ಕೊರೋನಾ ಪ್ರಯುಕ್ತ ಕೆಲವು ಕಟ್ಟುನಿಟ್ಟಿನ ನಿಯಮಗಳು ಪಾಲನೆ ಮಾಡಲೇಬೇಕು.

    0
    1938

    ಕೊರೋನಾ ಪ್ರಯುಕ್ತ ಕೆಲವು ಕಟ್ಟುನಿಟ್ಟಿನ ನಿಯಮಗಳು ಪಾಲನೆ ಮಾಡಲು ಇಂದು ಮುಂಜಾನೆಯ ಮಹಾಸಭೆಯಲ್ಲಿ ನಿರ್ಣಯಿಸಲಾಯಿತು. ರಾಮೋತ್ಸವದ ಮೊದಲು ಮತ್ತು ನಂತರ ದೇವಸ್ಥಾನದ ಕಟ್ಟಡದ ಸುತ್ತ ರಾಸಾಯನಿಕ ಸಿಂಪಡಣೆ ಮಾಡಿ ಸ್ಯಾನಿಟೈಸ್‌ ಮಾಡುವುದು.

    ಆಡಳಿತೆದಾರರು, ಪುರೋಹಿತರು, ಅಡುಗೆಯವರು, ಸಿಬ್ಬಂದಿಗಳು ದೇವಸ್ಥಾನದ ಆವರಣದೊಳಗೆ ಮಡಿ ಬಟ್ಟೆಗಳ ಬದಲು ಈ ಸಲ ಕೊರೋನಾ ರಕ್ಷಾಕವಚ (ppe cover) ಕಡ್ಡಾಯವಾಗಿ ಧರಿಸುವುದು. ದೇವಸ್ಥಾನದ ೧.ಕಿ.ಮೀ. ವ್ಯಾಪ್ತಿಯ ಪ್ರಮುಖ ರಸ್ತೆಯಲ್ಲಿ ವಾಹನ ತಪಾಸಣಾ ಕೇಂದ್ರ ತೆರೆದು, ಪ್ರತಿದಿನವೂ ಬರುವ ಭಕ್ತರ ವಾಹನಗಳ ತಪಾಸಣೆ ಮಾಡಿ ಲಸಿಕೆ ಹಾಕಿಸಿಕೊಂಡು ಬಂದವರ ವಾಹನಕ್ಕೆ ಮಾತ್ರ ಪ್ರವೇಶ ಪಾಸ್ ನೀಡುವುದು.

    ಕೊರೋನಾ ಲಸಿಕೆ ಹಾಕಿಸಿಕೊಂಡು ಬಂದ 500 ಜನರಿಗೆ ಮಾತ್ರ ಪ್ರತಿದಿನ ಉತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡುವುದು. ಪ್ರತಿಯೊಬ್ಬರೂ ತೀರ್ಥ ಪ್ರಸಾದ, ಭೋಜನ ಸ್ವೀಕರಿಸುವಾಗ ಮೂಗು ಬಾಯಿಗೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಲೇಬೇಕು. ಪುರೋಹಿತರು ಮಂತ್ರ ಉಚ್ಚರಿಸುವಾಗ, ಹರಿದಾಸರು ಹರಿಕಥೆ ಹೇಳುವಾಗ, ಭಕ್ತರು ಭಜನೆ ಮಾಡುವಾಗ, ಸೇರಿಗಾರರು ವಾದ್ಯ ಊದುವಾಗ ಕಡ್ಡಾಯವಾಗಿ ಬಾಯಿ ಮೂಗಿಗೆ ಮಾಸ್ಕ್ ಧರಿಸಲೇಬೇಕು.

    ಪುರೋಹಿತರಿಗೆ ನಮಸ್ಕರಿಸುವಾಗ ಅವರ ಪಾದಸ್ಪರ್ಶ ಮಾಡುವುದು, ಅವರು ಆಶೀರ್ವದಿಸುವಾಗ ದೇಹದ ಯಾವುದೇ ಭಾಗಕ್ಕೆ ಸ್ಪರ್ಶ ಮಾಡುವುದು ನಿಷೇಧಿಸಲಾಗಿದೆ. ಸಾಮಾಜಿಕ ಅಂತರ ಕಡ್ಡಾಯ ಪಾಲಿಸಬೇಕು. ಭಕ್ತರು ಉತ್ಸವದಲ್ಲಿ ಭಾಗವಹಿಸುವಾಗ,ರಥ ಎಳೆಯುವಾಗ,ಊಟಕ್ಕೆ ಕುಳಿತಾಗ ಸಾಮಾಜಿಕ ಅಂತರ ಕಡ್ಡಾಯ.

    ಭಕ್ತರು ನೀಡುವ ನಗದು ಯಾ ವಸ್ತು ರೂಪದ ಕಾಣಿಕೆ,ಚೆಕ್ ಗಳನ್ನು ಸ್ಯಾನಿಟೈಸ್ ಮಾಡಿ ಸ್ವೀಕರಿಸಿ, ಅವರಿಗೆ ಲಡ್ಡುಪ್ರಸಾದದ ಬದಲು 2 ಮಾಸ್ಕ್,2ಕೈ ಗ್ಲೌಸ್ ನೀಡುವುದು. ರೂ.೫೦೦೦/- ಮೇಲ್ಪಟ್ಟು ಕಾಣಿಕೆ ನೀಡಿದವರಿಗೆ ಕಛೇರಿಯ ಒಳಗೆ ಕೊರೋನಾ ರಕ್ಷಾ ಕವಚ ತೊಡಿಸಿ, ೧ ಬಾಟಲಿ ಸ್ಯಾನಿಟೈಸರ್ ನೀಡಿ ಚಪ್ಪಾಳೆ ತಟ್ಟಿ ಗೌರವಿಸುವುದು.

