ಮದುವೆ ಮಕ್ಕಳು ಮತ್ತು ಯುವಜನತೆ. 1.”ಅಪ್ಪ, ಅಮ್ಮ ಇನ್ನೊಂದು ಸಾರಿ ಮದುವೆ ಮಾತು ಎತ್ತಿದರೆ ನೋಡಿ, ನಾನು ಮನೆ ಬಿಟ್ಟು ಹೋಗ್ತೀನಿ, ನಂಗೆ ಮದುವೆ ಬೇಡ, ಯಾವಾಗಲಾದರೂ ಬೇಕು ಅನಿಸಿದರೆ ಆಗ ಹೇಳ್ತೀನಿ, ದಯವಿಟ್ಟು ನನ್ನ ತಲೆ ತಿನ್ನಬೇಡಿ. ನೋಡಿ ಹಾಗಂತ ನಾನು ಯಾರನ್ನೂ ಲವ್ ಮಾಡಿಲ್ಲ.
ಇಲ್ಲ ಲಿವಿಂಗ್ ಟುಗೆದರ್ ಅಂತ ಯಾವ ಸಾಹವಾಸವನ್ನು ಇದುವರೆಗೂ ಮಾಡಿಲ್ಲ, ಮುಂದೂ ಮಾಡಲ್ಲ. ಮದುವೆ ಮಾಡಿಕೊಂಡು ಹೋಗಿ ಇನ್ಯಾರದೋ ಮನೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಅವರಿಗಾಗಿ ದುಡಿದು ಅವರನ್ನು ನೋಡಿಕೊಳ್ಳುವ ಬದಲು ನನ್ನನ್ನು ಹೆತ್ತು ಹೊತ್ತು ಸಾಕಿದ ನಿಮ್ಮನ್ನೇ ನೋಡಿಕೊಂಡು ಆರಾಮಾಗಿ ಇರ್ತೀನಿ ” ಇದು ಇಪ್ಪತ್ತೈದು ವರ್ಷದ ಸೌಮ್ಯಳ ಮಾತುಗಳು.
2.”ನೋಡಪ್ಪ ನನಗೆ ಮದುವೆಗೆ ಒಪ್ಪಿಗೆ ಇದೆ. ಆದರೆ ಮುಂದೆ ಮದುವೆಯಾಗಿ ಹೋದ ಮನೆಯಲ್ಲಿ ಕೆಲಸ ಬಿಡು ಅನ್ನೋದಾಗ್ಲಿ ಮನೆ ಕೆಲಸ ಮಾಡು ಅಂತ ಹೇಳುವುದುದಾಗಲಿ ಮಾಡಿದ್ರೆ ನಂಗೆ ಸರಿ ಹೋಗಲ್ಲ. ನಂಗೆ ಯಾರೂ ಏನೂ ಹೇಳಬಾರದು, ನನ್ನಷ್ಟಕ್ಕೆ ನಾನು ಇರುವವಳು, ನನ್ನ ದಾರಿಗೆ ಯಾರೂ ಅಡ್ಡ ಬರಬಾರದು. ಇದಕ್ಕೆಲ್ಲ ಒಪ್ಪೋ ಗಂಡು ಅವನ ಮನೆಯವರು ಸಿಕ್ಕರೆ ಹೇಳಿ, ಆವಾಗ ಮದುವೆ ಮಾಡಿಕೊಳ್ಳೋಣ.
ಈ ಎಲ್ಲ ತಲೆ ಬಿಸಿಗಿಂತ ಲಿವಿಂಗ್ ಟುಗೆದರ್ ಸಾವಿರಪಾಲು ಮೇಲು. ಅಲ್ಲಿ ಯಾರೂ ಯಾರನ್ನು ಅಂದು ಅಡಿ ಮಾಡುವುದಿಲ್ಲ. ಅವರವರ ಇಷ್ಟಕ್ಕೆ ಇರಬಹುದು ” ಇದು 29 ವಯಸ್ಸಿನ ರಮ್ಯಳ ಅನಿಸಿಕೆ. ಇವಳ ಈ
ಎಲ್ಲ ಕರಾರಿಗೆ ಒಪ್ಪುವ ಹುಡುಗ ಸಿಗದೇ ಇನ್ನೂ ಮದುವೆ ಆಗಿಲ್ಲ. ಅಗೋ ಸಾಧ್ಯತೆಯೂ ಇಲ್ಲ. ಇಂತಹ ಗಂಡು ಮಕ್ಕಳು ಇಲ್ಲದಿಲ್ಲ.
