೆ ತಾಯಿ ಇಬ್ಬರೂ ನಿಂತಿದ್ದಾರೆ. ಎಲ್ಲ ರೀತಿಯ ಸಪೋರ್ಟ್ ಅನ್ನು ಕೂಡ ನನಗೆ ಅವರು ನೀಡುತ್ತಾರೆ. ಇದುವರೆಗೂ ನಾನು ಏನೇ ಕೆಲಸವನ್ನು ಮಾಡಿದರೂ ಸಹ ಪ್ರತಿಯೊಂದರಲ್ಲೂ ಅವರು ನನಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ಅವರು ಸದಾ ನನ್ನ ಬೆನ್ನೆಲುಬಾಗಿ ನಿಲ್ಲುತ್ತಾರೆ.
ಸ್ವಾತಿ ಅವರು ಕನ್ನಡ ಕಿರುತೆರೆಯಲ್ಲಿ ಮೊದಮೊದಲು ಅನುಭವಿಸಿದ ಕಷ್ಟಗಳು ಅಥವಾ ಉತ್ತಮ ಬೆಳವಣಿಗೆ. ನಾನು ಕಿರುತೆರೆಯ ರಂಗಕ್ಕೆ ಪಾದಾರ್ಪಣೆ ಮಾಡುವಾಗ ನನಗೆ ಅಷ್ಟೇನೂ ತೊಂದರೆ ಅಥವಾ ಕಷ್ಟಗಳು ಎದುರಾಗಲಿಲ್ಲ. ಆದರೆ ಒಂದು ಸಮಯದಲ್ಲಿ ನಾನು ಅಭಿನಯ ಮಾಡುವ ಸಂದರ್ಭದಲ್ಲಿ ನನಗೆ ಒಂದು ಅಪಘಾ’ತವಾಯಿತು, ಅಪಘಾ’ತದಲ್ಲಿ ನಾನು ಬದುಕುಳಿದಿದ್ದೇ ಹೆಚ್ಚು. ಆಗ ನನ್ನ ಜೀವನದಲ್ಲಿ ಬಹಳಷ್ಟು ಏರು-ಪೇರುಗಳಾದವು. ಈಗ ನಾನು ಬದುಕು ಉಳಿದಿರುವುದು ನನಗೆ ಮರುಜನ್ಮವೇ ಸರಿ.
ಸ್ವಾತಿ ಅವರಿಗೆ ಗಟ್ಟಿಮೇಳ ಧಾರಾವಾಹಿಯಲ್ಲಿ ಪಾತ್ರ ಸಿಕ್ಕ ಬಗ್ಗೆ? ಗಟ್ಟಿಮೇಳ ಧಾರಾವಾಹಿಯಲ್ಲಿ ನನಗೆ ಅಚಾನಕ್ಕಾಗಿ ಸುಹಾಸಿನಿ ಪಾತ್ರವೂ ಲಭ್ಯವಾಯಿತು. ಸುಹಾಸಿನಿ ವಸಿಷ್ಠ ಪಾತ್ರವನ್ನು ನಿರ್ವಹಿಸುತ್ತಿದ್ದ ಮೊದಲಿನ ನಟಿಯು ಧಾರವಾಹಿಯನ್ನು ತ್ಯಜಿಸಿದ ನಂತರ ಧಾರಾವಾಹಿಯ ತಂಡದವರು ಪಾತ್ರಕ್ಕೆ ಸೂಕ್ತವಾಗುವ ನಟಿಯನ್ನು ಹುಡುಕುತ್ತಿದ್ದರು. ಅದೇ ಸಮಯದಲ್ಲಿ ಧಾರವಾಹಿ ತಂಡ ನನ್ನನ್ನು ಸಂಪರ್ಕ ಮಾಡಿದರು.
