ರಾಮಾಯಣದಲ್ಲಿ ಬರುವ ಈ ಒಕ್ಕಣ್ಣಿನ ಕಾಗೆಯ ಕಥೆ ಕೇಳಿದ್ದೀರಾ. ಒಮ್ಮೆ ಓದಿ ನೋಡಿ.

0
9607

ಇದು ರಾಮಾಯಣದಲ್ಲಿ ಬರುವ ಪ್ರಸಂಗ. ತಾಯಿ ಕೈಕೇಯಿ ಹೇಳಿದ ಮಾತನ್ನು ದಶರಥನ ಆಜ್ಞೆ ಎಂದು ಪಾಲಿಸಲು ಸೀತಾ ಲಕ್ಷ್ಮಣರ ಸಮೇತ ಶ್ರೀರಾಮನು 14 ವರ್ಷ ವನವಾಸಕ್ಕೆ ಬಂದಿದ್ದಾನೆ. ಅವರು ದಂಡ ಕಾರಣ್ಯದ ಚಿತ್ರಕೂಟ ಪರ್ವತ ಸಮೀಪದ ಮಂದಾಕಿನಿ ನದಿಯ ತಟದ ಕುಟೀರದಲ್ಲಿ ನೆಲೆಸಿದ್ದರು. ಸೀತೆಗೆ ವನದಲ್ಲಿ ಸಂಚರಿಸುವುದು ಎಂದರೆ ಇಷ್ಟ.

ಸೀತೆ ಮತ್ತು ರಾಮ ವನವನ್ನು ಸಂಚರಿಸಿ ವಿಶ್ರಾಂತಿ ಪಡೆಯಲು ಒಂದು ಸ್ಪಟಿಕ ಶಿಲೆಯ ಮೇಲೆ ಕುಳಿತಿದ್ದರು. ಶ್ರೀರಾಮನು ಕಾಡಿನಿಂದ ಆಯ್ದು ತಂದ ಪುಷ್ಪಗಳನ್ನೆಲ್ಲ ಸೀತೆಗೆ ಆಭರಣವಾಗಿ ಅಲಂಕರಿಸುತ್ತಿದ್ದನು. ವನವನ್ನು ಸುತ್ತಿ ಆಯಾಸ ವಾಗಿ ರಾಮನ ತೊಡೆಯ ಮೇಲೆ ಒರಗಿ ಸೀತೆಗೆ ತಂಪಾದ ಗಾಳಿ ಮಸ್ಸಿಗೆ ಮುದ ನೀಡಿತ್ತು. ಆ ಸಮಯಕ್ಕೆ ಎಲ್ಲಿಂದಲೋ ಹಾರಿ ಬಂದ ಒಂದು ಕಾಗೆ, ಸೀತೆಯ ಹತ್ತಿರವೇ ಬಂದು ಅವಳ ಮೈ ಹತ್ತಿರವೇ ಸುಳಿದಾಡುತ್ತ ತೊಂದರೆ ಕೊಡುತ್ತಿತ್ತು. ಅವಳು ಸಣ್ಣ ಸಣ್ಣ ಕಲ್ಲುಗಳನ್ನು ಆರಿಸಿ ಹುಶ್, ಹುಶ್ ಎಂದು ಹೊಡೆದರು ಬಿಡದಂತೆ ಸೀತೆಯನ್ನು ಗೋಳಾಡಿಸುತ್ತಿತ್ತು.

ಸ್ವಲ್ಪ ಹೊತ್ತಿಗೆ ಆಕೆಯ ಕಾಲನ್ನು ಕುಕ್ಕುಲು ಬರುತ್ತಿತ್ತು. ಅವಳು ತನ್ನ ಸೊಂಟ ದ ಡಾಬನ್ನು ತೆಗೆದು ಅದಕ್ಕೆ ಹೊಡೆಯಲು ನೋಡಿದಳು. ಅವಳ ಸೀರೆ ಸಡಿಲವಾಯಿತು ನೋಡಿದ ರಾಮನು ನೋಡಿ ನಕ್ಕನು. ಸೀತೆ ಹುಸಿಕೋಪ ದಿಂದ ಹಾಗೆ ರಾಮನ ತೊಡೆಯ ಮೇಲೆ ಮಲಗಿದಳು. ಸ್ವಲ್ಪ ಹೊತ್ತಿಗೆ ಎದ್ದು ನೋಡುತ್ತಾಳೆ, ಕಾಗೆ ಕಾಣಲಿಲ್ಲ ಸದ್ಯ ತೊಲಗಿತು ಎಂದು ಕೊಂಡಳು.