3. ಇನ್ನು 34 ವರ್ಷದ ಭವ್ಯಳದ್ದು ಬೇರೆಯದೇ ಕಥೆ. 24 ವರ್ಷಕ್ಕೆ ಮದುವೆ ಆಗಿತ್ತು, ಗಂಡ ಹೆಂಡತಿ ಇಬ್ಬರೂ ತಮ್ಮ ತಮ್ಮ ಕೆರಿಯರ್ ಸೆಟ್ಲ್ ಆಗುವವರೆಗೆ ಮಕ್ಕಳು ಬೇಡ ಎಂದು ನಿರ್ಧರಿಸಿದ್ದರು. ಈಗ ಇಬ್ಬರಿಗೂ ಒಳ್ಳೆಯ ಹುದ್ದೆ, ಕೈತುಂಬಾ ಸಂಬಳ, ದೊಡ್ಡದೊಂದು ಅರಮನೆಯನ್ನು ಮೀರಿಸುವಂಥ ಮನೆ, ಎರಡೆರಡು ಕಾರು, ಮನೆ ಕೆಲಸಕ್ಕೆ, ಅಡಿಗೆ ಕೆಲಸಕ್ಕೆ ಜನ, ಒಟ್ಟಿನಲ್ಲಿ ಸಮಾಜದಲ್ಲಿ ಜನರ ಕಣ್ಣು ಕುಕ್ಕುವ ರೀತಿಯಲ್ಲಿ ಸೆಟ್ಲ್ ಆಗಿದ್ದಾರೆ ಅವರ ಅರ್ಥದಲ್ಲಿ.
ಈಗ ಇವರಿಗೆ ಮಕ್ಕಳು ಬೇಕು ಎನಿಸಿದೆ, ಈ ವೇಳೆಗೆ ಪತಿಗೆ ತಂದೆ ಆಗಲು ಸಣ್ಣ ಪುಟ್ಟ ಸಮಸ್ಯೆಗಳು ಶುರುವಾಗಿತ್ತು. ಅದೆಲ್ಲಕೂ ಟ್ರೀಟ್ಮೆಂಟ್ ತೆಗೆದುಕೊಂಡು ಆತನಿಗೆ ಎಲ್ಲವೂ ಸರಿ ಹೋಯಿತು ತಂದೆ ಆಗಬಹುದು ಎನ್ನುವ ವೇಳೆಗೆ ಭವ್ಯಳ ಗರ್ಭಕೋಶಕ್ಕೆ ಗರ್ಭ ಧರಿಸಿ ಅದನ್ನು ಹೊತ್ತು, ಹೆರುವ ಶಕ್ತಿಯೇ ಇಲ್ಲವಾಗಿದೆ.
ಇಂತಹ ಮಾತುಗಳನ್ನು ದಿನವೂ ಕೇಳುತ್ತಿರುತ್ತೇವೆ, ನೋಡುತ್ತಿರುತ್ತೇವೆ. ಬರೀ ಹುಡುಗಿಯರು ಅಲ್ಲ ಹುಡುಗರು ಕೂಡಾ ಈ ರೀತಿಯ ಮಾತುಗಳನ್ನು ಹೇಳುವುದು ಕೇಳಿದ್ದೇವೆ ನೋಡಿದ್ದೇವೆ. ಇದೆಲ್ಲ ನೋಡುವಾಗ ನಮ್ಮ ಯುವಜನತೆ ಯಾವ ರೀತಿ ಯೋಚಿಸುತ್ತಿದೆ, ಎತ್ತ ಸಾಗುತ್ತಿದೆ ಎಂದು ಚಿಂತಿಸುವಂತೆ ಆಗಿದೆ.