ಕೇವಲ ಒಂದೇ ದಿನದಲ್ಲಿ ನನ್ನ ಪಾತ್ರವು ಖಾಯಂ ಎಂದು ನಿರ್ಧಾರವಾಯಿತು. ಇಂದು ಸಂಜೆ ನನಗೆ ಕರೆ ಬಂತು ಮಾರನೆಯದಿನ ಬೆಳಿಗ್ಗೆಯಿಂದಲೇ ನನ್ನ ಪಾತ್ರದ ಚಿತ್ರೀಕರಣವೂ ಶುರುವಾಯಿತು. ನಾನು ಹಠಾತ್ತನೆ ಮೈಸೂರಿನಿಂದ ಹೊರಟು ಬಂದು ಚಿತ್ರೀಕರಣದಲ್ಲಿ ಭಾಗಿಯಾಗಿ ನನ್ನ ಕೆಲಸವನ್ನು ಶುರು ಮಾಡಿದೆ.
ಬಿಡುವಿನ ಸಮಯದಲ್ಲಿ ಸ್ವಾತಿ ಅವರು ಏನು ಮಾಡುತ್ತಾರೆ? ನಿಜವಾಗಿಯೂ ಹೇಳಬೇಕೆಂದರೆ ನಾನು ಕೊಂಚ ಸೋಮಾರಿ ಏಕೆಂದರೆ ನನಗೆ ಶೂಟಿಂಗ್’ನಲ್ಲಿ ಬಿಡುವು ಸಿಗುವುದು ಬಹಳ ಕಡಿಮೆ. ಹಾಗಾಗಿ ನನಗೆ ತಲೆಗೆ ದಿಂಬು ಕೊಟ್ಟರೆ ಸಾಕು ಎಂದು ಕಾಯುತ್ತಿರುತ್ತೇನೆ. ನಾನು ಆಭರಣ ವಿನ್ಯಾಸ ಅಧ್ಯಯನ ಮಾಡಿರುವುದರಿಂದ ನಾನು ಆಗಾಗ ಚಿತ್ರ ಬಿಡಿಸುತ್ತೇನೆ. ಆಭರಣಗಳ ಚಿತ್ರವನ್ನು ಬಿಡಿಸುತ್ತೇನೆ ಹಾಗೂ ನನಗೆ ಓದುವ ಅಭ್ಯಾಸ ಸಹ ಇದೆ. ಇತರೆ ಮನರಂಜನಾ ಅಪ್ಲಿಕೇಶನ್ ಗಳಲ್ಲಿ ವಿಡಿಯೋವನ್ನು ಮಾಡುತ್ತಿರುತ್ತೇನೆ.
ಧಾರವಾಹಿಯ ಸುಹಾಸಿನಿ ವಸಿಷ್ಠ ಅವರಿಗೂ ಹಾಗೂ ನಿಜಜೀವನದ ಸ್ವಾತಿ ಅವರ ಗುಣಗಳಿಗೆ ಏನಾದರೂ ಸಂಬಂಧವಿದೆಯೇ? ಖಂಡಿತವಾಗಿಯೂ ನಾನು ಧಾರವಾಹಿಯಲ್ಲಿ ಅಭಿನಯಿಸುವ ಪಾತ್ರಕ್ಕೂ ಹಾಗೂ ನನ್ನ ಗುಣಗಳಿಗೂ ಯಾವುದೇ ಸಂಬಂಧವಿಲ್ಲ. ಆದರೆ ನನ್ನ ಅದೃಷ್ಟವೋ ದುರಾದೃಷ್ಟವೋ ನನಗೆ ಗೊತ್ತಿಲ್ಲ. ನಾನು ಇದುವರೆಗೂ ಮಾಡಿರುವ ಪಾತ್ರವೆಲ್ಲವು ಖಳ’ನಾಯಕಿ ಅಥವಾ ನೆಗೆ’ಟಿವ್ ಶೇಡ್ ಅನ್ನು ಹೊಂದಿರುತ್ತದೆ.
ಎಲ್ಲರೂ ಹೇಳುತ್ತಾರೆ ನಾನು ನಿಜ ಜೀವನದಲ್ಲಿ ತುಂಬಾ ಭಾವನಾತ್ಮಕ ಹಾಗೂ ಸ್ವೀಟ್ ಪರ್ಸನ್ ಅಂತ. ನನ್ನ ಸೀರಿಯಲ್ ಜೀವನಕ್ಕೂ ನಿಜ ಜೀವನಕ್ಕೂ ಯಾವುದೇ ರೀತಿಯ ಹೋಲಿಕೆಯಿಲ್ಲ.
