ಸ್ರೀಯರಿಗೆ ವೇದಾಧ್ಯಯನದ ಕುರಿತು ತುಂಬಾ ವಿಚಾರ ನಡೆಯುತ್ತಿರುವುದರಿಂದ ಆ ಬಗ್ಗೆ ಒಂದು ಶಾಸ್ತ್ರೀಯ ಚಿಂತನೆ. ಶಾಸ್ತ್ರವನ್ನು ತಿಳಿದವರು ಸ್ತ್ರೀಯರಿಗೆ ವೇದಾಧ್ಯಯನದ ನಿಷೇಧವನ್ನು ಹೇಳುವುದಕ್ಕೆ ಕಾರಣವಾದರೂ ಏನು? ಅಲ್ಲಿ ಯಾವುದೇ ಪೂರ್ವಾಗ್ರಹ ಇದೆಯೇ? ಶಾಸ್ತ್ರತತ್ವ ವಾದರೂ ಏನು? ಎಂದು ವಿಮರ್ಶೆ ಮಾಡಿದಾಗ ಶಾಸ್ತ್ರದ ನಿಯಮ ಹೀಗಿದೆ ಎಂದು ತಿಳಿದುಬರುತ್ತದೆ – ಉಪನಯನ ಸಂಸ್ಕಾರದಿಂದ ಸಂಸ್ಕೃತ ವಾದವರಿಗೆ ವೇದಾಧ್ಯಯನ ಕ್ಕೆ ಅಧಿಕಾರ.
“ಉಪನಯನಂ ಅಧ್ಯಯನಾಂಗಮ್ ” ಎಂಬುದು ಶಾಸ್ತ್ರದ ಸಿದ್ಧಾಂತ. ನಾವು ಉಪನಯನದ ಸಂಕಲ್ಪದಲ್ಲೂ – ” ದ್ವಿಜತ್ವ ಸಿದ್ಧಿದ್ವಾರಾ ವೇದಾಧ್ಯಯನ ಅಧಿಕಾರ ಸಿಧ್ಯರ್ಥಮ್ ” ಎಂದೇ ಸಂಕಲ್ಪ ಮಾಡುತ್ತೇವೆ. ಉಪನಯನದ ವಿಧಿ ವಾಕ್ಯವೂ ಅದನ್ನೇ ಹೇಳುತ್ತಿದೆ. “ಅಷ್ಟ ವರ್ಷಮ್ ಬ್ರಾಹ್ಮಣಂ ಉಪನಯೀತ | ತಮಧ್ಯಾಪಯೀತ | ” ಎಂಬುದಾಗಿ. ಇಲ್ಲಿ ಪುಲ್ಲಿಂಗ ನಿರ್ದೇಶ ಇದೆ. ಅದು ವಿವಕ್ಷಿತ ಎಂಬುದು ಶಾಸ್ತ್ರ ಮರ್ಯಾದೆ.
ಇದು ವೈದಿಕರೆಲ್ಲರಿಗೂ ತಿಳಿದ ವಿಷಯ. ಸ್ತ್ರೀಯರಿಗೆ ಉಪನಯನ ಇದೆಯೇ? ಎಂದರೆ ಅದಕ್ಕೆ ವೈದಿಕವಚನ ತೋರುತ್ತಿಲ್ಲ. ಹಾಗಾದರೆ ವೈದಿಕ ಕರ್ಮಗಳಲ್ಲಿ ಅವಳಿಗೆ ಅಧಿಕಾರವೇ ಇಲ್ಲವೇ? ಅವಳು ವಂಚಿತಳಾಗಬೇಕೆ ? ಎಂದರೆ ” ದಂಪತ್ಯೋಃ ಸಹಾಧಿಕಾರಃ ” ಎಂದು ಹೇಳಿದ್ದಾರೆ. ಪತಿಯ ವೇದಾಧ್ಯಯನ ದಿಂದಲೇ ಅವಳಿಗೂ ಅಧ್ಯಯನ ಸಿದ್ಧಿ. ಕರ್ಮ ಫಲದಲ್ಲೂ ಅರ್ಧ ಭಾಗ ಸಿದ್ಧಿಸುತ್ತದೆ. ಹಾಗಾಗಿ ಪ್ರತ್ಯೇಕವಾಗಿ ಸ್ವತಂತ್ರವಾದ ಯಾಜ್ಞಕರ್ಮ ವಿಲ್ಲ. ಅಂದಮೇಲೆ ಉಪನಯನವೇ ಇಲ್ಲದಾಗ ವೇದಾಧ್ಯಯನಕ್ಕೆ ಇರುವ ಶಾಸ್ತ್ರಪ್ರಮಾಣ ಏನು? ಎಂಬ ಪ್ರಶ್ನೆ ಉಳಿಯುತ್ತದೆ.
