ಮರೆಯದೆ ಓದಿ. ಮಹಾಭಾರತದ ಒಂದು ಅದ್ಭುತ ಸಂವಾದ. ಮಹಾಭಾರತ ಯುದ್ಧ ಮುಗಿದಿದೆ ಹತರಾದ ವೀರಾಧಿ ವೀರರ ಚಿತೆಗಳು ದೂರದತ್ತ ಉರಿಯುತ್ತಿವೆ. ಅರಮನೆಯ ಉಳಿಗದವರು ಅಲ್ಲಲ್ಲಿ ಅಗ್ನಿಗಳನ್ನು ಸರಿಪಡಿಸುತ್ತಾ ನಿಂತಿದ್ದಾರೆ.
ಇನ್ನೊಂದತ್ತ ಶ್ರೀಕೃಷ್ಣ. ಗಂಗೆಯಲ್ಲಿಳಿದು ಸ್ನಾನ ಮಾಡಿ, ಮೈ ಒರಸಿಕೊಂಡು, ಮಡಿ ಬಟ್ಟೆಯುಟ್ಟು ಸತ್ತವರಿಗಾಗಿ ಜಲಾಂಜಲಿ ಕೊಡುತ್ತಿದ್ದಾನೆ. ದೂರದಲ್ಲಿ ಒಬ್ಬ ಸ್ತ್ರೀ ತಾನೂ ಸ್ನಾನ ಮಾಡಿ ದಡ ಹತ್ತಿದ್ದಾಳೆ. ಮಧ್ಯ ವಯಸ್ಸಾಗುತ್ತ ಬಂದ ಚೆಲುವೆ. ನವವೈಧವ್ಯ ಅವಳಿಗೆ ಬಂದದ್ದನ್ನು ಅವಳ ಮೈ ಒಪ್ಪಿದಂತಿಲ್ಲ. ದೂರದಲ್ಲಿ ದಡದ ಮೇಲೆ ಅವಳಿಗಾಗಿ ಅರಮನೆಯ ಪಲ್ಲಕ್ಕಿ ಕಾದಿದೆ ಆಳುಗಳು ಕಾದಿದ್ದಾರೆ.
ಶ್ರೀಕೃಷ್ಣನನ್ನು ಕಂಡು ಒಂದು ಕ್ಷಣ ಅವಳು ನಿಂತಳು. ಈ ಚೆಲುವ, ಇಂಥ ಘೋರ ರಾಜಕಾರಣವನ್ನು ಹೀಗೆ ನಡೆಸಿ, ಕೋಟ್ಯಾವಧಿ ವೀರರ ಹೆಣಗಳ ರಾಶಿ ಹಾಕಿಸಿದ್ದಲ್ಲದೇ, ಅವರ ಹೆಣಗಳನ್ನು ಸುಡಿಸುವದರಲ್ಲೂ ಅಷ್ಟೇ ವಿಚಕ್ಷಣ ಎಂಬುದನ್ನು ಅವಳು ಇನ್ನೂ ನಂಬುತ್ತಿಲ್ಲ. ಇತ್ತ ಶ್ರೀಕೃಷ್ಣನಿಗೂ ನಂಬಿಕೆ ಬರುತ್ತಿಲ್ಲ. ಸ್ತ್ರೀಯರ ವಯಸ್ಸು, ಚೆಲುವು, ಗುಣ, ಬುದ್ಧಿಮತ್ತತೆ, ನಿರಪರಾಧಿತ್ವಗಳನ್ನು ಪರಿಗಣಿಸದೆಯೇ ಇಂಥ ಕೋಟ್ಯಾಂತರ ಸ್ತ್ರೀಯರ ಬಾಳನ್ನು ಒಂದು ಯುದ್ಧ ಹಾಳುಗೆಡಹಬಹುದೆಂದು.