ಸ್ವಾತಿ ತಮ್ಮ ಜೀವನದಲ್ಲಿ ಸದಾ ನೆನೆಸಿಕೊಳ್ಳುವ ವ್ಯಕ್ತಿಗಳು. ಖಂಡಿತವಾಗಿಯೂ ಇಂತಹ ಸಮಯದಲ್ಲಿ ನಾನು ಕೆಲವು ವ್ಯಕ್ತಿಗಳನ್ನು ಸ್ಮರಿಸಿ ಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತೇನೆ. ಇಂದು ಜನ ನನ್ನನ್ನು ಗುರುತಿಸುತ್ತಾರೆ ಎನ್ನುವುದಕ್ಕೆ ಅವರೇ ರೀಸನ್ ಒಬ್ಬರ ಹೆಸರು ತರುಣ್ ಎಂದು, ಅವರು ನನ್ನ ಒಳ್ಳೆಯ ಸ್ನೇಹಿತರು ಅವರಿಂದಲೇ ನಾನು ಕಿರುತೆರೆಯ ಪ್ರವೇಶ ಪಡೆದದ್ದು. ಮೊದಲು ನಾನು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಮಾಡಿದೆ.
ನನಗೆ ಅಪಘಾ’ತವಾದಾಗ ನಾನು ಮತ್ತೊಮ್ಮೆ ಬಣ್ಣವನ್ನು ಹಚ್ಚುವುದೇ ಇಲ್ಲ ಎಂದು ಅಂದುಕೊಂಡಿದ್ದೆ. ಬಹಳ ಕಡೆ ಆಡಿಶನ್ ಕೊಟ್ಟಿದ್ದೆ. ಅಂತಹ ಸಮಯದಲ್ಲಿ ನನ್ನ ಜೀ ಕುಟುಂಬ ದಲ್ಲಿ ಆರೂರು ಜಗದೀಶ್ ಹಾಗೂ ರಾಘವೇಂದ್ರ ಹುಣಸೂರು ಅವರು ನನ್ನಲ್ಲಿ ಒಂದು ಆತ್ಮಸ್ಥೈರ್ಯ ತುಂಬಿ ಶುಭವಿವಾಹ ಎನ್ನುವ ಧಾರವಾಹಿಗೆ ಖಳನಾ’ಯಕಿಯ ಪಾತ್ರಕ್ಕೆ ನನ್ನನ್ನು ರಿಪ್ಲೇಸ್ ಮಾಡಿದರು. ಇವರನ್ನು ನಾನು ಜೀವನದಲ್ಲಿ ಮರೆಯುವುದಿಲ್ಲ.
ಸ್ವಾತಿ ಅವರು ಮುಂದೇನಾದರೂ ಸಿಹಿಸುದ್ದಿ ನೀಡುತ್ತಾರ? ಹೌದು ಸಿಹಿ ಸುದ್ದಿ ಎಂದರೆ ಅತ್ಯುತ್ತಮ ಸಾಧನೆ ಮಾಡಬೇಕು ಎಂದುಕೊಂಡಿದ್ದೇನೆ. ಅತಿಶೀಘ್ರದಲ್ಲೇ ಒಂದು ಸಿಹಿಸುದ್ದಿಯನ್ನು ಕೊಡುತ್ತೇನೆ. ಅಲ್ಲಿ ತನಕ ಅದು ಸರ್ಪ್ರೈಸ್ ಆಗಿರಲಿ. ಮನೆಯಲ್ಲಿ ಈ ವರ್ಷವೇ ಮದುವೆ ಆಗು ಎಂದು ಹೇಳುತ್ತಿದ್ದಾರೆ ಆದರೂ ಆಗಬಹುದು ಹೇಳಲು ಅಸಾಧ್ಯ.
