ಭರತಭೂಮಿಯಲ್ಲಿ ಪಾಂಡವರ ವಂಶದಲ್ಲಿ ಹುಟ್ಟಿದ ಪರೀಕ್ಷಿತನೆಂಬ ರಾಜನು ಈ ದೇಶವನ್ನು ಆಳುತ್ತಿದ್ದನು.

0
2944

ಪುಣ್ಯಭೂಮಿಯಾದ ಭರತ ಭೂಮಿಯಲ್ಲಿ ಪಾಂಡವರ ವಂಶದಲ್ಲಿ ಹುಟ್ಟಿದ ಪರೀಕ್ಷಿತನೆಂಬ ರಾಜನು ಈ ದೇಶವನ್ನು ಆಳುತ್ತಿದ್ದನು. ಈತನು ತುಂಬ ಧರ್ಮಾತ್ಮ ಮತ್ತು ದೈವಭಕ್ತ. ಈತನ ಹೆಂಡತಿಯ ಹೆಸರು ಮಾದ್ರವತಿ.

ಪರೀಕ್ಷಿತ ಮಹಾರಾಜ’ನಿಗೆ ಬಹುಕಾಲದ ಮೇಲೆ ತೇಜಸ್ವಿಯಾದ ಒಬ್ಬ ಮಗ ಹುಟ್ಟಿದನು. ಪ್ರಜೆಗಳಿಗೂ ರಾಜನಿಗೂ ಸಂತೋಷವಾಯಿತು. ರಾಜನು ಅನೇಕ ದಾನಧರ್ಮಗಳನ್ನು ಮಾಡಿ ಮಗನಿಗೆ ಜನಮೇಜಯ ಎಂದು ಹೆಸರಿಟ್ಟನು. ಕಾಲಾಂತರದಲ್ಲಿ ಪರೀಕ್ಷಿತನಿಗೆ ಇನ್ನೂ ಮೂರು ಮಂದಿ ಪುತ್ರರಾದರು. ಬಾಲಕ ಜನಮೇಜಯನಿಗೆ ಕಥೆ ಕೇಳುವುದೆಂದರೆ ಬಹಳ ಇಷ್ಟ.

ಅದೊಂದಿದ್ದರೆ ಅವನಿಗೆ ಇನ್ನೇನೂ ಬೇಡ. ಮಾದ್ರವತಿಯು ಮಗನಿಗೆ ಎಷ್ಟೋ ಕಥೆಗಳನ್ನು ಹೇಳುತ್ತಿದ್ದಳು. ಧರ್ಮಾತ್ಮರ ಮತ್ತು ವೀರರ ಕಥೆಗಳನ್ನು ಕೇಳಿ ತಾನೂ ಅವರಂತೆ ಆಗಬೇಕೆಂದು ಅವನಿಗೆ ಅನ್ನಿಸುತ್ತಿತ್ತು.

ಪರೀಕ್ಷಿತ ಮಹಾರಾಜನು ರಾಜಕುಮಾರನು ಶೃಂಗಿಯ ಶಾಪ ಕಾರಣದಿಂದ ಒಂದು ದೊಡ್ಡ ವ್ರತವನ್ನು ಮಾಡಲು ನಿರ್ಧರಿಸಿದನು. ಅದಕ್ಕಾಗಿ ಅರಮನೆಯಿಂದ ಬಹು ದೂರ ನೀರಿನ ನಡುವೆ ಒಂದು ಕಂಬದಮೇಲೆ ಮಂದಿರ’ವನ್ನು ಕಟ್ಟಲಾಯಿತು. ರಾಜನು ಏಳು ದಿನಗಳ ಕಾಲ ಅದರಲ್ಲಿದ್ದುಕೊಂಡು ಸದಾ ದೇವರನ್ನು ಪೂಜಿಸುತ್ತಿದ್ದನು. ಶುಕನೆಂಬ ಮಹರ್ಷಿಯು ಆಗ ರಾಜನಿಗೂ ರಾಣಿಗೂ ಭಾಗವತ ಕಥೆಯನ್ನು ಹೇಳುತ್ತಿದ್ದನು.

ಏಳನೆಯ ದಿನ ಶುಕ ಮಹರ್ಷಿ ಹೊರಟುಹೋದ ಮೇಲೆ ಕೆಲವರು ಬ್ರಾಹ್ಮಣರು ಬಂದು ಪರೀಕ್ಷಿತನಿಗೆ ಕೆಲವು ಹಣ್ಣುಗಳನ್ನು ಕೊಟ್ಟು ಹೋದರು. ಪರೀಕ್ಷಿತನು ತಿನ್ನುವುದಕ್ಕಾಗಿ ಒಂದು ಹಣ್ಣನ್ನು ಎತ್ತಿಕೊಂಡನು. ಕೂಡಲೇ ಅದರೊಳಗಿನಿಂದ ಒಂದು ಹಾವು ಹೊರಬಂದಿತು. ಆ ಹಾವು ಒಂದು ಮರದಷ್ಟು ದೊಡ್ಡದಾಗಿ ತನ್ನ ಬಾಯಿಂದ ವಿಷವನ್ನು ಉಗುಳಿ ಹೋಯಿತು. ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಮಂದಿರದಲ್ಲಿದ್ದವರೆಲ್ಲಾ ಸತ್ತು ಹೋದರು.