ಈ ಸ್ತ್ರೀ ಯಾರೆಂದು ಅಷ್ಟು ದೂರಕ್ಕೆ ಸರಿಯಾಗಿ ಕಾಣದೇ ಇದ್ದರೂ, ಇವನೇ ಶ್ರೀಕೃಷ್ಣ ಎಂದು ಅವಳು ಮಾತ್ರ ಗುರುತು ಹಿಡಿದಿದ್ದಾಳೆ. ಚಂದ್ರ ಸೂರ್ಯರ ಗುರುತು ಯಾರಿಗಿಲ್ಲ. ಹಾಗೆ ಅವಳು ನಿಂತದ್ದನ್ನು ಕಂದು ಶ್ರೀಕೃಷ್ಣ ಅವಳ ಬಳಿ ಸಮೀಪಿಸಿ ಬರುತ್ತಾನೆ. ಅವಳೊಡನೆ ಎಂದೂ ಹಾಗೆ ಏಕಾಂತದಲ್ಲಿ ಮಾತನಾಡಿದ್ದವನಲ್ಲ ಇಂದು ಆಪತ್ಕಾಲದಲ್ಲಿ ತನ್ನ ಸಾಂತ್ವನ ಬಯಸಿ ಬಂದಳೇ ಬಯ್ಯಲು ನಿಂತಿದ್ದಾಳೆಯೇ. ದಾರಿ ತಿಳಿಯಲಿಲ್ಲವೇ. ಶ್ರೀಕೃಷ್ಣ ಅವಳನ್ನು ಸಮೀಪಿಸಿದ.
(ಭಾನುಮತಿ ದುರ್ಯೋಧನನ ಪತ್ನಿ)
ಶ್ರೀಕೃಷ್ಣ : ಭಾನುಮತಿ ಅಲ್ಲವೇ. ಈ ಯುದ್ಧನಿಮಿತ್ತ ನನ್ನನ್ನೇ ಕಾರಣನೆಂದು ಬೈದವರು, ಬೈಯುತ್ತಿರುವವರು, ಬೈಯಲಿರುವವರು ಎಷ್ಟೋ ಜನ. ಅದಕ್ಕಾಗಿಯೇ ನೀನಿಲ್ಲಿ ನಿಂತಿದ್ದಾದರೆ, ಮನಸಾರೆ ಬೈಯಬಹುದು ಶಾಪವನ್ನು ಬೇಕಾದರೂ ಹಾಕಬಹುದು; ನಿನ್ನ ಅತ್ತೆ ಶಪಿಸಿದಳಲ್ಲ ಹಾಗೆ. ನಾನೇ ಕೃಷ್ಣ ದೇವಕಿಯ ಮಗ ಗುರುತು ಹತ್ತಿತೇ.
ಭಾನುಮತಿ: ಪ್ರಭು ನಿನ್ನನ್ನರಿಯದವರಾರು. ನನ್ನ ಕರ್ಮ ನನಗೆ. ನಿನ್ನನ್ನೇಕೆ ಬೈಯಲಿ. ಯಾರನ್ನು ಬೈದು ಈಗ ಪ್ರಯೋಜನವಾದರೂ ಏನು. ನೀನು ಯುದ್ಧವನ್ನು ತಡೆಯಲು ಎಷ್ಟು ಯತ್ನಿಸಿದೆ ಎಂಬುದು ನನಗೆ ಗೊತ್ತು. ನನ್ನ ಅತ್ತೆಯ ಶಾಪಕ್ಕಾಗಿ, ನಿನ್ನ ಕ್ಷಮೆ ಯಾಚಿಸಲು ಇಲ್ಲಿ ನಿಂತೆ. ದಡದಲ್ಲಿರುವವರು ತಪ್ಪು ಕಲ್ಪನೆ ಮಾಡಬಾರದು.
ಶ್ರೀಕೃಷ್ಣ ಅವಕ್ಕಾಗಿ ಅವಳ ವಿವೇಕಕ್ಕ ಮೆಚ್ಚಿ, ಅನಿವಾರ್ಯವಾಗಿ ಒಸರಿದ ಆನಂದಾಶ್ರುಗಳನ್ನು ಒರೆಸಿಕೊಳ್ಳದೇ “ಕೌರವನ ಪತ್ನಿ, ಒಬ್ಬ ದುಷ್ಟ ರಾಜನ ರಾಣಿ, ಇಷ್ಟು ವಿವೇಕಿ ಇರಬಹುದೆಂದು ನಾನು ಭಾವಿಸಿರಲಿಲ್ಲ, ದೇವಿ. ನಿನ್ನ ಪರಿಚಯ ನನಗೆ ಮೊದಲೇ ಆಗದುದು ದೌರ್ಭಾಗ್ಯ. ನಿನ್ನ ಮೂಲಕವೇ ಸಂಧಾನ ನಡೆಸಿದ್ದರೆ, ನಿನ್ನ ಪತಿ ದಾರಿಗೆ ಬರುತ್ತಿದ್ದನೇನೋ.