ತಂಗಾಳಿ ದೇಹಕ್ಕೆ ಕಚಕುಳಿ ಇಟ್ಟಂತಾಗಿ ರಾಮನು ಸಹ ಸೀತೆಯ ತೊಡೆಯ ಮೇಲೆ ಮಲಗಿ ನಿದ್ರಿಸಿದನು. ಮತ್ತೆ ಅದೆಲ್ಲಿಂದ ಬಂದಿತೋ ಕಾಗೆ ಹಾರಿ ಬಂದು, ಸೀತೆಯ ಎದೆಯ ಭಾಗವನ್ನು ಕುಕ್ಕತೊಡಗಿತು. ಆಕೆಗೆ ನೋವಾಗುತ್ತಿದ್ದರು ರಾಮ ಮಲಗಿದ್ದಾನೆ ಎಂದು ಸಹಿಸಿಕೊಂಡಳು. ಆದರೆ ಕಾಗೆ ಕುಕ್ಕುವುದನ್ನು ನಿಲ್ಲಿಸದೆ ಅವಳ ಮೈಯಲ್ಲಿನ ಮಾಂಸ ರಕ್ತ ಹೊರಗೆ ಬರುವಂತೆ ಗಾಯ ಮಾಡಿತು. ಇದರಿಂದ ನೋವಾಗಿ ಸೀತೆ ಚೀರಿದಳು. ಆಕೆಗೆ ಆದ ಗಾಯದಿಂದ ಬರುತ್ತಿದ್ದ ಬಿಸಿ ರಕ್ತದ ಹನಿ ರಾಮನ ಮುಖದ ಮೇಲೆ ಬಿದ್ದು ಆತನು ಎಚ್ಚರ ಗೊಂಡನು.

ಕಾಗೆ ಕುಕ್ಕುತ್ತಲೆ ಇದ್ದು ಅವಳ ದೇಹದಲ್ಲಿ ರಕ್ತ ಹರಿದಿದ್ದನ್ನು ನೋಡಿ ರಾಮನಿಂದ ಸಹಿಸಲು ಆಗಲಿಲ್ಲ. ಅವನು ತಾನು ಕುಳಿತ ದರ್ಬೆ ಚಾಪೆಯ ಒಂದು ಕಡ್ಡಿ ದರ್ಭೆಯನ್ನು ಎಳೆದು, ಬ್ರಹ್ಮಾಸ್ತ್ರದ ಮಂತ್ರವನ್ನು ಅಭಿಮಂತ್ರಿಸಿ ಕಾಗೆಯ ಕಡೆ ಬಿಟ್ಟನು. ಕಾಗೆಯು ಅದಕ್ಕೆ ಹೆದರಿ ಓಡತೊಡಗಿತು. ಆದರೆ ಮಂತ್ರಿಸಿ ರಾಮ ಬಿಟ್ಟ ದರ್ಬೆಯ ಕಡ್ಡಿ ಕಾಗೆಯ ಹಿಂದೆಯೇ ಬೆನ್ನಟ್ಟಿ ಹೋಯಿತು. ಕಾಗೆಯು ಇಂದ್ರನ ಮಗ ಜಯಂತನಾಗಿದ್ದು ನಿಜರೂಪ ತಳೆದು ತಂದೆಯ ಬಳಿ ಹೋಗಿ ಕಾಪಾಡುವಂತೆ ಕೇಳಿದನು.

ಆದರೆ ಇಂದ್ರನು ರಾಮ ಅಭಿಮಂತ್ರಿಸಿ ಬಿಟ್ಟ ಶಕ್ತಿಯನ್ನು ಸಂಹರಿಸಲು ಯಾರಿಂದಲೂ ಸಾದ್ಯ ವಿಲ್ಲವೆಂದು ಎಂದು ಹೇಳಿದ. ಕಾಗೆ ರೂಪದ ಜಯಂತ ಬ್ರಹ್ಮನ ಹತ್ತಿರ ಹೋದರೆ ಬ್ರಹ್ಮನು ನನ್ನಿಂದ ಸಾಧ್ಯವಿಲ್ಲ ಎಂದನು. ಕಾಗೆ ಹೆದರಿ ಓಡುತ್ತಿದ್ದರೆ ರಾಮ ಅಭಿಮಂತ್ರಿಸಿ ಬಿಟ್ಟಿದ್ದ ದರ್ಬೆ ಕಡ್ಡಿ ಜ್ವಾಲೆ ಉಗುಳುತ್ತಾ ಬೆನ್ನಟ್ಟಿ ಬರುತ್ತಿತ್ತು. ದಾರಿ ಕಾಣದೆ ದಿಕ್ಕು ಗೆಟ್ಟು ಓಡುತ್ತಿದ್ದ ಜಯಂತನಿಗೆ ನಾರದರು ಎದುರು ಸಿಕ್ಕಿದರು. ಕೂಡಲೇ ನಾರದರ ಬಳಿ ಹೋಗಿ ಅವರ ಪಾದ ಹಿಡಿದು ನನಗೆ ದಾರಿ ತೋರಿ ಎಂದು ಬೇಡಿದನು.