ವೇದದಲ್ಲೇ ಗಾರ್ಗಿ , ಮೈತ್ರೇಯಿ ಇತ್ಯಾದಿಗಳೆಲ್ಲ ಬ್ರಹ್ಮಜ್ಞಾನಿ ಗಳು ಇದ್ದರು ಎಂದು ಹೇಳಿದೆ ಎಂದಾದರೆ – ಜ್ಞಾನದಲ್ಲಿ( ವೇದಾಂತದಲ್ಲಿ ) ಸರ್ವೇಷಾಂ ಅಧಿಕಾರಃ ಎಂದಿದ್ದಾರೆ. ಹಾಗೂ ಆ ಸ್ತ್ರೀಯರಿಗೆ ಉಪನಯನ ಆಗಿತ್ತು, ಅವರು ವೇದಾಧ್ಯಯನ ಮಾಡಿದ್ದರು ಎಂಬ ಬಗ್ಗೆ ಎಲ್ಲೂ ಉಲ್ಲೇಖ ಸಿಗುವುದಿಲ್ಲ. ಒಂದೊಮ್ಮೆ ಇದ್ದರೂ ” ಪುರಾಕಲ್ಪೇತು ನಾರೀಣಾಂ ಮೌಂಜೀ ಬಂಧನಮಿಷ್ಯತೇ ” ಎಂದು ಬೇರೆ ಕಲ್ಪದಲ್ಲಿತ್ತು ಎಂದು ವಚನ ಸಿಗುತ್ತದೆ.
ಅಂದಮೇಲೆ ಈ ಕಲ್ಪದಲ್ಲಿ ಇಲ್ಲ ಎಂದೇ ಅರ್ಥ. ಇನ್ನೂ ಹೇಳುವುದಾದರೆ ಉಪನಿಷತ್ತಿನ ಕಥೆಗಳಲ್ಲಿ ಬರುವ ಹೆಸರುಗಳು ಕೇವಲ ಕಾಲ್ಪನಿಕ. ಇದನ್ನೇ ಶಂಕರಾಚಾರ್ಯರು ಕಠೋಪನಿಷತ್ತಿನ ಮೊದಲನೆಯ ಮಂತ್ರದ ಭಾಷ್ಯದಲ್ಲಿ ಹೇಳಿದ್ದಾರೆ. ಇಲ್ಲಿಯ ಕಥೆಗಳು ಬ್ರಹ್ಮವಿದ್ಯೆಯ ಪ್ರಶಂಸೆಗಾಗಿ. ತೈತ್ತರೀಯ ಉಪನಿಷತ್ತಿನ ಭೃಗು ವಲ್ಲಿಯಲ್ಲೂ ನೋಡಬಹುದು. ಒಂದೊಮ್ಮೆ ಈ ಕಥೆಗಳಿಗೆ ಪ್ರಾಮಾಣ್ಯ ಇದೆ ಎಂದಾದರೆ ವೇದಕ್ಕೆ ಅಪೌರುಷೇಯತ್ವ (ಅನಾದಿತ್ವ) ಹೊರಟು ಹೋಗುತ್ತದೆ.
ಮೈತ್ರೇಯಿ ಇತ್ಯಾದಿಗಳು ಹುಟ್ಟುವ ಮೊದಲು ಈ ವೇದವಾಕ್ಯ ಇರಲಿಲ್ಲ. ಅವರು ಹುಟ್ಟಿದ ನಂತರ ಈ ವಾಕ್ಯ ಹುಟ್ಟಿತು ಎಂದೇ ಹೇಳಬೇಕಾಗುತ್ತದೆ ಹಾಗಾಗಿ ಇಲ್ಲಿ ಹೆಸರುಗಳಿಗೆ ಯಥಾ ಶ್ರುತ ವ್ಯಕ್ತಿಗತ ಪ್ರಾಮಣ್ಯವಿಲ್ಲ .