ಈ ಸಂಗತಿಯನ್ನು ತಿಳಿದು ಜನಮೇಜಯನು ತಮ್ಮಂದಿರೊಡನೆ ಓಡಿ ಬಂದನು. ರಾಜಪರಿವಾರದವರೂ ಪ್ರಜೆಗಳೂ ಓಡಿ ಬಂದರು. ಜನಮೇಜಯನು ತಂದೆ-ತಾಯಿಯರಿಗಾಗಿ ತುಂಬಾ ಅತ್ತನು. ಮಂತ್ರಿಗಳು ಅವನನ್ನು ಸಮಾಧಾನ ಪಡಿಸುತ್ತಾ, ಹುಟ್ಟಿದವರು ಎಂದಾದರೂ ಸಾಯಲೇಬೇಕು. ಮಹಾರಾಜರಿಗೆ ಮೊದಲೇ ಸಯುವ ವಿಷಯ ತಿಳಿದಿತ್ತು. ಶಮೀಕ ಋಷಿಯ ಮಗನಾದ ಶೃಂಗಿಯೆಂಬ ಮುನಿಯು ಏಳು ದಿನಗಳೊಳಗಾಗಿ ಸಾಯುವಂತೆ ಮಹಾರಾಜರಿಗೆ ಶಾಪವಿತ್ತಿದ್ದನು.

ಮಹಾತ್ಮರ ವಾಕ್ಯದಂತೆ ಎಲ್ಲವೂ ನಡೆದು ಹೋಯಿತು. ಧರ್ಮಾತ್ಮರಾದ ಪರೀಕ್ಷಿತ ಮಹಾರಾಜರು ತೀರಿಕೊಂಡರೂ ಅವರ ಕೀರ್ತಿ ಶಾಶ್ವತ. ಇನ್ನು ಈ ರಾಜ್ಯಕ್ಕೆ ನೀವೇ ದಿಕ್ಕು” ಎಂದು ಹೇಳಿ ಜನಮೇಜಯನನ್ನು ಅರಮನೆಗೆ ಕರೆತಂದರು. ಕುರುದೇಶದ ಅಧೀನದಲ್ಲಿ ಸುತ್ತಮುತ್ತಲೂ ಚಿಕ್ಕ ಚಿಕ್ಕ ರಾಜ್ಯಗಳಿದ್ದವು. ಅವರು ಚಿಕ್ಕವಯಸ್ಸಿನವನಾದ ಜನಮೇಜಯನನ್ನು ಸೋಲಿಸಲು ಸಂಚು ಮಾಡಿದರು.

ಇದೇ ಸಮಯಕ್ಕೆ ತಕ್ಷಶಿಲೆಯಲ್ಲಿ ಗಲಭೆಗಳಾದವು. ಶತ್ರುರಾಜರ ಸೈನ್ಯಗಳು ಆ ನಗರದೊಳಕ್ಕೆ ನುಗ್ಗಿ ಬಡವರಾದ ಪ್ರಜೆಗಳನ್ನು ಹೊಡೆದು ಬಡಿದು ಸಂಪತ್ತನ್ನು ದೋಚಿಕೊಳ್ಳತೊಡಗಿದುವು. ಅಲ್ಲಿನ ಜನರು ಹಾಹಾಕಾರ ಮಾಡಿದರು. ಜನಮೇಜಯ ಸೈನ್ಯದೊಡನೆ ಹೊರಟು ರಾಜರ ಪುಂಡಾಟವನ್ನು ಅಡಗಿಸಿದನು.

ಸ್ವಲ್ಪ ಕಾಲ ತಕ್ಷಶಿಲೆಯಲ್ಲಿ ಹೆಂಡತಿಯೊಡನೆ ನಿಂತನು. ಪ್ರಜಾಕ್ಷೇಮಕ್ಕಾಗಿ ಅನೇಕ ಯಜ್ಞ ಯಾಗಗಳನ್ನೂ ದಾನಧರ್ಮಗಳನ್ನೂ ಮಾಡಿದನು. ತನ್ನ ರಾಜ್ಯದಲ್ಲಿ ಯಾರೂ ದುಃಖ ಪಡಬಾರದೆಂದು ಅವನ ಇಚ್ಛೆ. ಜನಮೇಜಯ ಮಹಾರಾಜನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ರಾಜನು ಅನೇಕ ದಾನಗಳನ್ನು ಮಾಡಿ, ಮಕ್ಕಳಿಗೆ ಶತಾನೀಕ ಮತ್ತು ಶಂಕುಕರ್ಣರೆಂದು ಹೆಸರಿಟ್ಟನು.