ಸ್ವಾತಿ ಅವರ ನಟನೆ ಹಾಗೂ ಉಡುಗೆ-ತೊಡುಗೆ ಬಹಳ ಫೇಮಸ್ ಆಗಿದೆ ಇದರ ಬಗ್ಗೆ ತಮ್ಮ ಅಭಿಪ್ರಾಯ? ನಾನು ಹಾಕುವ ಉಡುಪುಗಳನ್ನು ನಾನೆ ಡಿಸೈನ್ ಮಾಡಿಕೊಳ್ಳುತ್ತೇನೆ. ನಾನು ಮಾಡಿರುವ ಎಲ್ಲಾ ಧಾರವಾಹಿಗಳಲ್ಲಿ ಅದರಲ್ಲಿಯೂ ಸರ್ವ ಮಂಗಳ ಮಾಂಗಲ್ಯೆ, ಶುಭವಿವಾಹ ಧಾರವಾಹಿಗಳಲ್ಲಿ ನೀವು ಹಾಕುವ ವಸ್ತ್ರಗಳು ಬಹಳ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ನನಗೆ ಹೇಳುತ್ತಿದ್ದರು.
ನೀವು ಯಾವ ರೀತಿಯ ಬಟ್ಟೆಗಳನ್ನು ಹಾಕುತ್ತೀರಿ ಎಂದು ನೋಡುವುದಕ್ಕೆ ಆದರೂ ನಾವು ಧಾರವಾಹಿಯನ್ನು ನೋಡುತ್ತೇವೆ ಎಂದು ಹೇಳುತ್ತಿದ್ದರು. ನಾನು ಕೂಡ ಒಂದು ಬಟ್ಟೆಯನ್ನು ಒಮ್ಮೆ ಹಾಕಿದರೆ ಅದನ್ನು ಮತ್ತೆ ಧಾರವಾಹಿಯಲ್ಲಿ ಬಹಳ ಅಪರೂಪವಾಗಿ ರಿಪೀಟ್ ಮಾಡುತ್ತೇನೆ. ಹಾಗಾಗಿ ನನ್ನದು ಬಹಳ ವಾರ್ಡ್ರೋಬ್ ಕಲೆಕ್ಷನ್ ಗಳು ಇವೆ. ಏನೇ ಮಾಡಿದರೂ ವಿಭಿನ್ನವಾಗಿ ಮಾಡಬೇಕು ಎನ್ನುವುದು ನನ್ನ ಧ್ಯೇಯ.
ಈಗಿನ ಪೀಳಿಗೆಯ ನಟರಿಗೆ ಇರಬೇಕಾದ ಅರ್ಹತೆ ಹಾಗೂ ತಿಳಿದುಕೊಳ್ಳಬೇಕಾದ ಅಂಶಗಳು. ಯಾವುದೇ ನಟರಿಗೆ ಆದರೂ ಮೊದಲನೆಯದಾಗಿ ಸಮಯಪ್ರಜ್ಞೆ ಇರಲೇಬೇಕು. ಒಬ್ಬ ವ್ಯಕ್ತಿಯು ಸಮಯ ತಡಮಾಡಿದರೆ ಇಡೀ ತಂಡಕ್ಕೆ, ಚಿತ್ರೀಕರಣಕ್ಕೆ ತೊಂದರೆ ಎದುರಾಗುತ್ತದೆ. ಅಷ್ಟೇ ಅಲ್ಲದೆ ನಟ-ನಟಿಯರಿಗೆ ತಾಳ್ಮೆ ಬಹಳ ಮುಖ್ಯ.
ಆತ್ಮಸ್ಥೈರ್ಯದಿಂದ ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಂಡು ಇನ್ನಿತರರ ಮಾತನ್ನು ಕೇಳದೆ ಮುನ್ನಡೆಯಬೇಕು. ಮಾಡುವ ಕೆಲಸದ ಮೇಲೆ ನಂಬಿಕೆ ಇರಬೇಕು. ಹಾಗೂ ಮಾಡುವ ಕೆಲಸದ ಮೇಲೆ ಗೌರವವಿದ್ದರೆ ಪ್ರತಿಯೊಬ್ಬರು ಸಹ ಗೆಲುವು ಪಡೆಯಬಹುದು.
