ರಥಸಪ್ತಮಿಯ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ ತಿಳಿದುಕೊಳ್ಳೋಣ.

0
1725

ರಥಸಪ್ತಮಿ : ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ ತಿಳಿದುಕೊಳ್ಳೋಣ ಬನ್ನಿ. ಈ ವರ್ಷ ಫೆಬ್ರವರಿ ೧೯ ಶುಕ್ರವಾರ ರಥಸಪ್ತಮಿ ಬರಲಿದೆ. ನಮ್ಮ ಸನಾತನ ಧರ್ಮದಲ್ಲಿ ಒಂದೊಂದು ತಿಥಿಗೂ ಒಂದೊಂದು ವಿಶೇಷ ಇರುತ್ತದೆ. ಪಾಡ್ಯ- ಯುಗಾದಿ ಪಾಡ್ಯ, ಬಿದಿಗೆ- ಸೋದರ ಬಿದಿಗೆ, ತದಿಗೆ-ಅಕ್ಷಯ ತದಿಗೆ, ಚೌತಿ- ವಿನಾಯಕನ ಚೌತಿ, ಪಂಚಮಿ-ನಾಗರ ಪಂಚಮಿ, ಷಷ್ಠಿ- ಶಿರಿಯಾಳ ಷಷ್ಠಿ, ಹೀಗೆ ಸಪ್ತಮಿ’ಯ ಸರದಿ ಬಂದಾಗ ರಥಸಪ್ತಮಿ ಸೇರಿಕೊಳ್ಳುತ್ತದೆ.

ಹಬ್ಬಗಳು ಪ್ರತಿವರ್ಷ ಬರುತ್ತವೆ, ಹೋಗುತ್ತವೆ. ಆದರೆ ಅವುಗಳ ಆಚರಣೆಯ ಹಿಂದಿನ ಗೂಢಾರ್ಥ, ವೈಜ್ಞಾನಿಕ ಅಂಶಗಳನ್ನು ಅರಿತಾಗ ಅರ್ಥಪೂರ್ಣ ಆಚರಣೆಯಾಗುತ್ತದೆ. ಯುಗಾದಿ ಹೊಸತನವನ್ನು ಹೊತ್ತು ತಂದರೆ, ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯ ದಿನ ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥ ಹತ್ತುತ್ತಾನಂತೆ ಎಂಬ ಪ್ರತೀತಿ ಇದೆ. ಅಲ್ಲದೇ ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ.

ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ. ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟಿ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ. ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ಈ ಬಾರಿ ಫೆಬ್ರವರಿ 19 ಶುಕ್ರವಾರ ಮಾಘ ಮಾಸ, ಶುಕ್ಲಪಕ್ಷದ ಸಪ್ತಮಿ ತಿಥಿಯಂದು ದೇಶಾದ್ಯಂತ ರಥಸಪ್ತಮಿ ಆಚರಿಸಲಾಗುತ್ತಿದೆ.

ಆರೋಗ್ಯಂ ಭಾಸ್ಕರಾದಿಚ್ಛೇತ್. ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ. ‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಅಂದರೆ ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ 12’ ಇದ್ದರೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧನೆ ಬಳಕೆಗೆ ಬರುವ ಮುಂಚಿನಿಂದಲೂ ಪ್ರಾಶಸ್ತ್ಯವಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ.

ರೋಗ ನಿವಾರಣೆ, ದೇಹದಾರ್ಢ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ.

ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಲಾದರೂ ಸೂರ್ಯಾರಾಧನೆಯನ್ನು ಮಾಡಿದರೆ ಅರ್ಥಾತ್ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ಡಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಸೂರ್ಯರಾಧನೆಯನ್ನು ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ಟ್‌, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ.

108 ಸೂರ್ಯ ನಮಸ್ಕಾರ . ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದ ನಡೆಯುತ್ತಿದೆ. ಸೂರ್ಯನಿಲ್ಲದೆ ಜೀವನದ ಅಸ್ತಿತ್ವ ಇರಲು ಸಾಧ್ಯವಿಲ್ಲ. ಹೀಗಾಗಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಸಪ್ತ ನಮಸ್ಕಾರಗಳನ್ನು ಮಾಡುವ ಅಭ್ಯಾಸವಿದೆ.

ಪೌರಾಣಿಕ ಹಿನ್ನೆಲೆಯೇನು. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನು ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು.

ಅಲ್ಲದೇ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು. ಅಲ್ಲದೇ ರಾವಣನನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯ ಸ್ತೋತ್ರದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.

ಪ್ರಭು ಶ್ರೀರಾಮಚಂದ್ರ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ಶನೈಶ್ಚರ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ.

ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಇನ್ನು, ‘ಭೂರ್ಭುವಸ್ವಃ’ ಎಂಬ ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

ಎಕ್ಕದೆಲೆಯ ಸ್ನಾನ. ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಏಳು ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜಗಳು, ಮೊಣಕಾಲು, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು. ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ.

ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ. ‌ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ‘ಅರ್ಘ್ಯ’ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ.

‌ ‌ ‌

ರಥ ಸಪ್ತಮಿಯು ಯಾವಾಗಲೂ ಅರುಣೋದಯ ವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. ರಥ ಸಪ್ತಮಿಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು. ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು –

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು | ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ೧ || ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ | ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || ೨ || ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ | ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ೩ ||

ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯಸಿಂಧು)

ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿತಿಥಿಗೆ ಅರ್ಘ್ಯ – ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯಜನನಿಯಾದ ಸಪ್ತಮೀ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.

ಸೂರ್ಯಾರ್ಘ್ಯ ಮಂತ್ರ – ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ | ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ || ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು. ಸಪ್ತಮೀ ಅರ್ಘ್ಯಮಂತ್ರ – ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ | ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ || ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು.

ರಥಸಪ್ತಮಿಯ ಪರ್ವ ಎಲ್ಲಾ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ. ಇದೇ ಫೆಬ್ರವರಿ 19 ಶುಕ್ರವಾರ ದಂದು ರಥಸಪ್ತಮಿ, ಸೂರ್ಯನ ಆರಾಧಿಸುವ ಅವನ ಕಾಂತಿಯಿಂದ ನಮ್ಮ ಬಾಳಿನ ಕತ್ತಲು ಸರಿದು ಹೊಸ ಬೆಳಕು ಮೂಡಲಿ ಸರ್ವರಲಿ.

LEAVE A REPLY

Please enter your comment!
Please enter your name here