ಹಾಗಾದರೆ ಸ್ತ್ರೀಯರಿಗೆ ವೇದಾಧ್ಯಯನ ದಲ್ಲಿ ಯಾಕೆ ಋಷಿಗಳು ನಿಷೇಧ ಹೇಳಿದರು? ಋಷಿಗಳು ಸ್ತ್ರೀ ವಿರೋಧಿಗಳೇ? ಎಂದರೆ ವೇದವನ್ನು ಉಚ್ಚಾರ ಮಾಡುವುದಕ್ಕೆ ಒಂದು ವ್ಯವಸ್ಥೆ ಇದೆ. ಅದನ್ನು ವೇದಾಂಗವಾದ ಶಿಕ್ಷಾ ಗ್ರಂಥದಲ್ಲಿ ತಿಳಿಸಿದ್ದಾರೆ. ನಾವು ಬಾಯಲ್ಲಿ ಉಚ್ಚಾರ ಮಾಡುವ ಶಬ್ದ ನಾಲ್ಕನೇ ಹಂತದ್ದು. ” ತುರೀಯಂ ವಾಚೋ ಮನುಷ್ಯಾ ವದಂತಿ ” ಎಂದು ವೇದ ಹೇಳುತ್ತದೆ. ಅದನ್ನೇ ಯೋಗ ಶಾಸ್ತ್ರದಲ್ಲಿ – ಪರಾ-ಪಶ್ಯಂತೀ-ಮಧ್ಯಮಾ- ವೈಖರೀ ಎಂಬುದಾಗಿ ನಾಲ್ಕು ರೀತಿಯಾಗಿ ಹೇಳಿದ್ದಾರೆ.
ಶಬ್ದದ ಉತ್ಪತ್ತಿ ನಾಭಿ ಸ್ಥಾನದ ಕೆಳಗಡೆ. ಇದು ಸಾಮಾನ್ಯವಾಗಿ ಸಂಗೀತ ಶಾಸ್ತ್ರದಲ್ಲಿ ಸ್ವರ ಸ್ಥಾನ ತಿಳಿದವರಿಗೆ ಗೊತ್ತೇ ಇದೆ. ಆ ರೀತಿಯಲ್ಲಿ ಪ್ರತಿದಿನ ಗ್ರಹಣ ಅಧ್ಯಯನ, ಧಾರಣ ಅಧ್ಯಯನ , ಪಾರಾಯಣ ಹೀಗೆ ನಾಲ್ಕು, ಐದು ತಾಸುಗಳ ಕಾಲ ಸ್ವಾಧ್ಯಾಯಾಧ್ಯಯನವನ್ನು ಮಾಡುತ್ತಾ ಬಂದರೆ ನೈಸರ್ಗಿಕವಾಗಿ ಭಗವಂತನ ಸೃಷ್ಟಿಯಲ್ಲಿ ಸ್ತ್ರೀಯರಿಗೆ ಮಾತ್ರ ಪ್ರಾಪ್ತವಾದ (ಅನುಗ್ರಹೀತವಾದ ) ಪ್ರಸೂತಿ (ಹೆರಿಗೆ) ವ್ಯವಸ್ಥೆಯೇ ಬಾಧಿತ ವಾಗುತ್ತದೆ. ಇದು ಕೇವಲ ವೇದಕ್ಕೆ ಮಾತ್ರ ನಿಯಮ.
ಇದನ್ನು ಬಿಟ್ಟು ಸ್ತೋತ್ರ ಪುರಾಣಾದಿಗಳಿಗೆ ಈ ನಿಯಮವಿಲ್ಲ. ಇದನ್ನು ನಾವೆಲ್ಲರೂ ತಿಳಿಯಲೇ ಬೇಕು. ಅದನ್ನೇ ಗೀತೆಯಲ್ಲಿ ” ತಸ್ಮಾತ್ ಶಾಸ್ತ್ರಂ ಪ್ರಮಾಣಂ ತೇ |” ಎಂದಿದ್ದಾರೆ. ಇದನ್ನೂ ಮೀರಿ ನಾನು ನಡೆಯುತ್ತೇನೆ ಎಂದರೆ ಗೀತೆಯಲ್ಲಿಯೇ – ” ಯಃ ಶಾಸ್ತ್ರ ವಿಧಿಂ ಉತ್ಸೃಜ್ಯ ವರ್ತತೇ ಕಾಮಕಾರತಃ | ನ ಸ ಸಿದ್ಧಿಂ ಅವಾಪ್ನೋತಿ ನ ಸುಖಂ ನ ಪರಾಂಗತಿಂ ||” ಎಂದಿದ್ದಾರೆ. ಇಲ್ಲಿ ನಮ್ಮ ವ್ಯಕ್ತಿಗತ ತೀರ್ಮಾನ ಸಲ್ಲದು.