    ರಾತ್ರಿ ಜನಸಂದಣಿ ನಿರ್ಬಂಧ ಇರುವುದರಿಂದ ಪಲ್ಲಕ್ಕಿ ಉತ್ಸವ, ವಾಹನ ಬಲಿ, ರಥೋತ್ಸವವನ್ನು ಮಧ್ಯಾಹ್ನವೇ ಪ್ರಾರಂಭಿಸಿ ಕತ್ತಲಾಗುವುದರೊಳಗೆ ಮುಗಿಸುವುದು. ನೈಟ್ ಪಾರ್ಟಿಯ ನಿಷೇಧವಿರುವುದರಿಂದ ರಾತ್ರಿ ಊಟವನ್ನು ರದ್ದುಪಡಿಸಲಾಗಿದೆ. ಭಕ್ತರಿಗೆ ಬೆಳಿಗ್ಗೆ ಪಾನಕದ ಬದಲಿಗೆ ಕಷಾಯ, ಸಂಜೆ ಚಹಾ- ಕಾಫಿ ಬದಲಿಗೆ ಎರಡು ಚಮಚ ಲಸಿಕೆಯನ್ನು ಕೊಡುವುದು.

    ನೈಟ್ ಕರ್ಫ್ಯು ಇರುವುದರಿಂದ ಮಧ್ಯಾಹ್ನ ೧೨ ಗಂಟೆಗೆ ಬೇತಾಳ ಆಗಮಿಸುತ್ತದೆ. ಈ ಸಮಯದಲ್ಲಿ ಶಬ್ದ ಮಾಲಿನ್ಯ ಆಗುವುದರಿಂದ ಬ್ಯಾಂಡ್ ವಾದ್ಯ, ಸಿಡಿಮದ್ದಿನ ಬದಲಿಗೆ ಕೊಳಗ.ಕವಂಗ.ಚಮಚ. ಲೋಟ ಬಡಿಯುವುದೆಂದು ನಿರ್ಧರಿಸಲಾಗಿದೆ. ಬೇತಾಳಗಳ ಚುಂಬನ ರದ್ದುಪಡಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿಯ ಬದಲಿಗೆ ಬೆಳಿಗ್ಗೆ ೮.ರಿಂದ ೧೧.ಗಂಟೆಯೊಳಗೆ ಮಾಡುವುದು.

    ವೀಕ್ಷಿಸಲು ಸಾಮಾಜಿಕ ಅಂತರ ಗುರುತಿಸಿ ಆಸನ ವ್ಯವಸ್ಥೆ ಮಾಡುವುದು. ಅತಿಥಿ ಗೃಹದ ಕೊಠಡಿಯಲ್ಲಿ ಸಾಮಾಜಿಕ ಅಂತರ ಗುರುತಿಸಿ, ಇಬ್ಬರಿಗೆ ಮಾತ್ರ ಮಲಗಲು ಅವಕಾಶ ನೀಡಿ.ಉಳಿದವರಿಗೆ ಅಂಗಣದಲ್ಲಿ ಅಂತರ ಗುರುತಿಸಿ ಮಲಗಲು ವ್ಯವಸ್ಥೆ ಮಾಡಲಾಗುವುದು.ಸಿಸಿ ಕೆಮರಾ ಕಣ್ಗಾವಲು ಇಡಲಾಗಿದೆ.ಅಂತರ ತಪ್ಪಿದರೆ ದಂಡ ವಿಧಿಸಲಾಗುತ್ತದೆ.

    ಅವಭೃತದಲ್ಲಿ ಭಾಗವಹಿಸುವವರು ಕೊರೋನಾ ರಕ್ಷಾ ಕವಚವನ್ನು ಕಡ್ಡಾಯವಾಗಿ ಧರಿಸಲೇಬೇಕು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರಾಮೋತ್ಸವದಲ್ಲಿ ಭಾಗವಹಿಸಲು ಅವಕಾಶ ಇಲ್ಲದಿರುವುದರಿಂದ ಜೂಮ್ ಆಪ್ ಮೂಲಕ ಮನೆಯಲ್ಲಿಯೇ ನೇರ ವೀಕ್ಷಿಸಲು ಅವಕಾಶ ನೀಡಲಾಗುವುದು.

    ಸಾರ್ವಜನಿಕರು ಸುಳ್ಳು ವದಂತಿಗೆ ಹೆಚ್ಚು ಕಿವಿ ಕೊಡಬಾರದು. ತಮ್ಮ ಎರಡು ಕಿವಿಗಳನ್ನು ಮಾತ್ರ ಕೊಟ್ಟು ಸಹಕರಿಸಲು ವಿನಂತಿಸಲಾಗಿದೆ. ಇದನ್ನೆಲ್ಲಾ ನಂಬಿದ್ರೆ ನೀವೇ “ಎಪ್ರಿಲ್ ಫೂಲ್” ಆಗುವುದು. ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಅವರನ್ನೂ ಕೂಡ ಫೂಲ್ ಮಾಡಿ ಮಸ್ತ್ ಮಜಾ ಮಾಡಿ.

    LEAVE A REPLY

    Please enter your comment!
    Please enter your name here