ಮೊದಲನೆಯದರಲ್ಲಿ ಆಕೆಗೆ ಮದುವೆಯ ಬಗ್ಗೆ ಅಷ್ಟೊಂದು ಋಣಾತ್ಮಕ ಅನಿಸಿಕೆ ಬರಲು ಕಾರಣಗಳನ್ನು ಯೋಚಿಸುವಾಗ ಆಕೆ ಹತ್ತಿರದಿಂದ ಕಂಡ ವಿರಸ ದಾಂಪತ್ಯಗಳು ಕಾರಣ ಆಗಿರಬಹುದು. ಇಲ್ಲ ಯಾವುದೋ ಹೆಣ್ಣನ್ನು ಗಂಡನ ಮನೆಯವರು ಕೆಟ್ಟದಾಗಿ ನಡೆಸಿಕೊಂಡು ಆಕೆ ತವರಿಗೆ ಸಹಾಯ ಮಾಡಲು ಆಗದ ಪರಿಸ್ಥಿತಿ ಎದುರಾಗಿದ್ದನ್ನು ಈಕೆ ಕಣ್ಣಾರೆ ಕಂಡಿರಬಹುದು, ಕೇಳಿರಬಹುದು. ಮುಂದೆ ನನ್ನ ಜೀವನದಲ್ಲೂ ಹೀಗೆ ಆದರೆ ಎನ್ನುವ ಹೆದರಿಕೆ ಇರಬಹುದು.
ಅಥವಾ ಅಪ್ಪ ಅಮ್ಮನಿಂದ ದೂರವಾಗುವ ಹೆದರಿಕೆಯಿಂದ ಮದುವೆಗೆ ಒಪ್ಪದೇ ಇರಬಹುದು. ಇದೇ ರೀತಿ ಗಂಡು ಹುಡುಗ ಹೇಳಿದೆನೆಂದರೆ ಅತ ಯಾರೋ ಕೆಲವರು ಹೆಣ್ಣು ಮಕ್ಕಳು ಗಂಡನನ್ನು ತಂದೆ ತಾಯಿಯಿಂದ ದೂರ ಮಾಡಿದ್ದನ್ನು ಕಂಡು ಕೇಳಿರಬಹುದು.
ಆದರೆ ನೆನಪಿರಲಿ ಎಲ್ಲರ ದಾಂಪತ್ಯಗಳೂ ವಿರಸ ದಾಂಪತ್ಯಗಳು ಅಲ್ಲ, ಎಲ್ಲ ಗಂಡಸರು, ಗಂಡಿನ ತಂದೆ ತಾಯಿಯರು ಕೆಟ್ಟವರಲ್ಲ. ಹಾಗೇ ಎಲ್ಲ ಹುಡುಗಿಯರೂ ಅವರ ತಂದೆ ತಾಯಿಯರು ಕೆಟ್ಟವರಲ್ಲ. ಈಗೇನು ಹಿಂದಿನ ಕಾಲದಂತೆ ಯಾರನ್ನೋ ಹಿಡಿದು ತಂದು ನಿಲ್ಲಿಸಿ ಮದುವೆ ಮಾಡಿ ಬಿಡುವುದಿಲ್ಲ. ನೀವು ಒಬ್ಬರನ್ನೊಬ್ಬರು ನೋಡಿ, ಮಾತಾಡಿ ಅರ್ಥ ಮಾಡಿಕೊಳ್ಳಿ. ಎರಡೂ ಮನೆಯ ಹಿರಿಯರನ್ನು ಇಬ್ಬರೂ ಗೌರವದಿಂದ ಕಾಣುವ ಬಗ್ಗೆ ಖಚಿತ ಪಡಿಸಿಕೊಳ್ಳಿ.
ಹಾಗೆಯೇ ಇಬ್ಬರೂ ಮುಂದೆ ಸಮಸ್ಯೆಗಳು ಬಂದಾಗ ಬೇರೆಯವರ ಚಾಡಿ ಮಾತುಗಳಿಗೆ ಬೆಲೆ ಕೊಡದೆ ನೀವುಗಳೇ ಕುಳಿತು ಮುಕ್ತವಾಗಿ ಮಾತನಾಡಿ ಪರಿಹರಿಸಿಕೊಳ್ಳುವ ಒಪ್ಪಂದ ಮಾಡಿಕೊಳ್ಳಿ. ಮೊದಲು ನೀವಿಬ್ಬರೂ ಒಬ್ಬರನ್ನೊಬ್ಬರು ನಂಬಿ, ಇಬ್ಬರೂ ಏನೇ ಕಷ್ಟ ಬಂದರೂ ಒಟ್ಟಿಗೆ ಎದುರಿಸುತ್ತೇವೆ ಎನ್ನುವ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಿ. ನಂತರವೇ ಮದುವೆಗೆ ಒಪ್ಪಿಗೆ ನೀಡಿ. ಆದರೆ ನೆನಪಿಡಿ ಮದುವೆಯೇ ಬೇಡ ಎನ್ನುವುದು ಸರಿಯಾದ ತೀರ್ಮಾನ ಅಲ್ಲ.