ಚಿತ್ರೀಕರಣದ ಸಮಯದಲ್ಲಿ ಸಹಕಲಾವಿದರ ಸ್ಪಂದನೆ ಹಾಗೂ ನಡವಳಿಕೆ ಹೇಗಿರುತ್ತದೆ? ನನ್ನ ಅದೃಷ್ಟವೆಂಬಂತೆ ಇರುವರೆಗೂ ನಾನು ಮಾಡಿರುವ ಎಲ್ಲಾ ಧಾರವಾಹಿಗಳಲ್ಲಿ ತಾಂತ್ರಿಕ ವರ್ಗದವರಾಗಿರಬಹುದು ಅಥವಾ ನಟರಾಗಿರಬಹುದು ಎಲ್ಲರೂ ಬಹಳ ಸ್ನೇಹದಿಂದ ವರ್ತಿಸುತ್ತಾರೆ. ನಾವು ಒಂದು ಮನೆಯ ವಾತಾವರಣದಲ್ಲಿ ಇದ್ದೇವೆ ಎಂಬ ಭಾವನೆ ನನ್ನಲ್ಲಿ ಮೂಡುತ್ತದೆ. ನಮ್ಮನ್ನೆಲ್ಲಾ ಲೇಡೀಸ್ ಹಾಸ್ಟೆಲ್ ಎಂದು ಕರೆಯುತ್ತಿದ್ದರು. ಲೇಡೀಸ್ ಹಾಸ್ಟೆಲ್ ಗೆ ನಾನೇ ವಾರ್ಡನ್ ಎಂದು ಕೂಡ ಹಾಸ್ಯ ಮಾಡುತ್ತಿದ್ದರು.
ನಾವೆಲ್ಲರೂ ಸೇರಿಕೊಂಡು ಹಾಡು ಹರಟೆ ಮಾಡುತ್ತಿದ್ದೆವು ಹಾಗೂ ಈಗ ಸಿಕ್ಕರೂ ಕೂಡ ಬಹಳ ವಿನಮ್ರತೆಯಿಂದ ವರ್ತಿಸುತ್ತಾರೆ. ರಂಗನಾಯಕಿ ಧಾರಾವಾಹಿಯಲ್ಲಿ ಸಹ ನಾಯಕ ನಟ ಪವನ್ ಅವರು ಒಳ್ಳೆಯ ಸಹ ಕಲಾವಿದರಾಗಿ ತೋರುತ್ತಾರೆ.ಗಟ್ಟಿಮೇಳಕ್ಕೆ ನಾನು ರಿಪ್ಲೇಸ್ಮೆಂಟ್ ಕ್ಯಾರೆಕ್ಟರ್ ಮಾಡುತ್ತಿದ್ದರಿಂದ ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆ ನನ್ನಲ್ಲಿ ಇತ್ತು ಆದರೆ ಇಡೀ ತಂಡದವರು ನನ್ನನ್ನು ಬಹಳ ಆತ್ಮೀಯತೆಯಿಂದ ಕಾಣುತ್ತಾರೆ ಇಲ್ಲಿಯೂ ಕೂಡ ನನಗೆ ಒಂದು ಕುಟುಂಬದ ಜೊತೆ ಇದ್ದಂತೆ ಭಾಸವಾಗುತ್ತದೆ.
ಸ್ವಾತಿ ಅವರು ಇಲ್ಲಿಯವರೆಗೂ ಮಾಡಿರುವ ಧಾರವಾಹಿಗಳು ಚಿತ್ರಗಳು ಹಾಗೂ ಸಾಧನೆಗಳು. 2009ರಲ್ಲಿ ನಾನು ಮಿಸ್ ಕರ್ನಾಟಕ ಆಗಿದ್ದೆ. ಮಿಸ್ ಬ್ಯೂಟಿಫುಲ್ ಐಸ್ ಮತ್ತು ಮಿಸ್ ಫೋಟೋಜೆನಿಕ್ ಎಂಬ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದೆ. ಸನ್ ಸಿಲ್ಕ್ ಅವರು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ನಾನು ಮಾದೇಶ ಎಂಬ ಚಿತ್ರದಲ್ಲಿ ಅಭಿನಯ ಮಾಡಿದ್ದೆ. ಖ್ಯಾತ ನಟ ಶಿವರಾಜ್ ಕುಮಾರ್ ಅವರ ಜೊತೆ ದ್ವಿತೀಯ ನಾಯಕಿಯ ಪಾತ್ರದಲ್ಲಿ ನಾನು ಅಭಿನಯಿಸಿದ್ದೆ.