ಒಂದು ದಿನ ಉತ್ತಂಕನೆಂಬ ಋಷಿಯು ಅರಮನೆಗೆ ಬಂದನು. ಜನಮೇಜಯನು ಋಷಿಯನ್ನು ವಿನಯದಿಂದ ಕೇಳಿದನು- “ಮಹಾತ್ಮ, ತಮ್ಮ ಬರುವಿಕೆಯಿಂದ ನನ್ನ ಮನೆ ಪಾವನವಾಯಿತು. ನನ್ನಿಂದ ತಮಗೆ ಏನಾಗಬೇಕು?”

ಉತ್ತಂಕ; “ಮಹಾರಾಜ, ಋಷಿಗಳಾದ ನಮಗೆ ಯಾರ ಮೇಲೂ ವೈರವಿಲ್ಲ. ಆದರೆ ನಾಗಲೋಕದ ತಕ್ಷಕನು ಗರ್ವದಿಂದ ನನಗೆ ಅಪಕಾರ ಮಾಡಿದ್ದಾನೆ. ದುರ್ಜನರನ್ನು ಶಿಕ್ಷಿಸಬೇಕಾದುದು ರಾಜನ ಕರ್ತವ್ಯ. ಆದ್ದರಿಂದ ನೀನು ಅವನನ್ನು ಶಿಕ್ಷಿಸಿ ಬುದ್ಧಿ ಕಲಿಸು.”

ಜನಮೇಜಯ; “ಮಹಾತ್ಮರೇ, ಅವನು ಮಾಡಿದ ಅಪರಾಧವೇನು?” ಉತ್ತಂಕ; ನಾನು ಗುರುವಿನ ಬಳಿ ವೇದಗಳನ್ನೆಲ್ಲ ಕಲಿತೆ. ಗುರುವಿಗೆ #ಗುರುದಕ್ಷಿಣೆ ಕೊಡಬೇಕಾಯಿತು. ಅದಕ್ಕಾಗಿ ಒಬ್ಬ ರಾಜನನ್ನು ಬೇಡಿ, ಕಿವಿಯಲ್ಲಿ ಧರಿಸುವ ಕುಂಡಲಗಳನ್ನು ಪಡೆದುಕೊಂಡೆ. ಗುರುವಿಗೆ ಅವನ್ನು ಕೊಡಲೆಂದು ತರುತ್ತಿರುವಾಗ ಬಾಯಾರಿಕೆಯಾಯಿತು.

ಒಂದು ಬಾವಿಯ ದಡದಲ್ಲಿ ಕುಂಡಲಗಳನ್ನಿಟ್ಟು ನಾನು ನೀರು ಕುಡಿಯುತ್ತಿರುವಾಗ, ಈ ದುಷ್ಟನಾದ ತಕ್ಷಕನು ನನಗೆ ಗೊತ್ತಾಗದಂತೆ ಅವನ್ನು ಕದ್ದುಕೊಂಡು ನಾಗಲೋಕಕ್ಕೆ ಹೊರಟುಹೋದನು. ನಾನು ದುಃಖದಿಂದ ಎಲ್ಲೆಲ್ಲೋ ಹುಡುಕಿ ಕೊನೆಗೆ ನಾಗಲೋಕಕ್ಕೆ ಹೋಗಬೇಕಾಯಿತು. ನಾಗರಾಜನು ನನಗೆ ಕುಂಡಲಗಳನ್ನೇನ್ನೋ ಕೊಟ್ಟನು. ಆದರೆ ತಕ್ಷಕನಿಗೆ ಯಾವ ಶಿಕ್ಷೆಯನ್ನೂ ಕೊಡಲಿಲ್ಲ. ನೀನೇ ಹೇಳು, ಇದು ಸರಿಯೇ?”