ಈಗೇನೋ ತಂದೆ ತಾಯಿಯರು ಜೊತೆಯಲ್ಲಿ ಇದ್ದಾರೆ ಸರಿ. ಮುಂದೆ ಅವರು ಕಾಲನ ವಶವಾದ ಮೇಲೆ ನಿಮ್ಮಗಳ ಜೀವನ ಇನ್ನೂ ಅರ್ಧದಷ್ಟು ಉಳಿದಿರುತ್ತದೆ. ಆಗ ಒಂಟಿಯಾಗಿ ಹೇಗೆ ಜೀವಿಸುತ್ತಿರಿ? ಒಂಟಿತನ ಸಾಕಷ್ಟು ಮಾನಸಿಕ ಒತ್ತಡಕ್ಕೆ ಹೆದ್ದಾರಿ. ಈಗೆಲ್ಲ ಮನೆಗೆ ಒಂದೇ ಮಗು ಎನ್ನುವಂತೆ ಆದ್ದರಿಂದ ಒಡ ಹುಟ್ಟಿದವರಿಂದ ಕೂಡಾ ಸಾಂತ್ವನ ಸಿಗಲಾರದು.
ಅಪ್ಪ ಅಮ್ಮನ ನಂತರದ ಸ್ಥಾನ ಏನಿದ್ದರೂ ಸಂಗಾತಿಯದೇ. ಅವರನ್ನು ಬಿಟ್ಟು ಬೇರೆ ಸಂಬಂಧಿಗಳು, ಸ್ನೇಹಿತರು ಎಲ್ಲ ಇದ್ದರೂ ಮಧ್ಯ ವಯಸ್ಸು, ಮುಪ್ಪಿನ ಅಂಚಿಗೆ ಬಂದಾಗ ಒಂಟಿತನ ಕಟ್ಟಿಟ್ಟ ಬುತ್ತಿ. ಒಬ್ಬರನ್ನೊಬ್ಬರು ಅರಿತು, ಸಂಗಾತಿಯೊಂದಿಗೆ ಜೀವನ ಹಂಚಿಕೊಂಡಾಗ ಬಂದ ಕಷ್ಟಗಳನ್ನು ಎದುರಿಸುವುದು ಸುಲಭ. ನಿಜಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುನ್ನಡೆಯಿರಿ.
ಯಾರೋ ಒಬ್ಬರು ಇಬ್ಬರ ಜೀವನದಲ್ಲಿ ಘಟಿಸಬಾರದ್ದು ಘಟಿಸಿದೇ ಅಂದರೆ ಎಲ್ಲರ ಜೀವನದಲ್ಲೂ ಹಾಗೆ ಆಗ್ಬೇಕು ಎಂದೇನೂ ಇಲ್ಲ, ಆಗುವುದು ಇಲ್ಲ. ಧನಾತ್ಮಕವಾಗಿ ಯೋಚಿಸಿ ಮುನ್ನಡೆಯಿರಿ.
ಇನ್ನು ಎರಡನೆಯ ಉದಾಹರಣೆಯಲ್ಲಿ ಈ ರೀತಿ ಯೋಚಿಸುವವರಿಗೆ ವೈಯುಕ್ತಿಕ ಸುಖ ಸಂತೋಷ ಮಾತ್ರ ಮುಖ್ಯ. ಯಾವುದೇ ಜವಾಬ್ದಾರಿ ಬೇಡ. ಮೋಜು ಮಸ್ತಿ ಮಾಡುವುದು, ಚಿತ್ರ ವಿಚಿತ್ರ ಬಟ್ಟೆ ಧರಿಸಿ ಎಲ್ಲೆಂದರಲ್ಲಿ ಸುತ್ತುತ್ತಾ ಕಣ್ಣಿಗೆ ಕಂಡದ್ದು ಕೊಳ್ಳುತ್ತಾ, ಊರಲ್ಲಿ ಇರುವ ಎಲ್ಲ ಹೋಟೆಲ್, ರೆಸಾರ್ಟ್ ಗಳಿಗೆ ಭೇಟಿ ನೀಡುತ್ತಾ, ಕುಡಿತ ಕುಣಿತಗಳಲ್ಲಿ ಮೈಮರೆತು ದಿನ ಕಳೆಯುವುದೇ ತಮ್ಮ ಜೀವನದ ಗುರಿ ಎಂದುಕೊಂಡಿರುತ್ತಾರೆ.