ಅದಾದ ನಂತರ ನಾನು ಎಂಟರಿಂದ ಒಂಬತ್ತು ಚಿತ್ರಗಳನ್ನು ಮಾಡಿದೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಎರಡನೇ ಆವೃತ್ತಿಯಲ್ಲಿ ಭಾಗವಹಿಸಿದೆ. ನಾನು ಮೊದಲು ಅಭಿನಯಿಸಿದ ಧಾರವಾಹಿ ಶುಭವಿವಾಹ, ಅದಾದ ನಂತರ ನಾಗಕನ್ನಿಕೆ, ಗಂಗಾ, ಪುಟ್ಟಗೌರಿ ಮದುವೆ, ಸರ್ವಮಂಗಳ ಮಾಂಗಲ್ಯೇ, ರಂಗನಾಯಕಿ ಈಗ ಗಟ್ಟಿಮೇಳ.
ಸ್ವಾತಿ ಅವರು ಪಾತ್ರದಿಂದ ಹೊರ ಬಂದರೆ ಅವರ ಸ್ವಭಾವ ಎಂತದ್ದು? ನನಗೆ ಯಾವಾಗಲೂ ನನ್ನ ಸುತ್ತಮುತ್ತಲಿರುವ ಜನಗಳು ಬಹಳ ಸಂತೋಷದಿಂದ ಇರಬೇಕು ಹಾಗೂ ಸಂತೋಷದ ವಾತಾವರಣ ಸೃಷ್ಟಿಯಾಗಬೇಕು ಎಂಬುದು ಮಹದಾಸೆ. ಸೆಟ್ ನಲ್ಲಿ ಒಬ್ಬರನ್ನೊಬ್ಬರು ಕಾಲೆಳೆದುಕೊಂಡು ಖುಷಿಖುಷಿಯಾಗಿ ಇರುತ್ತೇವೆ. ನಾನು ಬಹಳವೇ ಮಾತನಾಡುತ್ತೇನೆ ಹಾಗೂ ನನ್ನ ಜೊತೆಗೆ ಇರುವವರನ್ನು ಸಹ ನನ್ನ ಜೊತೆ ಮಾತನಾಡುವಂತೆ ಪ್ರೇರೇಪಿಸುತ್ತೇನೆ.
ಜೀ ಕುಟುಂಬ ಅವಾರ್ಡ್ ಫಂಕ್ಷನ್ ಗೆ ನೀವು ಏಕೆ ಬರಲಿಲ್ಲ? ನಮ್ಮ ಮನೆಯ ಗೃಹಪ್ರವೇಶ ಇದ್ದಿದ್ದರಿಂದ ನಾನು ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಈ ವಿಷಯವಾಗಿ ನನ್ನ ಮನಸ್ಸಿನಲ್ಲಿ ಬಹಳವೇ ನಿರಾಸೆ ಇದೆ.ಮುಂದಿನ ವರ್ಷ ಖಂಡಿತವಾಗಿಯೂ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ನಾನು ನಿಮ್ಮೆಲ್ಲರ ಮುಂದೆ ಕಾಣಿಸಿಕೊಳ್ಳುತ್ತೇನೆ.
ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ಸ್ವಾತಿ ಅವರು ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂಬುದು ಕನ್ನಡಿಗರ ಹಾರೈಕೆ. ಒಬ್ಬ ವ್ಯಕ್ತಿಯ ಪಾತ್ರವೂ ಜನರಲ್ಲಿ ಕೋಪ ತರಿಸುತ್ತದೆ ಎಂದರೆ ಆ ನಟ ಅಥವಾ ನಟಿ ಆ ಪಾತ್ರಕ್ಕೆ ನಿಜವಾದ ಅರ್ಥವನ್ನು ಹಾಗೂ ಬೆಲೆಯನ್ನು ನೀಡಿದ್ದಾರೆ ಎಂದರ್ಥ. ನೈಜತೆಯ ಗುಣಗಳನ್ನು ತಮ್ಮಲ್ಲಿ ಇಟ್ಟುಕೊಂಡಿರುವ ಸ್ವಾತಿ ಅವರಿಗೆ ಶುಭವಾಗಲಿ.