ಜನಮೇಜಯನು ಯೋಚಿಸುತ್ತಾ “ತಕ್ಷಕನು ಅಪರಾಧಿಯೆಂಬ ಮಾತೇನೋ ಸರಿ. ಆದರೆ ಅವನು ಸರ್ಪಗಳ ಲೋಕದವನು. ತಮ್ಮ ಮಾತಿನಂತೆ ನಾಗರಾಜನು ಅವನನ್ನು ಶಿಕ್ಷಿಸಬೇಕಾಗಿತ್ತು. ನಾಗಲೋಕದ ಪ್ರಜೆಯ ಮೇಲೆ ನಮಗೆ ಅಧಿಕಾರವಿಲ್ಲ. ಅಂದಮೇಲೆ ತಕ್ಷಕನನ್ನು ಶಿಕ್ಷಿಸುವುದೆಂದರೆ ನಾಗಲೋಕದ ವೈರ ಕಟ್ಟಿದಂತಾಗುತ್ತದೆ. ನಮ್ಮ ರಾಜ್ಯದೊಳಕ್ಕೆ ಬಂದು ತಕ್ಷಕನು ಯಾವ ತಪ್ಪೂ ಮಾಡದಿರುವಾಗ ಇದೆಲ್ಲಾ ಸಾಧ್ಯವೇ?” ಎಂದನು.

ಉತ್ತುಂಕ ಋಷಿ ಮತ್ತೆ ಹೇಳಿದ: “ಜನಮೇಜಯ, ತಕ್ಷಕನು ನನಗೆ ಅಪರಾಧಿ. ಆದರೆ ಅವನು ನಿನಗೆ ವೈರಿ. ಧರ್ಮಾತ್ಮನಾದ ನಿನ್ನ ತಂದೆಯನ್ನು ಕಚ್ಚಿ ಕೊಂದ ವಿ’ಷ ಸರ್ಪ ಈ ತಕ್ಷಕನೇ ಅಲ್ಲವೆ? ತಂದೆಯನ್ನೇ ಕೊಂದ ಈ ದ್ರೋಹಿಯನ್ನು ಶಿಕ್ಷಿಸಿ ತಂದೆಯ ಋಣ ತೀರಿಸದಿದ್ದರೆ ನೀನು ವೀರಪುತ್ರನಾಗಿ ಹುಟ್ಟಿದ್ದಕ್ಕೆ ಏನು ಸಾರ್ಥಕ?

ಜನಮೇಜಯನು ಆಶ್ಚರ್ಯದಿಂದ “ನನ್ನ ತಂದೆಗೆ ಶಮೀಕ ಋಷಿಯ ಮಗನಾದ ಶೃಂಗಿಯಿಂದ ಶಾಪವಿತ್ತೆಂದು ಕೇಳಿದ್ದೆನಲ್ಲ? ಎಂದನು. ಉತ್ತಂಕ; ಜನಮೇಜಯ, ಶಾಪವು ಕೇವಲ ನೆಪಮಾತ್ರ. ನಿನ್ನ ತಂದೆಯನ್ನು ಔಷಧದಿಂದ ಉಳಿಸಲು ಕಾಶ್ಯಪನೆಂಬ ವಿಷ ವೈದ್ಯನು ಬರುತ್ತಿದ್ದ. ತಕ್ಷಕನು ಅವನು ಬರದಂತೆ ತಡೆದನು. ಇಲ್ಲದಿದ್ದರೆ ಧರ್ಮಾತ್ಮನೂ ದೈವಭಕ್ತನೂ ಆದ ನಿನ್ನ ತಂದೆ ಸಾಯುತ್ತಿದ್ದನೇ? ಒಟ್ಟಿನಲ್ಲಿ ನನಗೆ ತೋಚಿದ್ದು ಹೇಳಿದ್ದೇನೆ. ನಿನ್ನಿಷ್ಟ ಬಂದಂತೆ ಮಾಡು ಎಂದು ಹೇಳಿ ಉತ್ತಂಕ ಋಷಿ ಹೊರಟುಹೋದನು.

ಈ ಮಾತುಗಳನ್ನು ಕೇಳಿ ಜನಮೇಜಯನಿಗೆ ಬಹಳ ದುಃಖವಾಯಿತು, ಕೋಪ ಬಂದಿತು. ಆಗ ಮಂತ್ರಿಗಳೂ ಸಹ ಜನಮೇಜಯನನ್ನು ಕುರಿತು “ಪ್ರಭೂ, ಋಷಿ ಹೇಳಿದ್ದೆಲ್ಲವೂ ನಿಜ. ತಮಗೆ ತಿಳಿದರೆ ದುಃಖವಾಗುವುದೆಂದು ಆಗ ನಾವು ಹೇಳಲಿಲ್ಲ” ಎಂದರು. ಮಂತ್ರಿಗಳ ಮಾತು ಮುಗಿಯುತ್ತಿದ್ದಂತೆ ಜನಮೇಜಯನ ಕೋಪ ಕೆರಳಿತು. ರೋಷದಿಂದ ಅರಮನೆಯೆಲ್ಲಾ ನಡುಗುವಂತೆ ಗರ್ಜಿಸಿದನು.