ನಾರದರು ಹೇಳಿದರು ರಾಮ ಬಿಟ್ಟ ಈ ದರ್ಬೆಯ ಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ನೀನು ಹೋಗಿ ರಾಮನ ಕಾಲುಗಳನ್ನೇ ಹಿಡಿದು ಬೇಡಿಕೋ ಎಂದರು.

ಜಯಂತನು ಅವರು ಹೇಳಿದಂತೆ ಓಡಿಬಂದು ರಾಮನ ಪಾದಗಳ ಮೇಲೆ ಬಿದ್ದು ಕ್ಷಮೆ ಯಾಚಿಸಿದನು. ರಾಮನಿಗೆ ಅವನನ್ನು ಕೊಲ್ಲುವ ಅಧಿಕಾರವಿತ್ತು ಆದರೂ ರಾಮನು ಕರುಣೆಯಿಂದ, ಜಯಂತನನ್ನು ಕ್ಷಮಿಸಿದನು. ಆದರೆ ರಾಮ ಅಭಿಮಂತ್ರಿಸಿ ಬಿಟ್ಟ ದರ್ಬೆ ಕಡ್ಡಿಯನ್ನು ಉಪಶಮನ ಮಾಡಲು ಸಾಧ್ಯವಿಲ್ಲ ಆದುದರಿಂದ ನಿನ್ನ ದೇಹದ ಯಾವುದಾದರೂ ಒಂದು ಅಂಗ ಈ ಶಕ್ತಿಗೆ ಬಲಿ ಯಾಗಲೇಬೇಕು.

ನಿನ್ನ ದೇಹದ ಯಾವ ಒಂದು ಅಂಗವನ್ನು ಕೊಡುವೆ ಎಂದು ರಾಮ ಕೇಳಿದನು.‌ ಕಾಗೆಯೂ ಬೇರೆ ದಾರಿ ಕಾಣದೆ ತನ್ನ ಬಲಗಣ್ಣನ್ನೇ ಅಸ್ತ್ರಕ್ಕೆ ಬಲೆ ಕೊಡುವುದಾಗಿ ಹೇಳಿತು ತಕ್ಷಣ ಅಸ್ತ್ರವು ಕಾಗೆಯ ಬಲಗಣ್ಣು ನಾಶ ಗೊಳಿಸಿತು.‌ ಅಂದಿನಿಂದ ಕಾಗೆ ಒಕ್ಕಣ್ಣಿನ ಕಾಗೆಯಾದನು.

ಈ ಕಥೆಯ ಸಂದರ್ಭ, ರಾವಣನು ಸೀತೆಗೆ ಮೋಸ ಮಾಡಿ ಅಪಹರಿಸಿ, ಲಂಕೆಗೆ ತಂದು ಅರಮನೆಯ ಉದ್ಯಾನವನದ ಅಶೋಕ ವನದಲ್ಲಿ ಶಿಂಶ ವೃಕ್ಷದ ಕೆಳಗೆ ಬಂಧಿಸಿಟ್ಟಿದ್ದನು. ಶ್ರೀ ರಾಮನ ಆಣತಿಯಂತೆ ಆಂಜನೇಯನ ಸೀತಾಮಾತೆಯನ್ನು ಹುಡುಕಲು ಹೊರಟು ಸಮುದ್ರ ಲಂಘನ ಮಾಡಿ ಲಂಕೆಗೆ ಬಂದು ಉದ್ಯಾನವನದ ಅಶೋಕ ಬನದಲ್ಲಿ ವೃಕ್ಷದ ಕೆಳಗೆ ಕುಳಿತಿದ್ದ ಸೀತಾ ಮಾತೆಯನ್ನು ಕಂಡನು.