ಭಾನುಮತಿ:(ಅಳುತ್ತಾ) ಪ್ರಭು, ನೀನು ಸರ್ವೇಶ್ವರ. ನಿನ್ನನ್ನೇ ಕೇಳುತ್ತೇನೆ. ರಾಮಾಯಣದ ತಾರೆ, ಮಂಡೋದರಿಯರ ಸಂಧಾನದಿಂದ, ವಾಲಿ, ರಾವಣರು ತಿದ್ದಿಕೊಂಡರೇ. ಇವಳ ವಾಕ್ಚಾತುರ್ಯಕ್ಕೆ, ಇತಿಹಾಸ ಪ್ರಜ್ಞೆಗೆ, ದಿಟ್ಟತನಕ್ಕೆ ಶ್ರೀಕೃಷ್ಣ ಅಪ್ರತಿಭನಾಗುತ್ತಾನೆ. ಅನಂದಾಶ್ರುಗಳು ಸುಮ್ಮನೇ ಒಸರುತ್ತಿವೆ. ಆ ಗತಕಾಲದ ಇತಿಹಾಸ ಪ್ರಸಂಗಗಳು ಕೃಷ್ಣನ ಕಣ್ಣಿಗೆ ಈಗ ಕಟ್ಟುತ್ತವೆ. ಇವಳೇ ತಾರೆಯೋ, ಇವಳೇ ಮಂಡೋದರಿಯೋ ಎಂದು ಕ್ಷಣಮಾತ್ರ ಭ್ರಮೆಯೂ ಆದಂತಿದೆ. ಮೆಲ್ಲನೆ ಕೃಷ್ಣ ಕೇಳುತ್ತಾನೆ. ನಿನ್ನ ಪತಿಗೆ ನೀನೇ ವಿವೇಕ ಏಕೆ ಹೇಳಲಿಲ್ಲ.
ಭಾನುಮತಿ: ಹೇಳಲಿಲ್ಲ ಎಂದು ಯಾರು ಹೇಳಿಯಾರು. ಅದನ್ನೆಲ್ಲ ಸಂಜಯ ನನ್ನ ಮಾವನಿಗೆ ಹೇಳಿಲ್ಲವಲ್ಲ. ಅವನಿಗೆ ಯು’ದ್ಧ ಭೂಮಿಯತ್ತ ಕಣ್ಣು, ರಾಣೀವಾಸದಲ್ಲಿನ ಯಃಕಶ್ಚಿತ್ ಸ್ತ್ರೀಯರ ಕಷ್ಟವನ್ನು ಅವನೇನು ವರ್ಣಿಸಿಯಾನು. ಯಾರು ವರ್ಣಿಸಿದರೂ ಬಿಟ್ಟರೂ ಈಗ ಫಲವೇನು. ಶ್ರೀಕೃಷ್ಣ: ನೀನು ಧನ್ಯೆ ರಾಜಪುತ್ರಿ. ನೀನು ಸಹಗಮನ ಮಾಡದೇ ಉಳಿದದ್ದು ವಿವೇಕ, ಮುಂದಿನವರಿಗೆ ನಿನ್ನ ವಿವೇಕ ಬರಲಿ.
ಭಾನುಮತಿ: ಬದುಕಿರುವಾಗಲೇ ಪತಿಯ ದಾರಿಯಲ್ಲಿ ಹೋಗದವಳಿಗೆ, ಪತಿ ಹೋದಮೇಲೆ ಆ ದಾರಿಯಲ್ಲಿ ಹೋಗಿ ಸಾಧಿಸುವುದೇನಿದೆ ಪ್ರಭು. ನಾನು ವಾನಪ್ರಸ್ಥ ಹೊರಟೆ. ಮುಂದಿನವರ ವಿವೇಕ ಅವಿವೇಕ ಅವರಿಗೆ. ನನ್ನ ದಾರಿ ನನಗೆ. ಈ ದೇಶದಲ್ಲಿ ಸ್ತ್ರೀಯರ ಬುದ್ಧಿವಾದ ಯಾರಿಗೆ ಬೇಕು. ಶ್ರೀಕೃಷ್ಣ: ರಾಜಕುಮಾರಿ, ನಿನ್ನ ಒಂದೊಂದು ಅಣಿಮುತ್ತಿನಂತ ವಿವೇಕದ ಮಾತುಗಳಿಗೆ ಮೆಚ್ಚಿದ್ದೇನೆ. ನಿನಗೊಂದು ವರ ಕೊಡುತ್ತೇನೆ ಕೇಳಿಕೋ.