“ದ್ರೋಹಿ ತಕ್ಷಕ! ನಿನಗೆ ನನ್ನ ತಂದೆ ಮಾಡಿದ್ದ ಅಪರಾಧವಾದರೂ ಏನು? ಆತನು ಬದುಕಿದ್ದರೆ ನಿನಗಾಗುತ್ತಿದ್ದ ನಷ್ಟವೇನು? ನೀನಂತೂ ವಿಷಜಂತು. ಆದರೆ ಉಪಕಾರ ಮಾಡಲು ಬರುತ್ತಿದ್ದ ವೈದ್ಯನನ್ನು ಬರದಂತೆ ಮಾಡಿದ ದ್ರೋಹಕ್ಕಾಗಿ ನಿನಗೆ ಶಿಕ್ಷೆ ಮಾಡಿಯೇ ತೀರುತ್ತೇನೆ. ನಿನ್ನಿಂದ ಮುಂದೆ ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ನಿನ್ನ ಪರವಾಗಿ ದೇವತೆಗಳೇ ಅಡ್ಡ ಬಂದರೂ ನನ್ನನ್ನು ತಡೆಯಲಾರರು!

ಈ ಧೀರಪ್ರತಿಜ್ಞೆಯ ವಿಷಯ ಲೋಕ ಲೋಕಗಳಿಗೆಲ್ಲ ಹರಡಿತು. ನಾಗಲೋಕದಲ್ಲಿ ಭಯ ಆವರಿಸಿತು. ನಾಗರಾಜನಾದ ವಾಸುಕಿಯು ಹೆದರಿದನು. ಅವನು ತಕ್ಷಕನನ್ನು ಕರೆಸಿ, “ನಿನ್ನ ಕಾರಣದಿಂದ ಈಗ ನಾಗಲೋಕಕ್ಕೇ ಆಪತ್ತು ಬಂದಿದೆ. ಜನಮೇಜಯನ ಪ್ರತಿಜ್ಞೆ ಎಂದಿಗೂ ವ್ಯರ್ಥವಾಗುವುದಿಲ್ಲ. ನೀನು ಇಲ್ಕಿರಬೇಡ, ಎಲ್ಲಾದರೂ ಹೋಗು” ಎಂದುಬಿಟ್ಟನು.

ಜನಮೇಜಯನು ಸರ್ಪಗಳ ನಾಶಕ್ಕಾಗಿ ನಾಗಯಜ್ಞವನ್ನು ಮಾಡಲು ತೀರ್ಮಾನಿಸಿ, ಯಜ್ಞಕ್ಕೆ ಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸುವಂತೆ ಮಂತ್ರಿಗಳಿಗೆ ಅಪ್ಪಣೆ ಮಾಡಿದ. ತಕ್ಷಕನು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನ ಸ್ನೇಹಿತನಾದ ಇಂದ್ರನ ಮನೆಯಲ್ಲಿ ಅವಿತುಕೊಂಡನು.

ತಕ್ಕಷನ ಸಂಹಾರಕ್ಕಾಗಿ ಯಜ್ಞವು ಪ್ರಾರಂಭವಾಯಿತು. ಮಂತ್ರಗಳ ‌ಮೋಹಕ್ಕೆ ತರಗೆಲೆಗಳಂತೆ ಬಂದು ಸರ್ಪಗಳು ಬೆಂಕಿಗೆ ಬೀಳುತ್ತಿದ್ದವು. ಮೊದಲಿಗೆ ಸಣ್ಣ ಹಾವುಗಳು, ಬರುಬರುತ್ತಾ ಆನೆಯ ಸೊಂಡಿಲಿಗಿಂತಲೂ ದೊಡ್ಡ ಹಾವುಗಳು ಬರಲಾರಂಬಿಸಿದವು. ಈಗ ದೊಡ್ಡ ಮರದ ಗಾತ್ರದವೂ ಬರಲಾರಂಭಿಸಿದವು. ಎಲ್ಲವೂ ಬಂದು ಆ ದೊಡ್ಡ ಯಜ್ಞ ಕುಂಡದಬೆಂಕಿಗೆ ಬಿದ್ದು ಬೂದಿಯಾಗತೊಡಗಿದುವು. ತಲೆ-ಬಾಲಗಳನ್ನು ಬಡಿಯುತ್ತಾ ಒದ್ದಾಡುವಾಗ ಅವು ಮಾಡುವ ಬುಸ್ ಬುಸ್ ಎಂಬ ಭಯಂಕರ ಶಬ್ದದ ಜೊತೆಯಲ್ಲಿ ವಿಷವು ತುಂಬಿಹೋಯಿತು.