ಅದರಲ್ಲಿಯೇ ತಮ್ಮ ಜೀವನದ ಅಮೂಲ್ಯ ಸಮಯವನ್ನು ಕಳೆಯುತ್ತಿರುತ್ತರೆ. ಒಮ್ಮೆ ಯೋಚಿಸಿ ದೇವರು ಇದಕ್ಕೆಂದಾ ಮನುಷ್ಯ ಜನ್ಮ ಕೊಟ್ಟಿದ್ದು? ರೀತಿ ನೀತಿ ಇಲ್ಲದ ಇಂತಹ ಬದುಕು ಬೇಕಾ? ಸರಿ ತಪ್ಪುಗಳ ಬಗ್ಗೆ ಯೋಚಿಸುವ ಶಕ್ತಿ ಮನುಷ್ಯನಿಗೆ ಕೊಟ್ಟದ್ದು ಇದಕ್ಕೆನಾ? ಹೀಗೆ ಇರುವುದು ಎಂದಾದರೆ ನಮಗೂ ಪ್ರಾಣಿಗಳಿಗೂ ವ್ಯತ್ಯಾಸ ಏನು ಇರುತ್ತದೆ ಅಲ್ಲವೇ. ಹೀಗೇ ಎಷ್ಟು ದಿನ ಇರಲು ಸಾಧ್ಯ.
ಇತ್ತೀಚೆಗೆ ಗಂಡನ ಮನೆಯಲ್ಲಿ ಟೀ ಮಾಡಿಕೊಡು ಎಂದು ಅತ್ತೆಯೋ ಮಾವನೋ ಸೊಸೆಗೆ, ಕೇಳಿದರೆ ನನಗೆ ಕೆಲಸ ಹೇಳಿದರು ಎನ್ನುವ ಕಾರಣಕ್ಕೆ ವಿಚ್ಛೇದನಕ್ಕೆ ಮುಂದಾಗುವ ಹುಡುಗಿಯರೂ ಇದ್ದಾರೆ. ಹೆಂಡತಿ ತಿಂಗಳಿಗೆ ಎರಡು ಬಾರಿ ತವರಿಗೆ ಹೋಗುತ್ತಾಳೆ ಎನ್ನುವುದೇ ದೊಡ್ಡ ಕಾರಣ ಗಂಡು ಮಕ್ಕಳಿಗೆ ವಿಚ್ಛೇದನ ಕೋರಲು.
ನೀವು ನಿಮ್ಮ ಮನೆಯಲ್ಲಿ ತಂದೆ ತಾಯಿಗೆ ಟೀ ಮಾಡಿ ಕೊಡುವುದಿಲ್ಲವೆ? ಹಾಗೆ ಪತಿಯ ತಂದೆ ತಾಯಿಗಳು ಎನ್ನುವ ಅರಿವು ಹೆಣ್ಣು ಮಕ್ಕಳಲ್ಲಿ ಮೂಡಬೇಕು. ಇರುವ ಒಬ್ಬಳೇ ಮಗಳನ್ನು ಮದುವೆ ಮಾಡಿ ಕಳಿಸಿದ ಆಕೆಯ ತಂದೆ ತಾಯಿಗೂ ಮಗಳನ್ನು ಕಾಣುವ ಆಸೆ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ಒಬ್ಬಳೇ ಮಗಳಾದ ಆಕೆಯೇ ಮುಂದೆ ಅವಳ ತಂದೆ ತಾಯಿಯರ ಜವಾಬ್ದಾರಿ ಹೊರಬೇಕು, ನೀವೂ ಅದರಲ್ಲಿ ಭಾಗಿ ಆಗಬೇಕು ಅನ್ನುವ ತಿಳುವಳಿಕೆ ಗಂಡು ಮಕ್ಕಳಲ್ಲಿ ಇರಬೇಕು.
