ಆಹಾರದಲ್ಲಿನ ಜಲದ ಮಹತ್ವ. ಹೀಗೆಂದಾಕ್ಷಣ ಆಹಾರದ ಜೊತೆಗೆ ಕುಡಿಯುವ ನೀರೆಂದು ತಿಳಿಯಬಾರದು. ಇದನ್ನು, ಆಹಾರ ಬೇಯಿಸಲು ಬಳಸುವ ನೀರು ಎಂದು ಅರ್ಥೈಸಿಕೊಳ್ಳಬೇಕು. ನೀರಿನಲ್ಲಿ ಆಹಾರ ಬೇಯುವಾಗ ಅದು ಪ್ರತ್ಯೇಕವಾಗಿ ಉಳಿಯದೇ ಆಹಾರದ ಭಾಗವಾಗಿಬಿಡುತ್ತದೆ.
ಹೇಗೆ, ಬೇಳೆ, ತರಕಾರಿ, ಉಪ್ಪು, ಹುಳಿ, ಮಸಾಲೆಗಳನ್ನು ಒಂದುಮಾಡಿ ತಾನೂ ಸಹ ಅದರೊಂದಿಗೆ ಸೇರಿಕೊಂಡು ಸಾಂಬಾರ್ ಎಂಬ ಪದಾರ್ಥ ತಯಾರಾಗುತ್ತದೆಯೋ ಹಾಗೆಯೇ ಎಲ್ಲಾ ಆಹಾರದ ಜೊತೆಗೆ ನೀರು ಆಹಾರದ ಒಂದು ಭಾಗವೇ ಆಗಬೇಕಾಗುತ್ತದೆ.
ಇದನ್ನು ಮರೆತು ನೀರಿನ ಅಂಶವಿರದ ಚಕ್ಕುಲಿ, ಪೂರಿ ಮುಂತಾದ ಕರಿದ ಪದಾರ್ಥ ಹಾಗೂ ನೀರು ಕಡಿಮೆ ಇರುವ ಚಪಾತಿ, ಉಪ್ಪಿಟ್ಟು ಮುಂತಾದವುಗಳನ್ನು ಸೇವಿಸಿದರೆ ಶರೀರ ಬಾಯಾರಿಕೆಯ ರೂಪದಲ್ಲಿ ನೀರನ್ನು ಕೇಳುತ್ತದೆ. ಆದರೆ, ಹಾಗೆ ಬಾಯಾರಿಕೆಯಿಂದ ಕುಡಿಯುವ ನೀರು ಎಂದಿಗೂ ಆಹಾರದ ಭಾಗವಾಗುವುದಿಲ್ಲ. ಏಕೆಂದರೆ ಅದು ಪಕ್ವವಾಗದ ಕೇವಲ ಹಸಿಯ ನೀರು, ಇದು ಸರಳ ಸಿದ್ಧಾಂತದಂತೆ ತೋರಿದರೂ ಆರೋಗ್ಯದ ಮೇಲೆ ಮಹತ್ತರ ಪರಿಣಾಮವನ್ನು ಬೀರುತ್ತದೆ.
ಚಿಕ್ಕ ಮತ್ತು ಮಧ್ಯಮ ವಯಸ್ಸಿನಲ್ಲಿ CKD (chornic kidney disease ), CLD (chronic liver disease), CAD (coronary arterial disease) , ಆಸ್ತಮಾ, ಅಲರ್ಜಿ ಮುಂತಾದ ರೋಗಗಳಿಂದ ಬಳಲುತ್ತಿರುವುದಕ್ಕೆ ಈ ರೀತಿಯ ಆಹಾರಗಳೇ ಕಾರಣ. ದುರದೃಷ್ಟವಶಾತ್ ಬಹುಪಾಲು ರೋಗಿಗಳನ್ನು ಚಿಕಿತ್ಸಿಸುತ್ತಿರುವ ಆಧುನಿಕ ವೈದ್ಯ ಪದ್ಧತಿಯು ಈ ವಿಧದ ಆಹಾರದ ಬಗ್ಗೆ ಒಂದಕ್ಷರವನ್ನೂ ಹೇಳುವುದಿಲ್ಲ, ಬದಲಾಗಿ, ಆಹಾರದ ಜೊತೆಗೆ ಯಥೇಚ್ಛವಾಗಿ ನೀರು ಕುಡಿಯಲು ಹೇಳುತ್ತಾರೆ. ಏಕೆಂದರೆ, ಆಧುನಿಕ ವಿಜ್ಞಾನಕ್ಕೆ “ವಿಪಾಕ” ಎಂಬುದರ ಪರಿಕಲ್ಪನೆಯೇ ಇಲ್ಲ.