ನಾಗಲೋಕವೇ ಅಳಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಷ್ಟಾದರೂ ತಕ್ಷಕನು ಏಕೆ ಕಾಣಿಸುತ್ತಿಲ್ಲವೆಂದು ಜನಮೇಜಯನಿಗೆ ಯೋಚನೆಯಾಯಿತು. ಅಷ್ಟರಲ್ಲಿ ಹೋಮ ಕುಂಡದಲ್ಲಿ ಅಗ್ನಿದೇವನು ಪ್ರತ್ಯಕ್ಷನಾಗಿ “ಇಂದ್ರನು ತಕ್ಷಕನನ್ನು ತನ್ನ ಬಳಿ ರಕ್ಷಿಸಿಕೊಂಡಿದ್ದಾನೆ” ಎಂದು ಹೇಳಿ ಮತ್ತೆ #ಬೆಂಕಿಯರೂಪ ತಾಳಿದನು.

ಜನಮೇಜಯನಿಗೆ ಕೋಪ ಉಕ್ಕಿಬಂತು. ಇಂದ್ರನ ಈ ನಡತೆ ಸರಿಬೀಳಲಿಲ್ಲ. ದುಷ್ಟರಿಗೆ ಸಹಾಯ ಮಾಡುವುದು ಅಪರಾಧ. ಮಹಾಮುನಿಗಳೇ, ಇಂದ್ರನು ತಕ್ಷಕನನ್ನು ಕೈಬಿಡದಿದ್ದರೆ ಯಜ್ಞಕ್ಕೆ ತಕ್ಷಕನ ಜೊತೆಗೆ ಇಂದ್ರನನ್ನೂ ಬೀಳಿಸಿರಿ, ಎಂದನು. ಈಗ ಹೋಮದ ವೇಗ ಮತ್ತಷ್ಟು ಜೋರಾಯಿತು. ಮಂತ್ರಶಕ್ತಿಯ ಪ್ರವಾಹಕ್ಕೆ ತಕ್ಷಕನ ಜೊತೆ ಇಂದ್ರನನ್ನೂ ಯಜ್ಞಕುಂಡದತ್ತ ಎಳೆಯಲಾರಂಭವಾಯಿತು. ಅವರಿಬ್ಬರೂ ಆಕಾಶದಲ್ಲಿ ಕಾಣಿಸಿದರು. ಕೂಡಲೇ ಇಂದ್ರನು ಹೆದರಿ ತಕ್ಷಕನನ್ನು ಇದ್ದಲ್ಲಿಯೇ ಬಿಟ್ಟು ಓಡಿಹೋದನು.

ಎಲ್ಲರೂ ಆಸ್ತೀಕನೆಂಬ ಮಹಾ ಜ್ಞಾನಿಯ ಮೊರೆ ಹೊಇದರು. ಆಸ್ತೀಕನು ಮತ್ತಾರೂ ಅಲ್ಲ, ನಾಗರಾಜನಾದ #ವಾಸುಕಿ’ಯ ತಂಗಿಯ ಮಗ. ನಾಗಲೋಕವನ್ನು ರಕ್ಷಿಸುವುದಕ್ಕಾಗಿ ನಾಗರಾಜನು ಸೋದರಳಿಯನ ಸಹಾಯ ಬೇಡಿದನು. ವೇದಗಳನ್ನೋದಿ ಜ್ಞಾನಿಯಾಗಿದ್ದ ಆಸ್ತೀಕನು ಪರೋಪಕಾರವೇ ಧರ್ಮವೆಂದು ತಿಳಿದವನು. ಸರಿ ಎಂದು ಅಭಯವಿತ್ತನು.

ಇಂದ್ರನ ಕೈಯಿಂದ ಜಾರುತ್ತಲೇ ತಕ್ಷಕನು ಭಯದಿಂದ ‘ಅಯ್ಯೋ’ ಎಂದು ಚೀರಿದನು. ತಲೆಕೆಳಗಾಗಿ ಆಕಾಶದಿಂದ ಬೀಳತೊಡಗಿದನು. ಅವನ ಘೋರವಾದ ಸರ್ಪಾಕಾರವನ್ನು ಕಂಡು ಎಲ್ಲರೂ ದಿಗಿಲು ಬಿದ್ದರು. ಮುನಿಗಳ ಮಂತ್ರಾಲೋಚನೆ ಮತ್ತಷ್ಟು ವೇಗ ಪಡೆಯಿತು. ತಕ್ಷಕನ ಬುಸುಗುಟ್ಟುವಿಕೆ ಬಿರುಗಾಳಿ ಎಬ್ಬಿಸಿತು.

ಇನ್ನೇನು ಬೆಂಕಿಯೊಳಕ್ಕೆ ತಕ್ಷಕನು ಬೀಳಬೇಕು, ಆ ವೇಳೆಗೆ ಯಜ್ಞ ನಿಲ್ಲಲಿ ಎಂದು ಯಾರೋ ಕೂಗಿ ಹೇಳಿದಂತಾಯಿತು. ತಕ್ಷಕನ ಶರೀರ ಹಾಗೆಯೇ ಮೇಲ್ಭಾಗದಲ್ಲಿ ನಿಂತಿತು. ಜನಮೇಜಯನು ಆಶ್ಚರ್ಯದಿಂದ ‘ಯಾರದು?’ ಎಂದು ತಿರುಗಿ ನೋಡಿದನು. ಎದುರಿನಲ್ಲಿ ಒಬ್ಬ ತೇಜಸ್ವಿಯಾದ ಬಾಲತಪಸ್ವಿಯು ನಿಂತಿದ್ದನು.