ಪರಸ್ಪರ ನಿಮ್ಮನ್ನು ನೀವು ಗೌರವಿಸಿಕೊಳ್ಳುವುದನ್ನು ಬೆಳೆಸಿಕೊಳ್ಳಿ, ಬೇಡದ ಆಹಂಗಳನ್ನು ದೂರ ಸರಿಸಿ ಶುದ್ಧ ಮನಸ್ಸಿನಿಂದ ಯೋಚಿಸಿ. ಪರಸ್ಪರ ನಿಮ್ಮ ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡರೆ ಸಾಕಷ್ಟು ಆಂತರಿಕ ಕಲಹಗಳು, ವಿಚ್ಛೇದನಗಳು ಖಂಡಿತಾ ತಪ್ಪುತ್ತದೆ. ಓದಿದ ವಿದ್ಯಾವಂತರಾದ ಯುವ ಜನತೆಗೆ ಇಂತಹ ಸಣ್ಣ ಪುಟ್ಟ ವಿಷಯಗಳು ಅರಿವಾಗದೇ ಇರುವುದು ಹಾಸ್ಯಾಸ್ಪದವೋ ಇಲ್ಲ ವಿಪರ್ಯಾಸವೋ ತಿಳಿಯದಾಗಿದೆ.
ಇದು ನಮ್ಮ ಸಂಸ್ಕೃತಿ ಖಂಡಿತಾ ಅಲ್ಲ. ಸಾಕಷ್ಟು ವರ್ಷಗಳಿಂದ ಸನಾತನ ಧರ್ಮದ ಇತಿಹಾಸ ಇರುವ ಭಾರತೀಯರಾದ ನಮಗೆ ನಮ್ಮದೇ ಅದ ಸತ್ ಸಂಪ್ರದಾಯವಿದೆ, ಸಂಸ್ಕೃತಿ ಇದೆ, ಸದ್ವಿಚಾರಗಳಿವೆ. ಇದೇ ಕಾರಣಕ್ಕೆ ನಮ್ಮ ದೇಶ ವಿಶ್ವ ಮಾನ್ಯ ಆಗಿರುವುದು, ದೇಶಕ್ಕೊಂದು ಗೌರವ ಘನತೆ ಇರುವುದು. ವಿದೇಶಿಯರು ಅದೆಷ್ಟು ಜನ ನಮ್ಮ ಸಂಸ್ಕೃತಿ ಸಂಪ್ರದಾಯದ ಅರ್ಥ ತಿಳಿದು ಅದನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಂಡು, ಅವರ ಜೀವನಕ್ಕೆ ಸುಂದರ ಅರ್ಥ ಕಂಡುಕೊಳ್ಳುತ್ತಿರುವಾಗ ನಾವು ನಮ್ಮದಲ್ಲದ ವಿದೇಶಿ ಸಂಸ್ಕೃತಿಗೆ ಮಾರು ಹೋಗುವುದು ಉಚಿತವಲ್ಲ.
ಸಾವಿರಾರು ವರ್ಷಗಳಿಂದ ಸದ್ವಿಚಾರ ಮತ್ತು ಉತ್ತಮ ನಡವಳಿಕೆಗಳಿಗೆ ಹೆಸರಾಗಿರುವ ನಮ್ಮ ದೇಶದ ಹೆಸರಿಗೆ ಮಸಿ ಬಳಿಯುವ ಕೆಲಸ ನಮ್ಮಿಂದ ಆಗುವುದು ಬೇಡ. ಈಗಲಾದರೂ ಎಚ್ಚೆತ್ತುಕೊಂಡು ನಮ್ಮನ್ನ ನಾವು ಸರಿಯಾದ ದಾರಿಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡೋಣ.