ಭಾನುಮತಿ: ಪ್ರಭು, ವಾನಪ್ರಸ್ಥಳಾಗಿ ಹೊರಟು ನಿಂತವಳಿಗೆ ಯಾವ ವರದಿಂದೇನು. ದ್ರೌಪದೀದೇವಿಯನ್ನು ಕಂಡು, ಸುಭದ್ರೆಯನ್ನು ಕಂಡು, ಉತ್ತರೆಯನ್ನು ಕಂಡು, ಅತ್ತೆ ಕುಂತಿ ದೇವಿಯವರನ್ನು ಕಂಡು, ನನ್ನ ಪತಿ ನನ್ನ ಕುಲದವರ ಅಪರಾಧಕ್ಕಾಗಿ ಕ್ಷಮೆ ಕೇಳಿ ನಾಳೆಯೋ ನಾಡಿದ್ದೋ ಹೊರಟು ನಿಂತಿದ್ದೇನೆ. ನಿನ್ನನ್ನು ಈಗ ಸಂದರ್ಶಿಸಿದ್ದೇ ನನಗೆ ಮಹಾವರಪ್ರಾಪ್ತಿ, ನನ್ನ ವೈಪಲ್ಯಗಳನ್ನು ಕ್ಷಮಿಸು. ನನ್ನ ಗಂಡ ನನ್ನ ಬುದ್ಧಿವಾದಗಳನ್ನು ಕೇಳಲಿಲ್ಲ. ಅಥವಾ, ನೀನೇ ಅವನಿಗೆ ಸದ್ಬುದ್ದಿ ಕೊಡದೇ, ಅವನ ನಿಮಿತ್ತ ಈ ಭೂಭಾರ ಇಳುಹಿದೆ.
ಮಾನುಷ ಭಾವದಲ್ಲಿ ನಾನು ಕರ್ತವ್ಯ ವಿಫಲಳು. ಗಂಡನಿಗೆ ಹೆಂಡತಿ ಮಂತ್ರಿಯಾಗಬೇಕೆಂದು ಶಾಸ್ತ್ರ ಹೇಳುತ್ತದೆ. ನನ್ನ ಪತಿಗೆ ಮಂತ್ರಿಗಳು ದುರ್ಮಂತ್ರಿಗಳು. ಬೇರೆಯವರೇ ಇದ್ದರು. ಮುಂದಿನ ಇತಿಹಾಸಕ್ಕೆ ಇದರಲ್ಲಿ ನನ್ನ ಪಾತ್ರಾಪಾತ್ರ ತಿಳಿದಿರಲಿ. ನನ್ನನ್ನು ಕ್ಷಮಿಸು ಪ್ರಭು.
ಶ್ರೀಕೃಷ್ಣ: (ಇವಳ ವಿವೇಕಕ್ಕೆ ಸಮಚಿತ್ತತ್ವಕ್ಕೆ ಶ್ರೀಕೃಷ್ಣನ ಮನ ಕರಗುತ್ತದೆ) ಸ್ತ್ರೀಯರೆಲ್ಲ ನಿನ್ನಂತೆಯೇ ಇದ್ದರೆ. ಭಾನುಮತಿ: “ಪುರುಷೋತ್ತಮ, ಪುರುಷರರೆಲ್ಲ ನಿನ್ನಂತೆಯೇ ಇದ್ದರೆ ಎಂದು ನಾನೂ ಆಶಿಸಲೇ. ಸ್ತ್ರೀಯರ ಕಷ್ಟಗಳಿಗೆ ಮರುಗುವವನು ಒಬ್ಬನಾದರೂ ಈ ಲೋಕದಲ್ಲಿ ಇದ್ದೀಯಲ್ಲ. ಅದು ಸ್ತ್ರೀಕುಲದ ಭಾಗ್ಯ. ನರಕನ ಅಂತಃಪುರದಲ್ಲಿದ್ದ ಗತಿಗೆಟ್ಟ ಸ್ತ್ರೀಯರಿಗೆ ಗತಿ ತೋರಿದವನು ನೀನೇ ಅಲ್ಲವೇ. ದ್ರೌಪದೀದೇವಿಗೆ ಮಾನ ಮುಚ್ಚಿದವನೂ ನೀನೇ ಅಲ್ಲವೇ.