ಅಲ್ಲಿದ್ದ ಜನರೆಲ್ಲರೂ ಕೇಳುವಂತೆ ಅವನು ಹೇಳತೊಡಗಿದನು; ಜನಮೇಜಯ ಮಹಾರಾಜ, ನನ್ನ ಹೆಸರು ಆಸ್ತೀಕ. ನೀನು ನಿನ್ನ ತಂದೆಯನ್ನು ಮೀರಿಸಿದ ಧರ್ಮಾತ್ಮ. ಪರೋಪಕಾರಕ್ಕಾಗಿ ನಾನೂ ಸಹ ನಿನ್ನಲ್ಲಿ ಒಂದು ವರವನ್ನು ದಾನವಾಗಿ ಬೇಡಲು ಬಂದಿದ್ದೇನೆ.

ವಯಸ್ಸು ತುಂಬಾ ಚಿಕ್ಕದಾದರೂ ಜ್ಞಾನ ಮುಖ್ಯವಲ್ಲವೆ? ಜನಮೇಜಯನು ಆತನನ್ನು ಹುಡುಗನೆಂದು ತಿರಸ್ಕಾರ ಮಾಡಲಿಲ್ಲ. ಬಹಳ ಗೌರವದಿಂದ ಅವನನ್ನು ಕುಳ್ಳಿರಿಸಿ, ಮಹಾನುಭಾವ, ನೋಡುವುದಕ್ಕೆ ತಾವು ಬಾಲಕನಂತಿದ್ದರೂ ಮಾತುಗಳಿಂದ ಜ್ಞಾನಿಗಳಾಗಿದ್ದೀರಿ. ದೇವರು ನಿಮ್ಮ ರೂಪದಲ್ಲಿ ಬಂದನೆಂದೇ ಭಾವಿಸಿದ್ದೇನೆ. ಏನು ಬೇಕೋ ಕೇಳಿರಿ. ಅದು ಏನೇ ಆಗಲಿ, ಕೊಡುತ್ತೇನೆ!” ಎಂದನು.

ಆಸ್ತೀಕ; ವೀರ ಜನಮೇಜಯ, ಈ ಯಜ್ಞದಿಂದ ಸ್ವರ್ಗದಲ್ಲಿರುವ ನಿನ್ನ ತಂದೆಯ ಋಣ ತೀರಿಸಿದ್ದೀಯೆ. ನಾಗಲೋಕದಲ್ಲಿದ್ದ ವಿಷಸರ್ಪಗಳನ್ನು ಕೊಂದು ಪ್ರಜೆಗಳಿಗೂ ಉಪಕಾರ ಮಾಡಿದ್ದೀಯೆ. ನಿನ್ನ ಯಜ್ಞವು ಮುಂದುವರಿದರೆ ನಾಗಲೋಕದಲ್ಲಿ ಈಗ ಉಳಿದಿರುವ ಸಜ್ಜನರೂ ನಾಶವಾಗುತ್ತಾರೆ. ಇದು ಸರಿಯಲ್ಲ. ಯಜ್ಞವನ್ನು ನಿಲ್ಲಿಸು, ತಕ್ಷಕನನ್ನು ಬಿಟ್ಟುಬಿಡು. ಇದೇ ನಾನು ಬೇಡುವ ವರ.” ಜನಮೇಜಯನಲ್ಲಿ ಹೀಗೆ ವರವನ್ನು ಕೇಳಿದನು.

ಜನಮೇಜಯನಿಗೆ ದಿಕ್ಕು ತೋರಲಿಲ್ಲ. ಬೇರೆ ಏನು ಕೊಟ್ಟರೂ #ಆಸ್ತೀಕನು_ಒಪ್ಪುವಂತಿಲ್ಲ. ಕೊನೆಗೆ ಜನಮೇಜಯನು ಶಾಂತನಾಗಿ, “ಸತ್ಯವೇ ದೇವರೆಂದು ವೇದ ಶಾಸ್ತ್ರಗಳು ಹೇಳುತ್ತವೆ. ಕೊಟ್ಟ ಮಾತಿಗೆ ನಾನು ತಪ್ಪುವುದಿಲ್ಲ. ಸಜ್ಜನರಿಗೆ ನನ್ನಿಂದ ಹಿಂಸೆಯಾಗುವುದು ಬೇಡ. ಈ ಯಜ್ಞ ನಿಲ್ಲಲಿ, ಆಸ್ತೀಕಮುನಿಯ ಮನಸ್ಸು ತೃಪ್ತವಾಗಲಿ” ಎಂದನು.