ಮೋಜು ಮಸ್ತಿ ಅಷ್ಟೆ ಜೀವನ ಅಲ್ಲ, ಹೆತ್ತ ತಾಯಿ ತಂದೆಯರ, ಹುಟ್ಟಿದ ಮಣ್ಣಿನ, ನೀರಿನ ಋಣ ನಮ್ಮ ಮೇಲಿದೆ. ಅದರಲ್ಲಿ ಒಂದಿನಿತಾದರೂ ತೀರಿಸುವ ಪ್ರಯತ್ನ ಮಾಡೋಣ. ನಮ್ಮಿಂದ ಒಳ್ಳೆಯದು ಮಾಡಲು ಸಾಧ್ಯ ಆಗದಿದ್ದರೆ ಬೇಡ, ಆದರೆ ಕೆಡುಕು ಮಾಡದೇ ಇರೋಣ, ಸಮಾಜದ ಸ್ವಾಸ್ಥ್ಯಕ್ಕೆ ನಮ್ಮಿಂದ ತೊಂದರೆ ಆಗದ ಹಾಗೆ, ದೇಶದ ಹೆಸರು ನಮ್ಮಿಂದ ಕೆಡದಂತೆ ನೋಡಿಕೊಳ್ಳುವಷ್ಟರ ಮಟ್ಟಿನ ಜವಾಬ್ದಾರಿಯನ್ನ ರೂಡಿಸಿಕೊಳ್ಳೋಣ.
ಮೂರನೇಯ ಉದಾಹರಣೆ ಕೂಡಾ ಅಷ್ಟೇ, ಜೀವನದಲ್ಲಿ ಉದ್ಯೋಗ ಒಂದೇ ಮುಖ್ಯವಲ್ಲ. ಕೆಲಸ, ಕೆರಿಯರ್, ಆಫೀಸ್ ಒತ್ತಡದಲ್ಲಿ ವೈಯುಕ್ತಿಕ ಜೀವನದ ಸ್ವಾಸ್ಥ್ಯ ಕೆದಡಿರಲಿ. ಹಾಗೆಂದು ಕೆಲಸ ಬಿಡಿ ಎಂದೇನೂ ಹೇಳುತ್ತಿಲ್ಲ, ಬಿಟ್ಟರೆ ಜೀವನ ನಡೆಯುವುದೂ ಇಲ್ಲ. ಮನೆಯ ಹಿರಿಯರ ಜೊತೆಗೆ ಉತ್ತಮ ಸಂಬಂಧ ಉಳಿಸಿಕೊಳ್ಳಿ. ಕಾಲಕ್ಕೆ ಸರಿಯಾಗಿ ಮದುವೆಯಾಗಿ, ಹಾಗೆಯೇ ವಯಸ್ಸು ಮೀರುವ ಮೊದಲು ಒಂದೋ ಇಲ್ಲ ಎರಡೋ ಮಕ್ಕಳನ್ನು ಪಡೆಯಿರಿ.
ಹಿರಿಯರ ಜೊತೆಗೆ ನಿಮ್ಮ ಸಂಬಂಧ ಚೆನ್ನಾಗಿದ್ದರೆ ಮಕ್ಕಳನ್ನು ಬೆಳೆಸುವುದು ಕಷ್ಟ ಅಲ್ಲ, ಅವರ ಸಹಕಾರವೂ ದೊರೆತರೆ ನೀವು ಮನೆ, ಮಕ್ಕಳು, ಉದ್ಯೋಗ ಎಲ್ಲವನ್ನೂ ಸಂಭಾಳಿಸಲು ಸುಲಭ. ಹಾಗೆಂದು ಹಿರಿಯರನ್ನು ಮಕ್ಕಳನ್ನು ನೋಡಿಕೊಳ್ಳುವ, ಮನೆ ಕೆಲಸ ಮಾಡುವ ಕೆಲಸದವರ ರೀತಿ ಕಾಣಬೇಡಿ. ವಯಸ್ಸಿನ ಕಾರಣಕ್ಕೆ ಅಭದ್ರತೆ ಕಾಡುವ ಹಿರಿಯರಿಗೆ ಹಿಡಿಯಷ್ಟು ಪ್ರೀತಿ ತೋರಿಸಿ, ಬೆಳಗ್ಗೆ ಮನೆಯಿಂದ ಹೊರಡುವಾಗ, ಸಂಜೆ ಮನೆಗೆ ಬಂದಾಗ ಪ್ರೀತಿಯಿಂದ ಎರಡು ಮಾತನಾಡಿ, ಊಟ ತಿಂಡಿ ಆರೋಗ್ಯ ವಿಚಾರಿಸಿ.