ಶ್ರೀಕೃಷ್ಣ : ನಿನ್ನನ್ನೊಂದು ಕೇಳಲೇ. ಭಾನುಮತಿ: ಸರ್ವೇಶ್ವರನಿಗೆ ನನ್ನ ಅನುಮತಿ ಬೇಕೇ. ಶ್ರೀಕೃಷ್ಣ: ದ್ರೌಪದಿಗೆ ಅಪಮಾನವಾಗುತ್ತಿದ್ದಾಗಲೇ, ಆ ಸಭೆಯಲ್ಲೇ, ಅಂದೇ ನೀನು ಕಾಣಿಸಿಕೊಂಡು, ‘ಇದು ತಪ್ಪು’ ‘ನನಗೆ ಈ ಗತಿ ಆಗಿದ್ದರೆ ಏನು ಮಾಡುತ್ತಿದ್ದಿರಿ’ ಎಂದು ನಿನ್ನ ಪತಿಯನ್ನೇಕೆ ಕೇಳಲಿಲ್ಲ, ನಿನ್ನ ಮಾವನನ್ನೇಕೆ ಕೇಳಲಿಲ್ಲ.
ಭಾನುಮತಿ: (ಅಳುತ್ತಾ) ಅದೆಲ್ಲ ಘಟನಾವಳಿ ಸರಸರನೆ ಒಂದರಮೇಲೊಂದು ನಡೆದ ಮೇಲೆಯೇ ನನಗೆ ಅದು ತಿಳಿದದ್ದು. ಈ ಸಂಚಿನ ಸುಳಿವೂ ನನಗಿರಲಿಲ್ಲ, ಪ್ರಭು. ನೀನಷ್ಟು ಸೂಚನೆ ಕೊಟ್ಟಿದ್ದರೂ ಆಗಿತ್ತು. ಶ್ರೀಕೃಷ್ಣ: ಆಮೇಲಾದರೂ ಕೇಳಿದೆಯಾ. ಭಾನುಮತಿ: ಕೇಳಿದೆ, ಆದರೆ ಪ್ರಯೋಜನವೇನು ‘ಬಾಯಿ ಮುಚ್ಚು’ ಎಂಬ ಉತ್ತರ ಪತಿಯಿಂದ ಬಂದಿತು. ಅದು ಈ ದೇಶದ ಸ್ತ್ರೀಯರ ಸ್ಥಿತಿ ಬಾಯಿ ಮುಚ್ಚಿ, ಮುಚ್ಚಿ, ಈ ಸ್ಥಿತಿಗೆ ಬಂದೆವು.
ಶ್ರೀಕೃಷ್ಣ: ನನ್ನನ್ನು ಸರ್ವೇಶ್ವರ ಅಂದೆಯಲ್ಲ. ವರ ಕೊಡುತ್ತೇನೆ ಎಂದರು ಕೇಳಲಿಲ್ಲ. ಇಗೋ ನಾನಾರು ನೋಡು. ಎನ್ನುತ್ತ ಶ್ರೀಕೃಷ್ಣ ಶಂಖಚಕ್ರಗದಾಪದ್ಮಧಾರಿಯಾಗಿ ಭ್ರಹ್ಮಾಂಡವನ್ನೆಲ್ಲ ತನ್ನ ಶರೀರದಲ್ಲಿಟ್ಟು ದೀವ್ಯರೂಪವನ್ನು ಅವಳಿಗೆ ತೋರಿ ಹರಸಿ, ಈ ದೇಶದ ಭವಿಷ್ಯ ನಿನ್ನಂತಹ ಉತ್ತಮ ಸ್ತ್ರೀಯರ ಕೈಲಿದೆ. ನಿನಗಾಗಿ, ದ್ರೌಪದಿಗಾಗಿ, ಕುಂತಿಗಾಗಿ, ಸುಭದ್ರೆಗಾಗಿ, ನಿನ್ನಂತಹ ಜ್ಞಾನಿಗಳಾದ ಸ್ತ್ರೀಯರ ಸಲುವಾಗಿ ನಾನು ಶತ ಸಹಸ್ರ ಅವತಾರಗಳನ್ನಾದರೂ ಎತ್ತಿ ಮತ್ತೆ ಮತ್ತೆ ಬರುತ್ತೇನೆ.
ಭಾನುಮತಿ: ಆದರೆ ನನ್ನ ಪತಿಯಂತಹವರೂ ಪದೇ ಪದೇ ಬಂದರೆ. ಶ್ರೀಕೃಷ್ಣ: ಅದು ಕಾಲ ಪ್ರವಾಹದ ಗುಟ್ಟು. ಸೂರ್ಯ ಮುಳುಗುತ್ತಿದ್ದಾನೆ ಪಲ್ಲಕ್ಕಿ ಕಾಯುತ್ತಿದೆ ಹೊರಡು ಎಂದು ಹೇಳುತ್ತಾನೆ. ಮನ ಕಲುಕುವ ಸನ್ನಿವೇಶ ಅಲ್ಲವೇ. ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯವನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.