ಆ ವೇಳೆಗೆ ಬದರಿಕಾಶ್ರಮದಿಂದ ಭಗವಾನ್ ವ್ಯಾಸರು ತಮ್ಮ ಶಿಷ್ಯರೊಡನೆ ಅಲ್ಲಿಗೆ ಬಂದರು. ರಾಜನು ಪರಿವಾರದೊಡನೆ ಅವರನ್ನು ಎದುರುಗೊಂಡು ಬರಮಾಡಿಕೊಂಡನು. ವ್ಯಾಸರು ಕುಳಿತ ಮೇಲೆ ಜನಮೇಜಯನು ಅವರ ಪಾದಗಳ ಬಳಿ ಕುಳಿತನು. ವ್ಯಾಸರು ಜನಮೇಜಯನನ್ನು ಕುರಿತು; “ಅಪ್ಪಾ ಜನಮೇಜಯ, ಹಿಂದೆ ಈ ಕುರುಭೂಮಿಯಲ್ಲಿ ದುರ್ಯೋಧನನ ತಪ್ಪಿನಿಂದ ಅನೇಕರು ನಾಶವಾಗಿದ್ದರು.

ಈಗಲೂ ತಕ್ಷಕನ ಕಾರಣದಿಂದ ನಾಗಲೋಕವೆಲ್ಲಾ ಹಾಳಾಗುವುದೇನೋ ಎಂದು ನಾನು ಗಾಬರಿಯಾಗಿದ್ದೆ. ನಿನ್ನ ಸತ್ಯಪರಿಪಾಲನೆ ಮತ್ತು ತಾಳ್ಮೆಗಳಿಂದ ಇಲ್ಲಿ ಶಾಂತವಾಗಿರುವುದನ್ನು ಕಂಡು ಸಂತೋಷಪಡುತ್ತಿದ್ದೇನೆ” ಎಂದರು. ಜನಮೇಜಯ; ತಾವು ಎಲ್ಲವನ್ನೂ ಎದುರಿನಲ್ಲಿ ಕಂಡವರು, ಮಹಾಭಾರತವನ್ನು ರಚಿಸಿದವರು, ನಿಮ್ಮಿಂದ #ಮಹಾಭಾರತ ಕೇಳುವ ಆಸೆ ಹೇಳುವಿರಾ?

ಆಗಲಿ ಮಗೂ, ಭಾರತವನ್ನು ನೀನು ಮಾತ್ರವಲ್ಲ, ಈ ಭರತ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಕೇಳಬೇಕಾದ ಪುಣ್ಯಕಥೆ. ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ. ಇದು ಪೂರ್ತಿ ಆಗಲು ಮೂರು ವರ್ಷಗಳಾಯಿತು. ನನ್ನ ಸಹಾಯಕ್ಕೆ ಪರಮೇಶ್ವರನ ಪುತ್ರನಾದ ವಿಘ್ನೇಶ್ವರ’ನೇ ಬಂದಿದ್ದನು. ಮಹಾಭಾರತವನ್ನು ಇಂದಿನಿಂದ ಪ್ರಾರಂಭಿಸಿ ಪ್ರತಿ ದಿನವೂ ಸ್ವಲ್ಪ ಸ್ವಲ್ಪವಾಗಿ ಹೇಳಲಾಗುತ್ತದೆ.

ಜನರೆಲ್ಲರೂ ಕೇಳಿ ಆನಂದಿಸಲಿ. ವ್ಯಾಸರ ಮಾತನ್ನು ಕೇಳಿ ಎಲ್ಲರಿಗೂ ಆನಂದವೇ ಆನಂದ. ಋಷಿಗಳು, ವಿದ್ವಾಂಸರು, ದೊಡ್ಡವರು, ಚಿಕ್ಕವರು- ಎಲ್ಲರೂ ಕಥೆಯನ್ನು ಕೇಳಲು ಕುಳಿತರು. ಜನಮೇಜಯನೂ ಸಹ ತನ್ನ ಪರಿವಾರದೊಡನೆ ಕುಳಿತನು. ಮಹಾಭಾರತ ಕಥೆ ಪೂರ್ಣವಾಗಲು ಬಹುಕಾಲ ಹಿಡಿಯಿತು. ಮಹಾಭಾರತದ ಎಲ್ಲಾ ಪಾತ್ರಗಳೂ ಜನರ ಕಣ್ಣಮುಂದೆ ಬರುವಂತೆ ವರ್ಣಿಸಿದ್ದರು ಆ ಮಹಾಮುನಿಗಳು.

LEAVE A REPLY

Please enter your comment!
Please enter your name here