ಇನ್ನು ಕೆಲವೇ ವರ್ಷಗಳಲ್ಲಿ ನಾವು ಅವರಿರುವ ಜಾಗ ತಲುಪುತ್ತೇವೆ, ನಮ್ಮ ಮಕ್ಕಳು ನಮ್ಮ ಜಾಗದಲ್ಲಿ ಇರುತ್ತಾರೆ. ಇದೊಂದು ಕಾಲ ಚಕ್ರ, ಉರುಳಲೆ ಬೇಕು, ಉರುಳಿಯೆ ಉರುಳುತ್ತದೆ. ನಮ್ಮ ಈಗಿನ ನಡವಳಿಕೆ ಎನಿರುತ್ತದೋ ಅದೇ ಮುಂದಿನ ನಮ್ಮ ಭವಿಷ್ಯ ಎನ್ನುವ ಒಂದೇ ಒಂದು ಮಾತು ತಲೆಯಲ್ಲಿ ಇಟ್ಟುಕೊಂಡು ಮುನ್ನಡೆಯಿರಿ. ಆಗ ನೋಡಿ ಸಂಸಾರ ಹೂವಿನ ಮಾಲೆ ಎತ್ತಿದಷ್ಟು ಹಗುರಾಗಿ ನಡೆಯುತ್ತದೆ.
ಈಗಿನ ಕಾಲದಲ್ಲಿ ಒತ್ತಡ ಎಲ್ಲರಿಗೂ ಇರುತ್ತದೆ, ಅದರ ಪ್ರಭಾವ ದೇಹ ಮನಸ್ಸು ಎರಡರ ಮೇಲೂ ಆಗುತ್ತದೆ. ಚಿಕ್ಕ ವಯಸ್ಸಿಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ರೋಗಗಳು, ಪಾರ್ಶ್ವ ವಾಯು ಎನು ಬೇಕಾದರೂ ಬರಬಹುದು. ಅವೆಲ್ಲಕ್ಕೂ ನಮ್ಮ ದೇಹ ಗೂಡಾಗದಂತೆ ನೋಡಿಕೊಳ್ಳಬೇಕಾದರೆ ಮೊದಲು ನಮ್ಮ ಮನಸ್ಸು ಸುಂದರವಾಗಿರಬೇಕು, ಮನೆ ಸಂಸಾರ ಸುಭದ್ರವಾಗಿ ಇರಬೇಕು.
ನೀವು ಗಗನದೆತ್ತರಕ್ಕೆ ಏರಿ, ಭೂಗರ್ಭದಲ್ಲಿ ಇಳಿದು ಸಂಶೋಧಿಸಿ, ಸಾಗರದಾಳದಕ್ಕೆ ಹೋಗಿ ಬನ್ನಿ, ಏನಾದರೂ ಸಾಧಿಸಿ. ಇದೆಲ್ಲದರ ನಡುವೆ ನಿಮಗಾಗಿ ನಿಮ್ಮ ಭವಿಷ್ಯಕ್ಕಾಗಿ ಚಿಂತಿಸಿ. ಇಲ್ಲಿ ಭವಿಷ್ಯ ಎಂದರೆ ಹಣ ಒಂದರದ್ದೆ ಅಲ್ಲ, ಹಣ ಒಂದರಿಂದ ಸುಖ ದೊರೆಯದು. ಸುಂದರವಾದ, ಸಂಸಾರ ನೀಡುವ ಭದ್ರತೆ ಹಣ ಒಂದೇ ಅಲ್ಲ ಎಲ್ಲ ಅಮೂಲ್ಯ ವಸ್ತುಗಳಿಗಿಂತ ಬೆಲೆಯುಳ್ಳದ್ದು, ಮೌಲ್ಯಯುತವಾದದ್ದು. ಕಾಲ ಹೀಗೆ ಇರುವುದಿಲ್ಲ ಯುವಕರೇ, ಯುವತಿಯರೇ ನಿಮಗೂ ವಯಸ್ಸಾಗುತ್ತದೆ. ಯೋಚಿಸಿ ನಿರ್ಧರಿಸಿ, ನಿಮ್ಮ ಜೀವನದ ಶಿಲ್ಪಿಗಳು ನೀವೇ.