ಸೇವಿಸಿದ ಆಹಾರವು ಜೀವಕೋಶವಾಗಿ ಮಾರ್ಪಾಡಾಗುವ ಮುನ್ನ, ತನ್ನೊಳಗಿನ ಜಲವನ್ನೇ ಬಳಸಿಕೊಂಡು ಪರಿವರ್ತನೆಗೆ ಸೂಕ್ತರೀತಿಯಲ್ಲಿ ಸಿದ್ಧವಾಗುತ್ತದೆ, ಈ ರಸವಿಶೇಷವನ್ನೇ “ವಿಪಾಕ” ಎನ್ನುತ್ತೇವೆ. ಉದಾಹರಣೆಗೆ: ಅಕ್ಕಿಯನ್ನು ಬೇಯಿಸಿ ಬಂದ ಗಂಜಿ ರಸವಿಶೇಷ ಎಂದರೆ, ಅಕ್ಕಿಯನ್ನು ನೀರಿಗೆ ಹಾಕಿ ಕದಡಿದರೆ ಬರುವ ಜಲವನ್ನು ಕಲಗಚ್ಚು ಎನ್ನುತ್ತಾರೆ.
ಇವೆರಡೂ ದ್ರವಾಂಶವೇ ಆದರೂ ಗುಣದಲ್ಲಿ ಮಹಾನ್ ಅಂತರವಿದೆ. ಗಂಜಿ ಶರೀರವನ್ನು ಪೋಷಣೆ ಮಾಡಿದರೆ, ಕಲಗಚ್ಚು ಅದರ ವಿರುದ್ಧ ಕಾರ್ಯವನ್ನು ಮಾಡುತ್ತದೆ. ಬೇಗ ಕೆಡಬಾರದೆಂದು ಪೂರ್ಣ ಬೇಯಿಸದೇ ಆಹಾರ ತಯಾರಿಸುತ್ತಿರುವ ಹೋಟೆಲ್, ಖಾನಾವಳಿ ಮತ್ತು ಪಿ.ಜಿಗಳಲ್ಲಿ ಆಹಾರ ಸೇವಿಸುತ್ತಿರುವ ಬಹಳಷ್ಟು ಯುವಪೀಳಿಗೆಗಳಿಗೆ ಬರುತ್ತಿರುವ ರೋಗಗಳನ್ನು ನೋಡಿ ನಮಗೆ ಅತೀವ ಸಂಕಟವಾಗುತ್ತದೆ.
ಗಮನಿಸಿ ನೋಡಿ : ಈ ರೀತಿ ಪಿ.ಜಿಯಲ್ಲಿ / ಹೊಟೆಲ್ ಗಳಲ್ಲಿ ಅಲ್ಪಜಲ ಬಳಸಿ ತಯಾರಿಸುವ ಆಹಾರಗಳನ್ನು ಸೇವಿಸಿದ ವ್ಯಕ್ತಿಗಳು ಗುಣಪಡಿಸಲಾಗದ ಕಾಯಿಲೆಗಳಿಂದ ಅಥವಾ ಶಾಶ್ವತವಾಗಿ ಔಷಧಿಗಳ ಮೇಲೆ ಅವಲಂಬಿತರಾಗಿ ಜೀವಿಸುವಂತಹ ಕಾಯಿಲೆಗಳಿಂದ ವ್ಯಥೆ ಪಡುತ್ತಿದ್ದಾರೆ.
ಗಟ್ಟಿ ಆಹಾರ ತಿಂದು ಮೇಲಿಂದ ನೀರು ಕುಡಿಯುವುದಕ್ಕೂ, ಆಹಾರದೊಳಗೇ ಒಂದಾಗಿರುವ ನೀರನ್ನು ಬಳಸುವುದಕ್ಕೂ ಇರುವ ಬಹುದೊಡ್ಡ ವ್ಯತ್ಯಾಸವೇ ರೋಗ ಮತ್ತು ಆರೋಗ್ಯ. ಆತ್ಮೀಯರೇ ದಯಮಾಡಿ ನಿಮ್ಮ ಮಕ್ಕಳನ್ನು ಹಾಸ್ಟೆಲ್, ಪಿ.ಜಿ, ಹೋಟೆಲ್ ಗಳ ಮೇಲೆ ಅವಲಂಬಿತರಾಗಿ ವಿದ್ಯಾಭ್ಯಾಸದ ಸಲುವಾಗಿ ಹೊರ ಊರಿಗೆ ಕಳಿಸುವ ಮುನ್ನ ಒಮ್ಮೆ ಆಳವಾಗಿ ಯೋಚಿಸಿ, ಹಾಗಿದ್ದುಕೊಂಡು ಬಂದ ಮಕ್ಕಳ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ ಸಾಕು.