ಆಕೆಗೆ ಕಾಣದಂತೆ ಮರದ ಮೇಲೆ ಅಡಗಿ ಕುಳಿತ ಹನುಮಂತನು ರಾಮನ ಪರಿಚಯದ ಕುರಿತಾಗಿ ಪರಿಚಯವನ್ನು ಸಶ್ರಾವ್ಯವಾಗಿ ಹಾಡಿದಂತೆ ಹೇಳುತ್ತಾನೆ. ರಾಮನ ಹೆಸರು ಕೇಳಿ ಅವಳ ಮುಖ ಆನಂದದಿಂದ ತುಂಬಿ, ಯಾರೆಂದು ಸೀತೆ ಹುಡುಕಿದಾಗ, ತನ್ನ ಗಾತ್ರವನ್ನು ಚಿಕ್ಕದಾಗಿ ಮಾಡಿಕೊಂಡು ಬಂದು ಸೀತೆಯ ಪಾದ ಮುಟ್ಟಿ ನಮಸ್ಕಾರಿಸಿ ಎಲ್ಲವನ್ನು ತಿಳಿಸುತ್ತಾನೆ. ಹನುಮಂತನನ್ನು ನೋಡಿ ಮೊದಲು ಅನುಮಾನ ಗೊಂಡರೂ ಇದೆ ಅವನ ಮುಗ್ದತೆ ಮಾತಿನ ಸತ್ಯತೆಯನ್ನು ತಿಳಿದು ನಂಬಿಕೆ ಬಂದಿತು.

ಹನುಮಂತನು ಎಲ್ಲವನ್ನು ತಿಳಿಸಿ, ರಾಮನು ಕೊಟ್ಟ ಮುದ್ರಿಕೆ ಉಂಗುರ ಆಕೆಗೆ ಕೊಡುತ್ತಾನೆ. ತಾಯಿ ನಿಮ್ಮನ್ನು ಭೇಟಿಯಾದ ಸಂಗತಿಯನ್ನು ರಾಮನಿಗೆ ತಿಳಿಸಲು ಏನಾದರೂ ಗುರುತು ಅಥವಾ ರಾಮ ಸೀತೆಯರ ನಡುವೆ ನಡೆದ ಒಂದು ಪ್ರಸಂಗ ತಿಳಿಸಿ ಎಂದು ಸೀತೆಯನ್ನು ಕೇಳಿದಾಗ ಈ ಕಥೆಯನ್ನು ಆಂಜನೇಯನಿಗೆ ಹೇಳಿ, ಈ ಸಂಗತಿ ರಾಮನಿಗೆ ನನಗೆ ಮತ್ತು ಕಾಗೆ ಜಯಂತನಿಗೆ ಬಿಟ್ಟು ಬೇರೆ ಯಾರಿಗೂ ತಿಳಿದಿಲ್ಲ.

ಇದನ್ನೇ ನನ್ನ ಮಾತುಗಳಾಗಿ ರಾಮನಿಗೆ ಹೇಳು ಎಂದು ಹೇಳಿದಳು. ಹನುಮಂತನಿಗೆ ತನ್ನ ಚೂಡಾಮಣಿಯನ್ನು ಗುರುತಿಗೆ ಕೊಟ್ಟಳು. ಸೀತೆಗೆ ತೊಂದರೆ ಕೊಟ್ಟು ಕಾಡಿಸಲು ಇಂದ್ರನ ಮಗ ಜಯಂತನು ಕಾಗೆ ರೂಪದಲ್ಲಿ ಬಂದು ರಾಮನ ಕೋಪಕ್ಕೆ ಗುರಿಯಾಗಿ ಅವನು ಅಭಿಮಂತ್ರಿಸಿ ಬಿಟ್ಟ ದರ್ಬೆಯಿಂದ ಅವನ ಒಂದು ಕಣ್ಣು ನಾಶವಾಯಿತು. ಅಂದಿನಿಂದ ಕಾಗೆಗೆ ಒಕ್ಕಣ್ಣಿನ ಕಾಗೆಯಾಯಿತು.

ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು !
ಕೋಗಿಲೆಯು ಸ್ವರಗೈಯ್ಯಲು ಕೃಷ್ಣ !
ನಾಗಸಂಪಿಗೆ ಅರಳಲು !!

ಎದ್ದು ಮುಖ ತೊಳೆಯೇಳು ತಿದ್ದು ಕಸ್ತೂರಿ ತಿಲಕ !
ಮುದ್ದೆ ಬೆಣ್ಣೆಯ ನಿನಗೆ ನಾನು ಕೊಡುವೆ !!
ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ
ನಿದ್ದೆ ತಿಳಿದೇಳಯ್ಯ ಕೃಷ್ಣ !!

LEAVE A REPLY

Please enter your comment!
Please enter your name here